ಆಳವಾದ ನೋಟ: ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #2.4

ಬದುಕಿನಲ್ಲಿ ನರಳಾಟ. ರೋಗ, ಮುದಿತನ, ಸಾವು, ಅಪಘಾತ, ಹಸಿವು, ನಿರುದ್ಯೋಗ, ಪ್ರವಾಹ, ಭೂಕಂಪ ಇಂಥವನ್ನು ತಪ್ಪಿಸಲು ಆಗದು. ನಮ್ಮ ತಿಳಿವಿಗೆ ಆಳವಿದ್ದರೆ, ನಮ್ಮ ಮನಸು ಸ್ವತಂತ್ರವಾಗಿದ್ದರೆ, ಇಂಥವನ್ನೆಲ್ಲ ಸಮಾಧಾನವಾಗಿ ಒಪ್ಪಿಕೊಳ್ಳಲು ಸಾಧ್ಯವಾದರೆ ವೇದನೆ ಬಹಳಮಟ್ಟಿಗೆ ಕಡಿಮೆಯಾಗುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 2.4: ಅರಿವಿನ ಬೆಳಕು । ಆಳವಾದ ನೋಟ

ಈ ಕ್ಷಣದ ಬದುಕಿನೊಡನೆ  ಸಂಪರ್ಕ ಏರ್ಪಟ್ಟರೆ ಆಗ ಬದುಕು ಏನು ಎಂಬ ಗಹನವಾದ ನೋಟ ದೊರೆಯುತ್ತದೆ.

ಅಶಾಶ್ವತತೆ ಮತ್ತು ಇಲ್ಲದಿರುವಿಕೆ ಅಥವಾ ಅನಾತ್ಮ ಎಂಬವು ಬದುಕಿನ ನೆಗೆಟಿವ್‌ ಅಂಶಗಳಲ್ಲ. ಅವೆರಡೂ ಬದುಕಿನ ಸೌಧದ ತಳದಿ. ವಸ್ತುಗಳ ಸತತ ಬದಲಾವಣೆಯ ಇನ್ನೊಂದು ಹೆಸರೇ ಅಶಾಶ್ವತತೆ. ಅಶಾಶ್ವತತೆ ಇರದೆ ಬದುಕು ಇರಲು ಸಾಧ್ಯವಿಲ್ಲ.

ಇಲ್ಲದಿರುವಿಕೆ ಅಥವಾ ಅನಾತ್ತ ಎಂಬುದು ಎಲ್ಲ ವಸ್ತು, ಸಂಗತಿಗಳ ನಡುವೆ ಇರುವ ಒಳ ಅವಲಂಬನೆ. ಅಂಥ ಒಳ ಅವಲಂಬನೆ ಇರದೆ ಸೃಷ್ಟಿಯಲ್ಲಿ ಏನೂ ಯಾವುದೂ ಇರಲು ಸಾಧ್ಯವಿಲ್ಲ. ಸೂರ್ಯ, ಮೋಡ, ಭೂಮಿ ಇರದೆ ಹೂವು ಇರಲು ಸಾಧ್ಯವಿಲ್ಲ. ಬದುಕು ಅಶಾಶ್ವತ ಮತ್ತು ಅನಾತ್ತ ಎಂಬ ಕಾರಣಕ್ಕೆ ನಾವು ಕೊರಗುತ್ತೇವೆ, ಅಳಲುತ್ತೇವೆ. ಅಶಾಶ್ವತ, ಅನಾತ್ತಗಳು ಇರದೆ ಬದುಕು ಇರಲಾರದು ಅನ್ನುವುದನ್ನು ಮರೆಯುತ್ತೇವೆ.

ಅಶಾಶ್ವತ ಮತ್ತು ಅನಾತ್ತದ ಅರಿವಿನಿಂದ ಜೀವಂತಿಕೆಯ ಸಂತೋಷ ಇಲ್ಲವಾಗದು. ಬದಲಾಗಿ ಇಂಥ ಅರಿವು ಸ್ವಾಸ್ಥ್ಯ, ಸ್ಥಿರತೆ ಮತ್ತು ಸ್ವಾತಂತ್ರ್ಯಗಳನ್ನು ನಮಗೆ ನೀಡುತ್ತದೆ. ವಸ್ತು, ಸಂಗತಿಗಳ ಅಶಾಶ್ವತತೆಯನ್ನು ಕಾಣಲಾರದೆ, ಎಲ್ಲವೂ ಶಾಶ್ವತ, ಎಲ್ಲವೂ ಇದ್ದೇ ಇವೆ ಎಂದು ತಿಳಿದ ಜನ ದುಃಖಕ್ಕೆ ಒಳಗಾಗುತ್ತಾರೆ, ನರಳುತ್ತಾರೆ.

ಗುಲಾಬಿಯು ಶಾಶ್ವತವಲ್ಲ ಎಂದು ತಿಳಿದಿರುವಾಗಲೇ ಅದರ ಚೆಲುವನ್ನು ಆನಂದಿಸುತ್ತೇವೆ. ಅಶಾಶ್ವತವೆಂಬ ಕಾರಣಕ್ಕೇ ಅದರ ಚೆಲುವು ಅಪರೂಪ, ಅಮೂಲ್ಯವೆಂದು ತಿಳಿಯುತ್ತೇವೆ. ಹೆಚ್ಚು ನವುರಾದದ್ದು, ಸೂಕ್ಷ್ಮವಾದದ್ದು, ಅಶಾಶ್ವತವಾದದ್ದು ಹೆಚ್ಚು ಚೆಲುವು, ಹೆಚ್ಚು ಬೆಲೆಬಾಳುವಂಥದು ಅನಿಸುತ್ತದೆ. ಕಾಮನಬಿಲ್ಲು, ಸೂರ್ಯಾಸ್ತ, ಹೊಂಬಣ್ಣದ ಬತ್ತದ ತೆನೆಗಳು ತೊನೆದಾಡುವ ಗದ್ದೆಯ ಬಯಲು ಇವೆಲ್ಲದರ ಚೆಲುವನ್ನೂ ಆಶಾಶ್ವತತೆಯನ್ನೂ ಬುದ್ಧನು ಆನಂದನಿಗೆ ಹೇಳಿದ. ಚೆಲುವು ಅಶಾಶ್ವತವೆಂದು ಬುದ್ಧ ಹತಾಶನಾಗಲಿಲ್ಲ. ನಾವು ಕೂಡ ಸ್ವಚ್ಛ ಗಾಜಿನ ಲೋಟದಲ್ಲಿರುವ ತಿಳಿ ನೀರು, ತಣ್ಣನೆ ಗಾಳಿ, ಆರಾಮವಾಗಿ ನಡೆದಾಡುವ ಸ್ವಾತಂತ್ರ್ಯ ಇಂಥ ದೈನಿಕ ಅನುಭವಗಳ ಅಶಾಶ್ವತ, ಅನಾತ್ತ ಗುಣವನ್ನು ಕಂಡೂ ಅವುಗಳ ಚೆಲುವನ್ನು ಆನಂದಿಸಬಲ್ಲೆವು. ಇವೆಲ್ಲವೂ ಅಶಾಶ್ವತವಾದರೂ ಅದ್ಭುತಗಳೇ.

ಬದುಕಿನಲ್ಲಿ ನರಳಾಟ. ರೋಗ, ಮುದಿತನ, ಸಾವು, ಅಪಘಾತ, ಹಸಿವು, ನಿರುದ್ಯೋಗ, ಪ್ರವಾಹ, ಭೂಕಂಪ ಇಂಥವನ್ನು ತಪ್ಪಿಸಲು ಆಗದು. ನಮ್ಮ ತಿಳಿವಿಗೆ ಆಳವಿದ್ದರೆ, ನಮ್ಮ ಮನಸು ಸ್ವತಂತ್ರವಾಗಿದ್ದರೆ, ಇಂಥವನ್ನೆಲ್ಲ ಸಮಾಧಾನವಾಗಿ ಒಪ್ಪಿಕೊಳ್ಳಲು ಸಾಧ್ಯವಾದರೆ ವೇದನೆ ಬಹಳಮಟ್ಟಿಗೆ ಕಡಿಮೆಯಾಗುತ್ತದೆ. ವೇದನೆ ಇರುವಾಗ ನೋಡದೆ ಕಣ್ಣುಮುಚ್ಚಿಕೊಳ್ಳಬೇಕು ಅಂತಲ್ಲ, ವೇದನೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು, ಪ್ರೀತಿ, ಕರುಣೆಗಳು ನಮ್ಮಲ್ಲಿ ಹುಟ್ಟಬೇಕು. ನಮ್ಮಲ್ಲಿ ಪ್ರೀತಿ ಕರುಣೆಗಳಿದ್ದರೆ ಬೇರೆಯವರ ವೇದನೆಯನ್ನೂ ತಗ್ಗಿಸಬಹುದು.

ಪ್ರೀತಿ ಕರುಣೆಗಳ ಕಾರಣದಿಂದಲೇ ಮನುಷ್ಯರು ಪ್ರಗತಿಯನ್ನು ಕಂಡಿರುವುದು. ಕರುಣೆಯುಳ್ಳ ಜೀವಿಗಳಿಂದ ನಾವು ಕಲಿಯುವ ಪಾಠ ಇದೇ—ಈ ಕ್ಷಣದಲ್ಲಿ ಬದುಕುವುದು, ಇಡೀ ಸೃಷ್ಟಿಯಲ್ಲಿ ಇರುವ ಅಶಾಶ್ವತತೆ ಅನಾತ್ತಗಳನ್ನು ಕಂಡು ಅರಿಯುವುದು. ಈ ನೊಟವೇ ವೇದನೆಯನ್ನು ತಗ್ಗಿಸುತ್ತದೆ.

ಬದುಕಿನ ಅನಿರೀಕ್ಷಿತ ಘಟನೆಗಳು ನಡೆದಾವು ಎಂದು ಅಂಜಿ, ಬದುಕನ್ನು ಕಿರಿದು ಮಾಡಿಕೊಂಡು ಸದಾ ಆತಂಕದಲ್ಲಿ ಬದುಕುವವರಿದ್ದಾರೆ. ನಮಗೆ, ನಮ್ಮ ಪ್ರಿಯರಾದವರಿಗೆ ಆಗಬಹುದಾದ ಅನಿರೀಕ್ಷಿತ ಆಘಾತಗಳನ್ನು ಊಹಿಸುವುದಕ್ಕೂ ಆಗದು. ನಮ್ಮಲ್ಲಿ ಎಚ್ಚರದ ಗಮನವಿದ್ದು ಪ್ರತಿ ಕ್ಷಣವೂ ಜೀವಂತವಾಗಿದ್ದರೆ, ನಮ್ಮ ಹತ್ತಿರದವರನ್ನು ಅರಿವಿನೊಡನೆ ಅಕ್ಕರೆಯೊಡನೆ ಕಂಡರೆ ಅದೇ ಸ್ವಸ್ಥವಾದ ಬದುಕಾಗುತ್ತದೆ. ನಮಗಾಗುವ ಗಾಯಗಳನ್ನು ವಾಸಿಮಾಡಿಕೊಳ್ಳುವ ಶಕ್ತಿ ಬರುತ್ತದೆ.

*

“ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟುಕೊಟ್ಟು ರಕ್ಷಿತವ ಮಾಡುವ ಭರವ ನೋಡಾ” ಕಬ್ಬಿಣದ ಚೌಕಟ್ಟನ್ನು ಹಾಕಿ ನೀರಿನ ಗುಳ್ಳೆಯನ್ನು ರಕ್ಷಿಸುವ ಆತುರವನ್ನು ನೋಡು ಎಂಬ ಬಸವವಚನದ ಸಾಲು ನೆನಪಾಗುತ್ತದೆ. ಇದೆ ಅಂದುಕೊಳ್ಳುತಿರುವಾಗಲೇ ಇಲ್ಲವಾಗುವ ನೀರಿನಗುಳ್ಳೆಯನ್ನು ಶಾಶ್ವತಗೊಳಿಸಲು ಕಬ್ಬಿಣದ ಚೌಕಟ್ಟು ಹಾಕುವ ಹಂಬಲ, ಆತುರ, ಅರ್ಜೆನ್ಸಿಗಳೇ ದುಃಖಕ್ಕೆ ಕಾರಣ ಅನ್ನುವ ಸೂಚನೆ ಬಸವನುಡಿಯಲ್ಲಿ ಇರುವಂತಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.