ಸರ್ವಾಧಿಕಾರಿಯ ಕುರಿತಾದ ಬಯಕೆ

ಸರ್ವಾಧಿಕಾರಿಯ ಕುರಿತಾದ ನಿಮ್ಮ ಬಯಕೆಯ ಬಗ್ಗೆ ಪ್ರಸಿದ್ಧ ಅರ್ಥಶಾಸ್ತ್ರಜ್ಞ, ತಂತ್ರಗಾರ ಚಾಣಕ್ಯನಿಗೂ ಒಪ್ಪಿಗೆಯಿತ್ತು. ಅವನ ಪ್ರಕಾರ ರಾಜ ನಿರ್ದಯಿಯಾಗಿರಬೇಕು, ಆದರೆ ಇಂಥ ಸರ್ವಾಧಿಕಾರವನ್ನು ಹೊಂದಲು ಚಾಣಕ್ಯ ಒಂದು ಭಯಾನಕ ಶರತ್ತು ಹಾಕಿದ್ದ. ಈ ಶರತ್ತಿನ ಪ್ರಕಾರ ಆಧುನಿಕ ರಾಜಕಾರಣಿಯೊಬ್ಬನಿಗೆ ಇಂಥ ಸರ್ವಾಧಿಕಾರವನ್ನು ಒಪ್ಪಿಸುವುದೆಂದರೆ ನಮ್ಮ ಸರ್ವನಾಶಕ್ಕೆ ನಾವೇ ಅಡಿಪಾಯವನ್ನು ಹಾಕುವುದು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನಮ್ಮ ದೇಶಕ್ಕೆ ಸರ್ವಾಧಿಕಾರಿಯೊಬ್ಬನ ಅವಶ್ಯಕತೆ ಇದೆಯಾ? ದೇಶದ ಪರಿಸ್ಥಿತಿ ಕೆಟ್ಟದಾಗಿರುವಾಗ, ಪ್ರಜಾಪ್ರಭುತ್ವ ಭ್ರಷ್ಟವಾಗಿರುವಾಗ, ನಾಯಕರುಗಳು ಭ್ರಷ್ಟಾಚಾರಿಗಳಾಗಿರುವಾಗ, ಜನರ ಮನಸ್ಸಿನಲ್ಲಿ ಈ ಎಲ್ಲವನ್ನೂ ನಾಶಮಾಡಿ ದೇಶವನ್ನು ರಕ್ಷಣೆ ಮಾಡುವ ಸರ್ವಾಧಿಕಾರಿಯೊಬ್ಬನ ಅವಶ್ಯಕತೆ ಹುಟ್ಟತೊಡಗುತ್ತದೆ. ಆಗ ಅಧಿಕಾರಶಾಹಿಯನ್ನು ಬೈಪಾಸ್ ಮಾಡುವ, ಅಪರಾಧಿಗಳನ್ನು ತುಳಿದು ಹಾಕುವ, ಒತ್ತಾಯಪೂರ್ವಕವಾಗಿಯಾದರೂ ದೇಶವನ್ನು ಮಹಾನ್ ಮಾಡುವ ಕಬ್ಬಿಣದ ಮುಷ್ಟಿಯುಳ್ಳ ನಾಯಕ ನಮಗೆ ಬೇಕು ಅನಿಸುತ್ತದೆ.

ಸರ್ವಾಧಿಕಾರಿಯ ಕುರಿತಾದ ನಿಮ್ಮ ಬಯಕೆಯ ಬಗ್ಗೆ ಪ್ರಸಿದ್ಧ ಅರ್ಥಶಾಸ್ತ್ರಜ್ಞ, ತಂತ್ರಗಾರ ಚಾಣಕ್ಯನಿಗೂ ಒಪ್ಪಿಗೆಯಿತ್ತು. ಅವನ ಪ್ರಕಾರ ರಾಜ ನಿರ್ದಯಿಯಾಗಿರಬೇಕು, ಆದರೆ ಇಂಥ ಸರ್ವಾಧಿಕಾರವನ್ನು ಹೊಂದಲು ಚಾಣಕ್ಯ ಒಂದು ಭಯಾನಕ ಶರತ್ತು ಹಾಕಿದ್ದ. ಈ ಶರತ್ತಿನ ಪ್ರಕಾರ ಆಧುನಿಕ ರಾಜಕಾರಣಿಯೊಬ್ಬನಿಗೆ ಇಂಥ ಸರ್ವಾಧಿಕಾರವನ್ನು ಒಪ್ಪಿಸುವುದೆಂದರೆ ನಮ್ಮ ಸರ್ವನಾಶಕ್ಕೆ ನಾವೇ ಅಡಿಪಾಯವನ್ನು ಹಾಕುವುದು.

ಚಾಣಕ್ಯ ತನ್ನ ಅರ್ಥಶಾಸ್ತ್ರವನ್ನು ರಚಿಸಿದ್ದು ಸುಮಾರು ಎರಡು ಸಾವಿರದ ಮೂರು ನೂರು ವರ್ಷಗಳ ಹಿಂದೆ. ಅವನು ನೈತಿಕ ಆದರ್ಶವಾದಿಯಾಗಿರಲಿಲ್ಲ ಬದಲಾಗಿ ಅವನು ಒಬ್ಬ ವಾಸ್ತವವಾದಿಯಾಗಿದ್ದ. ಅವನ ಪ್ರಕಾರ ರಾಜ್ಯ ನಾಲ್ಕು ಕಡೆಗಳಿಂದಲೂ ದುಷ್ಟ ಪ್ರಾಣಿಗಳಿಂದ ಸುತ್ತುವರೆಯಲ್ಪಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಕೇವಲ ಶಾಂತಿಯ ಮಾತುಗಳನ್ನಾಡುವ ಭೋಳೆ ರಾಜ ತನ್ನ ಪ್ರಜೆಗಳನ್ನು ಅಪಾಯಕ್ಕೆ ಸಿಲುಕಿಸುತ್ತಾನೆ. ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳಲು ರಾಜ ಸಾಮ, ದಾನ, ಭೇದ, ದಂಡ ಆ ನಾಲ್ಕು ಸಂಗತಿಗಳಲ್ಲಿ ಚತುರನಾಗಿರಬೇಕು. ಸಾಮ ಎಂದರೆ ಮಾತಕತೆ, ಒಪ್ಪಂದದ ಮೂಲಕ ಜನರ ಮನವೊಲಿಸುವುದು, ದಾನ ಎಂದರೆ ಬಹುಮಾನ, ಆಮಿಷಗಳ ಮೂಲಕ ಜನರ ಮನ ಗೆಲ್ಲುವುದು, ಭೇದ ಎಂದರೆ ವೈರಿಗಳ ನಡುವೆ ವೈಮನಸ್ಯ ಹುಟ್ಟಿಸಿ ಅವರ ಒಗ್ಗಟ್ಟನ್ನು ಒಡೆದು ಅವರನ್ನು ದುರ್ಬಲರನ್ನಾಗಿಸುವುದು, ದಂಡ ಎಂದರೆ ಈ ಯಾವುದಕ್ಕೂ ಜನ ಮಣಿಯದಿದ್ದಾಗ ಅವರನ್ನು ದಂಡಿಸಿ, ಶಿಕ್ಷೆ ನೀಡಿ ತನ್ನ ಹತೋಟಿಗೆ ತೆಗೆದುಕೊಳ್ಳುವುದು. ಆದರೆ ಈ ಎಲ್ಲವನ್ನೂ ರಾಜ ಒಂದು ಒಳ್ಳೆಯ ಕೆಲಸವನ್ನು ಜಾರಿಗೆ ತರಲು ಮಾತ್ರ ಮಾಡಬೇಕಾಗುತ್ತದೆ.

ಚಾಣಕ್ಯನ ಪ್ರಕಾರ ರಾಜಕಾರಣದ ನೈತಿಕತೆ, ವೈಯಕ್ತಿಕ ನೈತಿಕತೆಗಿಂತ ಭಿನ್ನವಾದದ್ದು. ಅವನ ಪ್ರಕಾರ ಹಿಂಸೆ ಜನರನ್ನು ರಕ್ಷಿಸುತ್ತದೆಯಾದರೆ ಅವರ ಏಳಿಗೆಗೆ ಕಾರಣವಾಗುತ್ತದೆಯಾದರೆ ಅದು ಒಂದು ದೊಡ್ಡ ಧರ್ಮ. ಆದರೆ ಈ ಸಂಪೂರ್ಣ ಸರ್ವಾಧಿಕಾರದೊಂದಿಗೆ ಒಂದು ಖತರನಾಕ್ ಶರತ್ತನ್ನು ಕೂಡ ವಿಧಿಸಲಾಗಿದೆ. ಒಬ್ಬ ನಾಯಕ ಲಂಚ, ಹಿಂಸೆ, ಮತ್ತು ಪತ್ತೆದಾರಿಕೆಯನ್ನು ಬಳಸಿ, ಪ್ರಜೆಗಳ ಶಾಂತಿ ಸಮಾಧಾನವನ್ನು ಕಡೆಗಣಿಸಿ, ತಾನು ಶ್ರೀಮಂತನಾಗಲು ಬಯಸುತ್ತಾನೆಯಾದರೆ ಅಥವಾ ತನ್ನ ಕಡೆಯ ಜನ ಶ್ರೀಮಂತರಾಗಬೇಕೆಂದು ಬಯಸುತ್ತಾನೆಯಾದರೆ, ಅಂಥವನು ರಾಜ ಅಲ್ಲ ಅವನು ಅತ್ಯಾಚಾರಿ ಎಂದು ಚಾಣಕ್ಯ ಹೇಳುತ್ತಾನೆ. ಇಂಥವನನ್ನು ಅಧಿಕಾರದಿಂದ ಒದ್ದೋಡಿಸಬೇಕೆಂದು ಚಾಣಕ್ಯ ಬಯಸುತ್ತಾನೆ.

ಸಂಪೂರ್ಣ ಅಧಿಕಾರ ಕೇವಲ ದುರಾಸೆ ಮತ್ತು ಅಹಂಕಾರಗಳಿಂದ ಹೊರತಾದ ರಾಜ ಋಷಿಯಂಥ ವ್ಯಕ್ತಿಗೆ ಮಾತ್ರ ಸಲ್ಲತಕ್ಕದ್ದು. ರಾಜಋಷಿ ಜನರ ಖುಶಿಯಲ್ಲಿಯೇ ತನ್ನ ಖುಶಿಯನ್ನು, ಜನರ ಕಲ್ಯಾಣದಲ್ಲಿಯೇ ತನ್ನ ಕಲ್ಯಾಣವನ್ನು ಕಂಡುಕೊಳ್ಳುತ್ತಾನೆ. ಅವನು ತನ್ನ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಸದಾ ತನ್ನ ಪ್ರಜೆಗಳ ಶಾಂತಿ ಸಮಾಧಾನವನ್ನು ರಕ್ಷಿಸುತ್ತಿರುತ್ತಾನೆ. ಇಂಥ ಜನ ಈಗಿನ ರಾಜಕಾರಣದಲ್ಲಿ ಇಲ್ಲದಿರುವಾಗ, ಸರ್ವಾಧಿಕಾರದ ಅಪಾಯಗಳನ್ನು ಅರಿಯದೇ ಇಂಥದೊಂದನ್ನು ಬಯಸುವುದು ಮೂರ್ಖತನವಾಗುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.