ಝೆನ್ ಗುರು ಮತ್ತು ಸೇನಾಧಿಪತಿ : ಜೆನ್ ಕ್ಷಣ #3

ನಾವು ಒಳಗೆ ದುರ್ಬಲರಾಗಿದ್ದರೆ, ಇವುಗಳೆಲ್ಲ ನಮ್ಮ ಮನಸ್ಸನ್ನು ಕದಡುತ್ತವೆ.
ಆದರೆ ಶಾಂತ ಮನಸ್ಸು,  ಆತ್ಮವಿಶ್ವಾಸ ಮತ್ತು ಸ್ವೀಕಾರ ಪ್ರಜ್ಞೆ ಇದ್ದರೆ, ಹೊರಗಿನ ಪರಿಸ್ಥಿತಿಗಳು ನಮ್ಮನ್ನು ಸುಲಭವಾಗಿ ಸೋಲಿಸಲಾರವು… । ಡಾ. ಸಹನಾ ಪ್ರಿಯದರ್ಶಿನಿ

ಜಪಾನ್‌ನ ಸಾಮಂತ ಯುಗದ ಆ೦ತರೀಕ ಯುದ್ದ ಸಮಯದಲ್ಲಿ, ಒಂದು ಆಕ್ರಮಣಕಾರಿ ಸೇನೆ ಊರನ್ನು ವೇಗವಾಗಿ ವಶಪಡಿಸಿಕೊಳ್ಳುತ್ತಿತ್ತು.
ಒಂದು ಗ್ರಾಮದಲ್ಲಿ, ಸೇನೆ ಬರುವುದಕ್ಕೂ ಮುನ್ನ ಎಲ್ಲರೂ ಓಡಿ ಹೋಗಿದ್ದರು – ಒಬ್ಬ ಝೆನ್ ಗುರು ಮಾತ್ರ ಅಲ್ಲಿಯೇ ಉಳಿದಿದ್ದರು.

ಈ ವೃದ್ಧ ವ್ಯಕ್ತಿಯ ಬಗ್ಗೆ ಕುತೂಹಲಗೊಂಡ ಸೇನಾಧಿಪತಿ, ಈ ಗುರು ಯಾವ ರೀತಿಯ ವ್ಯಕ್ತಿ ಎಂದು ನೋಡಲು ದೇವಾಲಯಕ್ಕೆ ಬಂದನು. ತಾನು ಎಲ್ಲರಿಂದಲೂ ಪಡೆಯುತ್ತಿದ್ದ ಗೌರವ ಮತ್ತು ವಿನಯವನ್ನು ಈ ಗುರು ತೋರಿಸದಿದ್ದಾಗ, ಸೇನಾಧಿಪತಿ ಕೋಪದಿಂದ ಉರಿದನು.

“ಮೂರ್ಖನೇ!” ಎಂದು ಕತ್ತಿಯನ್ನು ಎಳೆಯುತ್ತಾ ಗರ್ಜಿಸಿದನು.
“ನೀನು ಯಾರ ಮುಂದೆ ನಿಂತಿದ್ದೀಯೆಂಬುದು ಗೊತ್ತೇ?
ನಾನು ಕಣ್ಣು ಮಿಟುಕಿಸದೇ ನಿನ್ನನ್ನು ಕತ್ತಿಯಿಂದ ಚುಚ್ಚಿ ಕೊಲ್ಲಬಲ್ಲವನಾಗಿದ್ದೇನೆ!”

ಸೇನಾಧಿಪತಿಯ ಬೆದರಿಕೆಗೆ ಹೆದರದ  ಝೆನ್ ಗುರು ಅಚಲರಾಗಿಯೇ ಉಳಿದು,
ಶಾಂತವಾಗಿ ಉತ್ತರಿಸಿದರು:

“ಹಾಗಾದರೆ, ನೀನು ಯಾರ ಮುಂದೆ ನಿಂತಿದ್ದೀಯೆಂಬುದು ನಿನಗೆ ಗೊತ್ತೇ ?
ನಾನು ಕಣ್ಣು ಮಿಟುಕಿಸದೇ ಕತ್ತಿಯಿಂದ ಚುಚ್ಚಿಸಿಕೊಳ್ಳಬಲ್ಲವನಾಗಿದ್ದೇನೆ.”

***

ನಿಜವಾದ ಶಕ್ತಿ ಹೊರಗಿನ ಅಧಿಕಾರದಲ್ಲಿಲ್ಲ, ಒಳಗಿನ ನಿರ್ಭಯತೆಯಲ್ಲಿ ಇದೆ.
ಯಾರಾದರೂ ಕೋಪ, ಬೆದರಿಕೆ ಅಥವಾ ಅಧಿಕಾರದಿಂದ ಇತರರನ್ನು ಗೆಲ್ಲಬಹುದು;  ಆದರೆ ತನ್ನ ಮನಸ್ಸನ್ನು ಗೆದ್ದವನೇ ನಿಜವಾದ ಶಕ್ತಿಶಾಲಿ.

ಸೇನಾಧಿಪತಿಗೆ ದೈಹಿಕ ಶಕ್ತಿ, ಅಧಿಕಾರ ಮತ್ತು ಕತ್ತಿ ಇತ್ತು.
ಆದರೆ ಝೆನ್ ಗುರುಗಳ ಬಳಿ ಇನ್ನೂ ಆಳವಾದ ಶಕ್ತಿ ಇತ್ತು –   ಅದು ಭಯರಹಿತ ಮನಸ್ಸು, ಆತ್ಮನಿಯಂತ್ರಣ ಮತ್ತು ಶಾಂತಿ.  ಝೆನ್ ಗುರುವಿಗೆ ಸಾವಿನ ಭಯ ಇರಲಿಲ್ಲ. ಅವರು ತಮ್ಮ ಅಹಂಕಾರವನ್ನೂ, ಭಯವನ್ನೂ ದಾಟಿದ್ದರು. ಆದ್ದರಿಂದ ಸೇನಾಧಿಪತಿಯ ಕತ್ತಿಯೂ ಅವರನ್ನು ನಡುಗಿಸಲಿಲ್ಲ.

ನಮ್ಮ ದೈನಂದಿನ ಜೀವನದಲ್ಲೂ ಒತ್ತಡ, ಟೀಕೆ, ಅವಮಾನ, ಭಯ, ಕೋಪ, ಸಮಾಜದ ಒತ್ತಾಯ, ಅಧಿಕಾರದ ದರ್ಪ… ಎಂಬ ಹಲವಾರು “ಸೇನಾಧಿಪತಿಗಳು” ಬರುತ್ತಾರೆ. –

ನಾವು ಒಳಗೆ ದುರ್ಬಲರಾಗಿದ್ದರೆ, ಇವುಗಳೆಲ್ಲ ನಮ್ಮ ಮನಸ್ಸನ್ನು ಕದಡುತ್ತವೆ.
ಆದರೆ ಶಾಂತ ಮನಸ್ಸು,  ಆತ್ಮವಿಶ್ವಾಸ ಮತ್ತು ಸ್ವೀಕಾರ ಪ್ರಜ್ಞೆ ಇದ್ದರೆ, ಹೊರಗಿನ ಪರಿಸ್ಥಿತಿಗಳು ನಮ್ಮನ್ನು ಸುಲಭವಾಗಿ ಸೋಲಿಸಲಾರವು.

“ಭಯದಿಂದ ಮುಕ್ತನಾದವನನ್ನು ಯಾರೂ ನಿಜವಾಗಿ ಜಯಿಸಲಾರರು.” ತನ್ನದೇ ಭಯ ಮತ್ತು ಕೋಪವನ್ನು ಜಯಿಸಿದವನೇ, ಇತರರನ್ನು ಜಯಿಸಿದವನಿಗಿಂತ ಹೆಚ್ಚು ಶಕ್ತಿಶಾಲಿ.

ಶಾಂತ ಮನಸ್ಸು, ಅಹಂಕಾರ ರಹಿತ ಬದುಕು ಮತ್ತು ಒಳಗಿನ ಸ್ಥೈರ್ಯ – ಇವೇ ಅಲ್ಲವೇ ನಮ್ಮ ಜೀವನವನ್ನು ಸಾಕಾರಗೊಳಿಸುವುದು…  



(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.