ನಾವು ಕೊನೆಯ ಮನುಷ್ಯ ಯುಗದತ್ತ ಸಾಗುತ್ತಿದ್ದೇವೆಯೇ?

ನಾವು ನಮ್ಮ ಬಗ್ಗೆ ಅತಿಯಾಗಿ ಯೋಚಿಸುವುದರಲ್ಲಿ ಮತ್ತು ಆತ್ಮಸಂಶಯದಲ್ಲಿ ಮುಳುಗಿದ್ದೇವೆ. ನಾವು ಯಾವುದೇ “ನಕ್ಷತ್ರಗಳನ್ನು” ಸೃಷ್ಟಿಸುವುದಿಲ್ಲ, ಏಕೆಂದರೆ ನಕ್ಷತ್ರವೆಂದರೆ ಏನು ಎನ್ನುವುದರ ಬಗ್ಗೆ ಚರ್ಚಿಸುವುದರಲ್ಲೇ ನಾವು ತುಂಬಾ ಬ್ಯುಸಿಯಾಗಿದ್ದೇವೆ! । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನಾವು ಜಗತ್ತನ್ನು ಎಷ್ಟು ನೀರಸವಾಗಿಸಿದ್ದೇವೆಂದರೆ ಅಷ್ಟರ ಮಟ್ಟಿಗೆ ನಮ್ಮ ಬದುಕಿನಿಂದ ಸಾಹಸ ಮತ್ತು ಧೈರ್ಯದ ದಿನಗಳು ಕಣ್ಮರೆಯಾಗಿವೆ. ಅವುಗಳ ಸ್ಥಾನವನ್ನು ‘ಸಂತೋಷ’ ಎಂಬ ಬೇಸರ ಹುಟ್ಟಿಸುವ ಕಲ್ಪನೆ ಪಡೆದುಕೊಂಡಿದೆ. ಒಮ್ಮೆ ರೋಮಾಂಚನ ಮತ್ತು ಉತ್ಸಾಹವನ್ನು ನೀಡುತ್ತಿದ್ದ ಎಲ್ಲವನ್ನೂ ಈಗ ನಾವು ಸುರಕ್ಷಿತ ಮತ್ತು ನಿರುಪದ್ರವವಾಗಿಸಿದ್ದೇವೆ. ಈಗ ನಮ್ಮ ಜೀವನವು ಕೇವಲ ಆಹ್ಲಾದಕರ ಮತ್ತು ಆರಾಮದಾಯಕ ಸಂಗತಿಗಳ ನಡುವೆ ಅಲೆದಾಡುತ್ತದೆ. ನಾವು ಫ್ರೆಡ್ರಿಕ್ ನೀಷೆ ಹೇಳುವ ‘ಕೊನೆಯ ಮನುಷ್ಯ’ (Last Man) ನ ಯುಗದತ್ತ ಸಾಗುತ್ತಿದ್ದೇವೆ.

ತನ್ನ Thus Spoke Zarathustra ಎನ್ನುವ ಕೃತಿಯಲ್ಲಿ ನೀಷೆ, ಮಾನವಕುಲವು ಕನಸು ಕಾಣಲು ಅಥವಾ ಅಪಾಯವನ್ನು ಎದುರಿಸಲು ಧೈರ್ಯ ಮಾಡದ ಕಾಲಕ್ಕೆ ಪ್ರವೇಶಿಸುತ್ತಿದೆ ಎಂದು ವಾದಿಸುತ್ತಾನೆ. ನಾವು ಇನ್ನು ಮುಂದೆ ನಮ್ಮ ಹೋಂ ಲೋನ್ ಮನೆಗಳು ಮತ್ತು ಗೌರವಾನ್ವಿತ ಉದ್ಯೋಗಗಳ ಸೌಕರ್ಯವನ್ನು ಬಿಟ್ಟು ಹೊಸ ಎತ್ತರಗಳನ್ನು ತಲುಪಲು ಬಯಸುವುದಿಲ್ಲ.
ಅವನು ವಿಷಾದದಿಂದ ಹೀಗೆ ಹೇಳುತ್ತಾನೆ : “ ಅಯ್ಯೋ, ಮನುಷ್ಯ ಇನ್ನು ಮುಂದೆ ಒಂದು ನಕ್ಷತ್ರಕ್ಕೂ ಜನ್ಮ ನೀಡದ ಕಾಲ ಬರುತ್ತಿದೆ ! “

ಮಾನವಕುಲವನ್ನು ಇಂದಿನ ಉಚ್ಚ ಮಟ್ಟಕ್ಕೆ ತಂದ ಸೃಜನಶೀಲ ಮತ್ತು ಶ್ರಮಶೀಲ ಮನೋಭಾವವೇ ಈಗ ತನ್ನನ್ನೇ ತಾನು ನಾಶಮಾಡಿಕೊಳ್ಳಲು ಆರಂಭಿಸಿದೆ. ನಾವು ನಮ್ಮ ಬಗ್ಗೆ ಅತಿಯಾಗಿ ಯೋಚಿಸುವುದರಲ್ಲಿ ಮತ್ತು ಆತ್ಮಸಂಶಯದಲ್ಲಿ ಮುಳುಗಿದ್ದೇವೆ. ನಾವು ಯಾವುದೇ “ನಕ್ಷತ್ರಗಳನ್ನು” ಸೃಷ್ಟಿಸುವುದಿಲ್ಲ, ಏಕೆಂದರೆ ನಕ್ಷತ್ರವೆಂದರೆ ಏನು ಎನ್ನುವುದರ ಬಗ್ಗೆ ಚರ್ಚಿಸುವುದರಲ್ಲೇ ನಾವು ತುಂಬಾ ಬ್ಯುಸಿಯಾಗಿದ್ದೇವೆ. ನಾವು ಯೋಚಿಸುತ್ತೇವೆ, ಆದರೆ ಹಿಂಜರಿಯುತ್ತೇವೆ. ನಾವು ಮಾತನಾಡುತ್ತೇವೆ, ಆದರೆ ನಿರ್ಧಾರಕ್ಕೆ ಬರುವುದಿಲ್ಲ, ನಾವು ಕಾರ್ಯಪ್ರವೃತ್ತರಾಗುವುದಿಲ್ಲ.

ನಮ್ಮಲ್ಲಿ ವಾದಗಳಿವೆ, ಆದರೆ ಅವು ನಿಜವಾಗಿ ಮಹತ್ವ ಹೊಂದಿಲ್ಲ. ನಾವು ಕೆಲಸಗಳಿಗೆ ಹೋಗುತ್ತೇವೆ, ಆದರೆ ಅವುಗಳ ಬಗ್ಗೆ ನಮಗೆ ನಿಜವಾದ ಕಾಳಜಿ ಇರುವುದಿಲ್ಲ. ನಾವು ಸಣ್ಣಪುಟ್ಟ ಅಪಾಯಗಳಿಗೆ ತೆರೆದುಕೊಳ್ಳುತ್ತೇವೆ, ಆದರೆ ಯಾವಾಗಲೂ ನಮ್ಮನ್ನು ರಕ್ಷಿಸುವ ಒಂದು ಭದ್ರತಾ ಜಾಲ (safety net) ನಮ್ಮ ಸುತ್ತ ಇರುತ್ತದೆ.
ಹೀಗಾಗಿ, ಮಾನವಕುಲದ ಕೊನೆಯ ಪೀಳಿಗೆಯ ಎಲ್ಲರೂ ಒಂದೇ ವಿಷಯವನ್ನು ಬಯಸುತ್ತಾರೆ. ಅದರ ಪರಿಣಾಮವಾಗಿ ಎಲ್ಲರೂ ಒಂದೇ ರೀತಿಯವರಾಗುತ್ತಾರೆ.

ನೀಷೆ ಯ ಬರಹಗಳಂತೆ, ಅವನ ಈ ಮಾತುಗಳ ಉದ್ದೇಶವೂ ಜನರನ್ನು ಬೆಚ್ಚಿಬೀಳಿಸುವುದು ಮತ್ತು ಪ್ರೇರೇಪಿಸುವುದಾಗಿದೆ. ನಾವು ತುಂಬಾ ಆರಾಮದಾಯಕವಾದ ಜಗತ್ತನ್ನು ನಿರ್ಮಿಸಿದ್ದೇವೆ; ಆದ್ದರಿಂದ ಬೇಸರಗೊಳ್ಳುವುದು ನಮಗೆ ಬಹಳ ಸುಲಭವಾಗಿದೆ. ಯಾವುದೇ ಅಲ್ಪ ಅಸೌಕರ್ಯವೂ ಇಲ್ಲದ, ಯಾವುದೇ ಅಲ್ಪ ಅಪಾಯದ ಭಾವನೆಯೂ ಇಲ್ಲದ ಜಗತ್ತನ್ನು ನಾವು ಬಯಸುತ್ತೇವೆ.

ಆದರೆ ನೀಷೆಯ ಪ್ರಕಾರ, ಪ್ರತಿ ಬಾರಿ ನಾವು ಸೆಟಲ್ ಆದಾಗ, ರಾಜಿ ಮಾಡಿಕೊಂಡಾಗ, ಅಥವಾ ಅರ್ಥಹೀನವಾದ ಸಣ್ಣಪುಟ್ಟ ಸಂತೋಷಗಳಿಗಾಗಿ ಬದುಕನ್ನು ಸೀಮಿತಗೊಳಿಸಿದಾಗ, ನಮ್ಮ ಮಾನವೀಯತೆಯ ಒಂದು ಚಿಕ್ಕ ಭಾಗವು ಗಾಢ ನಿದ್ರೆಗೆ ಜಾರುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.