ಈ ದೃಷ್ಟಾಂತದ ಮುಖ್ಯ ಸಂದೇಶವೆಂದರೆ, ಜೀವನವು ನಮ್ಮ ಕಡೆಗೆ ಬಾಣಗಳನ್ನು ಎಸೆಯುವುದು ಅನಿವಾರ್ಯ ಎನ್ನುವುದನ್ನು ನಾವು ನೆನಪಿನಲ್ಲಿಡುವುದು. … । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಕೆಲವೊಮ್ಮೆ ಜೀವನ ನಿಮ್ಮ ನಿರೀಕ್ಷೆಯಂತೆ ಸಾಗುವುದಿಲ್ಲ. ನೀವು ತಪ್ಪಾದ ಉದ್ಯೋಗವನ್ನು ಆಯ್ಕೆ ಮಾಡಬಹುದು, ತಪ್ಪಾದ ನಗರಕ್ಕೆ ಸ್ಥಳಾಂತರವಾಗಬಹುದು, ಅಥವಾ ನಿಮ್ಮ ಪ್ರೀತಿಯನ್ನು ತಪ್ಪಾದ ವ್ಯಕ್ತಿಗೆ ಅರ್ಪಿಸಬಹುದು. ನೀವು ತಪ್ಪಾದ ದಾರಿಯಲ್ಲಿ ಹೆಜ್ಜೆ ಇಡಬಹುದು, ಮತ್ತು ಅದರ ಪರಿಣಾಮವಾಗಿ ನೋವು ಹಾಗೂ ಅಸಂತೋಷವನ್ನು ಅನುಭವಿಸಬಹುದು. ಇವೆಲ್ಲವೂ ಮನುಷ್ಯ ಜೀವನದ ಅನಿವಾರ್ಯ ಭಾಗ. ತಪ್ಪುಗಳನ್ನು ಮಾಡುವುದು ಮತ್ತು ಅವುಗಳಿಂದ ನೋವು ಅನುಭವಿಸುವುದು ಮಾನವ ಜೀವನದ ಸಹಜ ಸ್ವಭಾವ. ಆದರೆ ಕೆಲವರು ಆ ನೋವಿನ ಮೇಲೆ ಮತ್ತಷ್ಟು ಭಾರವನ್ನು ಹೇರಿಕೊಳ್ಳುತ್ತಾರೆ. ಅವರು ತಮ್ಮನ್ನು ತಾವೇ ನಾಚಿಕೆ, ಪಶ್ಚಾತ್ತಾಪ ಮತ್ತು ಅಪರಾಧಭಾವಗಳಿಂದ ಹಿಂಸಿಸಿಕೊಳ್ಳುತ್ತಾರೆ. ಹೀಗಾಗಿ ಮೂಲ ನೋವಿಗಿಂತಲೂ ಹೆಚ್ಚು ಸಂಕಟವನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ.
ಬೌದ್ಧ ತತ್ತ್ವಶಾಸ್ತ್ರದಲ್ಲಿ ಇದನ್ನೇ “ಎರಡು ಬಾಣಗಳ ದೃಷ್ಟಾಂತ” (The Two Arrows Parable) ಎಂದು ಕರೆಯಲಾಗುತ್ತದೆ.
ಈ ದೃಷ್ಟಾಂತದ ಮುಖ್ಯ ಸಂದೇಶವೆಂದರೆ, ಜೀವನವು ನಮ್ಮ ಕಡೆಗೆ ಬಾಣಗಳನ್ನು ಎಸೆಯುವುದು ಅನಿವಾರ್ಯ ಎನ್ನುವುದನ್ನು ನಾವು ನೆನಪಿನಲ್ಲಿಡುವುದು. ಜೀವನದಲ್ಲಿ ದುಃಖ ಬರುತ್ತದೆ, ಅನಾರೋಗ್ಯ ಬರುತ್ತದೆ, ಮತ್ತು ಆ ಕ್ಷಣದಲ್ಲಿ ನಾವು ನಮಗೆ ಸರಿಯೆಂದು ಅನಿಸಿದ ಸಾವಿರಾರು ಮೂರ್ಖತನದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಈ ಮೊದಲ ಬಾಣವನ್ನು ತಪ್ಪಿಸಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ.
ಆದರೆ ನಂತರ ಬರುತ್ತದೆ ಎರಡನೇ ಬಾಣ ; ಅದು ಮೊದಲ ಬಾಣಕ್ಕೆ ನಾವು ನೀಡುವ ಪ್ರತಿಕ್ರಿಯೆ.
ರಾತ್ರಿ ಮೂರು ಗಂಟೆಗೆ ನಿದ್ರೆ ಬಾರದೆ ಎಚ್ಚರವಾಗಿ, ಹಿಂದೆ ನಡೆದ ಸಂಭಾಷಣೆಯನ್ನು ಮತ್ತೆ ಮತ್ತೆ ಮನಸ್ಸಿನಲ್ಲಿ ನೆನಪಿಸಿಕೊಳ್ಳುವುದೇ ಎರಡನೇ ಬಾಣ.
ಒಂದು ಸಂಬಂಧ ವಿಫಲವಾಯಿತು ಎಂದರೆ “ನಾನು ಪ್ರೀತಿಗೆ ಅರ್ಹನಲ್ಲ” ಎಂದು ತೀರ್ಮಾನಿಸಿಕೊಳ್ಳುವುದು, ಅಥವಾ ಒಂದು ಉದ್ಯೋಗದಲ್ಲಿ ತಪ್ಪಾಯಿತು ಎಂದರೆ “ನಾನು ನಕಲಿ ವ್ಯಕ್ತಿ, ನನಗೆ ಯಾವುದೇ ಸಾಮರ್ಥ್ಯವಿಲ್ಲ” ಎಂದು ನಂಬಿಕೊಳ್ಳುವುದು ಕೂಡ ಎರಡನೇ ಬಾಣವೇ. ಮೊದಲ ಗಾಯವು ಜೀವನವು ನಮಗೆ ಕೊಟ್ಟ ಗಾಯ, ಅದನ್ನು ಕೆಲವೊಮ್ಮೆ ನಾವು ಸಹಿಸಲೇಬೇಕು. ಆದರೆ ಎರಡನೇಯದು, ನಾವು ನಮ್ಮ ಮೇಲೆ ಮತ್ತೆ ಮತ್ತೆ ಮಾಡಿಕೊಳ್ಳುವ ಗಾಯ. ಅದು ಸ್ವತಃ ನಮ್ಮ ಆಲೋಚನೆಗಳು, ಪಶ್ಚಾತ್ತಾಪ ಮತ್ತು ಆತ್ಮನಿಂದನೆಯಿಂದ ಉಂಟಾಗುವ ಗಾಯ.
ಈ ದೃಷ್ಟಾಂತ ನಮಗೆ ಒಂದು ಮಹತ್ವದ ವಿಷಯವನ್ನು ನೆನಪಿಸುತ್ತದೆ: ಜೀವನವು ಕೆಲವೊಮ್ಮೆ ತುಂಬಾ ಕಠಿಣವಾಗಿರುತ್ತದೆ, ಜೀವನದಲ್ಲಿ ದುಃಖಗಳು, ಕಷ್ಟಗಳು ಮತ್ತು ಪರೀಕ್ಷೆಗಳು ಬರುವುದು ಬಹಳ ಸಹಜ.
ಆದರೆ ಈಗಾಗಲೇ ಇಷ್ಟೊಂದು ಸಂಕಷ್ಟಗಳಿಂದ ತುಂಬಿರುವ ಈ ಲೋಕದಲ್ಲಿ, ನಾವು ನಮ್ಮ ಮನಸ್ಸನ್ನು ಬಳಸಿ ಮತ್ತಷ್ಟು ನೋವನ್ನು ಸೃಷ್ಟಿಸಿಕೊಳ್ಳಬಾರದು.
ಆದ್ದರಿಂದ, ಹಿಂದೆ ನಡೆದದ್ದನ್ನೇ ಮತ್ತೆ ಮತ್ತೆ ಮನಸ್ಸಿನಲ್ಲಿ ನೆನಪಿಸಿಕೊಳ್ಳಬೇಡಿ. ನೋವಿಗೆ ಅಂಟಿಕೊಂಡೇ ಉಳಿಯಬೇಡಿ. ಗುಣವಾಗುತ್ತಿರುವ ಗಾಯವನ್ನು ಮತ್ತೆ ಮತ್ತೆ ಮುಟ್ಟಿಕೊಳ್ಳ ಬೇಡಿ. ಹಾಗೆ ಮಾಡಿದರೆ ಗಾಯ ಮತ್ತೆ ಹೊಸದಾಗಿ ನೋಯಲು ಶುರು ಮಾಡುತ್ತದೆ.
ಜೀವನವು ನಮ್ಮ ಮೇಲೆ ಎಸೆಯುವ “ಕ್ರೂರ ಅದೃಷ್ಟದ ಬಾಣಗಳನ್ನು” (the slings and arrows of outrageous fortune) ನಾವು ಕೆಲವೊಮ್ಮೆ ಸಹಿಸಲೇಬೇಕು; ಅಥವಾ ಕಷ್ಟಗಳ ಮಹಾಸಾಗರದ ವಿರುದ್ಧ ಧೈರ್ಯದಿಂದ ಹೋರಾಡಬೇಕು. ಆದರೆ ಅದಕ್ಕಾಗಿ, ನಮ್ಮ ಮನಸ್ಸಿನ ಮೂಲಕ ಹೊಸಹೊಸ ನೋವುಗಳನ್ನು ಸೃಷ್ಟಿಸಿಕೊಂಡು ನಮ್ಮ ಪ್ರಯಾಣವನ್ನು ನಾವೇ ಇನ್ನಷ್ಟು ಭಾರವಾಗಿಸಿಕೊಳ್ಳುವ ಅಗತ್ಯವಿಲ್ಲ.

