ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಟಿಂಕರ್‌ಬೆಲ್ ಪರಿಣಾಮ (Tinkerbell Effect) ಎಂದರೆ ಜನರು ಯಾವುದೋ ಒಂದು ವಿಷಯವನ್ನು ಸತ್ಯವೆಂದು ನಂಬುವುದರಿಂದಲೇ ಅದು ಸತ್ಯವಾಗಿರುವುದು. ಉದಾಹರಣೆಗೆ, ಹಣ. ಒಂದು ಬ್ಯಾಂಕ್ ನೋಟು, ಕೇವಲ ಒಂದು ಮಸುಕಾದ ಕಾಗದದ ತುಂಡು. ಆದರೆ ಅದಕ್ಕೆ ಮೌಲ್ಯವಿರುವುದು ನಾವು ಎಲ್ಲರೂ ಒಟ್ಟಾಗಿ ಅದಕ್ಕೆ ಮೌಲ್ಯವಿದೆ ಎಂದು ಒಪ್ಪಿಕೊಂಡಿರುವುದರಿಂದ. ನಾವು ಆ ಒಪ್ಪಿಗೆಯನ್ನು ಹಿಂತೆಗೆದುಕೊಂಡ ಕ್ಷಣದಲ್ಲೇ ಅದು ಮೌಲ್ಯವಿಲ್ಲದ ಕಾಗದವಾಗಿಬಿಡುತ್ತದೆ. ಇದೇ ಸಂಗತಿ, ಗಡಿಗಳು, ಕಾನೂನುಗಳು, ಷೇರುಗಳ ಬೆಲೆಗಳು ಹಾಗೂ ನಾವು ಅತ್ಯಂತ ದೃಢ ಮತ್ತು ಸ್ಥಿರವೆಂದು ಪರಿಗಣಿಸುವ ಮದುವೆ, ಮಾತೃತ್ವ, ಮುಂತಾದ ಅನೇಕ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಅವುಗಳ ಶಕ್ತಿ ಮತ್ತು ಅಸ್ತಿತ್ವವು ಬಹುಪಾಲು ಜನರ ಸಾಮೂಹಿಕ ನಂಬಿಕೆ ಮತ್ತು ಒಪ್ಪಿಗೆಯ ಮೇಲೆ ಅವಲಂಬಿತವಾಗಿರುತ್ತದೆ.
1651ರಲ್ಲಿ ತತ್ವಜ್ಞಾನಿ ಥಾಮಸ್ ಹಾಬ್ಸ್, ಇದೇ ತತ್ವವು ಯಾವುದೇ ರಾಜಕೀಯ ಅಧಿಕಾರಕ್ಕೂ ಅನ್ವಯಿಸುತ್ತದೆ ಎಂದು ಹೇಳಿದರು. ರಾಜನಿಗೆ ಅಧಿಕಾರವಿರುವುದು ಅವನ ಪ್ರಜೆಗಳು ಅವನಿಗೆ ಅಧಿಕಾರವಿದೆ ಎಂದು ನಂಬುವುದರಿಂದ ಮಾತ್ರ. ಅವರು ಆ ನಂಬಿಕೆಯನ್ನು ಕಳೆದುಕೊಳ್ಳುವ ಕ್ಷಣದಲ್ಲಿ, ಸಿಂಹಾಸನವು ಕೇವಲ ಒಂದು ಅಲಂಕಾರಿಕ ಕುರ್ಚಿಯಾಗಿ ಮಾತ್ರ ಉಳಿಯುತ್ತದೆ. ಹಾಬ್ಸ್ ಅವರ ದೃಷ್ಟಿಯಲ್ಲಿ, ಸರ್ಕಾರವೆಂದರೆ ನಾವು ಒಟ್ಟಾಗಿ ಹೇಳಿಕೊಳ್ಳುವ ಒಂದು ಕಥೆ. ನಾವು ಆ ಕಥೆ ಹೇಳುವುದನ್ನು ನಿಲ್ಲಿಸಿದ ಕ್ಷಣದಲ್ಲೇ, ಸರ್ಕಾರ ತನ್ನ ಬಲವನ್ನು ಕಳೆದುಕೊಂಡು ಕುಸಿದು ಬೀಳುತ್ತದೆ. ಹಾಗೆಂದರೆ, ರಾಜಕೀಯ ಅಧಿಕಾರವು ಕೇವಲ ಬಲ ಅಥವಾ ಕಾನೂನುಗಳ ಮೇಲೆ ಮಾತ್ರ ನಿಂತಿರುವುದಿಲ್ಲ; ಅದು ಜನರ ಸಾಮೂಹಿಕ ನಂಬಿಕೆ, ಒಪ್ಪಿಗೆ ಮತ್ತು ಮಾನ್ಯತೆಯ ಮೇಲೂ ಅವಲಂಬಿತವಾಗಿರುತ್ತದೆ.
20ನೇ ಶತಮಾನದಲ್ಲಿ ತತ್ವಜ್ಞಾನಿ John Searle ಅವರು ಈ ಕಲ್ಪನೆಯನ್ನು ತಾವು “ಸಾಂಸ್ಥಿಕ ಸತ್ಯಗಳು” (Institutional Facts) ಎಂದು ಕರೆಯುವ ವಿಚಾರಕ್ಕೆ ಅನ್ವಯಿಸಿದರು. ಸಾಂಸ್ಥಿಕ ಸತ್ಯಗಳು ಎಂದರೆ, ಮನುಷ್ಯರು ಅವು ಅಸ್ತಿತ್ವದಲ್ಲಿವೆ ಎಂದು ಒಪ್ಪಿಕೊಂಡಿರುವುದರಿಂದಲೇ ಅಸ್ತಿತ್ವದಲ್ಲಿರುವ ಸತ್ಯಗಳು. ಉದಾಹರಣೆಗೆ, ದೇಶಗಳ ನಡುವಿನ ಗಡಿಗಳು ಭೂಮಿಯ ಮೇಲೆ ಎಳೆಯಲ್ಪಟ್ಟ ಯಾವುದೇ ಭೌತಿಕ ರೇಖೆಗಳಲ್ಲ. ಮದುವೆಯು ಯಾವುದೇ ರಾಸಾಯನಿಕ ಬಂಧನವಲ್ಲ. ಹಾಗೆಯೇ, ಒಂದು ವಿಶ್ವವಿದ್ಯಾಲಯದ ಪದವಿಯ ಮೌಲ್ಯವು ಅದನ್ನು ನೀಡಿದ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಅವಲಂಬಿತವಾಗಿರುತ್ತದೆ.
ಸಿಯರ್ಲ್ ಅವರ ವಾದವೇನೆಂದರೆ, ಸಾಮಾಜಿಕ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಅನೇಕ “ಸತ್ಯಗಳು” ಮನುಷ್ಯರಿಂದಲೇ ನಿರ್ಮಿಸಲ್ಪಟ್ಟವು. ಅವು ಸುಳ್ಳು ಅಥವಾ ಕಪಟವಲ್ಲ, ಆದರೆ ಅವು ಪ್ರಕೃತಿಯಲ್ಲಿ ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಅಸ್ತಿತ್ವದಲ್ಲಿಲ್ಲ; ಅವು ಜನರ ಸಾಮೂಹಿಕ ಒಪ್ಪಿಗೆ ಮತ್ತು ನಂಬಿಕೆಯ ಮೂಲಕ ರೂಪುಗೊಂಡಿವೆ. ಹಾಗೆಂದರೆ, ಹಣ, ಕಾನೂನು, ದೇಶಗಳು, ಮದುವೆ, ಪದವಿಗಳು ಮತ್ತು ಇತರ ಸಾಮಾಜಿಕ ಸಂಸ್ಥೆಗಳು ಪ್ರಕೃತಿಯ ನಿಯಮಗಳಂತೆ ಸ್ವಯಂ ಅಸ್ತಿತ್ವದಲ್ಲಿರುವುದಿಲ್ಲ. ಅವುಗಳಿಗೆ ಅರ್ಥ ಮತ್ತು ಶಕ್ತಿ ದೊರಕುವುದು ಸಮಾಜವು ಅವುಗಳನ್ನು ಒಪ್ಪಿಕೊಳ್ಳುವುದರಿಂದ ಮತ್ತು ಅವುಗಳ ಮೇಲೆ ನಂಬಿಕೆ ಇಡುವುದರಿಂದ.
Thomas Hobbes ಮತ್ತು John Searle ಇಬ್ಬರೂ ಅರ್ಥಮಾಡಿಕೊಂಡಿದ್ದ ಸಂಗತಿಯೆಂದರೆ, ಈ ಸಾಮೂಹಿಕ ನಂಬಿಕೆಯನ್ನು ನಿರ್ಮಿಸುವುದು ಮಾನವಕುಲದ ಅತ್ಯಂತ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ. ಆದರೆ ಸಮಸ್ಯೆ ಶುರುವಾಗುವುದು ಈ ಸಾಮೂಹಿಕ ನಂಬಿಕೆಯು ಕ್ಷೀಣಿಸಿದಾಗ. ಏಕೆಂದರೆ ಆಗ ನಮ್ಮ ಸಂಸ್ಥೆಗಳು ಮತ್ತು ವ್ಯವಸ್ಥೆಗಳು ಕುಸಿದು ಬೀಳಬಹುದು. ಸಮಾಜವು ನಂಬಿಕೆ, ವಿಶ್ವಾಸ ಮತ್ತು ಒಪ್ಪಿಗೆಯ ಮೇಲೆ ಅವಲಂಬಿತವಾಗಿದೆ. ಆದರೆ ಯಾವುದೇ ಒಬ್ಬ ವ್ಯಕ್ತಿ “ನಾವು ನಿಜವಾಗಿಯೂ ಈ ಕೆಲಸಗಳನ್ನು ಏಕೆ ಈ ರೀತಿಯಲ್ಲಿ ಮಾಡುತ್ತಿದ್ದೇವೆ?” ಎಂದು ಮೊದಲು ಪ್ರಶ್ನಿಸಿದ ಕ್ಷಣದಿಂದ, ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ, ಆ ವ್ಯವಸ್ಥೆಯ ಬುನಾದಿ ಅಲುಗಾಡಲು ಆರಂಭವಾಗುತ್ತದೆ.
ಸಮಾಜದ ಅನೇಕ ವ್ಯವಸ್ಥೆಗಳು ಜನರ ಒಟ್ಟಾರೆ ನಂಬಿಕೆಯಿಂದಲೇ ಕಾರ್ಯನಿರ್ವಹಿಸುತ್ತವೆ. ಆ ನಂಬಿಕೆಯನ್ನು ಜನರು ಪ್ರಶ್ನಿಸಲು ಆರಂಭಿಸಿದಾಗ, ಹಳೆಯ ಸಂಸ್ಥೆಗಳು ದುರ್ಬಲವಾಗಬಹುದು, ಬದಲಾಗಬಹುದು ಅಥವಾ ಕೆಲವೊಮ್ಮೆ ಸಂಪೂರ್ಣವಾಗಿ ಕುಸಿಯಬಹುದು. ಇದು ಕೆಲವೊಮ್ಮೆ ಪ್ರಗತಿಗೆ ಕಾರಣವಾಗಬಹುದು, ಮತ್ತೊಮ್ಮೆ ಅಸ್ಥಿರತೆಯನ್ನೂ ಉಂಟುಮಾಡಬಹುದು.
*******************************

