ಎಚ್ಚೆತ್ತ ಗಮನದ ಮೊಟ್ಟ ಮೊದಲ ಕೆಲಸವೆಂದರೆ—ಹೋರಾಡದಿರುವುದು. ಯಾವ ಕ್ಷಣದಲ್ಲಿ ಬೇಕಾದರೂ ನಮ್ಮೊಳಗಿನ ಮಗುವಿನ ಬಗ್ಗೆ ಎಚ್ಚರ ಹುಟ್ಟಬಹುದು. ಆ ಮಗುವನ್ನು ಗುರುತಿಸಿದ ತಕ್ಷಣ ಮೊದಲು ನಾವು ಮಾಡಬೇಕಾದ ಕೆಲಸವೆಂದರೆ ಅದಕ್ಕೆ “ಹಲೋ” ಹೇಳುವುದು, ಅಷ್ಟೇ… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 3.1: ಭಾವ-ಸಂಬಂಧ । ನಮ್ಮೊಳಗಿರುವ ಗಾಯಗೊಂಡ ಮಗು
ನೋವು ತಿನ್ನುತಿರುವ ಪುಟ್ಟ ಮಗು ನಮ್ಮೆಲ್ಲರೊಳಗೂ ಇರುತ್ತದೆ. ಮಕ್ಕಳಾಗಿದ್ದಾಗ ನಾವೆಲ್ಲರೂ ಕಷ್ಟದ ಗಳಿಗೆಗಳನ್ನು, ವೇದನೆ, ಆಘಾತಗಳನ್ನು ಅನುಭವಿಸಿದ್ದೇವೆ. ನಮ್ಮನ್ನು ನಾವು ಕಾಪಾಡಿಕೊಳ್ಳಲು ಇಂಥ ನೋವಿನ ಗಳಿಗೆಗಳನ್ನು ಮರೆಯುತ್ತೇವೆ. ಒಂದೊಂದು ಸಲ ನೋವಿನ ಅನುಭವವಾದಾಗಲೂ ʻಸಹಿಸಲಾರೆವು ಇದನ್ನುʼ ಅಂದುಕೊಳ್ಳುತ್ತೇವೆ, ನಮ್ಮ ಭಾವ, ನಮ್ಮ ನೆನಪು ಎಲ್ಲವನ್ನೂ ಮನಸಿನ ಆಳದಲ್ಲಿ ಹೂತುಬಿಡುತೇವೆ. ನಮ್ಮೊಳಗಿರುವ ಬೆದರಿದ ಮಗುವಿನ ಮುಖವನ್ನು ನಾವು ಎಷ್ಟೋ ದಶಕಗಳಿಂದ ನೋಡಿಯೇ ಇಲ್ಲವೋ?
ನಮ್ಮೊಳಗಿರುವ ಮಗುವನ್ನು ನಾವು ನಿರ್ಲಕ್ಷ್ಯ ಮಾಡಿರಬಹುದು. ಆದರೂ ಆ ಮಗು ನಮ್ಮೊಳಗಿಲ್ಲ ಎಂದು ಅರ್ಥವಲ್ಲ. ಗಾಯಗೊಂಡ ಮಗು ನಮ್ಮ ಗಮನವನ್ನು ಬಯಸುತ್ತಾ ಯಾವಾಗಲೂ ನಮ್ಮೊಳಗೇ ಇರುತ್ತದೆ. “ಇಲ್ಲಿದೇನೆ, ಇಲ್ಲಿದೇನೆ, ನನ್ನ ಬಿಟ್ಟು ಎಲ್ಲೂ ಹೋಗಲಾಗದು ನೀವು, ನನ್ನಿಂದ ತಪ್ಪಿಸಿಕೊಳ್ಳಲಾಗದು” ಅನ್ನುತ್ತಾ ಇರುತ್ತದೆ. ಆ ಮಗುವನ್ನು ಇನ್ನೂ ದೂರದ, ಇನ್ನೂ ಒಳಗಿನ ಕೋಣೆಗೆ ಕಳಿಸಿ, ಮಗುವಿನಿಂದ ಅದಷ್ಟೂ ದೂರ ಉಳಿದು ನಮ್ಮ ವೇದನೆ ಮರೆಯಲು ಹಂಬಲಿಸುತೇವೆ. ಹಾಗೆ ದೂರವಾಗಿ ಇರುವುದರಿಂದ ವೇದನೆ ಹಿಗ್ಗುವುದೇ ಹೊರತು ಕಡಿಮೆಯಾಗದು.
ನಮ್ಮೊಳಗಿರುವ ಗಾಯಗೊಂಡ ಮಗುವನ್ನು ಮರೆತಿದ್ದೇವೆಂದು ಅರಿವಾದಾಗ ಆ ಮಗುವಿನ ಬಗ್ಗೆ ನಮ್ಮಲ್ಲಿ ಮರುಕ ಮೂಡುತ್ತದೆ, ಚೈತನ್ಯದ ಗಮನ ಬೆಳೆಯುತ್ತದೆ. ಗಮನದ ನಡಿಗೆ, ಗಮನದ ಉಸಿರಾಟ, ಗಮನವಿರಿಸಿಕೊಂಡು ಕೂರುವುದು ಈ ಎಲ್ಲ ಅಭ್ಯಾಸಗಳಿಂದ ಗಮನದ ಚೈತನ್ಯವನ್ನು ಬೆಳೆಸಿಕೊಂಡು, ನಮ್ಮ ಮೈಯ ಕಣ ಕಣದಲ್ಲೂ ಇರುವ ಆ ಎಚ್ಚೆತ್ತ ವಿವೇಕಕ್ಕೆ ಮರಳುತ್ತೇವೆ. ಆ ಚೈತನ್ಯವೇ ನಮಗೆ, ನಮ್ಮೊಳಗಿರುವ ಗಾಯಗೊಂಡ ಮಗುವಿಗೆ ಚೇತರಿಕೆ ನೀಡುತ್ತದೆ.
ಎಚ್ಚೆತ್ತ ಗಮನದ ಮೊಟ್ಟ ಮೊದಲ ಕೆಲಸವೆಂದರೆ—ಹೋರಾಡದಿರುವುದು. ಯಾವ ಕ್ಷಣದಲ್ಲಿ ಬೇಕಾದರೂ ನಮ್ಮೊಳಗಿನ ಮಗುವಿನ ಬಗ್ಗೆ ಎಚ್ಚರ ಹುಟ್ಟಬಹುದು. ಆ ಮಗುವನ್ನು ಗುರುತಿಸಿದ ತಕ್ಷಣ ಮೊದಲು ನಾವು ಮಾಡಬೇಕಾದ ಕೆಲಸವೆಂದರೆ ಅದಕ್ಕೆ “ಹಲೋ” ಹೇಳುವುದು, ಅಷ್ಟೇ. ಮಗುವಿಗೆ ದುಃಖವಿರಬಹುದು. ಅದನ್ನು ನಾವು ಗಮನಿಸಿದರೆ ಉಸಿರಾಡುತ್ತಾ, “ಈಗ ಉಸಿರೆಳೆದುಕೊಳ್ಳುತಿದೇನೆ, ಮಗುವಿನ ದುಃಖ ನನ್ನ ದುಃಖ, ಹಲೋ, ಈಗ ಉಸಿರು ಬಿಡುತ್ತಾ ನಿನ್ನನ್ನು ಕಳಕಳಿಯಿಂದ ನೋಡಿಕೊಳ್ಳುವೆ” ಎಂದು ಹೇಳಬಲ್ಲವರಾಗುತ್ತೇವೆ.
ಒಳಗಿನ ಮಗುವನ್ನು ಗುರುತು ಹಿಡಿದ ಮೇಲೆ ನಮ್ಮ ಎಚ್ಚರದ ಗಮನ ಮಾಡಬೇಕಾದ ಕೆಲಸವೆಂದರೆ—ಆ ಮಗುವನ್ನು ಅಪ್ಪಿಕೊಳ್ಳುವುದು. ಮಗುವನ್ನು ಒಲುಮೆಯಿಂದ ಅಪ್ಪುವುದು ಹಿತವಾದ, ನಲಿವು ತರುವ ಕೆಲಸ. ಹಾಗೆ ಮಾಡಿದಾಗ ನಮ್ಮ ಭಾವಗಳೊಡನೆ ಘರ್ಷಣೆ ಮಾಡದೆ ನಮ್ಮನ್ನೇ ನಾವು ಆರೈಕೆ ಮಾಡಿಕೊಳ್ಳುತೇವೆ. ಎಚ್ಚರದ ಗಮನದೊಡನೆ ಒಂದೆಡೆಯಲ್ಲಿ ಸ್ಥಿರವಾಗಿ ನಿಲ್ಲುತ್ತದೆ. ನಮ್ಮೊಳಗಿನ ಮಗುವನ್ನು ಗುರುತಿಸಿ, ಅದನ್ನು ಒಲುಮೆಯಿಮದ ಅಪ್ಪಿದ ಮೊದಲ ನಿಮಿಷದಲ್ಲೇ ಸ್ವಲ್ಪ ನಿರಾಳ ಅನಿಸುತ್ತದೆ. ಕಷ್ಟಕೊಡುವ, ಕಿರಿಕಿರಿಯ ಭಾವಗಳು ಇನ್ನೂ ಇರುತ್ತವೆ, ಅದರಿಂದ ಆಗುವ ವೇದನೆ ಕಡಿಮೆಯಾಗುತ್ತದೆ.
ಮಗುವನ್ನು ಗುರುತು ಹಿಡಿದು, ಅಪ್ಪಿದ ಮೇಲೆ ಗಮನದ ಮೂರನೆಯ ಕೆಲಸವೆಂದರೆ—ನಮ್ಮೊಳಗಿನ ಕಷ್ಟಕೊಡುವ ಭಾವಗಳನ್ನು ಸಂತೈಸಿ, ಅವಕ್ಕೆಲ್ಲ ಬಿಡುಗಡೆ ನೀಡುವುದು. ಮಗುವನ್ನು ಮೆಲ್ಲನೆ ಹಿಡಿದೆತ್ತಿದರೆ ಸಾಕು, ನಾವು ಕಷ್ಟದ ಭಾವನೆಗಳನ್ನು ಆಗಲೇ ಸಂತೈಸಿರುತ್ತೇವೆ. ನಿರಾಳ ಅನಿಸಿ ನಮ್ಮ ದೃಢವಾದ ಭಾವಗಳನ್ನು ಆಲಂಗಿಸಿದಾಗ ನಮ್ಮನ್ನು ಕಾಡುತಿದ್ದ ಮನೋರೂಪಗಳ ಬೇರು ಕಾಣುತ್ತದೆ. ನಮ್ಮ ವೇದನೆ ಎಲ್ಲಿ ಹುಟ್ಟಿತು ಎಂದು ಅರಿವಾಗುತ್ತದೆ. ಈ ಅರಿವಿನೊಡನೆ ವೇದನೆ ತಗ್ಗುತ್ತದೆ. ಅಂದರೆ ಗಮನವೇ ಗುರುತು ಹಿಡಿದು, ಅಪ್ಪಿಕೊಂಡು, ನಿರಾಳದ ಭಾವವನ್ನು ತರುತ್ತದೆ.
ನೆಲೆ ನಿಂತ ಗಮನದ ಚೈತನ್ಯ ಬಲು ದೊಡ್ಡದು. ಅದರೊಡನೆ ನಮ್ಮನ್ನು ಕುರಿತ ಒಳನೋಟವೂ ಇರುತ್ತದೆ. ಒಳನೋಟದ ಶಕ್ತಿ ಬಿಡುಗಡೆಯ ಭಾವವನ್ನು ತರುತ್ತದೆ. ಗಮನವಿದ್ದರೆ ಸಾಕು, ಗಮನವನ್ನು ಹೇಗೆ ಉಳಿಸಿಕೊಳ್ಳಬೇಕು, ಹೇಗೆ ಒಂದೆಡೆಯಲ್ಲಿ ನೆಲೆಗೊಳಿಸಬೇಕು ಅನ್ನುವುದೂ ತಿಳಿಯುತ್ತದೆ. ಸ್ಥಿರವಾಗಿ ಒಂದು ಭಾವ, ಒಂದು ಸಂಗತಿಯ ಮೇಲೆ ನಮ್ಮ ಗಮನ ನೆಲೆ ನಿಂತಾಗ ಒಳನೋಟ ದೊರೆಯುವುದು. ಅ ಒಳನೋಟದಿಂದ ಬದಲಾವಣೆ ಸಾಧ್ಯವಾಗುವುದು.
*
ಎಸಳ ಕಂಡು ಹೂವಿನ ಮೂಲವ ನೋಡಲು
ಆ ಮೂಲ ಎಸಳು ಎರಡೂ ಗಮನಗೆಟ್ಟವು.
ಪ್ರಾಣ ಮರುಗಿ ಬಳಲಲು
ಸಂಗಯ್ಯ, ಪುಷ್ಪ ಉಂಟೆಂದ ಬಸವನಲ್ಲಿ.
ನೀಲಮ್ಮನವರ ಈ ವಚನದಲ್ಲಿ ಎಸಳು, ಹೂವಿನ ಮೂಲ ಎರಡನ್ನೂ ಗಮನಿಸುತ್ತಾ, ಗಮನ ನಿಶ್ಚಲವಾಗುವುದು (ಗಮನ-ಚಲನೆ, ಕೆಡುವುದು-ಇಲ್ಲವಾಗುವುದು) ಮತ್ತು ಮನಸಿನಲ್ಲಿ ಹುಟ್ಟುವ ಮರುಕ, ಬಳಲಿಕೆ ಎಲ್ಲವೂ ತನ್ನೊಳಗಿರುವ ಬಸವನದೇ ಅನ್ನುವ ಭಾವ ವ್ಯಕ್ತವಾಗುತ್ತದೆ. ತಾಯ್ತನದ ಭಾವ ಮೂಡುತ್ತದೆ.
ಸುಳಿಯ ಬಲ್ಲಡೆ ಸುಳುಹೆ ಲೇಸಯ್ಯಾ.
ಗಮನವಿಲ್ಲದೆ ಸುಳಿಯ ಬಲ್ಲಡೆ, ನಿರ್ಗಮನಿಯಾಗಿ ನಿಲ್ಲಬಲ್ಲಡೆ,
ಅದಕ್ಕದೆ ಪರಿಣಾಮ ಅದಕ್ಕದೆ ಸಂತೋಷ
ಗುಹೇಶ್ವರಲಿಂಗದಲ್ಲಿ…
ಅಲ್ಲಮ ಪ್ರಭುಗಳ ಈ ವಚನ ಗಮನವಿಲ್ಲದ ಸುಳಿದಾಟ, (ಗಮನವಿಲ್ಲದ-ಗಮನ ಬೇರೆಡೆಗೆ ಚಲಿಸದ), ನಿರ್ಗಮನಿಯಾದ (ಮನಸಿನ ಚಲನೆ ಇರದೆ ನಿಶ್ಚಲವಾದ) ನಿಲುಗಡೆಯನ್ನು ಸಾಧಿಸುವುದೇ ಪರಿಣಾಮ, ಅದೇ ಸಂತೋಷ, ಅನ್ನುತ್ತದೆ.

