ಈ ಸದ್ ವಸ್ತುವಾದ ಬ್ರಹ್ಮಕ್ಕೆ ತನ್ನನ್ನ ತಾನೇ ನೋಡ್ಕೊಳೋ ಆಸೆ ಆಯಿತಂತೆ. ಆದ್ರಿಂದ ಅದು ತನ್ನನ್ನೇ ಕೊಂಚ ವಿಸ್ತರಿಸಿಕೊಂಡು ತನಗೆ ತಾನೇ ಕನ್ನಡಿಯಾಗುತ್ತೆ. ಆಗ ಅಲ್ಲಿ ಕಂಡಿದ್ದೇನು? । ಚೇತನಾ ತೀರ್ಥಹಳ್ಳಿ
ಕಳೆದ ಸಂಚಿಕೆಯಲ್ಲಿ ಕನ್ನಡಿ ಬಗ್ಗೆ ಹೇಳ್ತಾ ಯೋಗ ವಾಸಿಷ್ಠದ ಒಂದು ಶ್ಲೋಕವನ್ನ ಉಲ್ಲೇಖಿಸಿದ್ನಲ್ಲ, ಆ ಶ್ಲೋಕ ಹೀಗಿದೆ:
ಏಷ ಸ್ವಪ್ರತಿಬಿಂಬಸ್ಯ ಸ್ವಯಮಾಲೋಕನೇಚ್ಛಾಯ |
ಅತ್ಯಂತನಿರ್ಮಲಾಕಾರಃ ಸ್ವಯಂ ಮುಕುರತಾಂ ಗತಃ ||ಯೋಗ ವಾಸಿಷ್ಠ ||
ಇದರ ಅರ್ಥ : ಈ ಬ್ರಹ್ಮವು ತನ್ನ ಪ್ರತಿ ಬಿಂಬವನ್ನು ತಾನೇ ನೋಡಿಕೊಳ್ಳಬೇಕೆಂಬ ಇಚ್ಛೆಯಿಂದ ತಾನೇ ಅತ್ಯಂತ ನಿರ್ಮಲವಾದ ಕನ್ನಡಿಯಾಯಿತು – ಅಂತ.
ಯೋಗ ವಾಸಿಷ್ಠದಲ್ಲಿ ಬ್ರಹ್ಮದ ಬಗ್ಗೆ ಹೇಳ್ತಾ… ಇಲ್ಲಿ ಬ್ರಹ್ಮ ಅಂದ್ರೆ ನಾಲ್ಕು ಮುಖದ ಪೌರಾಣಿಕ ಪಾತ್ರ ಬ್ರಹ್ಮ ಅಲ್ಲ, ಇಲ್ಲಿ ಬ್ರಹ್ಮ ಅಂದ್ರೆ ಸೃಷ್ಟಿಯಲ್ಲಿ ಎಲ್ಲಕ್ಕಿಂತ ಮಹತ್ತರವಾದುದು ಅಂತ. ಬ್ರಹ್ಮ ಪದದ ನಿಷ್ಪತ್ತಿಯೇ ಅದನ್ನ ಸೂಚಿಸುತ್ತೆ. ಸಂಸ್ಕೃತದಲ್ಲಿ ಇದರ ಧಾತು ಮೂಲ – ‘ಬೃಹ್’. ಬೃಹತಿ ಬೃಹನ್ತಿ ಇತಿ ಬ್ರಹ್ಮ. ಯಾವುದು ತಾನಾಗಿಯೇ ಬೆಳೆಯುತ್ತದೆಯೋ, ಯಾವುದಕ್ಕಿಂತ ದೊಡ್ಡದಾದದ್ದು ಮತ್ತೊಂದಿಲ್ಲವೋ ಮತ್ತು ಯಾವುದು ಜಗತ್ತನ್ನೆಲ್ಲ ವ್ಯಾಪಿಸಿಕೊಂಡು ಅದನ್ನೂ ಬೆಳೆಸುತ್ತದೆಯೋ ಅದು ‘ಬ್ರಹ್ಮ’. ಈ ಶ್ಲೋಕದಲ್ಲಿ ‘ಈ ಬ್ರಹ್ಮ’ ಅಂತ ಹೇಳ್ತಿರೋದು, ಅದರ ಹಿಂದಿನ ಶ್ಲೋಕದ ಮುಂದುವರಿಕೆಯಾಗಿ.
ಸೋ ಇಲ್ಲಿ, ಆತ್ಯಂತಿಕ ಸದ್ ವಸ್ತುವಾದ ಬ್ರಹ್ಮ- ಸದ್ ವಸ್ತು ಅಂದ್ರೆ ಯಾವುದು ಎಲ್ಲಕ್ಕಿಂತ ಮೊದಲು ಇತ್ತೋ – ಸತ್ – ಅಸೀತ್ – ಅದು ಅಸ್ತಿತ್ವದಲ್ಲಿ ಇದ್ದುದರಿಂದಲೇ ಅದು ಸತ್ – ಸತ್ಯವಾದದ್ದು ಕೂಡಾ. ಈ ಸದ್ ವಸ್ತುವಾದ ಬ್ರಹ್ಮಕ್ಕೆ ತನ್ನನ್ನ ತಾನೇ ನೋಡ್ಕೊಳೋ ಆಸೆ ಆಯಿತಂತೆ. ಆದ್ರಿಂದ ಅದು ತನ್ನನ್ನೇ ಕೊಂಚ ವಿಸ್ತರಿಸಿಕೊಂಡು ತನಗೆ ತಾನೇ ಕನ್ನಡಿಯಾಗುತ್ತೆ. ಆಗ ಅಲ್ಲಿ ಕಂಡಿದ್ದೇನು? ಬ್ರಹ್ಮ ರೂಪಾತಿತವಾದದ್ದು. ಅದಕ್ಕೆ ರೂಪಾಕಾರಗಳಿಲ್ಲ ಹಾಗಾದ್ರೆ ಕಂಡಿದ್ದೇನು? ಇಡಿಯ ಸೃಷ್ಟಿ! ಸಮಷ್ಟಿ! ಅನಂತ ಆಕಾಶ, ಇಡಿಯ ಬ್ರಹ್ಮಾಂಡ!
ಆದ್ರಿಂದ ನಾವೆಲ್ರೂ, ಸೃಷ್ಟಿಯ ಪ್ರತಿಯೊಂದು ಜಡ ಚೇತನಗಳೂ ಆ ಪರಬ್ರಹ್ಮನ ಪ್ರತಿಬಿಂಬದ ತುಣುಕುಗಳು. ಆದ್ರಿಂದ, ನಾವೆಲ್ಲರೂ ಒಂದೇ, ಇಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ; even ಚೇತನಗಳು ಹೆಚ್ಚು ಜಡವಸ್ತುಗಳು ಕಡಿಮೆ ಅಂತಲೂ ಅಲ್ಲ… ಸೃಷ್ಟಿಯಲ್ಲಿ ಪ್ರತಿಯೊಂದೂ ಮುಖ್ಯ, ಪ್ರತಿಯೊಂದೂ ಸಮಾನ ಅನ್ನೋದು ಈ ಶ್ಲೋಕದ ವಿಸ್ತೃತ ಅರ್ಥ.
ಇನ್ನು ಇದೇ ಚಿಂತನೆಯನ್ನು ಹೋಲುವ ಸೂಫಿ ಚಿಂತನೆಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

