ಈ ಕಥೆ ಕೇವಲ ಒಬ್ಬ ರೈತ ಮತ್ತು ಅವನ ಮಗನ ಕಥೆಯಲ್ಲ. ಇದು ನಮ್ಮೆಲ್ಲರ ಕಥೆ. ಇಂದು ನಾವು ನಮ್ಮ ತಂದೆ-ತಾಯಿಯನ್ನು ಹೇಗೆ ನೋಡಿಕೊಳ್ಳುತ್ತೇವೆಯೋ, ನಾಳೆ ನಮ್ಮ ಮಕ್ಕಳೂ ನಮ್ಮನ್ನು ಅದೇ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಮಕ್ಕಳಿಗೆ ನಾವು ಹೇಳುವ ಮಾತಿಗಿಂತ, ನಾವು ಬದುಕುವ ರೀತಿಯೇ ದೊಡ್ಡ ಪಾಠವಾಗುತ್ತದೆ । ಡಾ. ಸಹನಾ ಪ್ರಿಯದರ್ಶಿನಿ
ಒಂದೂರಿನಲ್ಲಿ ಒಬ್ಬ ರೈತ ಮತ್ತು ಅವನ ಕುಟುಂಬ ವಾಸವಾಗಿತ್ತು . ರೈತನಿಗೆ ತುಂಬಾ ವಯಸ್ಸಾದ ಕಾರಣ ಹೊಲದಲ್ಲಿ ಕೆಲಸ ಮಾಡಲು ಆಗುತ್ತಿರಲಿಲ್ಲ . ಅವನು ಪ್ರತಿದಿನವೂ ಮನೆಯ ಮುಂದಿನ ಮಂಟಪದಲ್ಲಿ ಕುಳಿತು ಕಾಲ ಕಳೆಯುತ್ತಿದ್ದನು .
ರೈತನ ಮಗ ಮನೆಯ ಮುಂದಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದನು . ಕೆಲಸ ಮಾಡುತ್ತಾ ಮಾಡುತ್ತಾ ಮಧ್ಯೆ ಮಧ್ಯೆ ತನ್ನ ತಂದೆಯ ಕಡೆ ನೋಡುತ್ತಿದ್ದನು . ತಂದೆ ಯಾವಾಗಲೂ ಕುಳಿತುಕೊಂಡೇ ಇರುತ್ತಿದ್ದುದನ್ನು ನೋಡಿ ಯೋಚಿಸಿದನು.
ಇವರಿಂದ ಇನ್ನು ಏನು ಉಪಯೋಗವಿಲ್ಲ !
ಒಂದು ದಿನ ಮಗನಿಗೆ ತುಂಬಾ ಬೇಸರ ಮತ್ತು ಕೋಪ ಬಂತು. ಅವನು ಒಂದು ಮರದ ಶವಪೆಟ್ಟಿಗೆಯನ್ನು ತಯಾರಿಸಿ, ಅದನ್ನು ಮಂಟಪದ ಬಳಿಗೆ ಎಳೆದುಕೊಂಡು ಬಂದು, ತನ್ನ ತಂದೆಗೆ ಅದರೊಳಗೆ ಮಲಗಲು ಹೇಳಿದ.
ತಂದೆ ಏನೂ ಮಾತನಾಡದೆ ಶಾಂತವಾಗಿ ಅದರೊಳಗೆ ಹತ್ತಿ ಮಲಗಿದರು. ಮಗನು ಮುಚ್ಚಳವನ್ನು ಮುಚ್ಚಿ, ಆ ಶವಪೆಟ್ಟಿಗೆಯನ್ನು ಹೊಲದ ಅಂಚಿನಲ್ಲಿದ್ದ ಎತ್ತರದ ಬಂಡೆಯ ತುದಿಯ ಕಡೆಗೆ ಎಳೆದುಕೊಂಡು ಹೋದ.
ಬಂಡೆಯ ಅಂಚಿನ ಹತ್ತಿರ ಬಂದಾಗ, ಶವಪೆಟ್ಟಿಗೆಯ ಒಳಗಿನಿಂದ ಸಣ್ಣದಾಗಿ ತಟ್ಟುವ ಶಬ್ದ ಕೇಳಿಸಿತು. ಮಗನು ಮುಚ್ಚಳವನ್ನು ತೆರೆದನು.
ಒಳಗೆ ಶಾಂತವಾಗಿ ಮಲಗಿದ್ದ ತಂದೆ ಮಗನ ಕಡೆ ನೋಡಿ ಹೇಳಿದರು:
“ನೀನು ನನ್ನನ್ನು ಈ ಬಂಡೆಯಿಂದ ಕೆಳಗೆ ತಳ್ಳಲು ಹೊರಟಿರುವೆಯೆಂದು ನನಗೆ ಗೊತ್ತು. ಆದರೆ ಅದಕ್ಕೂ ಮೊದಲು ನಾನು ಒಂದು ಸಲಹೆ ನೀಡಬಹುದೇ?”
ಮಗನು ಕೇಳಿದ: “ಏನು ಅದು?”
ತಂದೆ ಉತ್ತರಿಸಿದರು: ನೀನು ನನ್ನನ್ನು ಬಂಡೆಯಿಂದ ಕೆಳಗೆ ತಳ್ಳುವ ಮುನ್ನ , ಈ ಒಳ್ಳೆಯ ಮರದ ಶವಪೆಟ್ಟಿಗೆಯನ್ನು ಉಳಿಸಿಕೋ. ನಿನ್ನ ಮಕ್ಕಳಿಗೂ ಒಂದು ದಿನ ಇದರ ಅವಶ್ಯಕತೆ ಬರಬಹುದು.”
ಈ ಕಥೆ ಕೇವಲ ಒಬ್ಬ ರೈತ ಮತ್ತು ಅವನ ಮಗನ ಕಥೆಯಲ್ಲ. ಇದು ನಮ್ಮೆಲ್ಲರ ಕಥೆ. ಇಂದು ನಾವು ನಮ್ಮ ತಂದೆ-ತಾಯಿಯನ್ನು ಹೇಗೆ ನೋಡಿಕೊಳ್ಳುತ್ತೇವೆಯೋ, ನಾಳೆ ನಮ್ಮ ಮಕ್ಕಳೂ ನಮ್ಮನ್ನು ಅದೇ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಮಕ್ಕಳಿಗೆ ನಾವು ಹೇಳುವ ಮಾತಿಗಿಂತ, ನಾವು ಬದುಕುವ ರೀತಿಯೇ ದೊಡ್ಡ ಪಾಠವಾಗುತ್ತದೆ. ಹಿರಿಯರನ್ನು ಗೌರವಿಸುವುದು, ಪ್ರೀತಿಸುವುದು ಮತ್ತು ಅವರ ತ್ಯಾಗವನ್ನು ಸ್ಮರಿಸುವುದು ನಮ್ಮ ಮಕ್ಕಳಿಗೆ ನಾವು ನೀಡಬಹುದಾದ ಅತ್ಯಮೂಲ್ಯವಾದ ಸಂಸ್ಕಾರವಾಗಿದೆ. ವಯಸ್ಸಾದ ಮೇಲೆ ದೇಹದ ಶಕ್ತಿ ಕಡಿಮೆಯಾಗಬಹುದು. ಆದರೆ ಅವರ ಅನುಭವ, ಆಶೀರ್ವಾದ ಮತ್ತು ಜೀವನದ ಪಾಠಗಳು ಎಂದಿಗೂ ಅಮೂಲ್ಯವಾಗಿರುತ್ತವೆ. ಒಮ್ಮೆ ನಮ್ಮನ್ನು ನಡೆಯಲು ಕಲಿಸಿದ ಕೈಗಳು, ಇಂದು ನಡೆಯಲು ಆಸರೆ ಕೇಳಿದಾಗ ಅವರನ್ನು ನಿರ್ಲಕ್ಷಿಸುವುದು ಮಾನವೀಯತೆಯ ಸೋಲು.
ಈ ಕಥೆಯಲ್ಲಿರುವ ಶವಪೆಟ್ಟಿಗೆ ಕೇವಲ ಒಂದು ಮರದ ಪೆಟ್ಟಿಗೆಯಲ್ಲ; ಅದು ನಮ್ಮ ಜೀವನದ ಪ್ರತಿಬಿಂಬ . ನಾವು ಇತರರಿಗೆ ಏನು ಮಾಡುತ್ತೇವೆಯೋ, ಅದೇ ಒಂದು ದಿನ ನಮ್ಮ ಜೀವನದಲ್ಲೂ ಮರಳಿ ಬರುತ್ತದೆ ಎಂಬ ಸಂದೇಶವನ್ನು ಅದು ನೀಡುತ್ತದೆ.
ಕುಟುಂಬದಲ್ಲಿ ಪ್ರೀತಿ, ಗೌರವ ಮತ್ತು ಕೃತಜ್ಞತೆ ಉಳಿದಿದ್ದರೆ ಮನೆ ಸ್ವರ್ಗವಾಗುತ್ತದೆ. ಸ್ವಾರ್ಥ, ಅಸಹನೆ ಮತ್ತು ನಿರ್ಲಕ್ಷ್ಯ ಬೆಳೆದರೆ ಅದೇ ಮನೆ ನರಕವಾಗುತ್ತದೆ. ಆದ್ದರಿಂದ, ನಮ್ಮ ತಂದೆ-ತಾಯಿಯನ್ನು ಅವರ ವೃದ್ಧಾಪ್ಯದಲ್ಲಿ ಗೌರವದಿಂದ, ಪ್ರೀತಿಯಿಂದ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಮಾತ್ರವಲ್ಲ, ನಮ್ಮ ಮಕ್ಕಳ ಭವಿಷ್ಯಕ್ಕೆ ನಾವು ಬರೆದಿಡುವ ಉತ್ತಮ ಪಾಠವೂ ಹೌದು.
ಹಿರಿಯರನ್ನು ಗೌರವಿಸುವುದು ಅವರಿಗಾಗಿ ಮಾಡುವ ಉಪಕಾರವಲ್ಲ; ಅದು ನಮ್ಮ ಮಕ್ಕಳಿಗೆ ನಾವು ಕಲಿಸುವ ಜೀವನದ ಮೌಲ್ಯವಾಗಿದೆ. ಇಂದು ನಾವು ಬಿತ್ತುವ ವರ್ತನೆಯ ಬೀಜವೇ, ನಾಳೆ ನಮ್ಮ ಜೀವನದಲ್ಲಿ ಫಲವಾಗಿ ಮರಳಿ ಬರುತ್ತದೆ.
(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

