ಪಾರ್ಫಿಟ್ ಅವರ ಪಶ್ಚಾತ್ತಾಪದ ಸಿದ್ಧಾಂತ

ಭವಿಷ್ಯದ ವ್ಯಕ್ತಿಯ ಪಶ್ಚಾತ್ತಾಪದ ಆಧಾರದ ಮೇಲೆ ಇಂದಿನ ನಿಮ್ಮ ನಿರ್ಧಾರಗಳನ್ನು ತೀರ್ಮಾನಿಸುವುದು ಸರಿಯಲ್ಲ, ಏಕೆಂದರೆ ಭವಿಷ್ಯದಲ್ಲಿ ನೀವು ಆಗಲಿರುವ ವ್ಯಕ್ತಿ, ಇಂದಿನ ನಿಮಗಿಂತ ಅನೇಕ ರೀತಿಯಲ್ಲಿ ಭಿನ್ನವಾಗಿರುತ್ತಾನೆ. ಪಾರ್ಫಿಟ್ ಅವರ ಪಶ್ಚಾತ್ತಾಪದ ಸಿದ್ಧಾಂತ (theory of regret) ಅವರ ಮಾನಸಿಕ ನಿರಂತರತೆಯ ಸಿದ್ಧಾಂತ (psychological continuity) ಕ್ಕೆ ಸಂಬಂಧಿಸಿದ್ದಾಗಿದೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

“ಮಕ್ಕಳನ್ನು ಹೊಂದಬೇಡಿ, ಏಕೆಂದರೆ ನಂತರ ನೀವು ಪಶ್ಚಾತ್ತಾಪಪಡಬೇಕಾಗುತ್ತದೆ. ಅವಳನ್ನು ಮದುವೆಯಾಗಬೇಡ, ಅವನನ್ನು ಬಿಡಬೇಡ, ಆ ಕೆಲಸವನ್ನು ಸ್ವೀಕರಿಸಬೇಡ, ಊರು ಬದಲಾಯಿಸಬೇಡ, ಏಕೆಂದರೆ ನಂತರ ನಿಮಗೆ ಪಶ್ಚಾತ್ತಾಪವಾಗುತ್ತದೆ”.

ಒಬ್ಬ ಆಪ್ತ ಸ್ನೇಹಿತ ಅಥವಾ ಕುಟುಂಬದ ಸದಸ್ಯರು ನಿಮ್ಮ ಮಹತ್ವದ ನಿರ್ಧಾರಗಳ ಬಗ್ಗೆ, “ನಂತರ ಇದಕ್ಕಾಗಿ ನೀನು ಪಶ್ಚಾತ್ತಾಪಪಡುತ್ತೀಯೆ” ಎಂದು ಹೇಳುವುದು ಸಾಮಾನ್ಯ. ಆದರೆ ತತ್ವಜ್ಞಾನಿ Derek Parfit ಅವರ ಪ್ರಕಾರ, ಅವರು ಹೀಗೆ ಹೇಳುವುದು ತಪ್ಪು.
ಪಾರ್ಫಿಟ್ ಇದಕ್ಕೆ ಎರಡು ಕಾರಣಗಳನ್ನು ನೀಡುತ್ತಾರೆ.

ಮೊದಲನೆಯದು, ಈಗಿರುವ ನೀವು, ನಿಮ್ಮದೇ ಆದ ಕಾರಣಗಳು ಮತ್ತು ಪ್ರೇರಣೆಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದೀರಿ. ನೀವು ಒಂದು ನಿರ್ದಿಷ್ಟ ಪರಿಸರದಲ್ಲಿ ಬದುಕುತ್ತಿರುವ, ನಿರ್ದಿಷ್ಟ ಅನುಭವಗಳು ಮತ್ತು ಆಲೋಚನೆಗಳನ್ನು ಹೊಂದಿರುವ ವ್ಯಕ್ತಿ. ಈ ಕ್ಷಣದಲ್ಲಿ ನಿಮ್ಮ ಬಳಿ ಲಭ್ಯವಿರುವ ಅತ್ಯುತ್ತಮ ಮಾಹಿತಿಯ ಆಧಾರದ ಮೇಲೆ ನೀವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಹೀಗಾಗಿ, ಇಂದಿನ ನಿಮ್ಮ ವ್ಯಕ್ತಿತ್ವ, ನಿಮ್ಮ ಪರಿಸ್ಥಿತಿ ಮತ್ತು ನಿಮ್ಮ ತಿಳುವಳಿಕೆಯ ಪ್ರಕಾರ ನೀವು ಮಾಡುವ ಆಯ್ಕೆಗಳು ನಿಮಗೆ ಅರ್ಥಪೂರ್ಣವಾಗಿರುತ್ತವೆ.

ಎರಡನೆಯ ಕಾರಣವೆಂದರೆ, ಭವಿಷ್ಯದಲ್ಲಿ ಆ ನಿರ್ಧಾರದ ಬಗ್ಗೆ ಪಶ್ಚಾತ್ತಾಪಪಡಬಹುದಾದ ಅಥವಾ ಪಶ್ಚಾತ್ತಾಪಪಡದ ವ್ಯಕ್ತಿ, ವಾಸ್ತವವಾಗಿ ಈಗಿರುವ ನಿಮಗಿಂತ ವಿಭಿನ್ನ ವ್ಯಕ್ತಿಯಾಗಿರುತ್ತಾನೆ. ಅವನಿಗೆ ಅಥವಾ ಅವಳಿಗೆ ಬೇರೆ ಮೌಲ್ಯಗಳು ಇರುತ್ತವೆ. ಅವರು ಜಗತ್ತನ್ನು ಬೇರೆ ದೃಷ್ಟಿಕೋನದಿಂದ ನೋಡುವವರಾಗಿರುತ್ತಾರೆ. ಆದ್ದರಿಂದ, ಅವರು ಆ ನಿರ್ಧಾರಕ್ಕಾಗಿ ಪಶ್ಚಾತ್ತಾಪಪಟ್ಟರೂ ಸಹ, ಒಂದು ಅರ್ಥದಲ್ಲಿ ಅವರು ಈಗಿನ “ನೀವು” ಅಲ್ಲ — ಅವರು ಬದಲಾಗಿರುವ, ವಿಭಿನ್ನ ವ್ಯಕ್ತಿಯಾಗಿರುತ್ತಾರೆ.

ಹೀಗಾಗಿ, ಭವಿಷ್ಯದ ವ್ಯಕ್ತಿಯ ಪಶ್ಚಾತ್ತಾಪದ ಆಧಾರದ ಮೇಲೆ ಇಂದಿನ ನಿಮ್ಮ ನಿರ್ಧಾರಗಳನ್ನು ತೀರ್ಮಾನಿಸುವುದು ಸರಿಯಲ್ಲ, ಏಕೆಂದರೆ ಭವಿಷ್ಯದಲ್ಲಿ ನೀವು ಆಗಲಿರುವ ವ್ಯಕ್ತಿ, ಇಂದಿನ ನಿಮಗಿಂತ ಅನೇಕ ರೀತಿಯಲ್ಲಿ ಭಿನ್ನವಾಗಿರುತ್ತಾನೆ. ಪಾರ್ಫಿಟ್ ಅವರ ಪಶ್ಚಾತ್ತಾಪದ ಸಿದ್ಧಾಂತ (theory of regret) ಅವರ ಮಾನಸಿಕ ನಿರಂತರತೆಯ ಸಿದ್ಧಾಂತ (psychological continuity) ಕ್ಕೆ ಸಂಬಂಧಿಸಿದ್ದಾಗಿದೆ.

ಅವರ ವಾದವೇನೆಂದರೆ, ನಮ್ಮೊಳಗೆ ಒಂದೇ ರೀತಿಯ, ಸ್ಥಿರವಾದ “ನಾನು” (ಅಹಂ) ಎನ್ನುವುದು ಇಲ್ಲ. ಬದಲಾಗಿ, ನಮ್ಮ ಪ್ರಸ್ತುತ ಮಾನಸಿಕ ಸ್ಥಿತಿ, ಅನುಭವಗಳು ಮತ್ತು ಮೌಲ್ಯಗಳಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಿರುವ ಒಂದು “ಸ್ವ” (self) ನಮ್ಮೊಳಗೆ ಇದೆ. ಆದ್ದರಿಂದ, ನಿಮ್ಮ ಹಿಂದಿನ ವ್ಯಕ್ತಿತ್ವವು (past self) ಆ ಸಮಯದಲ್ಲಿ ತನ್ನ ಬಳಿ ಇದ್ದ ಕಾರಣಗಳು, ತಿಳುವಳಿಕೆಗಳು ಮತ್ತು ಮಾನಸಿಕ ಸ್ಥಿತಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿತು. ಆ ಸಂದರ್ಭದಲ್ಲಿದ್ದ ಆ ಕಾರಣಗಳು ಮತ್ತು ಮನಸ್ಥಿತಿಗಳು ಅವರಿಗೆ ಸರಿಯಾಗಿದ್ದವು ಮತ್ತು ಮಾನ್ಯವಾಗಿದ್ದವು.
ಹೀಗಾಗಿ, ಇಂದಿನ ನಿಮ್ಮ ದೃಷ್ಟಿಕೋನದಿಂದ ಹಿಂದಿನ ನಿಮ್ಮನ್ನು ಜಡ್ಜ್ ಮಾಡುವುದು ಅಥವಾ ದೂಷಿಸುವುದು ಸಂಪೂರ್ಣವಾಗಿ ನ್ಯಾಯಯುತವಲ್ಲ, ಏಕೆಂದರೆ ಆ ಸಮಯದಲ್ಲಿ ಇದ್ದ “ನೀವು” ಮತ್ತು ಇಂದಿನ “ನೀವು” ಒಂದೇ ರೀತಿಯ ವ್ಯಕ್ತಿಗಳಲ್ಲ; ಅವರು ವಿಭಿನ್ನ ಮನಸ್ಥಿತಿಗಳು ಮತ್ತು ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳಾಗಿದ್ದಾರೆ.

ಹೌದು ಹೀಗಾಗಿ, ನಿಮ್ಮ ಹಿಂದಿನ ಸ್ವರೂಪವು (past self) ಒಮ್ಮೆ ತೆಗೆದುಕೊಂಡ ನಿರ್ಧಾರದ ಪರಿಣಾಮಗಳನ್ನು ನೀವು ಈಗ ಎದುರಿಸಬೇಕಾಗಬಹುದು. ಆದರೆ ಆ ನಿರ್ಧಾರದ ಬಗ್ಗೆ ಪಶ್ಚಾತ್ತಾಪದ ಭಾವನಾತ್ಮಕ ಭಾರವನ್ನು ಹೊತ್ತುಕೊಂಡು ನಡೆಯುವುದು, ಪಾರ್ಫಿಟ್ ಅವರ ಪ್ರಕಾರ, ತಾರ್ಕಿಕವಲ್ಲ. ಏಕೆಂದರೆ, ಆ ನಿರ್ಧಾರವನ್ನು ತೆಗೆದುಕೊಂಡ ವ್ಯಕ್ತಿ, ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಬದುಕುತ್ತಿದ್ದರು ಮತ್ತು ಆ ಸಮಯದಲ್ಲಿ ಅವರಿಗೆ ಲಭ್ಯವಿದ್ದ ಮಾಹಿತಿಯ ಆಧಾರದ ಮೇಲೆಯೇ ಕಾರ್ಯನಿರ್ವಹಿಸುತ್ತಿದ್ದರು.

ನೀವು ಈಗ ನಿಮ್ಮ ಕೈಲಾದಷ್ಟು ಉತ್ತಮವಾಗಿ ಬದುಕಲು ಪ್ರಯತ್ನಿಸುತ್ತಿದ್ದೀರಿ; ಹಾಗೆಯೇ, ನೀವು ಹಿಂದೆ ಆಗಿದ್ದ ವ್ಯಕ್ತಿಯೂ ತನ್ನ ಸಮಯದಲ್ಲಿ ತನ್ನ ಕೈಲಾದಷ್ಟು ಉತ್ತಮವಾದುದನ್ನು ಮಾಡಲು ಪ್ರಯತ್ನಿಸುತ್ತಿದ್ದ. ಆದ್ದರಿಂದ, ಹಿಂದಿನ ನಿರ್ಧಾರಗಳಿಗಾಗಿ ನಿಮ್ಮನ್ನು ನೀವು ನಿರಂತರವಾಗಿ ದೂಷಿಸಿಕೊಳ್ಳುವ ಬದಲು, ಆ ಸಮಯದಲ್ಲಿ ಇದ್ದ ನಿಮ್ಮ ಮಿತಿಗಳು, ಪರಿಸ್ಥಿತಿಗಳು ಮತ್ತು ತಿಳುವಳಿಕೆಯನ್ನು ಅರ್ಥಮಾಡಿಕೊಳ್ಳುವುದು ಹೆಚ್ಚು ವಿವೇಕಯುತವಾಗಿದೆ ಎಂದು ಪಾರ್ಫಿಟ್ ಸೂಚಿಸುತ್ತಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.