ಸುಖಾವತಿ ಯಾವಾಗಲೂ ಲಭ್ಯವಾಗಿಯೇ ಇರುತ್ತದೆ. “ನಾವು ಸುಖಾವತಿಗೆ ಲಭ್ಯರಾಗುತ್ತೇವೇಯೇ?” ಅನ್ನುವುದು ಪ್ರಶ್ನೆ. ಸುಖಾವತಿಯಲ್ಲಿ ಇರುವುದು ಕಷ್ಟವಲ್ಲ. ನೋಡುವಾಗ, ಮುಟ್ಟುವಾಗ, ಪಾದ ನೆಲಕ್ಕೆ ಸೋಕುವಾಗ, ಸದಾ ಕಾಲವೂ ಎಚ್ಚರದ ಗಮನದಲ್ಲಿ ಬದುಕಿ. ದಿನದ ಇಪ್ಪತ್ತನಾಲ್ಕು ಗಂಟೆಯೂ ಸುಖಾವತಿಯಲ್ಲಿರಬಹುದು. ನಮ್ಮ ಎಚ್ಚರದ ಗಮನ ಮಾತ್ರ ಜೀವಂತವಾಗಿರಬೇಕು, ಅಷ್ಟೇ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 2.7: ಅರಿವಿನ ಬೆಳಕು । ಸುಖಾವತಿ-ಶುದ್ಧಭೂಮಿ
ನೀಲಿಯ ಆಕಾಶ, ಬಿಳಿಯ ಮೋಡ, ಚೆಲುವಾದ ಹೊಳೆ, ಮಳೆ, ಹೂ, ಹಕ್ಕಿ, ಮರ, ಮಕ್ಕಳು—ಬದುಕಿನ ಅಚ್ಚರಿಗಳು ಸದಾ ಇದ್ದೇ ಇರುತ್ತವೆಂದು ನಮಗೆಲ್ಲರಿಗೂ ಗೊತ್ತು. ನಿನ್ನೆಯ ದಿನ ಧ್ಯಾನದ ನಡಿಗೆಯಲ್ಲಿರುವಾಗ ಎರಡು ಕೆಂಪು ಹೂಗಳನ್ನು ಕಂಡೆ. ಹಸಿರು ಹುಲ್ಲಿನ ನಡುವೆ ಪುಟ್ಟ ಹೂ. ಪೂರಾ ಅರಳಿದ್ದವು. ಮೆಲ್ಲನೆ ಎತ್ತಿಕೊಂಡೆ. ವಿಯೆಟ್ನಾಂನಿಂದ ಬಂದಿದ್ದ ಇಬ್ಬರು ಸಂನ್ಯಾಸಿಗಳಿಗೆ ಅದನ್ನು ನೀಡುತ್ತಾ “ಈ ಹೂಗಳು ಸುಖಾವತಿಯಲ್ಲಿ ಮಾತ್ರ ದೊರೆಯುತ್ತವೆ,” ಎಂದೆ. ಸಂನ್ಯಾಸಿಗಳಿಗೆ ಅರ್ಥವಾಯಿತು. ಎಚ್ಚರದ ಗಮನವಿದ್ದರೆ ಬದುಕಿನ ಅಚ್ಚರಿಗಳನ್ನು ಮುಟ್ಟಿ ನೇವರಿಸಬಹುದು. ಆಗ ಸುಖಾವತಿ, ಅಥವಾ ಶುದ್ಧಭೂಮಿ, ಅಥವಾ ದೇವರ ರಾಜ್ಯ ನಮಗೆ ದೊರೆಯುತ್ತದೆ.
ಸತ್ಯವೇನೆಂದರೆ ಸುಖಾವತಿ ಯಾವಾಗಲೂ ಲಭ್ಯವಾಗಿಯೇ ಇರುತ್ತದೆ. “ನಾವು ಸುಖಾವತಿಗೆ ಲಭ್ಯರಾಗುತ್ತೇವೇಯೇ?” ಅನ್ನುವುದು ಪ್ರಶ್ನೆ. ಸುಖಾವತಿಯಲ್ಲಿ ಇರುವುದು ಕಷ್ಟವಲ್ಲ. ನೋಡುವಾಗ, ಮುಟ್ಟುವಾಗ, ಪಾದ ನೆಲಕ್ಕೆ ಸೋಕುವಾಗ, ಸದಾ ಕಾಲವೂ ಎಚ್ಚರದ ಗಮನದಲ್ಲಿ ಬದುಕಿ. ದಿನದ ಇಪ್ಪತ್ತನಾಲ್ಕು ಗಂಟೆಯೂ ಸುಖಾವತಿಯಲ್ಲಿರಬಹುದು. ನಮ್ಮ ಎಚ್ಚರದ ಗಮನ ಮಾತ್ರ ಜೀವಂತವಾಗಿರಬೇಕು, ಅಷ್ಟೇ.
ಸುಖಾವತಿಯು ನಿಗೂಢವಾದೊಂದು ಸ್ಥಳ. ಅಲ್ಲಿ ವೇದನೆಯಿಲ್ಲ. ನಾವು ಅಲ್ಲಿಗೆ ಹೋಗಬೇಕು ಎಂದು ನಂಬುವ ಪ್ರವೃತ್ತಿಯಿದೆ. ಸುಖಾವತಿ ಎಂಬುದು ನೋವು ನರಳಾಟವಿರದ ಸ್ಥಳವಲ್ಲ. ಯಾಕೆಂದರೆ ನರಳಾಟವಿರದೆ ಸಂತೋಷವಿರದು. ಒಂದು ಇನ್ನೊಂದರೊಳಗೇ ಇರುತ್ತದೆ. ವೇದನೆಯ ಹಿನ್ನೆಲೆ ಇದ್ದರೆ ಮಾತ್ರ ಸುಖವನ್ನು ಗುರುತಿಸಬಲ್ಲೆವು. ನಮ್ಮೊಳಗೆ ತಿಳಿವು ಮತ್ತು ಮರುಕ ಇರದಿದ್ದರೆ ಸಂತೋಷವಾಗಿರುವುದಕ್ಕೆ ಆಗುವುದಿಲ್ಲ. ಮರುಕ ಮತ್ತು ತಿಳಿವು ಇರದಿದ್ದರೆ ಯಾರೊಡನೆಯೂ ಸಂಬಂಧ ಕೂಡ ಇರದೆ ಒಂಟಿಗಳಾಗುತ್ತೀರಿ.
ನಿಮ್ಮ ಸುತ್ತಲೂ ಗಮನಿಸಿ ನೋಡಿ. ಮರುಕ ಮತ್ತು ತಿಳಿವು ಇರುವ ವ್ಯಕ್ತಿಗಳು ವೇದನೆಪಡುವುದಿಲ್ಲ. ಸದಾ ಸಂತೋಷವಾಗಿರುತ್ತಾರೆ. ಆದರೆ ವೇದನೆ ಇರದೆ ತಿಳಿವು, ಮರುಕ ಮೂಡುವುದಿಲ್ಲ. ವೇದನೆಯನ್ನು ಮುಟ್ಟಿ ಅನುಭವಿಸಿದರೆ ಮಾತ್ರವೇ ಅದರ ತಿಳಿವು, ಮರುಕ ಮೂಡುತ್ತವೆ. ವೇದನೆಯೇ ಇರದ ಸ್ಥಳವನ್ನು ಕಲ್ಪನೆ ಮಾಡಿಕೊಳ್ಳಿ. ಅಂಥ ಸ್ಥಳದಲ್ಲಿ ಮಕ್ಕಳಿಗೆ ತಿಳಿವು, ಮರುಕ ಮೂಡುವುದು ಸಾಧ್ಯವೇ ಇಲ್ಲ.
ದೇವರ ರಾಜ್ಯದಲ್ಲಿ ವೇದನೆ ಇರದಿದ್ದರೆ ತಿಳಿವು, ಮರುಕಗಳು ಕೂಡ ಇರುವುದಿಲ್ಲ. ಅವು ಇಲ್ಲದಿರುವ ಸ್ಥಳ ದೇವರ ರಾಜ್ಯ, ಶುದ್ಧಭೂಮಿ ಅಥವಾ ಅಮಿತಾಭ ಬುದ್ಧನಿರುವ ಸುಖಾವತಿಯಾಗಲು ಸಾಧ್ಯವಿಲ್ಲ. ಇದು ನನ್ನ ಸರಳ ವಿವರಣೆ. ಸುಖಾವತಿಯಲ್ಲಿ ತಿಳಿವು ಮತ್ತು ಮರುಕಗಳನ್ನು ಪಡೆಯುವ ಹೇರಳ ಅವಕಾಶಗಳಿರುತ್ತವೆ. ತಿಳಿವು, ಮರುಕವಿದ್ದರೆ ವೇದನೆಯ ಬಗ್ಗೆ ನಿಮ್ಮಲ್ಲಿ ಭಯ ಇರುವುದಿಲ್ಲ.
ನೀವು ಸಾವಯವ ಕೃಷಿಕರಾಗಿದ್ದರೆ ಕಳೆ, ಕಸಗಳ ಬಗ್ಗೆ ನಿಮಗೆ ಭಯ, ಆತಂಕ ಇರುವುದಿಲ್ಲ. ಅವನ್ನು ಬದಲಿಸುವುದು ಹೇಗೆಂದು ಗೊತ್ತಿರುತ್ತದೆ. ಇದು ಬದುಕನ್ನು ಇಡಿಯಾಗಿ ನೋಡುವ ದಾರಿ. ನಿನ್ನೆಯ ದಿನ ನಾನು ಹುಲ್ಲಿನಿಂದ ಎತ್ತಿಕೊಂಡ ಪುಟ್ಟ ಹೂಗಳೇ ಬೆರಗು. ನಮ್ಮಲ್ಲಿ ಎಚ್ಚರದ ಗಮನ ಇರದಿದ್ದರೆ ಅಂಥ ಬೆರಗನ್ನು ನೋಡಲಾರೆವು. ಈ ಕ್ಷಣದಲ್ಲಿ, ನಮ್ಮೊಳಗೆ, ನಮ್ಮ ಸುತ್ತಲೂ ಬದುಕಿನ ಬೆರಗು ಅಗಾಧವಾಗಿದೆ. ನಮ್ಮ ಮಿದಳು ಅಚ್ಚರಿ ನಮ್ಮ ಕಣ್ಣು ಅಚ್ಚರಿ, ನಮ್ಮ ಹೃದಯ ಅಚ್ಚರಿ. ನಮ್ಮ ಮೈಯ ಒಂದೊಂದು ಜೀವಕೋಶವೂ ಒಂದೊಂದು ಅಚ್ಚರಿ. ನಮ್ಮ ಸುತ್ತಲೂ ಎಲ್ಲೆಲ್ಲೂ ಅಚ್ಚರಿಯೇ ತುಂಬಿದೆ.
ಈ ಅಚ್ಚರಿಯೆಲ್ಲವೂ ದೇವರ ರಾಜ್ಯಕ್ಕೆ ಸೇರಿದ್ದು, ಬುದ್ಧನ ಶುದ್ಧಭೂಮಿ ಸುಖಾವತಿಗೆ ಸೇರಿದ್ದು. ಆ ಬೆರಗನ್ನು ನೋಡಲಾಗದೆ ಪೂರಾ ಉದಾಸೀನ ಮಾಡುವ ರೀತಿಯಲ್ಲಿ ಬದುಕಿದ್ದೇವೆ. ಆತಂಕ, ಹತಾಶೆ, ಭಯ ಮತ್ಸರಗಳಲಿ ಸಿಕ್ಕಿಬಿದ್ದಿದ್ದೇವೆ. ಇವೆಲ್ಲ ಇರುವಾಗ ಸುಖಾವತಿಯ ಅಚ್ಚರಿಯ ಶುದ್ಧಭೂಮಿ ನಮ್ಮ ಪಾಲಿಗೆ ಇರುವುದಿಲ್ಲ.
*
ಈ ವಿವರಣೆಯೊಂದಿಗೆ ಅಲ್ಲಮನ ಈ ಎರಡಯ ವಚನ ಬೇರೆಯದೇ ರೀತಿಯಲ್ಲಿ ಮನಸನ್ನು ಮುಟ್ಟುತ್ತವೆ
ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ
ಕಾಣೆನೆಂಬ ನುಡಿಗೆಡೆಯ ಕಾಣೆ
ಕುರುಹುಗೆಟ್ಟು ಅರಿವ ನೆರೆಯರಿದು
ಬೆರಸಿದೆನೆಂಬ ಬರುನುಡಿಯ ನುಡಿಗೆ
ನಾಚಿದೆನಯ್ಯಾ ಗುಹೇಶ್ವರಾ
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು
ತುಂಬಿ ನೋಡಾ
ಆತುಮ ತುಂಬಿ ತುಂಬಿ ಪರಮಾತುಮ ತುಂಬಿ ತುಂಬಿ ನೋಡಾ
ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು
ತುಂಬಿ ನೋಡಾ !

