ಮಹಾನತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿಯೇ ತಪ್ಪಿದೆ…

ನಾವು ಅಸಾಧಾರಣ ಸಾಧನೆ ಮಾಡಿದ ಕೆಲವರನ್ನು ಮಾತ್ರ ನಿರಂತರವಾಗಿ ಹೊಗಳುತ್ತಾ ಬಂದಿರುವುದರಿಂದ, ಸಾಮಾನ್ಯ ವ್ಯಕ್ತಿಯಾಗಿರುವುದೇ ನಾಚಿಕೆಯ ವಿಷಯ ಎನ್ನುವ ಭಾವನೆ ನಮ್ಮಲ್ಲಿ ಮೂಡುತ್ತದೆ! । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನಾವು ಮಹಾನತೆಯನ್ನು (Greatness) ಅರ್ಥಮಾಡಿಕೊಳ್ಳುವ ರೀತಿಯಲ್ಲೇ ತಪ್ಪು ಮಾಡುತ್ತೇವೆ. ನಾವು ಸೇನಾನಾಯಕರಿಗೆ ಪ್ರತಿಮೆಗಳು ಕಟ್ಟುತ್ತೇವೆ, ಕೋಟ್ಯಾಧಿಪತಿಗಳ ಬಗ್ಗೆ ದೊಡ್ಡ ದೊಡ್ಡ ಸುದ್ದಿಗಳನ್ನು ಬರೆಯುತ್ತೇವೆ. ಅಪಾರ ಯಶಸ್ಸು ಗಳಿಸಿದ ಕೆಲವೇ ಕೆಲವು ಜನರ ಮೇಲೆಯೇ ನಮ್ಮ ಗಮನ ಕೇಂದ್ರೀಕೃತವಾಗಿರುತ್ತದೆ. ಆದರೆ ಈ ಜಗತ್ತನ್ನು ನಿಜವಾಗಿ ಮುನ್ನಡೆಸುವ ಶಕ್ತಿ ಅವರಲ್ಲಿಲ್ಲ. ಲೇಖಕಿ George Eliot ತಮ್ಮ Middlemarch ಕೃತಿಯಲ್ಲಿ ಹೇಳಿದಂತೆ, “ಈ ಜಗತ್ತಿನ ಒಳ್ಳೆಯತನವು, ಇತಿಹಾಸದಲ್ಲಿ ದಾಖಲಾಗದ ಅನೇಕ ಸಣ್ಣಸಣ್ಣ ಕಾರ್ಯಗಳ ಮೇಲೆ ಅವಲಂಬಿತವಾಗಿದೆ.” ಈ ಜಗತ್ತನ್ನು ನಿಜವಾಗಿ ತಲೆ ಎತ್ತಿ ನಿಲ್ಲುವಂತೆ ಮಾಡುವವರು, ಯಾರಿಗೂ ಪರಿಚಯವಿಲ್ಲದ, ಇತಿಹಾಸದ ಪುಟಗಳಲ್ಲಿ ಹೆಸರು ಕಾಣಿಸದ ಸಾಮಾನ್ಯ ಜನರು.

ನಾವು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಜೀವನದ ಮೌಲ್ಯವನ್ನು ಅವನು ಎಷ್ಟು ಪ್ರಸಿದ್ಧನಾಗಿದ್ದಾನೆ ಎನ್ನುವುದರ ಆಧಾರದ ಮೇಲೆ ಅಳೆಯುತ್ತೇವೆ, ಅವನಿಗೆ ಎಷ್ಟು ಅನುಯಾಯಿಗಳಿದ್ದಾರೆ (followers), ಅವನ ಸಂಬಳ ಎಷ್ಟು, ಅವನ ಹುದ್ದೆ ಎಷ್ಟು ದೊಡ್ಡದು, ಅಥವಾ ಅವನು ಎಷ್ಟು ಖ್ಯಾತನಾಗಿದ್ದಾನೆ ಎನ್ನುವುದರ ಮೂಲಕ. ನಾವು ಅಸಾಧಾರಣ ಸಾಧನೆ ಮಾಡಿದ ಕೆಲವರನ್ನು ಮಾತ್ರ ನಿರಂತರವಾಗಿ ಹೊಗಳುತ್ತಾ ಬಂದಿರುವುದರಿಂದ, ಸಾಮಾನ್ಯ ವ್ಯಕ್ತಿಯಾಗಿರುವುದೇ ನಾಚಿಕೆಯ ವಿಷಯ ಎನ್ನುವ ಭಾವನೆ ನಮ್ಮಲ್ಲಿ ಮೂಡುತ್ತದೆ. ಆದರೆ ವಾಸ್ತವದಲ್ಲಿ, ಸಾಮಾನ್ಯ ವ್ಯಕ್ತಿಯಾಗಿರುವುದು ನಾಚಿಕೆಯ ವಿಷಯವಲ್ಲ. ಈ ಸಮಾಜವನ್ನು, ಕುಟುಂಬಗಳನ್ನು ಮತ್ತು ಸಮುದಾಯಗಳನ್ನು ಪ್ರತಿದಿನ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಲಕ್ಷಾಂತರ ಸಾಮಾನ್ಯ ಜನರೇ ಉಳಿಸಿಕೊಂಡಿದ್ದಾರೆ. ಅವರ ಹೆಸರು ಇತಿಹಾಸದಲ್ಲಿ ದಾಖಲಾಗದಿದ್ದರೂ, ಅವರ ಕೊಡುಗೆ ಇಲ್ಲದೆ ಈ ಜಗತ್ತು ಸುಗಮವಾಗಿ ನಡೆಯುವುದೇ ಸಾಧ್ಯವಿಲ್ಲ.

ಎಲಿಯಟ್ ಅವರ ಮಾತಿನ ಅರ್ಥವೇನೆಂದರೆ, ಈ ಜಗತ್ತಿನ ಒಳ್ಳೆಯತನವು ಯಾರೂ ಹೊಗಳದ, ಯಾರ ಕಣ್ಣಿಗೂ ಕಾಣದ, ಪ್ರತಿದಿನದ ಸಾಮಾನ್ಯ ಜನರ ಸಜ್ಜನಿಕೆ ಮತ್ತು ದಯೆಯ ಮೇಲೆ ನಿಂತಿದೆ. ಅದು, ಒಬ್ಬ ಮಗುವಿನ ಜೀವನವನ್ನೇ ಬದಲಾಯಿಸುವ ಶಿಕ್ಷಕರಾಗಿರಬಹುದು, ಅದು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾ, ನಿದ್ರಿಸುತ್ತಿರುವ ರೋಗಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಒಬ್ಬ ನರ್ಸ್ ಆಗಿರಬಹುದು. ಅದು, ಪಕ್ಕದ ಮನೆಯ ಕಿಟಕಿಯ ಪರದೆಗಳು ಇಂದು ತೆರೆದಿಲ್ಲವೆಂಬುದನ್ನು ಗಮನಿಸಿ, “ಎಲ್ಲವೂ ಚೆನ್ನಾಗಿದೆಯೇ?” ಎಂದು ವಿಚಾರಿಸುವ ನೆರೆಹೊರೆಯವರಾಗಿರಬಹುದು. ಅಥವಾ, ರಾತ್ರಿ ಎರಡು ಗಂಟೆಯಲ್ಲಿಯೂ ಸ್ನೇಹಿತನ ಫೋನ್‌ಗೆ ಸ್ಪಂದಿಸಿ, ಅವನಿಗೆ ಧೈರ್ಯ ತುಂಬುವ ಸ್ನೇಹಿತರಾಗಿರಬಹುದು. ಇಂತಹ ಕೆಲಸಗಳ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗುವುದಿಲ್ಲ. ಇವು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗುವುದಿಲ್ಲ. ಆದರೂ, ಈ ಜಗತ್ತಿನಲ್ಲಿ ಅತ್ಯಂತ ಮಹತ್ವದ್ದಾಗಿರುವುದು ಇಂತಹ ಮೌನ ಅಂತಃಕರಣ, ಕರುಣೆ ಮತ್ತು ಮಾನವೀಯತೆಯ ಕೆಲಸಗಳೇ. ಇವುಗಳೇ ನಮ್ಮ ಸಮಾಜವನ್ನು ಉಳಿಸಿಕೊಳ್ಳುವ ನಿಜವಾದ ಶಕ್ತಿಯಾಗಿವೆ.

ಎಲಿಯಟ್ ಅವರ ಸಂದೇಶವೇನೆಂದರೆ, ಪ್ರತಿದಿನದ ಸರಳ ಸಜ್ಜನಿಕೆ ಮತ್ತು ಒಳ್ಳೆಯತನದ ಬಗ್ಗೆ ನಾವು ಹೆಮ್ಮೆಪಡಬೇಕು. ಪ್ರತಿದಿನ ನಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುವುದನ್ನು, ನಮ್ಮ ಕೈಲಾದಷ್ಟು ಉತ್ತಮವಾಗಿ ಕೆಲಸ ಮಾಡುವುದನ್ನು, ಹಾಗೂ ಸಮಾಜ, ಸಮುದಾಯ ಮತ್ತು ಈ ಜಗತ್ತನ್ನು ಗಟ್ಟಿಗೊಳಿಸುವ ಸಾವಿರಾರು ಸಣ್ಣಸಣ್ಣ ಅಂತಃಕರಣದ ಕಾರ್ಯಗಳನ್ನು ನಾವು ಸಂಭ್ರಮಿಸಬೇಕು. ಹೌದು, ನಿಸ್ಸಂಶಯವಾಗಿ ಈ ಜಗತ್ತಿಗೆ ಧೈರ್ಯಶಾಲಿಗಳು, ಸಾಹಸಿಗಳು, ಬುದ್ಧಿವಂತರು ಮತ್ತು ಅಸಾಧಾರಣ ಪ್ರತಿಭಾವಂತರ ಅಗತ್ಯವಿದೆ. ಆದರೆ, ಈ ಜಗತ್ತು ಸುಗಮವಾಗಿ ಸಾಗುವುದಕ್ಕೆ ಮೂಲ ಆಧಾರವೆಂದರೆ ಕೇವಲ ಒಬ್ಬ ಒಳ್ಳೆಯ ವ್ಯಕ್ತಿಯಾಗಿರುವುದು. ಒಳ್ಳೆಯತನ, ಕರುಣೆ, ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ಬದುಕುವ ಸಾಮಾನ್ಯ ಜನರೇ ಈ ಜಗತ್ತನ್ನು ನಿಜವಾಗಿ ಉಳಿಸಿಕೊಂಡಿದ್ದಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.