ನೀಷೆಯ ಪ್ರಕಾರ, ನಮಗಿರುವುದು ಎರಡೇ ಆಯ್ಕೆ

“ಯಾವಾಗ ಮನುಷ್ಯನಿಗೆ, ಈ ಜಗತ್ತಿನ ಒಳಗೆ ಯಾವುದೇ ವಸ್ತುನಿಷ್ಠ ಅರ್ಥ ಇಲ್ಲ ಎನ್ನುವುದು ಗೊತ್ತಾಗುತ್ತಿದೆಯೋ, ಆಗ ಅವನು ಗಾಬರಿಗೆ ಒಳಗಾಗುತ್ತಾನೆ. ಈ ಗಾಬರಿಯ ಕಾರಣವಾಗಿ ಅವನು ಒಬ್ಬ ನಿಹಿಲಿಸ್ಟ ( ನಿರಾಕರಣವಾದಿ ) ಆಗಿ ಬದಲಾಗುತ್ತಾನೆ ಮತ್ತು ಹೊಸ ಗುಂಪಿನೊಳಗೆ ಸೇರಲು ಹೊರಟು ಬಿಡುತ್ತಾನೆ” ಅನ್ನುತ್ತಾನೆ ನೀಷೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಜರ್ಮನ್ ತತ್ವಜ್ಞಾನಿ ಫ್ರೆಡ್ರಿಕ್ ನೀಷೆ ನಮಗೆಲ್ಲ ಒಂದು ಎಚ್ಚರಿಕೆಯ ಮಾತು ಹೇಳಿದ್ದ. ಅವನ ಪ್ರಕಾರ ಮನುಷ್ಯ ಯಾವುದೇ ಒಂದು ಉದ್ದೇಶವನ್ನುಟ್ಟುಕೊಂಡು ಹುಟ್ಟಿರುವುದಿಲ್ಲ. ನಿಮ್ಮ ಬಳಿ ಕೇವಲ ಎರಡು ಆಯ್ಕೆಗಳಿವೆ. ಒಂದು, ನಿಮ್ಮ ಬದುಕಿನ ಉದ್ದೇಶವನ್ನು ಸ್ವತಃ ನೀವು ಹುಡುಕಿಕೊಳ್ಳುವುದು ಮತ್ತು ಇನ್ವೊಂದು, ನಿಮ್ಮ ಬದುಕಿನ ಉದ್ದೇಶವನ್ನು ಬೇರೆಯವರಿಂದ ಕಡ ತೆಗೆದುಕೊಳ್ಳುವುದು. ಒಂದು ಬಾರಿ ನೀವು ನಿಮ್ಮ ಗುರಿ, ನಿಮ್ಮ ಮೌಲ್ಯಗಳು, ನಿಮ್ಮ ಯಶಸ್ಸಿನ ಕುರಿತಾದ ವ್ಯಾಖ್ಯಾನಗಳನ್ನು ಗಮನಿಸಿ. ಇವನ್ನು ನೀವು ಸ್ವತಃ ಬೆಳೆಸಿಕೊಂಡು ಬಂದಿರುವುದಿಲ್ಲ. ಇವುಗಳನ್ನ ನಿಮ್ಮ ಸಂಸ್ಕೃತಿ, ನಿಮ್ಮ ಧರ್ಮ, ನಿಮ್ಮ ತಂದೆತಾಯಿಗಳಿಂದ ನೀವು ಕಡ ತೆಗೆದುಕೊಂಡಿರುತ್ತೀರಿ.

ಆದರೆ ಒಳ್ಳೆಯ ವಿಷಯ ಏನೆಂದರೆ ನಾವು ಈ ಕಡದ ಸಂಸ್ಕೃತಿಯಿಂದ ಹೊರಗೆ ಬರಬಹುದು. ಆದ್ದರಿಂದ ನೀಷೆ ಹೇಳುವ ಪ್ರಕಾರ ನಾವು ಮನುಷ್ಯರು, ಒಬ್ಬ Ubermensch ಆಗಿ ವಿಕಸನಗೊಳ್ಳಬೇಕಾಗುತ್ತದೆ. Ubermensch ನ ಅರ್ಥ ಮಾಡಿಕೊಳ್ಳಲು ನಾವು ನೀಷೆಯ ಪ್ರಸಿದ್ಧ ಮಾತನ್ನು ಅರ್ಥ ಮಾಡಿಕೊಳ್ಳಬೇಕು, God is Dead. ನೀಷೆ ಈ ಮಾತನ್ನ ಯಾವ ಸಂತೋಷದಲ್ಲಿಯೂ ಹೇಳಿರಲಿಲ್ಲ. ಬದಲಾಗಿ ಈ ಮಾತನ್ನ ಅವನು ಒಂದು ಭಯಾನಕ ಎಚ್ಚರಿಕೆಯ ರೂಪದಲ್ಲಿ ಹೇಳಿದ್ದ. ಸಾವಿರಾರು ವರ್ಷಗಳಿಂದ ಮನುಷ್ಯನ ಬಳಿ ಒಂದು ರೆಡಿಮೇಡ್ Rule Book ಇತ್ತು. ಮನುಷ್ಯನಿಗೆ ಅವನ ಬದುಕಿನ ಉದ್ದೇಶವನ್ನು ಅವನು ಹುಟ್ಟಿದ ಕೂಡಲೇ ಈ ರೂಲ್ ಬುಕ್ ಮೂಲಕ ಗೊತ್ತುಮಾಡಿ ಕೊಡಲಾಗುತ್ತಿತ್ತು.

ಆದರೆ ನೀಷೆ ಗಮನಿಸಿದ್ದು ಏನೆಂದರೆ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಮತ್ತು ತರ್ಕ ಸೇರಿ ಈ ರೂಲ್ ಬುಕ್ ನ ನಾಶ ಮಾಡುತ್ತಿವೆ. ಒಂದು ವೇಳೆ ಈ ರೂಲ್ ಬುಕ್ ಪೂರ್ತಿಯಾಗಿ ನಾಶವಾಗಿಬಿಟ್ಟರೆ ಮನುಷ್ಯನ ಅಸ್ತಿತ್ವವೇ ಅಪಾಯದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಯಾವಾಗ ಮನುಷ್ಯನಿಗೆ, ಈ ಜಗತ್ತಿನ ಒಳಗೆ ಯಾವುದೇ ವಸ್ತುನಿಷ್ಠ ಅರ್ಥ ಇಲ್ಲ ಎನ್ನುವುದು ಗೊತ್ತಾಗುತ್ತಿದೆಯೋ, ಆಗ ಅವನು ಗಾಬರಿಗೆ ಒಳಗಾಗುತ್ತಾನೆ. ಈ ಗಾಬರಿಯ ಕಾರಣವಾಗಿ ಅವನು ಒಬ್ಬ ನಿಹಿಲಿಸ್ಟ ( ನಿರಾಕರಣವಾದಿ ) ಆಗಿ ಬದಲಾಗುತ್ತಾನೆ ಮತ್ತು ಹೊಸ ಗುಂಪಿನೊಳಗೆ ಸೇರಲು ಹೊರಟು ಬಿಡುತ್ತಾನೆ. ಉದಾಹರಣೆಗೆ ಒಂದು ರಾಜಕೀಯ ಪಕ್ಷ, ಒಂದು ಕಾರ್ಪೋರೇಟ್ ಜಾಬ್, ಅಥವಾ ಯಾವುದೋ ಒಂದು ಸೋಶಿಯಲ್ ಮೀಡಿಯಾ ಟ್ರೆಂಡ್ ಸೇರಿಕೊಳ್ಳುತ್ತಾನೆ. ಅವನು ಹೀಗೆ ಮಾಡುವುದು ಯಾರಾದರೂ ಅವನಿಗೆ ಬದುಕುವುದು ಹೇಗೆ ಎನ್ನುವುದನ್ನ ಹೇಳಿಕೊಡಲೆಂದು. ನೀಷೆ ಇಂಥ ಜನರನ್ನ ಕುರಿಮಂದೆ ಎಂದು ಕರೆದ. ಈ ಜನ ಕೇವಲ ಆರಾಮಾಗಿರಲು ಬಯಸುತ್ತಾರೆ. ಯಾರೋ ಒಬ್ಬರು ತಮಗೆ ದಾರಿ ತೋರಿಸಬೇಕೆಂದು ಬಯಸುತ್ತಾರೆ.

ಇದರಿಂದ ಮನುಷ್ಯರನ್ನು ರಕ್ಷಿಸಲು ನೀಷೆ, Ubermensch (The Overman ) ನ ಪ್ರಸ್ತಾವವನ್ನಿಟ್ಟ. ಅವನು ತನ್ನ ಪ್ರಸಿದ್ಧ ಪುಸ್ತಕ Thus Spoke Zarathustra ದಲ್ಲಿ Ubermensch ನನ್ನು ಮನುಷ್ಯ ವಿಕಾಸದ ಆತ್ಯಂತಿಕ ವಿಕಸಿತ ಮೆಟ್ಟಿಲು ಎಂದು ಘೋಷಿಸಿದ. Ubermensch ಈ ಬ್ರಹ್ಮಾಂಡದ ಖಾಲೀತನವನ್ನು ಗಮನಿಸುತ್ತಾನೆ, ಅರ್ಥಹೀನತೆಯನ್ನು ಗಮನಿಸುತ್ತಾನೆ. ಈ ಎಲ್ಲವನ್ನು ಗಮನಿಸಿದ ಮೇಲೆಯೂ ಅವನು ಮುಗುಳ್ನಗುತ್ತಾನೆ. Ubermensch ಎಂಥ ಮನುಷ್ಯನೆಂದರೆ ಅವನು ಸಮಾಜ, ಧರ್ಮ, ತಂದೆತಾಯಿ, ನೈತಿಕತೆ, ಪುರೋಹಿತಶಾಹಿ ಈ ಯಾವುದರಿಂದಲೂ ಏನನ್ನೂ ಕಡ ತೆಗೆದುಕೊಳ್ಳುವುದಿಲ್ಲ. ಅವನು ಸಮಾಜ ಮತ್ತು ಗುಂಪುಗಳನ್ನು ಯಾವುದು ಸರಿ, ಯಾವುದು ತಪ್ಪು ಎನ್ನುವ ಪ್ರಶ್ನೆಗಳನ್ನು ಕೇಳುವುದಿಲ್ಲ. Ubermensch ತನ್ನ ಆತ್ಮವನ್ನು ನೋಡಿಕೊಂಡು ಘೋಷಿಸುತ್ತಾನೆ, ಇದು ಸರಿ, ಇದು ತಪ್ಪು ಏಕೆಂದರೆ ಇದನ್ನ ನಾನು ಹೇಳುತ್ತಿದ್ದೇನೆ.

Ubermensch ಎಷ್ಟು ಮೇಲಕ್ಕೇರುತ್ತಾನೆಂದರೆ, ಅವನ ಎದುರು ನೋವು ಕೂಡ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಅವನು ಕೇವಲ ತನ್ನ ಮೌಲ್ಯಗಳನ್ನಷ್ಟೇ ನಿರ್ಮಿಸಿಕೊಳ್ಳುವುದಿಲ್ಲ, ಅವನು ತನ್ನ ನಿಯತಿಯನ್ನೂ ಪ್ರೀತಿಸುತ್ತಾನೆ. ಅವನು ಸಂಕಟಗಳನ್ನು ದೂರಮಾಡುವುದಿಲ್ಲ, ಅವುಗಳಿಂದ ಓಡಿಹೋಗುವುದಿಲ್ಲ ಬದಲಾಗಿ ಅವನು ಅವುಗಳನ್ನು ಒಪ್ಪಿಕೊಳ್ಳುತ್ತಾನೆ. ಅವನು ತನ್ನ ಬದುಕಿನ ಅರ್ಥವನ್ನು ತಾನೇ ಬರೆದುಕೊಳ್ಳುತ್ತಾನೆ, ಯಾರೋ ಬಂದು ಹೇಳಿಕೊಡಲೆಂದು ಕಾಯುತ್ತ ಕೂರುವುದಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.