ಬುದ್ಧ ಮನೆಗೆ ಬಂದಿದ್ದಾಗ, ಸ್ವಸ್ತಿ ತನ್ನ ತಮ್ಮ ರೂಪಕನೊಡನೆ ಎಮ್ಮೆ ಕಾಯಲು ಹೋಗಿದ್ದ. ಅವನ ಇಬ್ಬರು ತಂಗಿಯರಾದ ಹದಿನಾರು ವರ್ಷದ ಬಾಲಾ ಮತ್ತು ಹನ್ನೆರಡು ವರ್ಷದ ಭೀಮಾ ಮನೆಯಲ್ಲೇ ಇದ್ದರು. ಬುದ್ಧನನ್ನು ಗುರುತಿಸಿದ ಬಾಲಾ, ಕೂಡಲೇ ಸ್ವಸ್ತಿಯನ್ನು ಕರೆತರಲು ಲಗುಬಗೆಯಿಂದ ಹೊರಟಳು. ಆದರೆ ಬುದ್ಧ, ಅದರ ಅಗತ್ಯವಿಲ್ಲವೆಂದು ಅವಳನ್ನು ತಡೆದು ನಿಲ್ಲಿಸಿದ. ತಾನೇ ರಾಹುಲ ಮತ್ತು ಸಂಘದ ಇತರ ಬಿಕ್ಖುಗಳ ಜೊತೆ ತೆರಳಿ ಹೊಳೆದಂಡೆಯ ಬಳಿ ಅವನನ್ನು ಹುಡುಕುವುದಾಗಿ ಹೇಳಿದ… । ತಿ ನ್ಹಾತ್ ಹಾನ್, Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
ನಡಿಗೆ, ನಡಿಗೆಗಾಗಿಯಷ್ಟೆ #1.1
ಹಸಿರು ಬಿದಿರು ಮೆಳೆಗಳ ನೆರಳಿನ ದಾರಿಗುಂಟ ನಡೆದ ತರುಣ ಬಿಕ್ಖು ಸ್ವಸ್ತಿ, ಪದ್ಮಾಸನ ಹಾಕಿಕೊಂಡು ಮೂಗಿನ ತುದಿ ಗಮನಿಸುತ್ತಾ ಧ್ಯಾನಕ್ಕೆ ಕುಳಿತ. ಹಾಗೆ ಅವನು ಧ್ಯಾನಕ್ಕೆ ಕುಳಿತು ಗಂಟೆಗೂ ಮಿಗಿಲಾಗಿತ್ತೇನೋ, ಅವನ ಹಾಗೇ ಇನ್ನೂ ನೂರಾರು ಬಿಕ್ಖುಗಳಲ್ಲಿ ಕೆಲವರು ಬಿದಿರು ಮೆಳೆಗಳ ನೆರಳಿನಲ್ಲಿ, ಇನ್ನು ಕೆಲವರು ತಮ್ಮ ತಮ್ಮ ಎಲೆಮನೆಗಳಲ್ಲಿ ಧ್ಯಾನ ನಡೆಸುತ್ತಿದ್ದರು. ಜನರು ಪ್ರೀತಿಯಿಂದ ‘ಬುದ್ಧ’ ಎಂದು ಕರೆಯುತ್ತಿದ್ದ ಮಹಾಗುರು ಗೌತಮ ಆ ವೇಣುವನ ವಿಹಾರದಲ್ಲಿ ನಾನೂರು ಶಿಷ್ಯರೊಂದಿಗೆ ಬೀಡು ಬಿಟ್ಟಿದ್ದ. ಅಲ್ಲಿ ಅಷ್ಟೊಂದು ಸಂದಣಿ ಇದ್ದರೂ ನಿರಾಳವಾದ ಶಾಂತಿ ನೆಲೆಸಿತ್ತು. ನಲವತ್ತು ಎಕರೆ ವಿಸ್ತೀರ್ಣದ ಆ ವಿಹಾರದಲ್ಲಿ ಮಗಧದ ಎಲ್ಲೆಡೆಗಳಿಂದ ತಂದು ಬೆಳೆಸಿದ್ದ ಬಗೆ ಬಗೆಯ ಬಿದಿರಿನ ಮೆಳೆಗಳು ಘನತೆಯಿಂದ ತುಯ್ಯುತ್ತ ನಿಂತಿದ್ದವು. ಏಳು ವರ್ಷಗಳ ಹಿಂದೆ ರಾಜಾ ಬಿಂಬಿಸಾರನು ರಾಜಗೃಹದಿಂದ ಕೇವಲ ಮೂವತ್ತು ನಿಮಿಷಗಳ ನಡಿಗೆಯಷ್ಟು ದೂರವಿದ್ದ ಆ ವಿಹಾರವನ್ನು ಬುದ್ಧ ಮತ್ತವನ ಸಂಘಕ್ಕೆ ನೀಡಿದ್ದ.
ಸ್ವಸ್ತಿ ಕಣ್ಣುಜ್ಜಿಕೊಂಡು ಮುಗುಳ್ನಕ್ಕ. ತನ್ನ ಜೋಮು ಹಿಡಿದ ಕಾಲುಗಳನ್ನು ಮೆಲ್ಲನೆ ಬಿಡಿಸಿದ. ಇಪ್ಪತ್ತೊಂದು ವರ್ಷದ ಆ ತರುಣನಿಗೆ ಮೂರು ದಿನಗಳ ಹಿಂದಷ್ಟೆ ಬುದ್ಧನ ಹಿರಿಯ ಶಿಷ್ಯರಲ್ಲೊಬ್ಬನಾದ ಸಾರಿಪುತ್ತನಿಂದ ದೀಕ್ಷೆಯಾಗಿತ್ತು. ದೀಕ್ಷೆಯ ಸಂದರ್ಭದಲ್ಲಿ ಸ್ವಸ್ತಿಯ ದಪ್ಪನೆ ಕಂದುಗೂದಲನ್ನು ಸಂಪೂರ್ಣ ಸವರಿಹಾಕಲಾಗಿತ್ತು.
**
ಬುದ್ಧನ ಸಂಘದ ಭಾಗವಾಗುವ ಅವಕಾಶ ಪಡೆದ ಸ್ವಸ್ತಿ ಬಹಳ ಸಂತೋಷದಿಂದಿದ್ದ. ಬುದ್ಧನ ಸಂಬಂಧಿಗಳಾಗಿದ್ದ ನಂದ, ದೇವದತ್ತ, ಅನುರುದ್ಧ ಮತ್ತು ಆನಂದರಂತಹ ಹಲವು ಬಿಕ್ಖುಗಳು ರಾಜಮನೆತನಕ್ಕೆ ಸೇರಿದವರಾಗಿದ್ದರು. ಸ್ವಸ್ತಿಗೆ ಇವರ ಪರಿಚಯ ಇನ್ನೂ ಆಗಿರದಿದ್ದರೂ, ಅವನು ಅವರನ್ನು ದೂರದಿಂದಲೇ ಗಮನಿಸಿದ್ದ. ಮಾಸಿದ ಚೀವರಗಳನ್ನು ಧರಿಸಿದ್ದರೂ ಅವರಲ್ಲಿ ರಾಜಗಾಂಭೀರ್ಯ ಎದ್ದುಕಾಣುತ್ತಿತ್ತು.
“ಇಂಥ ರಾಜವಂಶಸ್ಥರ ಗೆಳೆತನ ಬೆಳೆಸಲು ಬಹಳ ಕಾಲ ಬೇಕಾದೀತು,” ಸ್ವಸ್ತಿ ಅಂದುಕೊಂಡ. ಆದರೆ, ಸ್ವತಃ ಬುದ್ಧನೇ ಒಬ್ಬ ರಾಜಪುತ್ರನಾಗಿದ್ದರೂ ಸ್ವಸ್ತಿಗೆ ತಮ್ಮಿಬ್ಬರ ನಡುವೆ ಯಾವುದೇ ಕಂದಕವಿರುವಂತೆ ಅನ್ನಿಸುತ್ತಿರಲಿಲ್ಲ. ಆ ಕಾಲದ ವರ್ಣಾಶ್ರಮ ವ್ಯವಸ್ಥೆಯ ಪ್ರಕಾರ, ಅತ್ಯಂತ ಕೀಳು… ಬಡವರಿಗಿಂತಲೂ ಕೀಳಾದ ಅಸ್ಪೃಶ್ಯ ಜಾತಿಗೆ ಸೇರಿದವನಾಗಿದ್ದ ಸ್ವಸ್ತಿ. ಹತ್ತು ವರ್ಷಕ್ಕೂ ಹೆಚ್ಚು ಕಾಲ ಎಮ್ಮೆ ಕಾಯುವ ಕೆಲಸ ಮಾಡುತ್ತಿದ್ದವನು. ಈಗ, ಎರಡು ವಾರಗಳಿಂದ ಅವನು ಎಲ್ಲ ಜಾತಿಯ ಬಿಕ್ಖುಗಳೊಂದಿಗೆ ವಾಸಿಸುತ್ತಾ ಅಭ್ಯಾಸ ನಡೆಸುತ್ತಿದ್ದ. ಎಲ್ಲರೂ ಅವನೊಂದಿಗೆ ಬಹಳ ಪ್ರೀತಿಯಿಂದ, ಆತ್ಮೀಯವಾಗಿ ಮುಗುಳ್ನಗುತ್ತಾ ಮಾತನಾಡಿಸುತ್ತಿದ್ದರು, ತಲೆಬಾಗಿ ಗೌರವಿಸುತ್ತಿದ್ದರು. ಆದರೆ ಅವನಿಗೇ ಇನ್ನೂ ಸಹಜವಾಗಿ ಬೆರೆಯಲು ಸಾಧ್ಯವಾಗಿರಲಿಲ್ಲ. ಇಲ್ಲಿನ ಪರಿಸರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಹಲವು ವರ್ಷಗಳೇ ಬೇಕಾದೀತು ಅಂದುಕೊಳ್ಳುತ್ತಿದ್ದ.
ಈ ಪ್ರಕ್ರಿಯೆಯಲ್ಲಿ ತನಗೆ ನೆರವಾಗುತ್ತಿದ್ದ ಬುದ್ಧನ ಹದಿನೆಂಟು ವರ್ಷದ ಮಗ ರಾಹುಲನನ್ನು ನೆನಪಿಸಿಕೊಂಡ. ಕೂಡಲೇ ಅಂತರಾಳದಿಂದ ನಗುವಿನ ಸುಳಿ ಎದ್ದು ಅವನ ಮುಖದಲ್ಲಿ ಅರಳಿತು.
ರಾಹುಲ ತನ್ನ ಹತ್ತನೇ ವಯಸ್ಸಿನಿಂದಲೇ ಸಂಘದಲ್ಲಿ ಸಮಣನಾಗಿದ್ದ. ಕೇವಲ ಎರಡೇ ವಾರಗಳಲ್ಲಿ ರಾಹುಲ ಹಾಗೂ ಸ್ವಸ್ತಿ ಆಪ್ತಮಿತ್ರರಾಗಿದ್ದರು. ಧ್ಯಾನದ ಸಮಯದಲ್ಲಿ ಉಸಿರಾಟವನ್ನು ಹೇಗೆ ಗಮನಿಸಬೇಕು ಎಂದು ಸ್ವಸ್ತಿಗೆ ಹೇಳಿಕೊಟ್ಟಿದ್ದೇ ರಾಹುಲ. ಅವನು ಇನ್ನೂ ಬಿಕ್ಖುವಾಗಿರದಿದ್ದರೂ ಬುದ್ಧನ ಬೋಧನೆಗಳನ್ನು ಚೆನ್ನಾಗಿ ಅರಗಿಸಿಕೊಂಡಿದ್ದ. ಸಂಪೂರ್ಣ ದೀಕ್ಷೆ ಪಡೆಯಲು ಅವನು ತನಗೆ ಇಪ್ಪತ್ತು ವರ್ಷ ತುಂಬುವವರೆಗೂ ಕಾಯಬೇಕಿತ್ತು.
ಸ್ವಸ್ತಿ ಎರಡು ವಾರಗಳ ಹಿಂದೆ ನಡೆದಿದ್ದನ್ನು ನೆನಪಿಸಿಕೊಂಡ. ಗಯೆಯ ಸಮೀಪದ ಅವನ ಪುಟ್ಟ ಹಳ್ಳಿ ಉರುವೇಲಕ್ಕೆ ಬಂದಿದ್ದ ಬುದ್ಧ, ಅವನನ್ನು ಬಿಕ್ಖುವಾಗಲು ಆಹ್ವಾನಿಸಿದ್ದ. ಬುದ್ಧ ಮನೆಗೆ ಬಂದ ಹೊತ್ತಿನಲ್ಲಿ ಸ್ವಸ್ತಿ ತನ್ನ ತಮ್ಮ ರೂಪಕನೊಡನೆ ಎಮ್ಮೆ ಕಾಯಲು ಹೋಗಿದ್ದ. ಅವನ ಇಬ್ಬರು ತಂಗಿಯರಾದ ಹದಿನಾರು ವರ್ಷದ ಬಾಲಾ ಮತ್ತು ಹನ್ನೆರಡು ವರ್ಷದ ಭೀಮಾ ಮನೆಯಲ್ಲೇ ಇದ್ದರು. ಬುದ್ಧನನ್ನು ಗುರುತಿಸಿದ ಬಾಲಾ, ಕೂಡಲೇ ಸ್ವಸ್ತಿಯನ್ನು ಕರೆತರಲು ಲಗುಬಗೆಯಿಂದ ಹೊರಟಳು. ಆದರೆ ಬುದ್ಧ, ಅದರ ಅಗತ್ಯವಿಲ್ಲವೆಂದು ಅವಳನ್ನು ತಡೆದು ನಿಲ್ಲಿಸಿದ. ತಾನೇ ರಾಹುಲ ಮತ್ತು ಸಂಘದ ಇತರ ಬಿಕ್ಖುಗಳ ಜೊತೆ ತೆರಳಿ ಹೊಳೆದಂಡೆಯ ಬಳಿ ಅವನನ್ನು ಹುಡುಕುವುದಾಗಿ ಹೇಳಿದ.
ಅವರು ಅಲ್ಲಿಗೆ ತಲುಪುವಾಗ ಇಳಿಹೊತ್ತಾಗಿತ್ತು; ಸ್ವಸ್ತಿ ಮತ್ತು ರೂಪಕ ಇಬ್ಬರೂ ನೇರಂಜರಾ ಹೊಳೆನೀರಿನಲ್ಲಿ ತಮ್ಮ ಎಮ್ಮೆಗಳನ್ನು ಉಜ್ಜಿ ತೊಳೆಯುತ್ತಿದ್ದರು. ಬುದ್ಧನನ್ನು ಕಂಡ ಕೂಡಲೇ ಆ ತರುಣರು ಹೊಳೆ ದಂಡೆಗೆ ಓಡಿಬಂದು, ತಮ್ಮ ಅಂಗೈಗಳನ್ನು ಕಮಲದ ಮೊಗ್ಗಿನಂತೆ ಜೋಡಿಸಿ, ಭಕ್ತಿಯಿಂದ ತಲೆಬಾಗಿದರು.
“ಎಷ್ಟೊಂದು ಬೆಳೆದುಬಿಟ್ಟಿದ್ದೀರಿ,” ಬುದ್ಧ ಮುಗುಳು ನಗುತ್ತಾ ಸ್ವಸ್ತಿ ಮತ್ತು ಅವನ ತಮ್ಮನತ್ತ ಪ್ರೀತಿಯಿಂದ ನೋಡಿದ. ಸ್ವಸ್ತಿಗೆ ಮಾತೇ ಹೊರಡಲಿಲ್ಲ. ಬುದ್ಧನ ಪ್ರಶಾಂತವಾದ ಮುಖ, ಅವನ ಕರುಣೆ ತುಂಬಿದ ನಗು ಮತ್ತು ತೀಕ್ಷ್ಣವಾಗಿ ಹೊಳೆಯುತ್ತಿದ್ದ ಕಣ್ಣುಗಳನ್ನು ಕಂಡು ಅವನ ಕಣ್ಣಾಲಿ ತುಂಬಿ ಬಂತು. ಬುದ್ಧನು ಭತ್ತದ ಗದ್ದೆಯಂತೆ ತೇಪೆಗಳುಳ್ಳ ಕೇಸರಿ ಬಣ್ಣದ ಚೀವರವನ್ನು ಧರಿಸಿದ್ದ. ಹತ್ತು ವರ್ಷಗಳ ಹಿಂದೆ ಇದೇ ಜಾಗದ ಬಳಿ ಸ್ವಸ್ತಿ ಮೊದಲ ಸಲ ಬುದ್ಧನನ್ನು ಭೇಟಿಯಾಗಿದ್ದು. ಆಗ ಅವನು ಹೇಗೆ ಬರಿಗಾಲಿನಲ್ಲಿ ನಡೆಯುತ್ತಿದ್ದನೋ, ಈಗಲೂ ಹಾಗೇ ಬರಿಗಾಲಿನಲ್ಲೇ ನಡೆಯುತ್ತಿದ್ದ. ಹತ್ತು ವರ್ಷಗಳ ಹಿಂದೆ ಅವರಿಬ್ಬರೂ ನೇರಂಜರಾ ಹೊಳೆದಂಡೆಯಿಂದ ಕೇವಲ ಹತ್ತು ನಿಮಿಷಗಳ ನಡಿಗೆಯಷ್ಟು ದೂರದಲ್ಲಿದ್ದ ಬೋಧಿ ವೃಕ್ಷದ ನೆರಳಿನಲ್ಲಿ ಕುಳಿತು ಗಂಟೆಗಟ್ಟಲೆ ಸಮಯ ಕಳೆದಿದ್ದರು.
ಸ್ವಸ್ತಿ ಬುದ್ಧನ ಹಿಂದಿದ್ದ ಇಪ್ಪತ್ತು ಬಿಕ್ಖುಗಳತ್ತ ಕಣ್ಣು ಹಾಯಿಸಿದ. ಅವರೂ ಸಹ ಬರಿಗಾಲಿನಲ್ಲಿದ್ದರು ಮತ್ತು ಅದೇ ಬಣ್ಣದ ತೇಪೆಗಳಿಂದ ತುಂಬಿದ್ದ ಚೀವರಗಳನ್ನು ಧರಿಸಿದ್ದರು. ಇನ್ನೂ ಸೂಕ್ಷ್ಮವಾಗಿ ನೋಡಿದಾಗ, ಬುದ್ಧನ ಚೀವರವು ಇತರರ ಚೀವರಗಳಿಗಿಂತ ಒಂದು ಗೇಣು ಉದ್ದವಾಗಿರುವುದು ಸ್ವಸ್ತಿಯ ಗಮನಕ್ಕೆ ಬಂತು. ಬುದ್ಧನ ಪಕ್ಕದಲ್ಲೇ ನಿಂತಿದ್ದ, ಸ್ವಸ್ತಿಯ ವಯಸ್ಸಿನ ಆಸುಪಾಸಿನ ಸಮಣನೊಬ್ಬ ಅವನನ್ನೇ ದಿಟ್ಟಿಸುತ್ತಾ ಮುಗುಳ್ನಕ್ಕ. ಬುದ್ಧ ಪ್ರೀತಿಯಿಂದ ಸ್ವಸ್ತಿ ಮತ್ತು ರೂಪಕನ ತಲೆಯ ಮೇಲೆ ಕೈಯಿಟ್ಟು, ತಾನು ಬಿಕ್ಖುಗಳೊಡನೆ ರಾಜಗೃಹಕ್ಕೆ ಹಿಂದಿರುಗುತ್ತಿರುವುದಾಗಿಯೂ, ನಡುವೆ ಅವರನ್ನು ಭೇಟಿಯಾಗಲೆಂದೇ ಅವರನ್ನು ಹುಡುಕಿಕೊಂಡು ಬಂದುದಾಗಿಯೂ ತಿಳಿಸಿದ. ಸ್ವಸ್ತಿ ಮತ್ತು ರೂಪಕ ಎಮ್ಮೆಗಳ ಮೈತೊಳೆದು ಮುಗಿಸಿದ ಮೇಲೆ ಎಲ್ಲರೂ ಒಟ್ಟಿಗೇ ಅವರ ಮನೆಗೆ ಹೋಗಬಹುದೆಂದೂ ಅಲ್ಲಿಯವರೆಗೆ ತಾನು ಸಂತೋಷದಿಂದ ಕಾಯುವೆನೆಂದೂ ಹೇಳಿದ.
ಬುದ್ಧನ ಪಕ್ಕ ನಿಂತು ಸ್ವಸ್ತಿಯೆಡೆ ಸವಿಯಾದ ಮುಗುಳ್ನಗೆ ಬೀರಿದ್ದ ತರುಣ ಸಮಣ ಬೇರಾರೂ ಅಲ್ಲ, ಸಿದ್ಧಾರ್ಥ ಗೌತಮನ ಮಗ ರಾಹುಲ. ಬುದ್ಧ ಅವನನ್ನು ಸ್ವಸ್ತಿ ಮತ್ತು ರೂಪಕನಿಗೆ ಪರಿಚಯಿಸಿದ. ರಾಹುಲ ಸ್ವಸ್ತಿಗಿಂತ ಮೂರು ವರ್ಷ ಚಿಕ್ಕವನಾಗಿದ್ದರೂ, ಇಬ್ಬರೂ ಒಂದೇ ಎತ್ತರವಿದ್ದರು. ಅವನಿನ್ನೂ ಸಮಣನಾಗಿದ್ದರೂ ಅವನ ಉಡುಗೆ ಹಿರಿಯ ಬಿಕ್ಖುಗಳಂತೆಯೇ ಇತ್ತು. ತನ್ನ ಭಿಕ್ಷಾಪಾತ್ರೆಯನ್ನು ರೂಪಕನ ಕೈಗಿತ್ತ ರಾಹುಲ, ತನ್ನ ಹೊಸ ಗೆಳೆಯರ ಹೆಗಲ ಮೇಲೆ ಪ್ರೀತಿಯಿಂದ ಕೈಹಾಕಿಕೊಂಡು, ಅವರಿಬ್ಬರ ನಡುವೆ ನಡೆದ. ಬುದ್ಧನಿಂದ ಸ್ವಸ್ತಿ ಮತ್ತು ಅವನ ಕುಟುಂಬದ ಬಗ್ಗೆ ಸಾಕಷ್ಟು ವಿಷಯಗಳನ್ನು ಕೇಳಿದ್ದ ಅವನಿಗೆ, ಅವರು ಮೊದಲೇ ಪರಿಚಯವಿದ್ದಂತೆ ಅನ್ನಿಸಿತ್ತು. ಆ ಅಣ್ಣ ತಮ್ಮಂದಿರಿಬ್ಬರೂ ರಾಹುಲನ ಪ್ರೀತಿಯ ಬೆಚ್ಚನೆಯ ಅನುಭೂತಿಯಲ್ಲಿ ಮಿಂದೆದ್ದರು.
ಸ್ವಸ್ತಿಯ ಮನೆಗೆ ತಲುಪಿದೊಡನೆಯೇ, ಬುದ್ಧ ಅವನಿಗೆ ಬಿಕ್ಖು ಸಂಘಕ್ಕೆ ಸೇರಿ ಧಮ್ಮವನ್ನು ಕಲಿಯುವಂತೆ ಆಹ್ವಾನಿಸಿದ. ಹತ್ತು ವರ್ಷದ ಹಿಂದೆ ಬುದ್ಧನ ಮೊದಲ ಭೇಟಿಯ ಸಮಯದಲ್ಲಿ ಇನ್ನೂ ಬಾಲಕನಾಗಿದ್ದ ಸ್ವಸ್ತಿ, ತಾನೂ ಧಮ್ಮವನ್ನು ಅಭ್ಯಾಸ ಮಾಡಬೇಕೆಂಬ ಆಸೆ ತೋಡಿಕೊಂಡಿದ್ದ, ಬುದ್ಧನೂ ಅವನನ್ನು ತನ್ನ ಶಿಷ್ಯನಾಗಿ ಸ್ವೀಕರಿಸುವೆನೆಂದು ಭರವಸೆ ನೀಡಿದ್ದ. ಈಗ ಸ್ವಸ್ತಿಗೆ ಇಪ್ಪತ್ತೊಂದು ವರ್ಷವಾಗಿತ್ತು. ಬುದ್ಧ ತಾನು ಕೊಟ್ಟಿದ್ದ ಮಾತು ಮರೆತಿರಲಿಲ್ಲ. ಹಾಗೆಂದೇ ಅವನ ಮನೆಗೆ ಬಂದಿದ್ದು, ಸಂಘಕ್ಕೆ ಸೇರಲು ಆಹ್ವಾನ ನೀಡಿದ್ದು.
(ಮುಂದುವರಿಯುವುದು…)

