ಒಲವಿನ ಕಸುವು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.10

ಒಬ್ಬರನ್ನು ಪ್ರೀತಿಸಲು ಸಾಧ್ಯವಾದರೆ ಅದರ ಮೂಲಕ ಎಲ್ಲರನ್ನೂ ಪ್ರೀತಿಸಲು ಪ್ರಯತ್ನಿಸಬಹುದು. ಪ್ರೀತಿಸುವ, ಅರ್ಥಮಾಡಿಕೊಳ್ಳುವ ಕಸುವು ನಿಮ್ಮಲ್ಲಿದ್ದರೆ ನೀವು ಕಾಯುವ ಅಗತ್ಯವೇ ಇಲ್ಲ. ಈಗಲೇ ಪ್ರೀತಿ, ಅರಿವುಗಳ ಮೂಲಕ ನಮ್ಮ ಚಿಂತೆ, ಭಯಗಳನ್ನು ನೀಗಿಕೊಂಡು, ಬದುಕಿನ ಬೆರಗನ್ನು ಅನುಭವಿಸಬಹುದು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.10: ಭಾವ-ಸಂಬಂಧ  ಒಲವಿನ ಕಸುವು

ನಮಗೆ ಇರುವ ಪ್ರೀತಿಯ ಹಂಬಲ ಎಂದೂ ತಣಿಯುವುದೇ ಇಲ್ಲ ಎಂದು ಅನಿಸುತ್ತಿರುತ್ತದೆ. ಒಂಟಿತನದ ಭಯ ಎಲ್ಲರಲ್ಲೂ ಯಾವಾಗಲೂ ಇದ್ದೇ ಇರುತ್ತದೆ. ನಮ್ಮೊಳಗೇ ಇರುವ ಆ ಭಯವನ್ನೂ ಹಂಬಲವನ್ನೂ ನಾವು ಗುರುತಿಸಬೇಕು. ಭಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಅಭ್ಯಾಸವಾಗಬೇಕು. ʻಅರ್ಥಮಾಡಿಕೊಂಡೆʼ ಎಂದು ಇನ್ನೊಂದು ಜೀವಕ್ಕೆ ಅರಿವಾಗಿಸುವ ಕೆಲಸವೇ ಪ್ರೀತಿಯ ಜೀವಾಳ. ನಮ್ಮನ್ನು ಯಾರೂ ಅರ್ಥಮಾಡಿಕೊಳ್ಳದಿದ್ದರೆ ಒದ್ದಾಡಿಹೋಗುತ್ತೇವೆ. ನಮ್ಮನ್ನು ಅರ್ಥಮಾಡಿಕೊಳ್ಳಲಾಗದವರು ನಮ್ಮನ್ನು ಪ್ರೀತಿಸಲೂ ಆರರು. ಅರ್ಥವಾಗದಿದ್ದರೆ ಪ್ರೀತಿಯೂ ಸಾಧ್ಯವಿಲ್ಲ. ನಮ್ಮನ್ನು ಅರ್ಥಮಾಡಿಕೊಳ್ಳುವ, ಪ್ರೀತಿಯನ್ನು ನೀಡುವ ಜೀವವನ್ನು ಹುಡುಕುತ್ತಲೇ ಇರುತ್ತೇವೆ.

ನಮ್ಮನ್ನು ಅರ್ಥಮಾಡಿಕೊಳ್ಳುವವರು, ನಮ್ಮನ್ನು ಪ್ರೀತಿಸುವವರು ನಮ್ಮಿಂದ ದೂರದಲ್ಲಿ ಎಲ್ಲೋ ಇದ್ದಾರೆ ಅಂದುಕೊಳ್ಳಿ. ಹಾಗೆ ನಮ್ಮಿಂದ ದೂರದಲ್ಲಿರುವವರನ್ನು ಅರ್ಥಮಾಡಿಕೊಳ್ಳುವ, ಅವರಿಗೆ ಪ್ರೀತಿ ಕೊಡಬಲ್ಲ ಶಕ್ತಿ ನಮಗಿದೆಯೇ ಎಂದು ಕೇಳಿಕೊಳ್ಳಬೇಕು. ನಮ್ಮೊಳಗೆ ಆ ಶಕ್ತಿ ಇರದಿದ್ದರೆ ನಮ್ಮನ್ನು ಅರ್ಥಮಾಡಿಕೊಳ್ಳುವ, ಪ್ರೀತಿಸುವ ಜೀವವೂ ಸಿಗಲಾರದು.  ಅಂದರೆ ನಮ್ಮನ್ನು ಅರ್ಥಮಾಡಿಕೊಳ್ಳುವವರು ಬೇಕು-ಹಾಗಾಬೇಕಾದರೆ ನಾವು ಬೇರೆಯವರನ್ನು ಅರ್ಥಮಾಡಿಕೊಳ್ಳಬೇಕು. ಇನ್ನೊಬ್ಬರು ನಮ್ಮನ್ನು ಪ್ರೀತಿಸಬೇಕು-ಅಂದರೆ ನಾವು ಅವರನ್ನು ಪ್ರೀತಿಸಬೇಕು.

ಬುದ್ಧ ಬೋಧನೆಯು ಪ್ರೀತಿ ಮತ್ತು ಅರಿವಿನ ಅಂಥ ಶಕ್ತಿಯನ್ನು ನಮ್ಮೊಳಗೆ ಮೂಡಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ನಮ್ಮೊಳಗೆ ಆ ಶಕ್ತಿ ಹುಟ್ಟಿದರೆ ಪ್ರೀತಿಯು ಬೇಕೆಂಬ ನಮ್ಮ ಹಂಬಲ ತಣಿಯುತ್ತದೆ. ನಮ್ಮೊಡನೆ ಈಗ ಇರುವವರನ್ನು ಪ್ರೀತಿಸುವ ಅರ್ಥಮಾಡಿಕೊಳ್ಳುತ್ತೇವೆ. ನಮ್ಮೊಳಗೆ ಸಂತೋಷವಿರುವಾಗ ನಮ್ಮೊಡನೆ ಇರುವವರನ್ನೂ ಸಂತೋಷಗೊಳಿಸುತ್ತೇವೆ. ಸಂತೋಷವಿರುವಾಗ ಅದರಿಂದ  ನಮಗೆ ಪೋಷಣೆ, ಸ್ವಾಸ್ಥ್ಯ, ಸಂತೋಷ ದೊರೆಯುತ್ತವೆ.

ಅಂದರೆ, ʻಪ್ರೀತಿಯನ್ನು ಪಡೆಯುವುದು ಹೇಗೆ? ನಮ್ಮನ್ನು ಅರ್ಥಮಾಡಿಕೊಳ್ಳುವವರು  ಯಾರು?ʼ ಅನ್ನುವುದು ಪ್ರಶ್ನೆಯಲ್ಲ, ʻನಮ್ಮನ್ನು ನಾವು ತಿಳಿಯಬಲ್ಲವೇ, ಪ್ರೀತಿಸಬಲ್ಲೆವೇ?ʼ ಅನ್ನುವುದು ನಿಜವಾದ ಪ್ರಶ್ನೆ. ನಮ್ಮನ್ನು ನಾವು ತಿಳಿದರೆ ವಂಡರ್‌ಫುಲ್‌ ಅನಿಸುತ್ತದೆ, ನಮ್ಮ ಸುತ್ತಲೂ ಇರುವವರು ಕೂಡ ಸಂತೋಷವಾಗಿರುತ್ತಾರೆ. ಅದು ಬುದ್ಧನ ಪ್ರೀತಿ. ನಿಜವಾದ ಪ್ರೀತಿ ಇರುವುದೂ ಹಾಗೇ.

ಒಬ್ಬರನ್ನು ಪ್ರೀತಿಸಲು ಸಾಧ್ಯವಾದರೆ ಅದರ ಮೂಲಕ ಎಲ್ಲರನ್ನೂ ಪ್ರೀತಿಸಲು ಪ್ರಯತ್ನಿಸಬಹುದು. ಪ್ರೀತಿಸುವ, ಅರ್ಥಮಾಡಿಕೊಳ್ಳುವ ಕಸುವು ನಿಮ್ಮಲ್ಲಿದ್ದರೆ ನೀವು ಕಾಯುವ ಅಗತ್ಯವೇ ಇಲ್ಲ. ಈಗಲೇ ಪ್ರೀತಿ, ಅರಿವುಗಳ ಮೂಲಕ ನಮ್ಮ ಚಿಂತೆ, ಭಯಗಳನ್ನು ನೀಗಿಕೊಂಡು, ಬದುಕಿನ ಬೆರಗನ್ನು ಅನುಭವಿಸಬಹುದು.

*

ಒಲವನ್ನು ಕುರಿತು ಅಕ್ಕಮಹಾದೇವಿಯವರ ಈ ವಚನ ನೆನಪಿಗೆ ಬಂದಿತು

ತುಂಬಿದುದು ತುಳುಕದು ನೋಡಾ
ನಂಬಿದುದು ಸಂದೇಹಿಸದು ನೋಡಾ
ಒಲಿದುದು ಓಸರಿಸದು ನೋಡಾ
ನೆರೆಯರಿದುದು ಮರೆಯದು ನೋಡಾ
ಚೆನ್ನಮಲ್ಲಿಕಾರ್ಜುನಯ್ಯಾ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.