ಫ್ರ್ಯಾಂಕ್ ಜಾಕ್ಸನ್ ಅವರ ಪ್ರಕಾರ, ತಿಳುವಳಿಕೆಗೆ ಎರಡು ವಿಭಿನ್ನ ರೂಪಗಳಿವೆ. ಒಂದು ಪುಸ್ತಕಗಳನ್ನು ಓದಿ ಪಡೆಯುವ ಜ್ಞಾನ. ಇನ್ನೊಂದು, ನಿಜವಾದ ಜಗತ್ತನ್ನು ಸ್ವತಃ ಅನುಭವಿಸಿದಾಗ ಮಾತ್ರ ದೊರೆಯುವ ಜ್ಞಾನ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಮೇರಿ ಎಂಬ ಮಹಿಳೆಯೊಬ್ಬಳು, ತಾನು ಹುಟ್ಟಿದ ದಿನದಿಂದಲೇ ಕಪ್ಪು ಮತ್ತು ಬಿಳಿ ಬಣ್ಣಗಳಷ್ಟೇ ಇರುವ ಕೋಣೆಯೊಂದರಲ್ಲಿ ಬಂಧಿಯಾಗಿದ್ದಳು. ತನ್ನ ಜೀವನದಲ್ಲಿ ಅವಳು ಎಂದಿಗೂ ಯಾವ ಬಣ್ಣವನ್ನೂ ನೋಡಿರಲಿಲ್ಲ. ಆದರೂ ಆಕೆ, ಬಣ್ಣಗಳ ಕುರಿತು ವಿಶ್ವದ ವಿಶೇಷ ಪರಿಣಿತೆಯಾಗಿದ್ದಳು. ಬಣ್ಣಗಳ ನರವಿಜ್ಞಾನ (Neuroscience) ಮತ್ತು ಭೌತಶಾಸ್ತ್ರ (Physics), ಬಣ್ಣಗಳ ಕುರಿತಾದ ಪ್ರತಿಯೊಂದು ವಿಷಯವನ್ನೂ ಅವಳು ಓದಿದ್ದಳು. ಒಬ್ಬ ಮನುಷ್ಯನು ಬಣ್ಣವನ್ನು ನೋಡಿದಾಗ ಅವನ ಮೆದುಳಿನಲ್ಲಿ ಮತ್ತು ದೇಹದಲ್ಲಿ ನಡೆಯುವ ಪ್ರತಿಯೊಂದು ಭೌತಿಕ ಪ್ರಕ್ರಿಯೆಯನ್ನೂ ಅವಳು ಸಂಪೂರ್ಣವಾಗಿ ತಿಳಿದಿದ್ದಳು. ಒಂದು ದಿನ, ಅವಳು ಆ ಬಂಧನದಿಂದ ಹೊರಬಂದಳು. ಆಗ ತನ್ನ ಜೀವನದಲ್ಲೇ ಮೊದಲ ಬಾರಿಗೆ ಅವಳು ಒಂದು ಬಣ್ಣವನ್ನು ನೇರವಾಗಿ ಕಂಡಳು, ಆಕೆ ಒಂದು ಕೆಂಪು ಗುಲಾಬಿಯನ್ನು ನೋಡಿದಳು.
1982ರಲ್ಲಿ ತತ್ವಜ್ಞಾನಿ ಫ್ರ್ಯಾಂಕ್ ಜಾಕ್ಸನ್ ಮಂಡಿಸಿದ ಈ ಚಿಂತನಾ ಪ್ರಯೋಗದಲ್ಲಿ ಅವರು ಕೇಳುವ ಪ್ರಶ್ನೆ ಹೀಗಿದೆ: “ಆ ಬಣ್ಣವನ್ನು ಸ್ವತಃ ಅನುಭವಿಸಿದಾಗ, ಮೇರಿಗೆ ಹೊಸದಾಗಿ ಏನಾದರೂ ತಿಳಿಯುತ್ತದೆಯೇ?”
ಅಥವಾ ಇನ್ನಷ್ಟು ಸರಳವಾಗಿ: “ಮೇರಿ ಆ ಬಣ್ಣವನ್ನು ಮೊದಲ ಬಾರಿಗೆ ನೋಡಿದಾಗ, ಅವಳು ಈಗಾಗಲೇ ತಿಳಿದಿರದ ಯಾವುದಾದರೂ ಹೊಸ ಜ್ಞಾನವನ್ನು ಪಡೆಯುತ್ತಾಳೆಯೇ?” ಅನುಭವದಿಂದ ದೊರೆಯುವ ಜ್ಞಾನ (experiential knowledge) ಮತ್ತು ವೈಜ್ಞಾನಿಕ ಅಥವಾ ತಾತ್ವಿಕ ಮಾಹಿತಿಯಿಂದ ದೊರೆಯುವ ಜ್ಞಾನ (factual knowledge) ಒಂದೇನಾ ಅಥವಾ ಅದು ವಿಭಿನ್ನವೇ? ಇದೇ Frank Jackson ಅವರ Mary’s Room ಚಿಂತನಾ ಪ್ರಯೋಗದ ಕೇಂದ್ರ ಪ್ರಶ್ನೆಯಾಗಿದೆ.
ಸಹಜವಾಗಿ ಹೆಚ್ಚಿನ ಜನರು ಹೇಳುವುದೇನೆಂದರೆ : “ಹೌದು, ಖಂಡಿತವಾಗಿಯೂ ಮೇರಿ ಹೊಸದಾಗಿ ಏನನ್ನೋ ಕಲಿತಳು.” ಕೆಂಪು ಬಣ್ಣದ ಬಗ್ಗೆ ಅವಳಿಗೆ ಎಲ್ಲವೂ ಗೊತ್ತಿತ್ತು—ಅದರ ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಮೆದುಳಿನ ವಿಜ್ಞಾನ ಎಲ್ಲವೂ . ಆದರೆ ಆ ಕೊಠಡಿಯ ಬಾಗಿಲು ತೆರೆಯುವವರೆಗೂ, “ಕೆಂಪು” ಹೇಗಿರುತ್ತದೆ ಎನ್ನುವುದನ್ನು ಅವಳು ಸ್ವತಃ ಅನುಭವಿಸಿರಲಿಲ್ಲ.
ಫ್ರ್ಯಾಂಕ್ ಜಾಕ್ಸನ್ ಅವರ ಪ್ರಕಾರ, ತಿಳುವಳಿಕೆಗೆ ಎರಡು ವಿಭಿನ್ನ ರೂಪಗಳಿವೆ. ಒಂದು ಪುಸ್ತಕಗಳನ್ನು ಓದಿ ಪಡೆಯುವ ಜ್ಞಾನ. ಇನ್ನೊಂದು, ನಿಜವಾದ ಜಗತ್ತನ್ನು ಸ್ವತಃ ಅನುಭವಿಸಿದಾಗ ಮಾತ್ರ ದೊರೆಯುವ ಜ್ಞಾನ.
ಹಾಗೆ ನೋಡಿದರೆ, ನಾವೆಲ್ಲರೂ ನಮ್ಮದೇ ಆದ ಕಪ್ಪು-ಬಿಳಿ ಕೊಠಡಿಗಳಲ್ಲಿ ಸಿಕ್ಕಿಹಾಕಿಕೊಂಡಿರುವ “ಮೇರಿ”ಯಂತೆಯೇ ಇದ್ದೇವೆ. ನೀವು ದುಃಖದ ಬಗ್ಗೆ ಓದಿರಬಹುದು, ಆದರೆ ಪ್ರೀತಿಪಾತ್ರರನ್ನು ಕಳೆದುಕೊಂಡ ಅನುಭವ ನಿಮಗಿರದೇ ಇರಬಹುದು. ನೀವು ಪ್ರೀತಿಯ ಬಗ್ಗೆ ಓದಿರಬಹುದು, ಆದರೆ ನೀವು ನಿಜವಾಗಿ ಪ್ರೀತಿಯನ್ನು ಅನುಭವಿಸದೇ ಇರಬಹುದು. ಒಂದು ಸಂಸ್ಕೃತಿ, ಒಬ್ಬ ವ್ಯಕ್ತಿ, ಒಂದು ವೃತ್ತಿ ಅಥವಾ ಒಂದು ಧರ್ಮದ ಬಗ್ಗೆ ನೀವು ಓದಿರಬಹುದು; ಆದರೆ ಆ ಓದನ್ನೇ ನೈಜ ಅನುಭವವೆಂದು ನೀವು ತಪ್ಪಾಗಿ ತಿಳಿಯುವ ಸಾಧ್ಯತೆ ಇದೆ.
ಫ್ರ್ಯಾಂಕ್ ಜಾಕ್ಸನ್ ಅವರ “Mary’s Room” ಚಿಂತನಾ ಪ್ರಯೋಗವು, ಒಂದು ಬಣ್ಣವನ್ನು ಸ್ವತಃ ಅನುಭವಿಸದೆ ಅದನ್ನು ಸಂಪೂರ್ಣವಾಗಿ ತಿಳಿಯುವುದು ಸಾಧ್ಯವಿಲ್ಲ ಎಂದು ವಾದಿಸುತ್ತದೆ. ಆದರೆ ಇದರ ಸಂದೇಶ ಅದಕ್ಕಿಂತಲೂ ವಿಶಾಲವಾಗಿದೆ : ಜೀವನವನ್ನು ಕೇವಲ ಓದುವುದರಿಂದ ಅಥವಾ ಅದರ ಬಗ್ಗೆ ಕೇಳಿ ತಿಳಿದುಕೊಳ್ಳುವುದರಿಂದ, ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಿಜವಾಗಿ ಬದುಕಿದಾಗ ಮಾತ್ರ ಜೀವನದ ಪೂರ್ಣ ಅರ್ಥ ಮತ್ತು ಅನುಭವ ನಮಗೆ ದೊರೆಯುತ್ತದೆ.

