ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ನೀವು ಒಬ್ಬ ವ್ಯಕ್ತಿಗೆ ಎಲ್ಲವನ್ನೂ ಕೊಡಬಹುದು.
ಅವನಿಗೆ ಸಂಪತ್ತು, ಸುಖ ಸೌಕರ್ಯ, ಸುರಕ್ಷಿತತೆ ಮತ್ತು ಸುಲಭವಾದ ಜೀವನವನ್ನು ಕೊಡಬಹುದು.
ಆದರೂ ಅವನಿಗೆ ಸಂತೋಷವಾಗದೇ ಇರಬಹುದು.
ಅದಕ್ಕೆ ಕಾರಣ ಅವನಿಗೆ ಇನ್ನಷ್ಟು ವಸ್ತುಗಳು ಬೇಕು ಎನ್ನುವುದಲ್ಲ. ಅವನಿಗೆ ಬೇಕಾಗಿರುವುದು ಗುರುತಿಸುವಿಕೆ. ಅವನಿಗೆ ಸಮಾಜದಲ್ಲಿ ಸ್ಥಾನಮಾನ (Status) ಬೇಕು.
ತತ್ವಜ್ಞಾನಿ Plato ನ ಪ್ರಕಾರ, ಮನುಷ್ಯನ ಆತ್ಮಕ್ಕೆ ಮೂರು ಭಾಗಗಳಿವೆ. ಮೊದಲನೆಯದು ವಿವೇಕ (Reason), ಯೋಚಿಸುವ ಮತ್ತು ತರ್ಕ ಮಾಡುವ ಭಾಗ. ಎರಡನೆಯದು ಬಯಕೆ (Appetite) , ಆಹಾರ, ಸೆಕ್ಸ್, ಸಂಪತ್ತು ಮತ್ತು ಇಂದ್ರಿಯಸುಖಗಳನ್ನು ಬಯಸುವ ಭಾಗ. ಮೂರನೆಯದು ಥೈಮೋಸ್ (Thymos), ನಾವು ಗೌರವಿಸಲ್ಪಡಬೇಕು, ಗುರುತಿಸಲ್ಪಡಬೇಕು, ನಮ್ಮ ಮೌಲ್ಯವನ್ನು ಇತರರು ಒಪ್ಪಿಕೊಳ್ಳಬೇಕು ಎಂಬ ಆಳವಾದ ಮಾನವೀಯ ಹಂಬಲ.
ಥೈಮೋಸ್ ಎನ್ನುವುದು ನಿಮ್ಮ ವ್ಯಕ್ತಿತ್ವದ ಆ ಚೈತನ್ಯಭರಿತ ಭಾಗ. ಯಾರಾದರೂ ನಿಮ್ಮನ್ನು ಹೊಗಳಿದಾಗ ಅದು ಹೆಮ್ಮೆಯಿಂದ ಉಬ್ಬುತ್ತದೆ; ಯಾರಾದರೂ ನಿಮ್ಮನ್ನು ಕಡೆಗಣಿಸಿದಾಗ ಅಥವಾ ಅವಮಾನಿಸಿದಾಗ ಅದು ಒಳಗೊಳಗೆ ಕುಗ್ಗುತ್ತದೆ.
ರಾಜಕೀಯ ವಿಜ್ಞಾನಿ Francis Fukuyama ಅವರ ಪ್ರಕಾರ, ಥೈಮೋಸ್‌ಗೆ ಎರಡು ವಿಭಿನ್ನ ರೂಪಗಳಿವೆ.
ಮೊದಲನೆಯದು, ನಾವು ಎಲ್ಲರಂತೆಯೇ ಸಮಾನರೆಂದು ಗುರುತಿಸಲ್ಪಡಬೇಕು ಎಂಬ ಬಯಕೆ.
ಅಂದರೆ, ನಾವು ನಮ್ಮ ಸುತ್ತಲಿನವರಿಗಿಂತ ಶ್ರೇಷ್ಠರೂ ಅಲ್ಲ, ಕೀಳು ಕೂಡ ಅಲ್ಲ. ನಾವು ಅವರಷ್ಟೇ ಸಮಾನರು ಎಂಬ ಮಾನ್ಯತೆ ಪಡೆಯಲು ಮಾತ್ರ ಬಯಸುವುದು. ಎರಡನೆಯ ರೂಪವನ್ನು ಅವರು ‘ಮೆಗಲೋಥೈಮಿಯಾ (Megalothymia)’ ಎಂದು ಕರೆಯುತ್ತಾರೆ. ಇದು ಇತರರಿಗಿಂತ ತಾವು ಶ್ರೇಷ್ಠರೆಂದು ಗುರುತಿಸಲ್ಪಡಬೇಕು ಎಂಬ ಹಂಬಲ. ಮದ್ಯದ ಅಮಲಿನಲ್ಲಿರುವ ಒಬ್ಬ ವ್ಯಕ್ತಿ, ಯಾರೋ ತನ್ನನ್ನು ವಿಚಿತ್ರವಾಗಿ ನೋಡಿದರು ಎಂಬ ಕಾರಣಕ್ಕೆ ಜಗಳಕ್ಕೆ ಇಳಿಯುವುದು ಇದೇ ಮನೋಭಾವದ ಒಂದು ಉದಾಹರಣೆ. ಅದೇ ರೀತಿ, ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೂ, ಇನ್ನೂ ಇತರರನ್ನು ಮೀರಿಸಬೇಕು, ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂಬ ತವಕವನ್ನು ಬಿಡಲಾರದ ಕೋಟ್ಯಾಧಿಪತಿಯೂ ಇದೇ ಮೆಗಲೋಥೈಮಿಯಾಗೆ ಉದಾಹರಣೆ.
ಮನುಷ್ಯರು ಕೇವಲ ತರ್ಕಬದ್ಧ ಜೀವಿಗಳಲ್ಲ.
ನಾವು ಯಾವಾಗಲೂ ಲೆಕ್ಕಾಚಾರ ಹಾಕುತ್ತಾ, ಕೇವಲ ಸುಖ ಮತ್ತು ಸುರಕ್ಷತೆಯನ್ನೇ ಹುಡುಕುವವರಲ್ಲ. ಹಾಗಿದ್ದರೆ, ಎಲ್ಲ ರೀತಿಯ ಸೌಕರ್ಯಗಳನ್ನು ಹೊಂದಿರುವವರು ಸದಾ ಸಂತೋಷವಾಗಿರಬೇಕಾಗಿತ್ತು.
ಆದರೆ ವಾಸ್ತವದಲ್ಲಿ ಹಾಗಿರುವುದು ಬಹಳ ಅಪರೂಪ.
ಯಾರಿಗಾದರೂ, ತಮ್ಮನ್ನು ಯಾರೂ ಗಮನಿಸುತ್ತಿಲ್ಲ ಅಥವಾ ಗೌರವಿಸುತ್ತಿಲ್ಲ ಎಂಬ ಭಾವನೆ ಬಂದರೆ, ಅವರು ತಾವು ಕಟ್ಟಿಕೊಂಡಿರುವ ಸುಂದರ ಜೀವನವನ್ನೇ ಹಾಳುಮಾಡಿಕೊಳ್ಳಲು ಹಿಂಜರಿಯುವುದಿಲ್ಲ. ಅವರು ಕೆಲಸ ಬಿಟ್ಟುಬಿಡಬಹುದು, ದಂಗೆ ಏಳಬಹುದು, ಹೋರಾಟ ಮಾಡಬಹುದು.
ಇತಿಹಾಸದಲ್ಲಿನ ಅನೇಕ ಕ್ರಾಂತಿಗಳು ಕೇವಲ ರೊಟ್ಟಿಗಾಗಿ ನಡೆದಿಲ್ಲ; ಅವು ಗೌರವ ಮತ್ತು ಘನತೆಗಾಗಿ ಕೂಡ ನಡೆದಿವೆ. ನೀವು ಒಬ್ಬ ವ್ಯಕ್ತಿಗೆ ಎಲ್ಲವನ್ನೂ ಕೊಡಬಹುದು. ಆದರೆ ಅವನಿಗೆ ಗಮನ, ಗುರುತಿಸುವಿಕೆ, ಅಥವಾ ಸ್ಥಾನಮಾನ ನೀಡದಿದ್ದರೆ, ಅದಕ್ಕಾಗಿ ಅವನು ನಿಮ್ಮ ಮೇಲೆ ದ್ವೇಷವನ್ನೂ ಬೆಳೆಸಿಕೊಳ್ಳಬಹುದು. ಏಕೆಂದರೆ ಮಾನವನ ಆತ್ಮಕ್ಕೆ ಕೇವಲ ಆಹಾರ ಮತ್ತು ಭೌತಿಕ ಸೌಲಭ್ಯಗಳು ಸಾಕಾಗುವುದಿಲ್ಲ. ಅದನ್ನು ಇತರರು ಗಮನಿಸಬೇಕು, ಗುರುತಿಸಬೇಕು, ಅದರ ಅಸ್ತಿತ್ವಕ್ಕೂ ಒಂದು ಮೌಲ್ಯವಿದೆ ಎಂದು ಜನ ಒಪ್ಪಿಕೊಳ್ಳಬೇಕು. ಇದೇ ಅದರ ಆಳವಾದ ಅಗತ್ಯ.

