ಸಿಟ್ಟನ್ನು ನಿಭಾಯಿಸುವುದು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.7

ನಮ್ಮ ಸಿಟ್ಟು ನಮ್ಮ ಶತ್ರುವಲ್ಲ, ನಮ್ಮದೇ ಕೂಸು, ಸಂಕಟಪಡುತ್ತ ನರಳುತಿರುವ ಕೂಸು. ತಾಯಿಯು ಮಗುವನ್ನು ಎಷ್ಟು ಪ್ರೀತಿಯಿಂದ, ಕನಿಕರದಿಂದ ಎತ್ತಿಕೊಂಡು, ಅಪ್ಪಿ ಸಂತೈಸುತ್ತಾಳೋ ಹಾಗೆಯೇ ನಾವು ಕೂಡ, ಉಸಿರು ಎಳೆದುಕೊಳ್ಳುತ್ತಾ “ನನನ್ನೊಳಗೆ ಸಿಟ್ಟು ಮೂಡುತಿದೆಯೆಂದು ಗೊತ್ತು” ಅಂದುಕೊಳ್ಳುತ್ತಾ, ಉಸಿರು ಹೊರಬಿಡುತ್ತಾ “ಸಿಟ್ಟನ್ನು ನನ್ನೊಳಗೇ ಹಿಡಿದಿಟ್ಟುಕೊಂಡಿದೇನೆ,” ಅಂದುಕೊಳ್ಳಬೇಕು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.7: ಭಾವ-ಸಂಬಂಧ   ಸಿಟ್ಟನ್ನು ನಿಭಾಯಿಸುವುದು

ಸಿಟ್ಟಿಗೆ ಸುಡುವ ಶಕ್ತಿ ಇದೆ, ಹಾಳು ಮಾಡುವ ಶಕ್ತಿ ಇದೆ. ಎಚ್ಚರದ ಗಮನವನ್ನು ಬೆಳೆಸಿಕೊಳ್ಳದಿದ್ದರೆ ನಿಮ್ಮ ಸಿಟ್ಟು ನಿಮ್ಮನ್ನೇ ಸುಟ್ಟು ಬೂದಿ ಮಾಡುತ್ತದೆ. ನೀವು ಮಾತ್ರವಲ್ಲ ನಿಮ್ಮ ಸುತ್ತಲಿನವರೂ ನೋವು ಅನುಭವಿಸುತ್ತಾರೆ. ಹಾಗಾಗಿ ಸಿಟ್ಟು ಮೊಳೆಯುತಿದೆ ಅನಿಸಿದ ತಕ್ಷಣವೇ ನೀವು ಏನಾದರೂ ಮಾಡಲೇಬೇಕು. ಸಿಟ್ಟಿಗೆ ಪ್ರತಿಕ್ರಿಯೆ ತೋರುವುದಕ್ಕಿಂತ ಸಿಟ್ಟು ತಲೆ ಎತ್ತದ ಹಾಗೆ ಕ್ರಿಯೆಯಲ್ಲಿ ತೊಡಗುವುದು ಮುಖ್ಯವಾದದ್ದು, ಒಳ್ಳೆಯದು. ಸಿಟ್ಟಿನ ಸೂಚನೆ ದೊರೆತ ತಕ್ಷಣ ಎಚ್ಚರದ ಗಮನ ಮೊಳಕೆಯೊಡೆಯಲು ಅವಕಾಶ ಮಾಡಿಕೊಡಬೇಕು. ಎಳೆದುಕೊಳ್ಳುವ ಉಸಿರು, ಬಿಡುವ ಉಸಿರನ್ನು ಗಮನಿಸುತ್ತಾ ಎಚ್ಚರದ ಗಮನದ ಚೈತನ್ಯವನ್ನು ಹುಟ್ಟಿಸಿ ಸಿಟ್ಟಿನ ನಿಭಾವಣೆಯನ್ನು ಅದರ ಕೈಗೆ ಒಪ್ಪಿಸಬೇಕು.

ಮಗು ಅಳುತಿರುವ ಸದ್ದು ಕಿವಿಗೆ ಬಿದ್ದ ತಕ್ಷಣ ತಾಯಿಯಾದವಳು ತಾನು ಮಾಡುತಿರುವ ಕೆಲಸವನ್ನು ಹಾಗೇ ಅಲ್ಲೇ ಬಿಟ್ಟು ಮಗುವಿನ ಹತ್ತಿರಕ್ಕೆ ಧಾವಿಸುತ್ತಾಳೆ. ಮಗುವನ್ನು ಎತ್ತಿಕೊಂಡು ಸಂತೈಸುತ್ತಾಳೆ. ಸಿಟ್ಟು ತಲೆ ಎತ್ತುತಿದೆ ಅನಿಸಿದಾಗ ನಾವು ಕೂಡ ಹೀಗೇ ಮಾಡಬೇಕು. ಸಿಟ್ಟು ಅನ್ನುವುದು ನಮ್ಮದೇ ಆದ ಕಾಯಿಲೆಯ ಕೂಸು. ನಾವೇ ಅದನ್ನು ಸಮಾಧಾನ ಪಡಿಸಿ ತಣಿಸುವುದು ಮುಖ್ಯ 

ನಮ್ಮ ಸಿಟ್ಟು ನಮ್ಮ ಶತ್ರುವಲ್ಲ, ನಮ್ಮದೇ ಕೂಸು, ಸಂಕಟಪಡುತ್ತ ನರಳುತಿರುವ ಕೂಸು. ತಾಯಿಯು ಮಗುವನ್ನು ಎಷ್ಟು ಪ್ರೀತಿಯಿಂದ, ಕನಿಕರದಿಂದ ಎತ್ತಿಕೊಂಡು, ಅಪ್ಪಿ ಸಂತೈಸುತ್ತಾಳೋ ಹಾಗೆಯೇ ನಾವು ಕೂಡ, ಉಸಿರು ಎಳೆದುಕೊಳ್ಳುತ್ತಾ “ನನನ್ನೊಳಗೆ ಸಿಟ್ಟು ಮೂಡುತಿದೆಯೆಂದು ಗೊತ್ತು” ಅಂದುಕೊಳ್ಳುತ್ತಾ, ಉಸಿರು ಹೊರಬಿಡುತ್ತಾ “ಸಿಟ್ಟನ್ನು ನನ್ನೊಳಗೇ ಹಿಡಿದಿಟ್ಟುಕೊಂಡಿದೇನೆ,” ಅಂದುಕೊಳ್ಳಬೇಕು.

ಹೀಗೆ ಉಸಿರಾಡುವಾಗ ನಮ್ಮೊಳಗೆ ಎರಡು ಬಗೆಯ ಚೈತನ್ಯಗಳಿರುತ್ತವವೆ. ಸಿಟ್ಟಿನ ಚೈತನ್ಯವೊಂದು, ಎಚ್ಚರದ ಗಮನದ ಚೈತನ್ಯ ಇನ್ನೊಂದು. ಎಚ್ಚರವಿರುವ ಉಸಿರಾಟದಿಂದ ಗಮನದ ಚೈತನ್ಯ ಹೆಚ್ಚುತ್ತದೆ, ಗಮನದ ನಡಿಗೆ ಸಾಧ್ಯವಾಗುತ್ತದೆ, ಸಿಟ್ಟಿನ ಚೈತನ್ಯವನ್ನು ಭೇದಿಸುತ್ತದೆ.

ಬೇಸಗೆಯಲ್ಲಿ ಧಗೆ ಹೆಚ್ಚಿದಾಗ ಮನೆಯಲ್ಲಿ ಸ್ವಲ್ಪ ತಂಪಾಗಿರುವ ಜಾಗಕ್ಕೆ ಹೋಗುತ್ತೀರಿ, ಕಿಟಕಿ ತೆರಯುತ್ತೀರಿ, ಅಥವಾ ಫ್ಯಾನ್‌ ಹಾಕುತ್ತೀರಿ, ಇಲ್ಲವೇ ಏಸಿ ಆನ್‌ ಮಾಡುತ್ತೀರಿ. ತಣ್ಣನೆಯ ಗಾಳಿ ಬಿಸಿಗಾಳಿಯನ್ನು ಓಡಿಸಬೇಕಾಗಿಲ್ಲ; ಬದಲಾಗಿ ತಂಪು ಗಾಳಿಯು ಬಿಸಿ ಗಾಳಿಯನ್ನು ಅಪ್ಪಿಕೊಳ್ಳುತ್ತದೆ. ಹತ್ತು ನಿಮಿಷ ಕಳೆಯುವಷ್ಟರಲ್ಲಿ ಗಾಳಿಯೇ ಬದಲಾಗುತ್ತದೆ. ಎಚ್ಚರದ ಗಮನವೂ ಹೀಗೆಯೇ ನಮ್ಮ ಸಿಟ್ಟನ್ನು ಬದಲಿಸುತ್ತದೆ.

ಹೀಗೆ ಮಾಡುವಾಗ ಯಾವುದೇ ಹೋರಾಟವಿರದು. ನಿಮ್ಮ ಸಿಟ್ಟು ನಿಮ್ಮ ಶತ್ರುವಲ್ಲ. ನಿಮ್ಮ ಸಿಟ್ಟು ನೀವೇ ಆಗಿರುತ್ತದೆ. ಎರಡೂ ಬೇರೆಯಲ್ಲ. ಎಚ್ಚರದ ಗಮನ ಒಳ್ಳೆಯದು, ಸಿಟ್ಟು ಕೆಟ್ಟದ್ದು; ಒಳಿತು ಅನ್ನುವುದು ಕೆಟ್ಟದನ್ನು ಗೆಲ್ಲಬೇಕು ಅನ್ನಬೇಡಿ. ಎಚ್ಚರದ ಗಮನದಲ್ಲಿ ಗೆಲ್ಲಬೇಕಾದ ಯಾವ ಯುದ್ಧವೂ ಇಲ್ಲ.

ಕೆಲವೊಮ್ಮೆ ಆಳವಾದ ಸಿಟ್ಟು, ಏನೂ ಮಾಡಿದರೂ ತಗ್ಗದು ಅನಿಸಬಹುದು. ಆಗಲೂ ಎಚ್ಚರದ ಗಮನದ ಚೈತನ್ಯವನ್ನು ಬೆಳೆಸುವ ತಾಳ್ಮೆ ಇರಬೇಕು. ಎಚ್ಚರದ ಗಮನ ಸಿಟ್ಟನ್ನು ಆವರಿಸಿಕೊಂಡಾಗ ನಮಗೆ ಆ ಸಿಟ್ಟಿನಿಂದ ಬಿಡುಗಡೆ ಸಿಗುತ್ತದೆ.

*

ಸಿಟ್ಟನ್ನು ಕುರಿತು ನೂರಾರು ವಚನಗಳಿವೆ. ಪ್ರಸಿದ್ಧವಾದ ಕೆಲವನ್ನು ನೋಡೋಣ. ಮೊದಲ ಮೂರು ಬಸವಣ್ಣನವರ ರಚನೆಗಳು:

೧. ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ
ತನಗಾದ ಆಗೇನು ಅವರಿಗಾದ ಚೇಗೆಯೇನು
ತನುವಿನ ಕೋಪ ತನ್ನ ಹಿರಿಯತನದ ಕೇಡು
ಮನದ ಕೋಪ ತನ್ನ ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ.

೨. ಎನ್ನ ನುಡಿ ಎನಗೆ ನಂಜಾಯಿತ್ತು, ಎನ್ನ ಅಲಗೆ ಎನ್ನ ಕೊಂದಿತ್ತು.
ಆನು ಪಾಪಿಯಯ್ಯಾ, ಆನು ಕೋಪಿಯಯ್ಯಾ.
ತರಳತನದಲ್ಲಿ ಕೆಟ್ಟೆನಯ್ಯಾ

೩. ಕಣ್ಣ ಕೋಪಕ್ಕೆ ಮುಂದರಿಯದೆ ನುಡಿದು,
ಮನಮಚ್ಚಿ ಮರುಳಾದೆ ನೋಡವ್ವಾ

ಮುಂದಿನದು ಬಸವಣ್ಣನವರ ಹೆಂಡತಿ ನೀಲಮ್ಮನವರದು:

೪ ಕೋಪದ ತಾಪದ ಸಂಗವ ಕಳೆದು
ವಿರೂಪ ನಿರೂಪವಾಯಿತ್ತಯ್ಯಾ
ನಿರಾಲಂಬ ನಿರಾಭಾರಿಯಾಗಿರಲು ಆನು ಅನುವರಿದು
ಹೆಣ್ಣೆಂಬ ನಾಮವ ಕಳೆದು ಸುಖ ವಿಶ್ರಾಂತಿಯನೆಯ್ದುವೆನಯ್ಯಾ ಸಂಗಯ್ಯಾ
ಬಸವನರೂಪವಡಗಿತೆನ್ನಲ್ಲಿ

ಕೋಪ, ಮುನಿಸಿನ ಬಿಸಿಗಳ ಜೊತೆಯನ್ನು ಬಿಟ್ಟಮೇಲೆ ವಿರೂಪ-ಹಿತವಲ್ಲದ ರೂಪ ಕಳೆಯಿತು. ಯಾವುದನ್ನೂ ಅವಲಂಬಿಸದೆ, ಯಾವ ಭಾವದ ಭಾರವೂ ಇರದೆ, ನಾನು ಹೆಣ್ಣು ಅನ್ನುವ ಹೆಸರನ್ನೂ ಕಳೆದುಕೊಂಡು ಸುಖದ ನೆಮ್ಮದಿ ಅನುಭವಿಸುತ್ತಾ ಬಸವನ ರೂಪ ನನ್ನೊಳಗೇ ಅಡಗಿತು. ಹೀಗೆನ್ನುವಾಗ ಸಿಟ್ಟಿನ ನಿರ್ವಹಣೆ ಅತಿ ದೊಡ್ಡ ಸಾಧನೆಯ ಮೊದಲ ಮೆಟ್ಟಿಲು ಅನ್ನುವ ಸೂಚನೆ ಇರುವಂತಿದೆ.

೩ ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು
ಸಂಸಾರ ಹುಟ್ಟಿದಲ್ಲಿ ಅಜ್ಞಾನ ಹುಟ್ಟಿತ್ತು
ಅಜ್ಞಾನ ಹುಟ್ಟಿದಲ್ಲಿ ಆಶೆ ಹುಟ್ಟಿತ್ತು
ಆಶೆ ಹುಟ್ಟಿದಲ್ಲಿ ಕೋಪ ಹುಟ್ಟಿತ್ತು
ಆ ಕೋಪಾಗ್ನಿಯ ತಾಮಸಧೂಮ್ರ ಮುಸುಕಿದಲ್ಲಿ
ನಾ ನಿಮ್ಮ ಮರೆದು ಭವದುಃಖಕ್ಕೀಡಾದೆ…,
ಚೆನ್ನಮಲ್ಲಿಕಾರ್ಜುನಾ

ಅಕ್ಕಮಹಾದೇವಿಯವರ ವಚನವು ಸಿಟ್ಟಿನಿಂದಲೇ ಮರೆವು, ಅದರಿಂದ  ಈ ಲೋಕದ ಎಲ್ಲ ದುಃಖಗಳು ಹುಟ್ಟುತ್ತವೆ ಅನ್ನುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.