ಅರಿಯುವುದು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.11

ಇನ್ನೊಬ್ಬರನ್ನು ಸಂತೋಷಗೊಳಿಸಬೇಕು, ಅದಕ್ಕಾಗಿ ಪ್ರೀತಿಯಿಂದ ಏನೋ ಮಾಡುತಿದ್ದೇನೆ  ಅಂದುಕೊಳ್ಳುತ್ತೀರಿ. ಆದರೆ ನೀವು ಮಾಡಿದ ಕೆಲಸದಿಂದ ಇನ್ನೊಬ್ಬರಿಗೆ ನೋವಾಗಬಹುದು. ನಿಮ್ಮ ಮಗ, ಮಗಳು, ಸಂಗಾತಿ, ಜೊತೆಯ ಕೆಲಸಗಾರರು, ಯಾರನ್ನೇ ಆಗಲಿ ನೀವು ಸಾಕಷ್ಟು ಅರಿಯದಿದ್ದರೆ ನೀವು ಅವರ ಬಗ್ಗೆ ಪ್ರೀತಿಯಿಂದಲೇ ಮಾಡಿದ ಕೆಲಸ ಅವರಿಗೆ ನೋವು ತರಬಲ್ಲುದು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.11: ಭಾವ-ಸಂಬಂಧ । ಅರಿಯುವುದು

ಕೆಲವೊಮ್ಮೆ ನಾವು ಪ್ರೀತಿಯಿಂದ ವರ್ತಿಸುತಿದ್ದೇವೆ ಅಂದುಕೊಳ್ಳುತ್ತೇವೆ. ನಮ್ಮ ನಡವಳಿಕೆಗೆ ಆಳವಾದ ಅರಿವಿನ ಬುನಾದಿ ಇರದಿದ್ದರೆ ಅದರಿಂದ ಸಂಕಟ, ವೇದನೆಗಳೇ ಉಂಟಾಗುತ್ತವೆ.

ಇನ್ನೊಬ್ಬರನ್ನು ಸಂತೋಷಗೊಳಿಸಬೇಕು, ಅದಕ್ಕಾಗಿ ಪ್ರೀತಿಯಿಂದ ಏನೋ ಮಾಡುತಿದ್ದೇನೆ  ಅಂದುಕೊಳ್ಳುತ್ತೀರಿ. ಆದರೆ ನೀವು ಮಾಡಿದ ಕೆಲಸದಿಂದ ಇನ್ನೊಬ್ಬರಿಗೆ ನೋವಾಗಬಹುದು. ನಿಮ್ಮ ಮಗ, ಮಗಳು, ಸಂಗಾತಿ, ಜೊತೆಯ ಕೆಲಸಗಾರರು, ಯಾರನ್ನೇ ಆಗಲಿ ನೀವು ಸಾಕಷ್ಟು ಅರಿಯದಿದ್ದರೆ ನೀವು ಅವರ ಬಗ್ಗೆ ಪ್ರೀತಿಯಿಂದಲೇ ಮಾಡಿದ ಕೆಲಸ ಅವರಿಗೆ ನೋವು ತರಬಲ್ಲುದು.

ನೀವು ಕರುಣೆಯ ಉಪಕರಣವಾಗಬೇಕಾದರೆ ನಿಮಗೆ ಅರಿವಿನ ಕಣ್ಣು, ವಿವೇಕದ ನೋಟ ಬೇಕು. ಇನ್ನೊಬ್ಬರ ಸಂಕಟ, ಕಷ್ಟ, ಅಂತರಾಳದ ಆಸೆಗಳನ್ನು ಅರಿತರೆ ಮಾತ್ರ ನೀವು ಅವರನ್ನು ಪ್ರೀತಿಸಬಲ್ಲಿರಿ. ಆದ್ದರಿಂದಲೇ ಮತ್ತೆ ಮತ್ತೆ ಕೇಳಿ ತಿಳಿಯುವುದು ಮುಖ್ಯ. “ಮಗೂ, ನಿನ್ನನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೇನಾ? ನೀನು ನನಗೆ ಸರಿಯಾಗಿ ಗೊತ್ತಿಲ್ಲದೆ ಏನೋ ಮಾಡಿ ನಿನಗೆ ನೋವು ಕೊಟ್ಟೆನಾ?” ಎಂದು ತಂದೆ ಮಗುವನ್ನು ಕೇಳಲು ಆಗಬೇಕು. “ನಾನು ನಿನ್ನ ಅರ್ಥಮಾಡಿಕೊಂಡಿದ್ದೇನಾ? ನಿನ್ನ ಜೊತೆಯಲ್ಲಿ ಪ್ರೀತಿಯಿಂದ ಇದ್ದೇನಾ?” ಎಂದು ತಾಯಿ ಮಗುವನ್ನು ಕೇಳಲು ಆಗಬೇಕು.

ಅದು ಪ್ರೀತಿಯ ಭಾಷೆ. ನಿಮ್ಮ ಪ್ರಶ್ನೆ ಸಾಚಾ ಪ್ರಶ್ನೆಯಾಗಿದ್ದರೆ ನಿಮ್ಮ ಮಗ, ನಿಮ್ಮ ಮಗಳು ತಮ್ಮ ಸಂಕಟ, ವೇದನೆಗಳನ್ನು ಹೇಳಿಕೊಳ್ಳುತ್ತಾರೆ. ಅವರ ಸಂಕಟವನ್ನು ಹೆಚ್ಚಿಸುವ ಕೆಲಸವನ್ನು ನೀವು ಮಾಡದೆ ಇರಲು ಸಾಧ್ಯವಾಗುತ್ತದೆ. ಅವರ ಒಳ್ಳೆಯದಕ್ಕೆ, ಅವರ ಸುಖ ಸಂತೋಷಕ್ಕೆ ನೀವು ಏನೆಲ್ಲ ಮಾಡುತಿದ್ದೇನೆ ಅಂದುಕೊಳ್ಳುತ್ತೀರೋ ಅದೆಲ್ಲ ಅವರಿಗೆ ನೋವು ಕೊಡುತ್ತಿರಬಹುದು ಅನ್ನುವುದು ತಿಳಿಯುತ್ತದೆ.

ಗಹನವಾದ ಅರಿವು-ಇದೇ ನಿಜವಾದ ಪ್ರೀತಿಯ ತಿರುಳು. ಬೋಧಿಸತ್ವನ ಕೈಗಳು ಕ್ರಿಯೆಯ ಸಂಕೇತ. ಆದರೆ ಆ ಕ್ರಿಯೆಗಳು ಅರಿವಿನ ಕಣ್ಣಿನ ನೋಟ ತೋರುವ ದಾರಿಯಲ್ಲಿ ಸಾಗಬೇಕು.

*

ಅರಿವನ್ನು ಕುರಿತು ಅರಿವಿನ ಮಾರಿತಂದೆಯ ಮೂರು ವಚನಗಳನ್ನು ನೋಡಿ:

೧. ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ

ಹೆಂಟೆ ಶಿಲೆ ಹೋರಿದಲ್ಲಿವುಂಟೆ
ಅರಿದವನಲ್ಲಿ ಒಡಗೂಡುವ ಸುಖವಲ್ಲದೆ
ಬರಿಯನಲ್ಲಿ 

ಅರಿವು ಹೀನನಲ್ಲಿ

ಅರಿವಿನ ಕುರುಹ ಮರೆದಾಡುವನಲ್ಲಿ
ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ
ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು
ಅವ ಕೊಟ್ಟರಿವಿನ ಕುರುಹ ಮರೆಯಬೇಡ.
ಆ ಮರೆಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ ಅದೆ  

೨ಹೃದಯದಲ್ಲಿ ತೋರುವ ಅರಿವು ತನ್ಮಯವಾಗಿ
ಇದಿರಿಟ್ಟ ಭಾವಕ್ಕೆ ನೆಲೆಗೊಂಡು

ಭಾವ ತುಂಬಿ
ಕಂಗಳ ಮಧ್ಯದಲ್ಲಿ ಹಿಂಗದೆ ನಿಶ್ಚೈಸಿ
ಅನಿಮಿಷನಂಗದಂತೆ

ಕೂರ್ಮನ ಸ್ನೇಹದಂತೆ

ಅಂಬು ಅಂಬುಜದಂತೆ
ಉಭಯ ಸಂಗದಲ್ಲಿ ನಿಸ್ಸಂಗನ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.

೩ ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟಡೆ ಒದೆಯುವುದಲ್ಲದೆ ಉಣಲೀಸುವುದೆ
ಅರಿವು ನಷ್ಟವಾದವ ಕ್ರೀಯ ಬಲ್ಲನೆ
ಕ್ರೀಯೆಂಬುದೆ ಹಸು 

ಅರಿವೆಂಬುದೆ ಹಾಲು

ಬಯಕೆಯೆಂಬುದೆ ಕರು
ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.