ಪ್ರೆಕಾರಿಯಟ್ ಎಂಬ ಹೊಸ ವರ್ಗ

ಮೇಲ್ಭಾಗದಲ್ಲಿ ಇರುವುದು “ಪ್ಲುಟೋಕ್ರಸಿ” (Plutocracy) ಎನ್ನುವ ವರ್ಗ. ಅವರ ಕೆಳಗೆ “ಸಲೇರಿಯಟ್” (Salariat) ಎನ್ನುವ ವರ್ಗ ಇದೆ. ಈ ಎರಡೂ ವರ್ಗಗಳ ಕೆಳಗೆ “ಪ್ರೆಕಾರಿಯಟ್” (Precariat) ಎಂಬ ಹೊಸ ವರ್ಗವಿದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನಾವು ಈಗಲೂ ಶ್ರೀಮಂತರು ಮತ್ತು ಕಾರ್ಮಿಕ ವರ್ಗ ಎಂಬ ಪದಗಳನ್ನು ಬಳಸುತ್ತೇವೆ, ಜಗತ್ತಿನಲ್ಲಿ ಏನೂ ಬದಲಾಗಿಯೇ ಇಲ್ಲ ಎಂಬಂತೆ. ಆದರೆ ಸುಮಾರು 15 ವರ್ಷಗಳ ಹಿಂದೆ, ಅರ್ಥಶಾಸ್ತ್ರಜ್ಞ Guy Standing ಅವರು ಹಳೆಯ ವರ್ಗ ವ್ಯವಸ್ಥೆ ಈಗ ಸತ್ತಂತಾಗಿದೆ ಎಂದು ವಾದಿಸಿದರು. ಅವರ ಅಭಿಪ್ರಾಯದಲ್ಲಿ, ಇಂದಿನ ಸಮಾಜವು ಮೂರು ವರ್ಗಗಳಾಗಿ ವಿಭಜನೆಯಾಗಿದೆ, ಮತ್ತು ಈ ವಿಭಜನೆ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ.

ಮೇಲ್ಭಾಗದಲ್ಲಿ ಇರುವುದು “ಪ್ಲುಟೋಕ್ರಸಿ” (Plutocracy) ಎನ್ನುವ ವರ್ಗ. ಇವರು ಅತ್ಯಂತ ಶ್ರೀಮಂತರು, ಬಿಲಿಯನೇರ್‌ಗಳು, ಕೇವಲ ಹಣವಷ್ಟೇ ಅಲ್ಲದೆ ಪ್ರಭಾವ ಮತ್ತು ಅಧಿಕಾರವನ್ನೂ ಹೊಂದಿರುವವರು.

ಅವರ ಕೆಳಗೆ “ಸಲೇರಿಯಟ್” (Salariat) ಎನ್ನುವ ವರ್ಗ ಇದೆ. ಇವರು ಸಂಬಳದ ಉದ್ಯೋಗಗಳನ್ನು ಹೊಂದಿರುವವರು, ಪಿಂಚಣಿ, ಅನಾರೋಗ್ಯ ರಜೆ (sick pay), ಉದ್ಯೋಗ ಭದ್ರತೆ ಮತ್ತು ವೃತ್ತಿಜೀವನದಲ್ಲಿ ಮುಂದುವರಿಯುವ ಅವಕಾಶಗಳನ್ನು ಹೊಂದಿರುವವರು.

ಆದರೆ ಈ ಎರಡೂ ವರ್ಗಗಳ ಕೆಳಗೆ “ಪ್ರೆಕಾರಿಯಟ್” (Precariat) ಎಂಬ ಹೊಸ ವರ್ಗವಿದೆ.

ಸಾಧನಾ ಎಂಬ ಮಹಿಳೆಯನ್ನು ಕಲ್ಪಿಸಿಕೊಳ್ಳಿ. ಸಾಧನಾ ಪದವೀಧರೆ, ಆದರೆ ಆಕೆ ಮೂರು zero-hour job ಗಳಲ್ಲಿ ಕೆಲಸ ಮಾಡುತ್ತಿದ್ದಾಳೆ. ಈ ಉದ್ಯೋಗಗಳಲ್ಲಿ ಯಾವುದೂ ಆಕೆಗೆ ಪೂರ್ಣಾವಧಿ ಉದ್ಯೋಗ ಒಪ್ಪಂದ ನೀಡುವುದಿಲ್ಲ. ಆಕೆಗೆ ಪಿಂಚಣಿ ಇಲ್ಲ, ಅನಾರೋಗ್ಯ ರಜೆ ವೇತನ (sick pay) ಇಲ್ಲ, ಮತ್ತು ಮುಂದಿನ ಸೋಮವಾರವೂ ತನ್ನ ಬಳಿ ಕೆಲಸ ಇರುತ್ತದೆ ಎಂಬ ಖಾತರಿಯೂ ಇಲ್ಲ.

ಆಕೆ ನಿರುದ್ಯೋಗಿಯೇನಲ್ಲ; ಆಕೆ ಯಾವಾಗಲೂ “ಬಹುತೇಕ ಉದ್ಯೋಗದಲ್ಲಿರುವವಳು” (almost employed) ಎನ್ನುವ ಅನಿಶ್ಚಿತ ಸ್ಥಿತಿಯಲ್ಲಿದ್ದಾಳೆ. ಅಂದರೆ, ಆಕೆ ಕೆಲಸ ಮಾಡುತ್ತಿದ್ದರೂ ಆಕೆಯ ಉದ್ಯೋಗಕ್ಕೆ ಭದ್ರತೆ ಇಲ್ಲ. ಯಾವಾಗ ಬೇಕಾದರೂ ಆಕೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದೇ “ಪ್ರೆಕಾರಿಯಟ್” ವರ್ಗದ ಮುಖ್ಯ ಲಕ್ಷಣ — ಕೆಲಸ ಇದೆ, ಆದರೆ ಸ್ಥಿರತೆ ಮತ್ತು ಭದ್ರತೆ ಇಲ್ಲ.

Guy Standing ಅವರ ವಾದದ ಪ್ರಕಾರ, ಪ್ರೆಕಾರಿಯಟ್ ವರ್ಗದ ಸಮಸ್ಯೆ ಕೇವಲ ಅವರ ಜೀವನ ಮತ್ತು ಉದ್ಯೋಗ ಅಸ್ಥಿರವಾಗಿರುವುದಲ್ಲ. ಅವರ ನಿಜವಾದ ಸಮಸ್ಯೆ ಎಂದರೆ, ಅವರಿಗೆ ತಮ್ಮದೇ ಆದ ಐಡೆಂಟಿಟಿ ಇಲ್ಲ. ಅವರು, ತಾವು ಸಮಾಜದಿಂದ ಪ್ರತ್ಯೇಕಗೊಂಡವರು ಎಂದು ಭಾವಿಸುತ್ತಾರೆ, ಇದೇ ಆತಂಕದಿಂದ ಸದಾ ಬಳಲುತ್ತಾರೆ, ಮತ್ತು ತಾವು ಯಾವುದಕ್ಕೂ ಸೇರಿಲ್ಲ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ. ಅವರಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಕಾರ್ಮಿಕ ಸಂಘಗಳು ಇಲ್ಲ, ಅಥವಾ ಎಲ್ಲರನ್ನು ಒಗ್ಗೂಡಿಸುವ ಸಾಮಾನ್ಯ ಉದ್ದೇಶವೂ ಇಲ್ಲ.

ಸ್ಟ್ಯಾಂಡಿಂಗ್ ನೀಡುವ ಎಚ್ಚರಿಕೆ ಏನೆಂದರೆ, ಲಕ್ಷಾಂತರ ಜನರು ತಮಗೆ ಸಮಾಜದಲ್ಲಿ ಯಾವುದೇ ಸ್ಥಾನ ಅಥವಾ ಪಾಲು ಇಲ್ಲ ಎಂದು ಭಾವಿಸಿದಾಗ, ಈ ಎರಡು ವಿಷಯಗಳಲ್ಲಿ ಒಂದಾಗುತ್ತಾರೆ.

ಒಂದು, ಅವರು ಸಂಪೂರ್ಣವಾಗಿ ಸಮಾಜದಿಂದ ದೂರವಾಗುತ್ತಾರೆ. ಅವರಿಗೆ ರಾಜಕೀಯದ ಬಗ್ಗೆ, ತಮ್ಮ ಸಮುದಾಯದ ಬಗ್ಗೆ, ಅಥವಾ ಕಾನೂನಿನ ಬಗ್ಗೆ ಸಹ ಆಸಕ್ತಿ ಉಳಿಯುವುದಿಲ್ಲ.

ಅಥವಾ ಇನ್ನೊಂದು, ಅವರು ಅಪಾಯಕಾರಿ ಮತ್ತು ಅತಿರೇಕದ ಸಿದ್ಧಾಂತಗಳ ಕಡೆಗೆ ಆಕರ್ಷಿತರಾಗುತ್ತಾರೆ. ಏಕೆಂದರೆ ಅವರಿಗೆ ತಾವು ಯಾವುದಾದರೂ ಗುಂಪಿಗೆ ಸೇರಿದ್ದೇವೆ ಎಂಬ ಭಾವನೆ ಬೇಕಾಗಿರುತ್ತದೆ. ಅವರಿಗೆ ತಮ್ಮದೇ ಆದ ಒಂದು ಗುರುತು ಮತ್ತು ಒಳಗೊಂಡ ಭಾವ (sense of identity and belonging) ಬೇಕಾಗಿರುತ್ತದೆ.

ನಮ್ಮ ಸಮಾಜದಲ್ಲಿ ಈ ಪ್ರೆಕಾರಿಯಟ್ ವರ್ಗವು ಇನ್ನಷ್ಟು ವೇಗದಲ್ಲಿ ಹಬ್ಬಿಕೊಳ್ಳುತ್ತಿದ್ದರೆ, ಅವರು ಹೇಗೆ ವರ್ತಿಸಬೇಕು ಎಂದು ನಾವು ನಿರೀಕ್ಷಿಸುತ್ತಿದ್ದೇವೆ? ಮತ್ತು ಈ ಪರಿಸ್ಥಿತಿ ಇಡೀ ಸಮಾಜಕ್ಕೆ ಕೊನೆಗೆ ಒಳ್ಳೆಯ ಫಲಿತಾಂಶವನ್ನು ತರುತ್ತದೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆಯೇ?”

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.