ಹೊರೆಯಿಲ್ಲದವರು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #2.13

“ನಿಜ” ವ್ಯಕ್ತಿಯು ಹುಟ್ಟು, ಬೆಳವಣಿಗೆ, ಬದಲಾವಣೆ, ಸಾವುಗಳಿಗೆ ಒಳಪಟ್ಟಿದ್ದರೂ ದುಃಖ, ಸಂತೋಷ, ಪ್ರೀತಿ ಅಥವಾ ದ್ವೇಷಗಳಿಗೆ ಬಲಿಯಾಗುವುದಿಲ್ಲ. ಕುಳಿತಾಗ, ಮಲಗಿದಾಗ, ನಡೆಯುವಾಗ, ನಿಂತಿರುವಾಗ ಸಾಮಾನ್ಯ ಮನುಷ್ಯರ ಹಾಗೆಯೇ ಇರುತ್ತಾರೆ. ಯಾವ ಪಾತ್ರವನ್ನೂ, ಗುರುವಿನ, ಝೆನ್‌ ಗುರುವಿನ, ಪಾತ್ರವನ್ನೂ ವಹಿಸುವುದಿಲ್ಲ. ಯಾವ ಹೊರೆಯಿಲ್ಲದ ಸಾರ್ವಭೌಮರು ಅವರು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 2.13: ಅರಿವಿನ ಬೆಳಕು  ಹೊರೆಯಿಲ್ಲದವರು

“ಬ್ಯುಸಿನೆಸ್‌ಲೆಸ್‌ ಮ್ಯಾನ್‌” ಎಂಬ ಮಾತನ್ನು ಗುರು ಲಿನ್ಜಿ ಬಳಸುತಿದ್ದರು. ಕನ್ನಡದಲ್ಲಿ ಅದನ್ನು “ಕೆಲಸವಿಲ್ಲದ,” “ಜಂಬರವಿಲ್ಲದ,” “ಹೊರೆಯಿಲ್ಲದ” ಎಂದೆಲ್ಲ ಹೇಳಬಹುದು. ಅಂಥ ವ್ಯಕ್ತಿ ಮಾಡಬೇಕಾದದ್ದು ಏನೂ ಇರುವುದಿಲ್ಲ, ಎಲ್ಲಿಗೂ ಹೋಗಬೇಕಾಗಿಯೂ ಇಲ್ಲ. ಆದರ್ಶ ವ್ಯಕ್ತಿತ್ವದ ರೂಪ ಇದು.

ಥೇರಾವಾದ ಬೌದ್ಧರಲ್ಲಿ ಅರ್ಹತ್‌ ಅಂದರೆ ಅನುಷ್ಠಾನದ ಮೂಲಕ ಅರಿವಿನ ಬೆಳಕನ್ನು ಪಡೆದವರು ಆದರ್ಶ ವ್ಯಕ್ತಿಗಳು. ಮಹಾಯಾನ ಬೌದ್ಧರಲ್ಲಿ ಬೋಧಿಸತ್ವ, ಮರುಕವುಳ್ಳವರು, ಬೆಳಕಿನ ದಾರಿಯಲ್ಲಿ ಸಾಗುತಿರುವವರು ಆದರ್ಶವ್ಯಕ್ತಿಗಳು. ಗುರು ಲಿನ್ಜಿಯ ಪ್ರಕಾರ ಹೊರೆಯಿರದ ವ್ಯಕ್ತಿಗಳೆಂದರೆ ಅರಿವಿನ ಬೆಳಕನ್ನೂ ಬೆನ್ನು ಹತ್ತದವರು, ಏನನ್ನೂ ಪಡೆಯಲು, ಕೊನೆಗೆ ಬುದ್ಧತ್ವವನ್ನು ಕೂಡ ಬಯಸದವರು. ಸುಮ್ಮನೆ ಇರುತ್ತಾರೆ. ಯಾವುದಕ್ಕೂ ಸಿಲುಕುವುದಿಲ್ಲ. ಬೋಧನೆ, ತತ್ವಗಳೂ ಅವರನ್ನ ಹಿಡಿದಿಡಲಾರವು. ಅಂಥ ಹೊರೆಯಿಲ್ಲದ ವ್ಯಕ್ತಿ ಎಲ್ಲರಲ್ಲೂ ಕಾಣಬಹುದು.

ನಾವು ನಿಜವಾಗಲೂ ಈ ಕ್ಷಣದಲ್ಲಿ ಬದುಕುತಿರುವಾಗ ನಮ್ಮೊಳಗೆ, ನಮ್ಮ ಸುತ್ತ ಏನಾಗುತಿದೆ ಎಂಬ ಅರಿವು ನಮಗಿರುತ್ತದೆ. ಗತಕಾಲಕ್ಕೋ ಭವಿಷ್ಯದ ಕಾಲಕ್ಕೋ ಕೊಚ್ಚಿಹೋಗುವುದಿಲ್ಲ. ಆಲೋಚನೆ, ಐಡಿಯ, ಭಾವ ಮತ್ತು ಯೋಜನೆಗಳಿಗೆ ಸಿಕ್ಕಿಬಿದ್ದಿರುವುದಿಲ್ಲ. ವಸ್ತುಗಳ ಬಗ್ಗೆ ನಮಗಿರುವ ಐಡಿಯಾಗಳೇ ಸತ್ಯವೆಂದು ಎಷ್ಟೋ ಸಲ ಅಂದುಕೊಂಡಿರುತ್ತೇವೆ. ಬುದ್ಧನನ್ನು ಕುರಿತ ನಮ್ಮ ಐಡಿಯಾ ಕೂಡ ನಿಜವಲ್ಲದಿರಬಹುದು. ನಮ್ಮ ಹೊರಗಿದ್ದ ಬದ್ಧ ಮನುಷ್ಯ ಜೀವಿ, ಆತ ಹುಟ್ಟಿದ, ಬದುಕಿದ, ಸತ್ತ. ಆ ಬುದ್ಧನನ್ನು ಅರಸುವುದೆಂದರೆ ನೆರಳನ್ನು ಹಿಡಿಯಲು ಯತ್ನಿಸಿದ ಹಾಗೆ. ಅಂಥ ಬುದ್ಧ ನಮಗೆ ಅಡಚಣೆಯಾಗುವ ಭೂತವೂ ಆಗಬಹುದು.

ಇಂಥ “ಭೂತ” ಬುದ್ಧ ಸಿಕ್ಕಿದರೆ ಅವನ ತಲೆ ಕತ್ತರಿಸಬೇಕು ಎಂದು ಗುರು ಲಿನ್ಜಿ ಹೇಳಿದ್ದಾರೆ. ನಮ್ಮೊಳಗೇ ಆಗಲಿ, ಹೊರಗೇ ಆಗಲಿ ಬೌದ್ಧ ಧರ್ಮ ಮತ್ತು ಬುದ್ಧನ ಬೋಧನೆಗಳ ಬಗ್ಗೆ ಬೆಳೆಸಿಕೊಂಡಿರುವ ವಿಚಾರಗಳು, ಐಡಿಯಾಗಳು, ದೋರಣೆಗಳು  ಎದುರಾದರೆ ಅವುಗಳ ತಲೆ ತರಿದು ದೂರ ಸರಿಯಬೇಕು. ಬೌದ್ಧ ಬೋಧನೆಗಲು ಯಾವುದೋ ದೇಗುಲದ ಕಪಾಟಿನಲ್ಲಿ ಕೂತಿರುವ ಶಾಸ್ತ್ರಗಳಲ್ಲ, ನಮ್ಮನ್ನು ನರಳಿಸುತಿರುವ ಕಾಯಿಲೆಗೆ ಮದ್ದು ಅವು. ನಮ್ಮ ಮೌಢ್ಯ, ಹಪಾಹಪಿ, ಸಿಟ್ಟು, ನಮ್ಮೊಳಗೆ ಮತ್ತು ಹೊರಗೆ ಏನನ್ನೋ ಹುಡುಕುತ್ತಾ ನಮ್ಮ ಬಗ್ಗೆ ನಾವೇ ವಿಶ್ವಾಸ ಕಳೆದುಕೊಂಡಿರುವ ಸ್ಥಿತಿಯನ್ನು ಪರಿಹರಿಸುವ ಔಷಧಿಗಳು.

ಸೂತ್ರ, ವ್ಯಾಖ್ಯಾನ, ಬೋಧನೆಗಳಲ್ಲಿ ಒಳನೋಟ ದೊರೆಯಬಹುದು, ಆದರೆ ಬೌದ್ಧ ಚಿಂತನೆಗಳನ್ನು ಓದಲು ಬದುಕನ್ನು ಮೀಸಲಾಗಿಟ್ಟರೆ ಅದರಿಂದ ಅರಿವು ಮತ್ತು ಪೂರ್ಣ ಸ್ವಾತಂತ್ರ್ಯ ದೊರೆಯುವುದಿಲ್ಲ. ಹೀಗೆ ಓದುವುದೆಂದರೆ ಒಣ ಮೂಳೆಯಲ್ಲಿ ತಣ್ಣನೆ ನೀರನ್ನು ಹುಡುಕಿದ ಹಾಗೆ. ಈ ಕ್ಷಣದಲ್ಲಿ ಬದುಕುವುದು ಸಾಧ್ಯವಾದರೆ ಸ್ವಚ್ಛ ಮನಸಿನಿಂದ ನೋಡಲು ಸಾಧ್ಯವಾದರೆ, ಇಲ್ಲೇ ಈ ಕ್ಷಣವೇ ನಮಗೆ ಸ್ವಾತಂತ್ರ್ಯ, ಅರಿವಿನ ಬೆಳಕು ದೊರೆಯುತ್ತವೆ, ಬುದ್ಧನೂ ಇಲ್ಲೇ ಈಗಲೇ ಇರುತ್ತಾನೆ.

ಹೊರೆಯಿರದ ವ್ಯಕ್ತಿ ಸಾರ್ವಭೌಮನ ಹಾಗೆ. ಯಾವ ನಟನೆಯನ್ನೂ ಮಾಡಬೇಕಾಗಿಲ್ಲ, ಯಾವ ಕುರುಹನ್ನೂ ಉಳಿಸಿಹೋಗಬೇಕಾಗಿಲ್ಲ. “ನಿಜ” ವ್ಯಕ್ತಿಗಳು ಎಚ್ಚರದ ಗಮನದೊಂದಿಗೆ ಬದುಕುತ್ತಾ, ಪರಿಸರದೊಡನೆ ಒಡನಾಡುತ್ತಾ, ತಾನು ಮಾತ್ರ ಯಾವ ಒತ್ತಡಕ್ಕೂ ಗುರಿಯಾಗದೆ ಇರಬಲ್ಲರು.

“ನಿಜ” ವ್ಯಕ್ತಿಯು ಹುಟ್ಟು, ಬೆಳವಣಿಗೆ, ಬದಲಾವಣೆ, ಸಾವುಗಳಿಗೆ ಒಳಪಟ್ಟಿದ್ದರೂ ದುಃಖ, ಸಂತೋಷ, ಪ್ರೀತಿ ಅಥವಾ ದ್ವೇಷಗಳಿಗೆ ಬಲಿಯಾಗುವುದಿಲ್ಲ. ಕುಳಿತಾಗ, ಮಲಗಿದಾಗ, ನಡೆಯುವಾಗ, ನಿಂತಿರುವಾಗ ಸಾಮಾನ್ಯ ಮನುಷ್ಯರ ಹಾಗೆಯೇ ಇರುತ್ತಾರೆ. ಯಾವ ಪಾತ್ರವನ್ನೂ, ಗುರುವಿನ, ಝೆನ್‌ ಗುರುವಿನ, ಪಾತ್ರವನ್ನೂ ವಹಿಸುವುದಿಲ್ಲ. ಯಾವ ಹೊರೆಯಿಲ್ಲದ ಸಾರ್ವಭೌಮರು ಅವರು.

ಬಸವಣ್ಣನವರನ್ನು ಕುರಿತು ಅವರ ಪತ್ನಿ ನೀಲಮ್ಮ ಹೇಳಿರುವ ಈ ವಚನದಲ್ಲಿ ಬರುವ ನಿರಾಭಾರಿ ಎಂಬ ಮಾತನ್ನು ಗಮನಿಸಿ. ಆ ಮಾತಿಗೆ ಮೊದಲು ಬಂದಿರುವ ವಿವರಣೆಯನ್ನೂ ನೋಡಿ. ಬ್ಯುಸಿನೆಸ್‌ಲೆಸ್/ಕೆಲಸವಿರದ/ಜಂಬರವಿರದ ವ್ಯಕ್ತಿಯೇ ನಿರಾಭಾರಿ ಅನಿಸುತ್ತದೆ.

ತತ್ವದ ಹಂಗೇನೋ ಶರಣ ಬಸವಂಗೆ
ಭಕ್ತಿಯ ಹಂಗೇನೋ ಶರಣ ಬಸವಂಗೆ
ಮುಕ್ತಿಯ ಹಂಗೇನೋ ಶರಣ ಬಸವಂಗೆ
ಇಹಪರ ಸಂಸಿದ್ಭಿಯಿಲ್ಲವಯ್ಯಾ ಸಂಗಯ್ಯಾ

ನಿಮ್ಮ ಶರಣಬಸವ ನಿರಾಭಾರಿಯಾದ ಬಳಿಕ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.