ಯಾರ ಸಂಕಟವನ್ನಾದರೂ ಸ್ವಲ್ಪ ಕಡಿಮೆ ಮಾಡಿದರೆ, ಅವರ ಮುಖದಲ್ಲಿ ನಗೆ ಮೂಡಿಸಿದರೆ ನಿಮಗೂ ಅದರಿಂದ ಸಂತೋಷವಾಗುತ್ತದೆ. ಅದೇ ನಿಮಗೆ ದೊರೆವ ಬಹುಮಾನ. ನಮ್ಮಿಂದ ಸಮಾಜಕ್ಕೆ ಸಹಾಯವಾಗುತ್ತಿದೆ, ನಮ್ಮಿಂದ ಸಮಾಜಕ್ಕೆ ಉಪಯೋಗವಾಗುತ್ತಿದೆ ಅನ್ನಿಸುವುದೇ “ಸಂತೋಷ” ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 2.15: ಅರಿವಿನ ಬೆಳಕು । ಸರಿಯಾದ ದಾರಿ
ನೀವು ಸರಿದಾರಿಯಲ್ಲಿರುವಾಗ ಸಂತೋಷದ ಭಾವವಿರುತ್ತದೆ. ಸಂತೋಷವನ್ನು ಪಡೆಯಲು ಆ ದಾರಿಯ ಕೊನೆಯನ್ನು ಮುಟ್ಟುವ ಅಗತ್ಯವಿಲ್ಲ. “ಸರಿದಾರಿ” ಎಂಬುದು ಪ್ರತಿಕ್ಷಣವನ್ನೂ ನೀವು ಹೇಗೆ ಬದುಕುತ್ತೀರಿ ಅನ್ನುವ ಖಚಿತತೆಯನ್ನು ಸೂಚಿಸುವ ನುಡಿ.
ಬೌದ್ಧರು ಬದುಕಿನ ಎಂಟು ಸರಿದಾರಿಗಳ ಬಗ್ಗೆ ಹೇಳುತ್ತಾರೆ: ಸರಿಯಾದ ನೋಟ, ಸರಿಯಾದ ಆಲೋಚನೆ, ಸರಿಯಾದ ಮಾತು, ಸರಿಯಾದ ಕ್ರಿಯೆ, ಸರಿಯಾದ ಬದುಕು, ಸರಿಯಾದ ಪ್ರಯತ್ನ, ಸರಿಯಾದ ಗಮನ ಮತ್ತು ಸರಿಯಾದ ಏಕಾಗ್ರತೆ. ಬದುಕಿನ ಪ್ರತಿ ಕ್ಷಣದಲ್ಲೂ ಈ ಎಂಟು ದಾರಿಗಳಲ್ಲಿ ಸಾಗುವುದಕ್ಕೆ ನಮಗೆಲ್ಲರಿಗೂ ಸಾಧ್ಯವಿದೆ. ಅದರಿಂದ ನಮಗೆ ಮಾತ್ರವಲ್ಲ, ಸುತ್ತಲಿನವರಿಗೂ ಸಂತೋಷದೊರೆಯುತ್ತದೆ. ಇವುಗಳ ಅಳವಡಿಕೆಯಿಂದ ನೀವು ಫ್ರೆಶ್ ಆಗಿ, ಮರುಕವುಳ್ಳವರಾಗಿ, ಸಂತೋಷವಾಗಿ ಬದುಕಬಹುದು.
ಅಂಗಳದಲ್ಲಿರುವ ಮರವನ್ನು ನೋಡಿ. ಅದು ಏನೂ ಮಾಡುವಂತೆ ತೋರದು. ದೃಢವಾಗಿ ಸುಮ್ಮನೆ ಇರುತ್ತದೆ, ಫ್ರೆಶ್ ಆಗಿ, ಚೆಲುವಾಗಿ, ಎಲ್ಲರಿಗೂ ಉಪಯೋಗವಾಗುವ ಹಾಗೆ. ಅದು ಇರುವಿಕೆಯ ಪವಾಡ. ಮರವು ನಿಜವಾದ ಮರಮಾತ್ರವಾಗಿರುವುದರಿಂದ ಅದಕ್ಕೂ ಎಲ್ಲರಿಗೂ ಭರವಸೆ, ಸಂತೋಷ. ಹಾಗೆಯೇ ನೀವು ನೀವಾಗಿದ್ದರೆ ಅದೇ ಒಂದು ಕ್ರಿಯೆ. ಏನೂ ಮಾಡದಿರುವುದೂ, ನಿಷ್ಕ್ರಿಯೆಯೂ ಕ್ರಿಯೆಯೇ.
ಎಷ್ಟೋ ಜನ ಬಹಳ ಕೆಲಸ ಮಾಡುತ್ತಾರೆ, ಏನೇನೋ ಮಾಡುತ್ತಾರೆ, ಅದರೊಂದಿಗೆ ಕಷ್ಟಗಳನ್ನೂ ಉಂಟುಮಾಡುತ್ತಾರೆ. ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ ತೊಂದರೆಗಳಾಗುತ್ತವೆ. ಅವರಲ್ಲಿ ಶಾಂತಿ ಇರುವುದಿಲ್ಲ, ಸಂತೋಷವಿರುವುದಿಲ್ಲ. ಹಾಗೆ ಏನೋ ಮಾಡಲು ಪ್ರಯತ್ನಿಸುವುದಕ್ಕಿಂತ ಸುಮ್ಮನೆ “ಇರು”ವುದು ಮೇಲು. ಆಗ ಪ್ರತಿಕ್ಷಣವೂ ಕರುಣೆ, ಮರುಕಗಳು ಇರಬಹುದು. ಬದುಕಿನ ತಳಹದಿ ಹೀಗಿದ್ದರೆ ನಾವು ಮಾಡುವುದೆಲ್ಲವೂ ಅಥವಾ ಹೇಳುವುದೆಲ್ಲವೂ ಬೇರೆಯವರಿಗೆ ನೆರವಾಗುತ್ತವೆ, ಸಹಾಯಕವಾಗಿಯೇ ಇರುತ್ತವೆ. ಯಾರ ಸಂಕಟವನ್ನಾದರೂ ಸ್ವಲ್ಪ ಕಡಿಮೆ ಮಾಡಿದರೆ, ಅವರ ಮುಖದಲ್ಲಿ ನಗೆ ಮೂಡಿಸಿದರೆ ನಿಮಗೂ ಅದರಿಂದ ಸಂತೋಷವಾಗುತ್ತದೆ. ಅದೇ ನಿಮಗೆ ದೊರೆವ ಬಹುಮಾನ. ನಮ್ಮಿಂದ ಸಮಾಜಕ್ಕೆ ಸಹಾಯವಾಗುತ್ತಿದೆ, ನಮ್ಮಿಂದ ಸಮಾಜಕ್ಕೆ ಉಪಯೋಗವಾಗುತ್ತಿದೆ ಅನ್ನಿಸುವುದೇ “ಸಂತೋಷ”..
ನಿಮ್ಮದೊಂದು ದಾರಿ ಇದ್ದು, ಅದರ ಮೇಲೆ ನೀವು ಇಡುವ ಪ್ರತಿ ಹೆಜ್ಜೆಯೂ ನಿಮಗೆ ಸಂತೋಷಕೊಡುತ್ತಿದೆ ಎಂದಾದರೆ ನೀವು ಆಗಲೇ “ಇಂಥವರು” ನೆರವಾಗುವವರು ಆಗಿರುತ್ತೀರಿ. ಬೇರೆ ಇನ್ನು ಯಾರೋ ಆಗಲು ಹೆಣಗುವ ಅಗತ್ಯವೂ ಇಲ್ಲ. “ಅಪ್ರಣಿಹಿತ” ಅಂದರೆ ಗುರಿ ಇಲ್ಲದಿರುವುದನ್ನು ಅಭ್ಯಾಸಮಾಡುವುದು ಬೌದ್ಧರಿಗೆ ಮುಖ್ಯವಾದೊಂದು ಸಾಧನೆ. ನಿಮ್ಮ ಕಣ್ಣೆದುರಿಗೆ ಒಂದು ಗುರಿ ಇದ್ದರೆ ಅದನ್ನು ಈಡೇರಿಸಲು ಬದುಕಿಡೀ ಹೆಣಗುತ್ತಲೇ ಇರುತ್ತೀರಿ. ಹೆಣಗಾಟವಿರುವಾಗ ಸಂತೋಷ ಸಿಗುವುದೇ ಇಲ್ಲ. ಯಾವುದೇ ಧಾವಂತವಿರದೆ ಈ ಕ್ಷಣದಲ್ಲಿ ನೀವು ಏನಾಗಿದ್ದೀರೋ ಅದನ್ನು ಪೂರ್ತಿಯಾಗಿ ಆನಂದಿಸಿದರೆ ಸಾಕು.
ನೀವು ಮತ್ತೆ ಯಾರೋ ಆಗಬೇಕಾಗಿಲ್ಲ. ನೀವೇ ಬದುಕಿನೊಂದು ಪವಾಡ.
*
ಈ ಭಾಗವನ್ನು ಕನ್ನಡಿಸುತ್ತಿರುವಾಗ ಎಮಿಲಿ ಡಿಕಿನ್ಸನ್‌ಳ ಪದ್ಯವೊಂದು ನೆನಪಾಯಿತು
ನಾನು ಯಾರೂ ಅಲ್ಲ
[ಎಮಿಲಿ ಡಿಕಿನ್ಸನ್]
ನಾನು ಯಾರೂ ಅಲ್ಲ! ನೀನು?
ನೀನೂ-ಯಾರೂ ಅಲ್ಲವೋ?
ಹಾಗಾದರೆ ಜೋಡಿ ನೀನೂ ನಾನೂ!
ಬಾಯಿ ಬಿಡಬೇಡ! ಬಿಟ್ಟರೆ ಊರೆಲ್ಲ ಸುದ್ದಿ-ಗೊತ್ತಲ್ಲ!
ಯಾರೋ ಆಗಿರಲೇ ಬೇಕು ಅನ್ನುವುದೆಷ್ಟು ಕಳೆಗೆಟ್ಟ ಬದುಕು!
ಕಪ್ಪೆಯ ಥರ ಪಬ್ಲಿಕ್ಕಾಗಿ
ಮಳೆಗಾಲದುದ್ದಕ್ಕೂ ನಮ್ಮ ಹೆಸರು ನಾವೇ ವಟಾ ವಟಾ ಒದರಿ
ಜವುಗಿನ ಮೆಚ್ಚುಗೆ ಪಡೆಯುವ ಕೆಲಸ!
I’m Nobody! Who are you?
Are you – Nobody – too?
Then there’s a pair of us!
Don’t tell! they’d advertise – you know!
How dreary – to be – Somebody!
How public – like a Frog –
To tell one’s name – the livelong June –
To an admiring Bog!

