ಐಡಿಯಾಲೊಜಿಗಳ ಅಧ್ಯಯನ ಶಾಸ್ತ್ರದಲ್ಲಿ ನ್ಯಾಯ ಎನ್ನುವ ಪದಕ್ಕೆ empty signifier ಎನ್ನಲಾಗುತ್ತದೆ. ಹಾಗೆಂದರೆ ಇದು ಒಂದು ಒಂದು ಖಾಲಿ ಡಬ್ಬದ ಥರ, ಎಲ್ಲಿಯವರೆಗೆ ರಾಜಕೀಯ ಪಕ್ಷಗಳು ಇದರ ಜೊತೆ ತಮ್ಮ ಅಜೆಂಡಾ ಜೋಡಿಸುವುದಿಲ್ಲವೋ ಅಲ್ಲಿಯವರೆಗೆ ಇದಕ್ಕೆ ಯಾವ absolute ಅರ್ಥ ಇರುವುದಿಲ್ಲ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ರಾಜಕಾರಣದಲ್ಲಿ ಅತ್ಯಂತ ಅಪಾಯಕಾರಿ ಪದ ಯಾವುದು ಗೊತ್ತಾ? ನ್ಯಾಯ. ಈ ನ್ಯಾಯ ಎನ್ನುವ ಪದದ ಅರ್ಥ ಪ್ರತಿಯೊಬ್ಬರಿಗೂ ಬೇರೆ ಬೇರೆ. ಆದರೆ ಪ್ರತಿಯೊಬ್ಬರೂ ತಮ್ಮ ಅರ್ಥವೇ ಸರಿ ಎಂದು ವಾದ ಮಾಡುತ್ತಾರೆ. ವಾಸ್ತವದಲ್ಲಿ ನಿಮಗೆ ನಿಜವಾದ ನ್ಯಾಯ ಬೇಕಿಲ್ಲ, ನಿಮಗೆ ನಿಮ್ಮ ಅರ್ಥದ ನ್ಯಾಯ ಬೇಕು. ನಿಮ್ಮ ಅರ್ಥದ ನ್ಯಾಯ, ಯಾವುದನ್ನ ನೀವು ಯುಟೋಪಿಯಾ ( ಆದರ್ಶರಾಜ್ಯ) ಎನ್ನುತ್ತೀರೋ ಅದು ಇನ್ನೊಬ್ಬರಿಗೆ ದುಸ್ವಪ್ನವಾಗಿರಬಹುದು.
ಐಡಿಯಾಲೊಜಿಗಳ ಅಧ್ಯಯನ ಶಾಸ್ತ್ರದಲ್ಲಿ ನ್ಯಾಯ ಎನ್ನುವ ಪದಕ್ಕೆ empty signifier ಎನ್ನಲಾಗುತ್ತದೆ. ಹಾಗೆಂದರೆ ಇದು ಒಂದು ಒಂದು ಖಾಲಿ ಡಬ್ಬದ ಥರ, ಎಲ್ಲಿಯವರೆಗೆ ರಾಜಕೀಯ ಪಕ್ಷಗಳು ಇದರ ಜೊತೆ ತಮ್ಮ ಅಜೆಂಡಾ ಜೋಡಿಸುವುದಿಲ್ಲವೋ ಅಲ್ಲಿಯವರೆಗೆ ಇದಕ್ಕೆ ಯಾವ absolute ಅರ್ಥ ಇರುವುದಿಲ್ಲ. ಭಾರತವನ್ನೇ ಗಮನಿಸಿ. ಹಿಂದೂ ರಾಷ್ಟ್ರವಾದಿಗಳು ಬೀದಿಗಿಳಿದು ನ್ಯಾಯಕ್ಕಾಗಿ ಒತ್ತಾಯ ಮಾಡುತ್ತಾರೆಂದರೆ, ಅವರಿಗೆ ನ್ಯಾಯದ ಅರ್ಥ ಏನು? ಪಾರಂಪರಿಕ ಶ್ರೇಣಿವ್ಯವಸ್ಥೆಯನ್ನು ಪುನರ್ ಸ್ಥಾಪಿಸುವುದು, ಧಾರ್ಮಿಕ ಶ್ರೇಷ್ಠತೆ, ನಮ್ಮ ಧರ್ಮವೇ ರಾಷ್ಟ್ರದ ಐಡೆಂಟಿಟಿಯಾಗಬೇಕು ಎನ್ನುವುದು. ಇದರ ಸಲುವಾಗಿ ಅಲ್ಪಸಂಖ್ಯಾತರನ್ನು ಬದಿಗೆ ಸರಿಸಿದರೂ ಇವರಿಗೆ ಯಾವ ತೊಂದರೆ ಇಲ್ಲ. ಆದರೆ ಇದೇ ರಸ್ತೆಯಲ್ಲಿ ಒಬ್ಬ ದಲಿತ ಕಾರ್ಯಕರ್ತ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾನೆಂದರೆ, ಅವನಿಗೆ ನ್ಯಾಯದ ಅರ್ಥ ಏನು? ಈ ಶ್ರೇಣಿ ವ್ಯವಸ್ಥೆಯ ಪೂರ್ಣ ನಾಶ, ಮತ್ತು ಜಾತಿ ವ್ಯವಸ್ಥೆಯ ವಿನಾಶ. ಈ ಇಬ್ಬರೂ ಒಂದೇ ಪದವನ್ನು ಬಳಸುತ್ತಿದ್ದಾರೆ, ನ್ಯಾಯ. ಆದರೆ ಒಬ್ಬರ ನ್ಯಾಯವನ್ನು ದೇಶಪ್ರೇಮ ಎನ್ನಲಾಗುತ್ತದೆಯಾದರೆ ಇನ್ನೊಬ್ಬರ ನ್ಯಾಯ ಅನುಮಾನಕ್ಕೊಳಗಾಗುತ್ತದೆ.
ಭಾರತದ ಜಾತಿ ಸಂಘರ್ಷವನ್ನು ಗಮನಿಸಿ. ಅಂಬೇಡ್ಕರ ಅವರು ಜಾತಿ ವಿನಾಶದ ಸಲುವಾಗಿ ನ್ಯಾಯಕ್ಕಾಗಿ ಕರೆಕೊಟ್ಟಿದ್ದರು. ಜನ್ಮಾಧಾರಿತ ಮೇಲು ಕೀಳು ಪದ್ಧತಿ ಪ್ರಜಾಪ್ರಭುತ್ವದ ನೈತಿಕತೆಯನ್ನು ಹಾಳುಮಾಡುತ್ತದೆ. ಅವರ ಪ್ರಕಾರ, Caste system is not division of labour but it is a division of labourers. ಹಾಗೆಂದರೆ ಜಾತಿ, ಕೇವಲ ಕೆಲಸದ ವಿಂಗಡಣೆ ಅಲ್ಲ, ಅದು ಕೆಲಸಗಾರರ ವಿಂಗಡಣೆ. ಮೇಲ್ಜಾತಿಯವರಿಗೆ ನ್ಯಾಯದ ಅರ್ಥ, ಜಾತಿಯನ್ನು ಪವಿತ್ರ division of labour ರೂಪದಲ್ಲಿ ಸಂರಕ್ಷಿಸಿಕೊಳ್ಳುವುದು. ಇದು ನಮ್ಮ ಪರಂಪರೆ ಆದ್ದರಿಂದ ಇದನ್ನು ರಕ್ಷಿಸಿಕೊಳ್ಳುವುದು ನಮ್ಮ ಕರ್ತವ್ಯ. ಇಬ್ಬರೂ ನ್ಯಾಯ ಎನ್ನುವ ಪದವನ್ನು ಬಳಸುತ್ತಿದ್ದಾರೆ. ಡಾ. ಅಂಬೇಡ್ಕರ ಅವರ ನ್ಯಾಯ ಗೆಲ್ಲುತ್ತದೆಯಾದರೆ, ಜಾತಿ ವ್ಯವಸ್ಥೆ ನಾಶವಾಗುತ್ತದೆ. ಆದರೆ ವಿರೋಧಿಗಳ ನ್ಯಾಯ ಗೆಲ್ಲುತ್ತದೆಯಾದರೆ ಜಾತಿ ಶ್ರೇಣಿಕರಣ ವ್ಯವಸ್ಥೆ ಉಳಿದುಕೊಳ್ಳುತ್ತದೆ.
ಒಬ್ಬರಿಗೆ ನ್ಯಾಯವಾಗಿರೋದು ಇನ್ನೊಬ್ಬರಿಗೆ ದುಸ್ವಪ್ನ. ಧಾರ್ಮಿಕ ಕ್ರೂರತೆ ಎಂದರೆ ಇದೇ. ಯಾವಾಗ ನೀವು ನಿಮ್ಮ ಬೇಡಿಕೆಯೇ absolute ನ್ಯಾಯ ಎಂದುಕೊಳ್ಳುತ್ತೀರೋ ಆಗ ಇದನ್ನು ವಿರೋಧಿಸುತ್ತಿರುವವರು ಕೇವಲ ನಿಮ್ಮ ರಾಜಕೀಯ ವಿರೋಧಿಗಳಾಗಿ ಉಳಿಯುವುದಿಲ್ಲ ಅವರು ನಿಮ್ಮ ಬದ್ಧ ವೈರಿಗಳಾಗುತ್ತಾರೆ, ನಿಮ್ಮ ದೃಷ್ಟಿಯಲ್ಲಿ ಕೆಟ್ಟ ಜನರಾಗುತ್ತಾರೆ. ಆಗ ನೀವು ನಿಮ್ಮ ಎಲ್ಲ ಮಿತಿಗಳನ್ನು ದಾಟಿ ಅವರನ್ನು ದೇಷಿಸಲು ಶುರು ಮಾಡುತ್ತೀರಿ. ಮುಂದಿನ ಸಲ ಯಾರಾದರೂ ನ್ಯಾಯದ ಹೆಸರಿನಲ್ಲಿ ಕೂಗಾಡುತ್ತಿದ್ದರೆ ಅವರ ನ್ಯಾಯದ ನೈತಿಕತೆಯನ್ನು ಪ್ರಶ್ನೆ ಮಾಡಿ, ಅವರ ನ್ಯಾಯದ ಬೇಡಿಕೆಯಿಂದ ಯಾರಿಗೆಲ್ಲ ಅನ್ಯಾಯವಾಗುತ್ತಿದೆ ಎನ್ನುವುದನ್ನ ಗಮನಿಸಿ.

