ಇರುವುದು ಮತ್ತು ಇಲ್ಲವಾಗುವುದು ಎರಡೂ ಪರಿಕಲ್ಪನೆಗಳು. ನಮ್ಮ ಗ್ರಹಿಕೆಗೆ ಅನುಗುಣವಾಗಿ “ಕಾಣತ್ತವೆ” ಅಥವಾ “ಕಾಣದೆ ಇರುತ್ತವೆ” ಅಷ್ಟೇ. ಇದು ಬದುಕನ್ನು ಕುರಿತ ಗಹನವಾದ ನೋಟ. ನಮ್ಮ ಗ್ರಹಿಕೆ ಇಷ್ಟು ಗಹನವಾಗಿದ್ದರೆ ಹುಟ್ಟು-ಸಾವು, ಇರುವುದು ಇಲ್ಲವಾಗುವುದು ಎಂಬಂಥ ಪರಿಕಲ್ಪನೆಗಳಿಂದ ಬಿಡುಗಡೆ ದೊರೆಯುತ್ತದೆ. ಇದು ಬುದ್ಧನ ಉನ್ನತ ಸ್ತರದ ಬೋಧನೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 2.6: ಅರಿವಿನ ಬೆಳಕು । ಹುಟ್ಟು ಸಾವುಗಳಾಚೆ
ಹುಟ್ಟು ಸಾವುಗಳನ್ನು ಕುರಿತ ನಮ್ಮ ಐಡಿಯಾಗಳೇ ದಿನ ನಿತ್ಯದ ಬದುಕಿನ ನಮ್ಮ ಶಾಂತಿ, ಸಂತೋಷಗಳನ್ನು ಹಾಳುಮಾಡುತ್ತವೆ. ಹುಟ್ಟು ಸಾವುಗಳನ್ನು ಕುರಿತ ನಮ್ಮ ಭಯವನ್ನು ಧ್ಯಾನದಿಂದ ನೀಗಿಕೊಳ್ಳಬಹುದು. ಸತ್ಯವನ್ನು ಗಹವಾಗಿ ಅರಿಯಲು ಧ್ಯಾನವು ಸಹಾಯ ಮಾಡುತ್ತದೆ. ಬದುಕಿನಲ್ಲಿರುವ ಒಳ ಇರುವಿಕೆಯನ್ನು ಸ್ಪರ್ಶಿಸುವುದೆಂದರೆ ಸಾವಿಲ್ಲದ, ಹುಟ್ಟು ಇಲ್ಲದ ಸ್ಥಿತಿಯನ್ನು ಮುಟ್ಟಿದಂತೆಯೇ.
ಸಾವು ಮತ್ತು ಏನೂ ಇಲ್ಲ ಎಂಬ ಸೊನ್ನೆಭಾವ ಇವು ಬಹಳ ಅಪಾಯಕಾರಿ. ಇವೆರಡೂ ಭಾವಗಳಿಂದ ಜನ ಅಪಾರವಾಗಿ ವೇದನೆಪಡುತ್ತಾರೆ. ಬೌದ್ಧ ಬೋಧನೆಯಲ್ಲಿ ಶೂನ್ಯತ್ವ ಎಂಬುದು ಪರಿಕಲ್ಪನೆಯೇ ಹೊರತು ವಾಸ್ತವಕ್ಕೆ ಅನ್ವಯವಾಗುವುದಲ್ಲ. “ಸಂದರ್ಭಗಳು ಸೂಕ್ತವಾಗಿದ್ದಾಗ, ಹೊಂದಾಣಿಕೆಯಾದಾಗ ವಸ್ತು ತೋರುತ್ತದೆ, ಸೂಕ್ತವಾಗಿಲ್ಲದಾಗ ತೋರುವುದಿಲ್ಲ,” ಎಂದು ಬುದ್ಧ ಹೇಳಿದ. ಜನನವೂ ಇಲ್ಲ, ಮರಣವೂ ಇಲ್ಲ. ಕಾಣಿಸಿಕೊಳ್ಳುವುದು ಇದೆ, ತೋರಿಕೆ ಇದೆ. ಹುಟ್ಟು-ಸಾವು, ಇರುವಿಕೆ-ಇಲ್ಲದಿರುವಿಕೆ ಇವು ವಾಸ್ತವದಲ್ಲಿ ಅನ್ವಯಿಸಲಾಗದ ಪರಿಕಲ್ಪನೆಗಳು. ನೀರಿನ ಅಲೆ ಅದು ಹುಟ್ಟಿದ ಕ್ಷಣದಿಂದ ಸಾಯುವ ಕ್ಷಣದವರೆಗೆ ಸ್ವತಂತ್ರವಾಗಿರುತ್ತದೆ. ಇದು ಇರುವಿಕೆಯೂ ಅಲ್ಲ, ಇಲ್ಲದಿರುವಿಕೆಯೂಅಲ್ಲ. ಅಲೆ ಅಂದರೆ ಅಲೆ-ಅಷ್ಟೇ.
“ಅದು” ಅಥವಾ “ಅದುತನ” ಎಂಬ ಪದವು ವಾಸ್ತವನ್ನು ಅದು ಇರುವಂತೆಯೇ ವಿವರಿಸುತ್ತದೆ. ವಿಚಾರ ಮತ್ತು ಪರಿಕಲ್ಪನೆಗಳು ವಾಸ್ತವವನ್ನು ಅದು ಇರುವಂತೆಯೇ ವ್ಯಕ್ತಪಡಿಸಲಾರವು. ನಿರ್ವಾಣ ಅಥವಾ ಅಂತಿಮ ಸತ್ಯವನ್ನು ವಿವರಿಸಲು ಆಗದು. ಯಾಕೆಂದರೆ ಅದು ಎಲ್ಲ ಪರಿಕಲ್ಪನೆ, ಐಡಿಯಾಗಳಿಂದ ಮುಕ್ತವಾದದ್ದು. ಎಲ್ಲ ಪರಿಕಲ್ಪನೆಗಳು ಇಲ್ಲವಾಗುವುದೇ ನಿರ್ವಾಣ. ನಿರ್ವಾಣವೆಂದರೆ ಪೂರ್ಣ ಸ್ವಾತಂತ್ರ್ಯ.
ನಮ್ಮ ಐಡಿಯಾ ಮತ್ತು ಪರಿಕಲ್ಪನೆಗಳೇ ನಮ್ಮ ಬಹಳಷ್ಟು ವೇದನೆಗೆ ಕಾರಣವಾಗಿರುತ್ತವೆ. ಈ ಪರಿಕಲ್ಪನೆಗಳಿಂದ ಬಿಡಿಸಿಕೊಳ್ಳಲು ಸಾಧ್ಯವಾದರೆ ಕಳವಳ, ಭಯಗಳು ಮಾಯವಾಗುತ್ತವೆ. ನಿರ್ವಾಣ, ಅಂತಿಮ ಸತ್ಯ ಅಥವಾ ದೇವರು ಎಂಬುದು ಹುಟ್ಟು ಇರದ, ಸಾವು ಇರದ, ಪರಿಕಲ್ಪನೆಗಳೇ ಇರದ “ಅದು”. ಹುಟ್ಟು ಮತ್ತು ಸಾವುಗಳೆಂಬ ಐಡಿಯಾದೊಂದಿಗೆ ಇರುವ ಭಯವನ್ನು ನೀಗಿಕೊಳ್ಳಬೇಕಾದರೆ ನಾವು ಸತ್ಯವನ್ನು ಮುಟ್ಟಿ ಅನುಭವಿಸಬೇಕು.
ಇಲ್ಲವಾಗುವ ಭಯ ನಮಗೆ. “ನಾವು ಇಂಥವರು,” “ನಾನು ಏನೋ ಮಹತ್ವದ್ದು ಸಾಧಿಸಿದ್ದೇನೆ” ಅಂತೆಲ್ಲ ಅಂದುಕೊಳ್ಳುತ್ತೇವೆ. “ಇಂದು ಇದ್ದೇನೆ,ನಾಳೆ ಇಲ್ಲವಾಗುತ್ತೇನೆ,” ಎಂದು ಭಯಪಡುತ್ತೇವೆ. ಆದರೆ ಇರುವುದು ಯಾವುದೂ ಇಲ್ಲವಾಗವುದು ಸಾಧ್ಯವಿಲ್ಲ. “ಅದು ಇದೆ, ಆದ್ದರಿಂದ ಇದು ಇದೆ” ಎಂದು ಬುದ್ಧ ಸರಳವಾಗಿ ಹೇಳಿದ. ಇದು ಇರುವುದಲ್ಲವೂ ಒಳಇರುವಿಗೆ, ಪರಸ್ಪರ ಅವಲಂಬನೆ ಎಂಬುದನ್ನು ಹೇಳುತ್ತದೆ. ಪರಿಸ್ಥಿತಿ ಸಮರ್ಪಕವಾಗಿದ್ದಾಗ “ಇರುತ್ತದೆ”, ಕಾಣುತ್ತದೆ; ಅಸಮರ್ಪಕ ಪರಿಸ್ಥಿತಿ,ಸಂದರ್ಭಗಳಲ್ಲಿ ಇರುವುದಿಲ್ಲ, ಕಾಣುವುದಿಲ್ಲ. ಹಾಗಾಗಿ ಇಲ್ಲ ಅನ್ನುವುದೂ ಸರಿಯಲ್ಲ. ಕಾಣುವುದು, ಕಾಣದಿರುವುದು ಎಂಬುದೇ ಸರಿಯಾದದ್ದು.
ಕಾಣದಿರುವುದನ್ನು “ಇಲ್ಲ” ಎನ್ನುವುದು ಸರಿಯಲ್ಲ. ಮಾರ್ಚ್ ತಿಂಗಳಿನಲ್ಲಿ ಅವರೆಯಕಾಯಿ ಸಾಮಾನ್ಯವಾಗಿ ಕಾಣವುದಿಲ್ಲ, ಆದರೆ ಅವರೆಕಾಯಿಯೇ ಇಲ್ಲವೆಂದು ಅರ್ಥವಲ್ಲ. ಸಮರ್ಪಕ ಪರಿಸ್ಥಿತಿ ಒದಗುವವರೆಗೆ ಅವು ಕಾಣಿಸಿಕೊಳ್ಳದೆ ಇರುತ್ತವೆ. ಹಾಗಾದರೆ ಸಾವು ಅಂದರೇನು? ಕಾಣಿಸಿಕೊಳ್ಳದೆ ಇರುವುದು-ಸಾವು. ಚಳಿಗಾಲದಲ್ಲಿ ಚಿಟ್ಟೆಗಳು ಸತ್ತುಹೋಗಿವೆ ಅಂದುಕೊಳ್ಳುತ್ತೇವೆ, ವಸಂತ ಬಂದಾಗ ಅವು ಮತ್ತೆ ಕಾಣುತ್ತವೆ. ಅಂದರೆ ಕಾಣದಿರುವುದೆಲ್ಲವೂ ಇಲ್ಲವೆಂದು ಅರ್ಥವಲ್ಲ. ಕಾಣದಿರುವುದು ನಾಶವಾಯಿತೆಂದೂ ಅಲ್ಲ.
ಇರುವುದು ಮತ್ತು ಇಲ್ಲವಾಗುವುದು ಎರಡೂ ಪರಿಕಲ್ಪನೆಗಳು. ನಮ್ಮ ಗ್ರಹಿಕೆಗೆ ಅನುಗುಣವಾಗಿ “ಕಾಣತ್ತವೆ” ಅಥವಾ “ಕಾಣದೆ ಇರುತ್ತವೆ” ಅಷ್ಟೇ. ಇದು ಬದುಕನ್ನು ಕುರಿತ ಗಹನವಾದ ನೋಟ. ನಮ್ಮ ಗ್ರಹಿಕೆ ಇಷ್ಟು ಗಹನವಾಗಿದ್ದರೆ ಹುಟ್ಟು-ಸಾವು, ಇರುವುದು ಇಲ್ಲವಾಗುವುದು ಎಂಬಂಥ ಪರಿಕಲ್ಪನೆಗಳಿಂದ ಬಿಡುಗಡೆ ದೊರೆಯುತ್ತದೆ. ಇದು ಬುದ್ಧನ ಉನ್ನತ ಸ್ತರದ ಬೋಧನೆ.
*
ಕಲ್ಲೊಣಗಣ ಕಿಚ್ಚು ಉರಿಯದಂತೆ
ಬೀಜದೊಳಗಣ ವೃಕ್ಷ ಉಲಿಯದಂತೆ,
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು
ಗುಹೇಶ್ವರ ನಿಂದ ನಿಲವ ಅನುಭ(ಭಾ)ವ ಸುಖಿ ಬಲ್ಲ
(ತೋರಲಿಲ್ಲಾಗಿ ಬೀರಲಿಲ್ಲಾರಿಗೆಯೂ ಎಂಬ ಮಾತು “ಸಮರ್ಪಕ ಪರಿಸ್ಥಿತಿ ಒದಗುವವರೆಗೆ” ಯಾವುದೂ ಏನೂ ಕಾಣಿಸಿಕೊಳ್ಳದು ಅನ್ನುವ ತತ್ವದ ಪ್ರತಿಪಾದನೆಯೇ ಅನ್ನಿಸಿತು. ಕಲ್ಲಿನೊಳಗಿನ ಕಿಚ್ಚು, ಬೀಜದೊಳಗಿನ ಮರ, ಅಥವಾ ಬಸವವಚನ ಹೇಳುವಂತೆ “ಕನ್ಯೆಯ ಸ್ನೇಹ” ಎಲ್ಲವೂ ವ್ಯಕ್ತವಾಗುವುದಕ್ಕೆ, ಕಣ್ಣಿಗೆ ಬೀರಿ, ತೋರುವುದಕ್ಕೆ ಸಮರ್ಪಕ ಪರಿಸ್ಥಿತಿ ಒದಗಬೇಕು)

