ಕನ್ನಡಿಯ ಪ್ರತಿಬಿಂಬದಲ್ಲಿ ಭಗವಂತ ಅಥವಾ ಇಡಿಯ ಸೃಷ್ಟಿ ಕಾಣಬೇಕು ಅಂತಾದ್ರೆ, ಅದನ್ನ ನಾವು ಸ್ವಚ್ಛವಾಗಿಟ್ಕೊಳ್ಬೇಕು. ಹಾಗೆ ಪ್ರತಿಬಿಂಬಿಸೋ ಕನ್ನಡಿ ಯಾವುದು? ಗಾಜಿನದ್ದಲ್ಲ, ಭೌತಿಕ ಅಥವಾ ಸ್ಥೂಲ ಅರ್ಥದ ಕನ್ನಡಿ ಅಲ್ಲ. ಇಲ್ಲಿ ಲಲ್ಲಾ ಹೇಳ್ತಿರೋದು ಮನಸ್ಸಿನ ಕನ್ನಡಿಯ ಬಗ್ಗೆ. ಸೂಕ್ಷ್ಮ ಅರ್ಥದ ಕನ್ನಡಿಯ ಬಗ್ಗೆ… । ಚೇತನಾ ತೀರ್ಥಹಳ್ಳಿ
ಹಿಂದಿನ ಸಂಚಿಕೆಗಳಲ್ಲಿ ಹೇಳಿದ ಹಾಗೆ ಬಹುತೇಕ ಎಲ್ಲ ಆಧ್ಯಾತ್ಮಿಕ ಚಿಂತನೆಗಳೂ ಕನ್ನಡಿಯನ್ನು ರೂಪಕವಾಗಿ ಬಳಸಿವೆ. ಸೂಫಿ ಸಾಹಿತ್ಯದಲ್ಲಿ, ಜಗತ್ತು ಭಗವಂತನ ಕನ್ನಡಿ, ಮತ್ತು ಮನುಷ್ಯನ ಹೃದಯ ಜಗತ್ತಿನ ಕನ್ನಡಿ – ಅಂತ ಹೇಳಲಾಗಿದೆ. ಈ ಚಿಂತನೆ, ಹಿಂದಿನ ವಿಡಿಯೋದಲ್ಲಿ ಹೇಳಿದ ಯೋಗವಾಸಿಷ್ಠದ ಶ್ಲೋಕದ ಹಾಗೇ ಇದೆ ಅಲ್ವಾ? ಜಗತ್ತು ಭಗವಂತನ ಕನ್ನಡಿ… ಅಲ್ಲಿ ಪರಬ್ರಹ್ಮ ತನ್ನನ್ನ ತಾನು ಕನ್ನಡಿಯಲ್ಲಿ ನೋಡಿಕೊಂಡಾಗ ಇಡಿಯ ಸೃಷ್ಟಿ ಪ್ರತಿಬಿಂಬವಾಗಿ ಕಂಡಿತು ಅಂತ ಹೇಳಲಾಗಿದೆ. ಇಲ್ಲಿ, ಜಗತ್ತು – ಭಗವಂತನ ಕನ್ನಡಿ ಅಂತ ಹೇಳಲಾಗಿದೆ. ಇನ್ನೂ ಮುಂದುವರಿದು, ಮನುಷ್ಯನ ಹೃದಯ ಜಗತ್ತಿನ ಕನ್ನಡಿ ಅಂತಾನೂ ಹೇಳಿದೆ. ಅಂದ್ರೆ, ನಮ್ಮ ಹೃದಯ ಇಡಿ ಜಗತ್ತಿನ ಪ್ರತಿಬಿಂಬವಾಗಿದೆ ಅನ್ನೋದು ಇದರ ಗೂಢಾರ್ಥ.
ಕಾಶ್ಮೀರಿ ಸಂತಕವಿ ಲಾಲ್ ಡೇಡ್, “ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು, ಆಗ ನಾನಲ್ಲದೆ ಬೇರೆ ದೇವರಿಲ್ಲ ಅನ್ನೋ ಸತ್ಯ ಗೋಚರಿಸುತ್ತೆ. ನಾನು – ನೀನೆಂಬ ವ್ಯತ್ಯಾಸವೇ ಇಲ್ಲವಾಗುತ್ತೆ, ಲೋಕವೇ ನಾನೆಂಬ ಅರಿವಾಗುತ್ತೆ” ಅನ್ತಾಳೆ. ಮನಸ್ಸಿನ ಕನ್ನಡಿ ಶುದ್ಧವಾಗಿದ್ದರೆ ಅದರಲ್ಲಿನ ಪ್ರತಿಬಿಂಬವೂ ಸ್ಪಷ್ಟವಾಗಿ ಗೋಚರಿಸುತ್ತೆ; ಭಗವಂತ ಇಡಿಯ ಸೃಷ್ಟಿಯ ರೂಪದಲ್ಲಿ ವ್ಯಕ್ತವಾಗೋದ್ರಿಂದ, ಕನ್ನಡಿಯಲ್ಲಿ ನನ್ನ ಪ್ರತಿಬಿಂಬವಾಗಿ ಲೋಕ ಕಾಣುತ್ತೆ, ಇಡಿಯ ಜಗತ್ತು ಒಂದೇ, ಇಲ್ಲಿ ಭೇದಭಾವಗಳಿಲ್ಲ – ಇರಕೂಡದು ಅನ್ನೋದು ಮನದಟ್ಟಾಗುತ್ತೆ ಅನ್ನೋದು ಲಾಲ್ ಡೇಡ್ ಸಾಲುಗಳ ಸಾರಾಂಶ.
ಆದ್ರಿಂದ, ಕನ್ನಡಿಯ ಪ್ರತಿಬಿಂಬದಲ್ಲಿ ಭಗವಂತ ಅಥವಾ ಇಡಿಯ ಸೃಷ್ಟಿ ಕಾಣಬೇಕು ಅಂತಾದ್ರೆ, ಅದನ್ನ ನಾವು ಸ್ವಚ್ಛವಾಗಿಟ್ಕೊಳ್ಬೇಕು. ಹಾಗೆ ಪ್ರತಿಬಿಂಬಿಸೋ ಕನ್ನಡಿ ಯಾವುದು? ಗಾಜಿನದ್ದಲ್ಲ, ಭೌತಿಕ ಅಥವಾ ಸ್ಥೂಲ ಅರ್ಥದ ಕನ್ನಡಿ ಅಲ್ಲ. ಇಲ್ಲಿ ಲಲ್ಲಾ ಹೇಳ್ತಿರೋದು ಮನಸ್ಸಿನ ಕನ್ನಡಿಯ ಬಗ್ಗೆ. ಸೂಕ್ಷ್ಮ ಅರ್ಥದ ಕನ್ನಡಿಯ ಬಗ್ಗೆ.
ಕನ್ನಡಿಯನ್ನು ಒರೆಸದೆ ಇದ್ರೆ ಪ್ರತಿಬಿಂಬವೂ ಕೊಳಕಾಗೇ ಕಾಣುತ್ತಲ್ಲ? ಹಾಗೇ, ನಮ್ಮ ಮನಸ್ಸಿನ ಕನ್ನಡಿಯನ್ನು ಒರೆಸಿಕೊಳ್ದೆ ಇದ್ರೆ ಅದ್ರಲ್ಲಿ ಸದಾ ನಾವಷ್ಟೇ ಕಾಣ್ತೀವಿ ಮತ್ತು ನಾವಷ್ಟೇ ಕಾಣೋದು ಆಧ್ಯಾತ್ಮಿಕ ದೃಷ್ಟಿಯಿಂದ ಯಾವತ್ತೂ ಸ್ವಾರ್ಥ, ಲೋಭ ಮತ್ತು ಮೋಹಗಳ ಪಟ್ಟಿಗೆ ಸೇರುತ್ತೆ, ಆದ್ರಿಂದ ಕೇವಲ ನಾವಷ್ಟೇ ಕಾಣುವ ಬಿಂಬವೂ ಕೊಳಕು ಅಂತಲೇ ಕನ್ಸಿಡರ್ ಆಗುತ್ತೆ. ಆದ್ರಿಂದ, ನಮ್ಮ ಮನಸ್ಸಿನ ಕನ್ನಡಿಯನ್ನು ಸ್ವಚ್ಛವಾಗಿಟ್ಕೊಳ್ಳೋಣ, ಪ್ರತಿಬಿಂಬದಲ್ಲಿ ಸಮಷ್ಟಿಯನ್ನು ಕಾಣೋಣ ಅನ್ನೋದು ಲಲ್ಲಾಳ ಚಿಂತನೆ.

