“ಎಲ್ಲರೂ ಹೀಗಿರೋದಿಲ್ಲ” ಅನ್ನುವಾಗಿನ ತಾರತಮ್ಯ

ಕೇಳಲಿಕ್ಕೆ ಇದು ಸರಿ ಅನುಸುತ್ತದೆಯಾದರೂ ಇಲ್ಲಿ ಒಂದು ದೊಡ್ಡ ಕೊರತೆಯಿದೆ. ನೋವಿನಲ್ಲಿ ಸಮಾನತೆ ಕೇಳುವುದು ನೋವನ್ನು ಕಡಿಮೆ ಮಾಡುವುದಿಲ್ಲ, ಅದು ಹೊಸ ಜಾಗವನ್ನು ಆವರಿಸಿಕೊಳ್ಳುತ್ತದೆ ಮತ್ತು ತನಗೆ ತಾನೇ ನ್ಯಾಯದ ಹೆಸರಿಟ್ಟುಕೊಳ್ಳುತ್ತದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಹೆಣ್ಣೊಬ್ಬಳು ತನ್ನ ಭಾವಿ ಪತಿಯನ್ನು ಬೆಟ್ಟದಿಂದ ನೂಕಿ ಕೊಂದ ಕೇತನ ಅಗರ್ ವಾಲ್ ಮರ್ಡರ್ ಕೇಸ್ ಆರೋಪದ ಸುದ್ದಿಯ ಬಳಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಯ ದಿಕ್ಕು ಆಘಾತಕಾರಿಯಾದಂಥದು. ಕೇವಲ ಒಂದು ದಿನದಲ್ಲಿ ಈ ಕೇಸ್ ನಿಂದ ಕೇತನ ಅಗರ್ ವಾಲ್ ಮಾಯವಾಗಿ ಇದು ಗಂಡು ಮತ್ತು ಹೆಣ್ಣಿನ ನಡುವಿನ ಯುದ್ಧವಾಗಿ ಮಾರ್ಪಟ್ಟಿತು. ಈ ಕುರಿತು ಸೋಷಿಯಲ್ ಮೀಡಿಯಾದ ಪೋಸ್ಟಗಳನ್ನು ಗಮನಿಸಿದಾಗ ಕಂಡುಬಂದದ್ದು ಏನೆಂದರೆ ಹಂಗಸರು ಮಾತ್ರ ಶೋಷಿತರಲ್ಲ, ಗಂಡಸರು ಕೂಡ ಶೋಷಿತರು ಎನ್ನುವ ದನಿ ಮತ್ತು ಈ ಕುರಿತು ಹೆಣ್ಣನ್ನು ಛೇಡಿಸುವ ಕುಚೇಷ್ಟೆ. ಇದರಲ್ಲಿ ಕೇವಲ ಗಂಡಸರಷ್ಟೇ ಅಲ್ಲ ಹೆಂಗಸರೂ ಭಾಗಿಯಾದ್ದರು. ಗಂಡ, ಹೆಂಡತಿಯನ್ನು ಸಂಶಯದಿಂದ ನೋಡುವ ನಾನಾ ರೀತಿಯ ಮೀಮ್ ಗಳು, ಜೋಕ್ ಗಳು ಸೃಷ್ಟಿಯಾದವು.

ಹೆಂಗಸರು ಹಲವಾರು ಪೀಳಿಗೆಯಿಂದ ಹಿಂಸೆಯ ಭಯದಲ್ಲಿ ಬದುಕುತ್ತಿರುವುದನ್ನು ನೋಡಿದ್ದೇವೆ. ಪ್ರತೀ ಬಾರಿ ಹಣ್ಣು ತನ್ನ ಈ ಭಯವನ್ನು ವ್ಯಕ್ತ ಮಾಡಿದಾಗ ಜನ, ಎಲ್ಲ ಗಂಡಸರೂ ಹೀಗಿರುವುದಿಲ್ಲ ಎಂದು ಹೇಳಿ ಆ ಭಯವನ್ನ ತಳ್ಳಿಹಾಕಿಬಿಡುತ್ತಾರೆ. ಜನ ಹೀಗೆ ಹೇಳುವುದರಿಂದ ಹೆಣ್ಣಿನ ನೋವು ಕಡಿಮೆಯೇನಾಗುವುದಿಲ್ಲ ಆದರೆ ಆಕೆಯ ಸಿಟ್ಟು ಮಾತ್ರ ಹೆಚ್ಚಾಗುತ್ತಿರುವುದು ತರ್ಕಬದ್ಧವಾಗಿದೆ. ಆದರೆ ಸಮಸ್ಯಾತ್ಮಕ ಸಂಗತಿ ಏನೆಂದರೆ ಈಗ ಯಾರೂ ನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಪಕ್ಷದ ಮಾತನಾಡುತ್ತಿದ್ದಾರೆ.

ನಾವು ಈಗ ನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ, ನಾವು ಈ ಕೇಸ್ ನಿಂದ ಏನು ಸಾಬೀತಾಗುತ್ತದೆ ಎನ್ನುವದನ್ನು ಚರ್ಚೆ ಮಾಡುತ್ತಿದ್ದೇವೆ. ಸಾಮಾಜಿಕ ಮನಶಾಸ್ತ್ರದಲ್ಲಿ ಇದಕ್ಕೊಂದು ಹೆಸರಿದೆ, Social Identity theory. ಇದರ ಪ್ರಕಾರ ಯಾವಾಗ ನಾವು ಒಂದು ಗುಂಪಿನ ಜೊತೆ ಆಳವಾಗಿ ಗುರುತಿಸಿಕೊಳ್ಳುತ್ತೇವೆಯೋ , ಅದು ಧರ್ಮಾಧಾರಿತ, ಲಿಂಗಾಧಾರಿತ, ಜಾತಿಯಾಧಾರಿತ ಅಥವಾ ಯಾವುದೇ ಗುಂಪು ಆಗಿರಬಹುದು. ಆಗ ನಮ್ಮ ಮೆದುಳು ನಿಧಾನವಾಗಿ ಪ್ರಶ್ನೆಯನ್ನೇ ಬದಲಿಸಿಬಿಡುತ್ತದೆ. ಅದು ಇಲ್ಲಿ ಏನಾಯಿತು? ಎಂಬ ಪ್ರಶ್ನೆ ಕೇಳುವ ಬದಲು, ಇದರಿಂದ ನನ್ನ ಗುಂಪು, ನನ್ನ ಸಮೂಹ ಸರಿ ಎಂದು ಸಾಬೀತಾಗುತ್ತದೆಯೇ? ಎಂದು ಪ್ರಶ್ನಿಸಲಾರಂಭಿಸುತ್ತದೆ. ಪರಿಸ್ಥಿತಿ ಹೀಗೆ ಬದಲಾದಾಗ, ಆಗಿರುವ ದುರಂತ, ವ್ಯಕ್ತಿಗೆ, ನ್ಯಾಯಕ್ಕೆ ಸಂಬಂಧಿಸಿದ್ದಾಗಿರದೇ, ಅದು ಕೇವಲ ಒಂದು ವಾದವಿವಾದದ ಆಯುಧವಾಗಿ ಉಳಿದುಕೊಂಡು ಬಿಡುತ್ತದೆ, ಅದೂ ದುರಂತದ ಮೊದಲೇ ಅಸ್ತಿತ್ವದಲ್ಲಿದ್ದ ವಾದವಿವಾದ.

ಇಂಥ ಪೋಸ್ಟಗಳು, ಅನಿಸಿಕೆಗಳು ಭಾವನಾತ್ಮಕವಾಗಿ ಸರಿ ಅನಿಸುತ್ತವೆಸಾದರೂ, ಅವು ಒಂದು ಬಹುಮುಖ್ಯವಾದ ಸಂಗತಿಯನ್ನು ಮಿಸ್ ಮಾಡುತ್ತಿವೆ. “ಈಗ ಗೊತ್ತಾಯ್ತಾ ನಮಗೆ ಹೇಗೆ ಅನಿಸುತ್ತದೆ? “ ಎಂದು ಕೆಲವರು ಹೇಳುವಾಗ ಅವರು ಅಂತಃಕರಣವನ್ನು ಅಪೇಕ್ಷಿಸುತ್ತಿರುವುದಿಲ್ಲ, ಅವರು ಸಮಾನತೆಯನ್ನ, symetry (ತದ್ರೂಪ) ಯನ್ನ ಬಯಸುತ್ತಿರುತ್ತಾರೆ. ಅನ್ಯಾಯದಲ್ಲಿ, ಹಿಂಸೆಯಲ್ಲಿ ಸಮಾನತೆ. ವರ್ಷಗಳಿಂದ ನೀವು ಗಂಡಸರ ನೋವನ್ನು ನಿರ್ಲಕ್ಷ ಮಾಡಿದ್ದೀರಿ, ಈಗ ನೀವು ಅನುಭವಿಸಿ ನಮಗೆ ಆಗ ಹೇಗೆ ಅನಿಸುತ್ತಿತ್ತು ಎನ್ನುವುದನ್ನ. ಕೇಳಲಿಕ್ಕೆ ಇದು ಸರಿ ಅನುಸುತ್ತದೆಯಾದರೂ ಇಲ್ಲಿ ಒಂದು ದೊಡ್ಡ ಕೊರತೆಯಿದೆ. ನೋವಿನಲ್ಲಿ ಸಮಾನತೆ ಕೇಳುವುದು ನೋವನ್ನು ಕಡಿಮೆ ಮಾಡುವುದಿಲ್ಲ, ಅದು ಹೊಸ ಜಾಗವನ್ನು ಆವರಿಸಿಕೊಳ್ಳುತ್ತದೆ ಮತ್ತು ತನಗೆ ತಾನೇ ನ್ಯಾಯದ ಹೆಸರಿಟ್ಟುಕೊಳ್ಳುತ್ತದೆ.

ಗಮನಿಸಿ, ಈಗ ಪ್ರತಿಯೊಬ್ಬರೂ ಇನ್ನೊಬ್ಬರ ಜೊತೆ ಅದನ್ನೇ ಮಾಡುತ್ತಿದ್ದಾರೆ, ಯಾವುದು ಹಿಂದೆ ಅವರ ಜೊತೆ ಆದಾಗ ಅವರಿಗೆ ನೋವಾಗಿತ್ತೋ ಅದನ್ನೇ. ಇದು ಅಂತಃಕರಣ ಅಲ್ಲ, ಇದು ನ್ಯಾಯದ ವೇಷವನ್ನು ಧರಿಸಿರುವ ವೈರತ್ವ. ಅಂತಃಕರಣ ಹೇಳುತ್ತದೆ, “ನೀನು ಯಾಕೆ ಹೆದರುತ್ತೀ ಎನ್ನುವುದು ನನಗೆ ಅರ್ಥವಾಗುತ್ತದೆ”. ಆದರೆ ಈಗ ಜನ ಏನು ಹೇಳುತ್ತಿದ್ದಾರೆ, “ಒಳ್ಳೆಯದಾಯ್ತು ಈಗ ನೀವು ಭಯಪಡಿ”. ಹೆಂಗಸರ ಭಯವನ್ನು, not all men ಎಂದು ಹೇಳಿ ಸುಮ್ಮನಾಗಿಸಿದಾಗ, ಅದು ನ್ಯಾಯವಾಗಿರಲಿಲ್ಲ. “ಈಗ ಗೊತ್ತಾಯ್ತಾ ಭಯ ಎಂದರೇನು? “ ಎಂದು ಗಂಡಸರನ್ನು ಛೇಡಿಸುವುದು ಕೂಡ ನ್ಯಾಯವಲ್ಲ. ನ್ಯಾಯ ಯಾವುದೆಂದರೆ, ಒಬ್ಬರ ಸಾವನ್ನು ನಾವು ವಾದ ವಿವಾದದ ವಸ್ತುವಾಗಿಸಿಕೊಳ್ಳುವುದನ್ನ ತಪ್ಪಿಸುವುದು. ಒಬ್ಬರ ಸಾವು, ನಿಮ್ಮ ಪಕ್ಷ ಸರಿಯಾಗಿತ್ತು ಎನ್ನುವುದನ್ನ ಸಾಧಿಸುವ ಸಾಧನವಾದಾಗ ಅದು ಮನುಷ್ಯತ್ವದ ಸೋಲಾಗುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.