ದುಷ್ಟತನದ ಸಮಸ್ಯೆ ಕುರಿತು ಡಾರ್ವಿನ್

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಡಾರ್ವಿನ್ ನ ಪ್ರಕಾರ : ನಾನು ಕ್ರೈಸ್ತ ದೇವರನ್ನು ನಂಬಲು ಸಾಧ್ಯವಾಗದ ಕಾರಣ, ಮಾನವರು ಪರಸ್ಪರರಿಗೆ ಮಾಡುವ ದುಷ್ಟತನವಲ್ಲ, ಬದಲಾಗಿ ಅದು  ಪ್ರಕೃತಿಯಲ್ಲೇ ಅಡಗಿರುವ ಕ್ರೌರ್ಯ. ಇಂತಹ ಯೋಚನೆಯಿಲ್ಲದ ಕ್ರೌರ್ಯಕ್ಕೆ ಅವಕಾಶ ನೀಡುವ ಲೋಕವನ್ನು, ಎಲ್ಲರನ್ನೂ ಪ್ರೀತಿಸುವ ದೈವಿಕ ಕೈಯೊಂದು ನಡೆಸುತ್ತಿದೆ ಎನ್ನುವುದನ್ನು ನಂಬಲು ನನಗೆ ಸಾಧ್ಯವಾಗಲಿಲ್ಲ.

ತನ್ನ ಅಭಿಪ್ರಾಯವನ್ನು ವಿವರಿಸಲು ಡಾರ್ವಿನ್ ಕಣಜಗಳ (wasps) ಬಗ್ಗೆ ಉದಾಹರಣೆಯನ್ನು ನೀಡುತ್ತಾನೆ. ಕೆಲವು ವಿಧದ ಕಣಜಗಳು ತಮ್ಮ ಮೊಟ್ಟೆಗಳನ್ನು ಒಂದು ಆತಿಥೇಯ ಜೀವಿಯೊಳಗೆ—ಉದಾಹರಣೆಗೆ ಒಂದು caterpillar ನಲ್ಲಿ ಇಡುತ್ತವೆ. ಆ ಮೊಟ್ಟೆಗಳು ಒಡೆದು ಹೊರಬಂದಾಗ, ಅವು ಆ caterpillar ನ ತಿನ್ನಲು ಆರಂಭಿಸುತ್ತವೆ. ಆದರೆ ಅವು ಅದನ್ನು ಸಂಪೂರ್ಣವಾಗಿ ಕೊಲ್ಲುವಷ್ಟು ತಿನ್ನುವುದಿಲ್ಲ, ಏಕೆಂದರೆ ಒಳ್ಳೆಯ ಪರೋಪಜೀವಿ ತನ್ನ ಆತಿಥೇಯನನ್ನು ಕೊಲ್ಲುವುದಿಲ್ಲ; ಆತಿಥೇಯ ಸತ್ತರೆ, ಅದು ತನ್ನದೇ ಜೀವನಾಧಾರವನ್ನು ನಾಶಮಾಡಿದಂತಾಗುತ್ತದೆ. ಆದ್ದರಿಂದ, ಅವು ದೀರ್ಘಕಾಲದ ಯಾತನೆಯನ್ನು ಅನುಭವಿಸುವ  ಆ caterpillar ನ  ದೇಹವನ್ನು ನಿಧಾನವಾಗಿ ಜೀವಂತವಾಗಿಯೇ ತಿನ್ನುತ್ತಾ, ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ; ಆದರೆ ಅದನ್ನು ಸಂಪೂರ್ಣವಾಗಿ ಸಾಯಿಸುವುದಿಲ್ಲ.

ದುಷ್ಟತನದ  ಸಮಸ್ಯೆ (Problem of Evil) ಎನ್ನುವುದು, ಸರ್ವಪ್ರೀತಿಯುಳ್ಳ ಮತ್ತು ಸರ್ವಶಕ್ತನಾದ ದೇವರನ್ನು ನಂಬಲು ಬಯಸುವ ಯಾರಿಗಾದರೂ ಎದುರಾಗುವ ಒಂದು ಸಾಂಪ್ರದಾಯಿಕ ತಾತ್ತ್ವಿಕ ಸಮಸ್ಯೆಯಾಗಿದೆ. ಇದರ ಪಾರಂಪರಿಕ ಉತ್ತರವೆಂದರೆ, ದುಷ್ಟತನ ಎನ್ನುವುದು ನಾವು ಸ್ವತಂತ್ರ ಇಚ್ಛಾಶಕ್ತಿಗೆ (free will) ತೆರಬೇಕಾದ ಬೆಲೆ. ನಮಗೆ ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ, ಮತ್ತು ಅನೇಕ ಬಾರಿ ನಾವು ತಪ್ಪು ದಾರಿಯನ್ನು ಆಯ್ಕೆ ಮಾಡುತ್ತೇವೆ.

ಪ್ರಕೃತಿಯ ದುಷ್ಟತನದ ಸಮಸ್ಯೆಯ (natural evil) ಕುರಿತಾದ ಡಾರ್ವಿನ್ ನ ಪ್ರಶ್ನೆ ಏನೆಂದರೆ, ಇಷ್ಟು ಭೀಕರವಾದ ನೋವು ಮತ್ತು ಸಂಕಟ ಸಂಭವಿಸಲು ಕೇವಲ ಅನುಮತಿ ನೀಡುವುದಷ್ಟೇ  ಅಲ್ಲ, ಅದನ್ನು ಪುರಸ್ಕರಿಸುವ ರೀತಿಯಲ್ಲಿ ಈ ಜಗತ್ತನ್ನು ಏಕೆ ಸೃಷ್ಟಿಸಲಾಗಿದೆ? ಏಕೆಂದರೆ, ಆ ಕಣಜವು (wasp) ಬೆಳೆದು ದೊಡ್ಡದಾಗಿ, ಮತ್ತೆ ಅದೇ ರೀತಿಯ ಪರೋಪಜೀವಿ ಕಣಜವಾಗಿಯೇ ತನ್ನ ಜೀವನವನ್ನು ಮುಂದುವರಿಸುತ್ತದೆ. ಕಣಜಗಳಿಗೆ ನರಕವೆಂಬುದು ಇಲ್ಲ. ಮತ್ತು ಇದ್ದರೂ ಸಹ, ಒಂದು ಕಣಜವನ್ನು ಅದು ಹೇಗೆ ಸೃಷ್ಟಿಸಲ್ಪಟ್ಟಿದೆಯೋ ಹಾಗೆಯೇ ವರ್ತಿಸಿದ್ದಕ್ಕಾಗಿ ನಾವು ಏಕೆ ಶಿಕ್ಷಿಸಬೇಕು?

ಈ ತಾತ್ವಿಕ ಪ್ರಶ್ನೆಗೆ  ಹಲವು ಉತ್ತರಗಳನ್ನೂ ನೀಡಲಾಗಿದೆ. ಉದಾಹರಣೆಗೆ, ಈ ಲೋಕವು ಒಂದು ಪರೀಕ್ಷಾ ಭೂಮಿಯಾಗಿದೆ ಎನ್ನುವುದು ಅಥವಾ ಸಾಧ್ಯವಿರುವ ಎಲ್ಲ ಆಯ್ಕೆಗಳ ಲೋಕದಲ್ಲಿ ಇದೇ ಅತ್ಯುತ್ತಮವಾದ ಆಯ್ಕೆಯ ಲೋಕ ಎನ್ನುವುದು ಇತ್ಯಾದಿಯಾಗಿ.  ಆದರೆ ಡಾರ್ವಿನ್ ನ ಪ್ರಶ್ನೆ ಇನ್ನೂ ಉಳಿದೇ ಇದೆ:

ಸರ್ವಶಕ್ತನೂ, ಸರ್ವಪ್ರೀತಿಯುಳ್ಳವನೂ ಆದ ದೇವರು, ಯಾರಿಗೂ ತಿಳಿಯದ, ಯಾರ ಕಣ್ಣಿಗೂ ಕಾಣದ ಒಂದು ಸಾಧಾರಣ caterpillar, ಒಂದು ಪರೋಪಜೀವಿ ಕಣಜದ ಮೂಲಕ ನಿಧಾನವಾಗಿ ಹಿಂಸೆಗೆ ಒಳಗಾಗಿ ಸಾಯುವಂತಹ ಜಗತ್ತನ್ನು ಏಕೆ ಸೃಷ್ಟಿಸಿದ?

ಇದು ಡಾರ್ವಿನ್ ಎತ್ತಿದ ಮೂಲಭೂತ ಪ್ರಶ್ನೆಯಾಗಿದೆ: ಪ್ರಕೃತಿಯಲ್ಲಿರುವ ಇಂತಹ ಅರ್ಥಹೀನವಾದ ನೋವು ಮತ್ತು ಕ್ರೌರ್ಯವು, ಸರ್ವಪ್ರೀತಿಯುಳ್ಳ ಹಾಗೂ ಸರ್ವಶಕ್ತನಾದ ದೇವರ ಕಲ್ಪನೆಯೊಂದಿಗೆ ಹೇಗೆ ಹೊಂದಿಕೊಳ್ಳುತ್ತದೆ?

*******************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.