ರಾಹುಲ ಮುಗುಳ್ನಕ್ಕ. “ನಾಚಿಕೆ ಯಾಕೆ? ನನಗೂ ಮೊದಮೊದಲು ಹೀಗೇ ಆಗ್ತಿತ್ತು. ಅಮ್ಮನ ನೆನಪು, ಅಜ್ಜ ಅಜ್ಜಿಯ ನೆನಪು, ಅತ್ತೆಯ ನೆನಪೆಲ್ಲ ನುಗ್ಗಿ ನುಗ್ಗಿ ಬರ್ತಿದ್ವು. ಅವರೂ ನನ್ನನ್ನು ತುಂಬಾ ನೆನಪಿಸಿಕೊಳ್ತಾರೆಂದು ನನಗೆ ಗೊತ್ತಿತ್ತು. ಎಷ್ಟೋ ಸಲ ರಾತ್ರಿ ನಾನೊಬ್ಬನೇ ಮುಖ ಮುಚ್ಚಿಕೊಂಡು ಅಳುತ್ತ ಕುಳಿತುಬಿಡ್ತಿದ್ದೆ. ಕ್ರಮೇಣ ಎಲ್ಲವೂ ಸರಿಯಾಯ್ತು” ಅನ್ನುತ್ತಾ ಸ್ವಸ್ತಿಯನ್ನು ಮೇಲಕ್ಕೆಬ್ಬಿಸಲು ಕೈ ಮುಂಚಾಚಿದ. ಸ್ನೇಹದಿಂದ ಅವನನ್ನು ಅಪ್ಪಿಕೊಂಡ। ತಿ ನ್ಹಾತ್ ಹಾನ್, Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
ರಾಹುಲನ ಸ್ನೇಹ । ಎಮ್ಮೆ ಕಾಯುವುದು #2.3
ರಾಹುಲ ಹೊರಡಲು ಎದ್ದು ನಿಂತಾಗ ಸ್ವಸ್ತಿ ಅವನ ಚೀವರವನ್ನು ಮೆಲ್ಲನೆ ಎಳೆಯುತ್ತಾ, “ನೀನು ಇನ್ನೂ ಸ್ವಲ್ಪ ಹೊತ್ತು ಜೊತೆಗಿರ್ತೀಯಾ? ನನಗೆ ನಿನ್ನ ಸಹಾಯ ಬೇಕು. ಬೆಳಿಗ್ಗೆ ಬುದ್ಧರು ಒಬ್ಬ ಬಿಕ್ಖು ಅನುಸರಿಸಬೇಕಾದ ಹನ್ನೊಂದು ಅಂಶಗಳ ಬಗ್ಗೆ ಹೇಳಿದ್ರಲ್ಲ, ನನಗೆ ಅದ್ಯಾವುದೂ ನೆನಪಾಗ್ತಿಲ್ಲ. ಅವನ್ನು ಮತ್ತೆ ಹೇಳ್ತೀಯಾ?” ಅಂದ.
“ನನಗೆ ಒಂಬತ್ತು ಮಾತ್ರ ನೆನಪಿವೆ. ಇರಲಿ, ಚಿಂತಿಸಬೇಡ. ನಾಳೆ ಆನಂದರ ಬಳಿ ಹೋಗ್ತೀವಲ್ಲ, ಅವರನ್ನ ಕೇಳೋಣ”
“ಆನಂದರು ತುಂಬಾ ಹಿರಿಯರಲ್ವಾ? ಅವರಿಗೆ ಎಲ್ಲಾ ನೆನಪಿರುತ್ತೆ ಅನ್ತೀಯಾ?”
“ಇಲ್ಲದೆ ಏನು? ಹನ್ನೊಂದಲ್ಲ, ಅದು ನೂರಾ ಹನ್ನೊಂದಾಗಿದ್ದರೂ ಅವರಿಗೆ ನೆನಪಿರುತ್ತಾ ಇತ್ತು. ನಿನಗಿನ್ನೂಅವರ ಬಗ್ಗೆ ಗೊತ್ತಿಲ್ಲ. ಅವರಷ್ಟು ನೆನಪಿನ ಶಕ್ತಿ ಇಲ್ಲಿ ಯಾರಿಗೂ ಇಲ್ಲ. ಬುದ್ಧರ ಪ್ರತಿಯೊಂದು ಮಾತನ್ನೂ, ಒಂದಕ್ಷರವೂ ಬಿಡದೆ ಅವರು ಹಾಹಾಗೇ ಮತ್ತೆ ಹೇಳಬಲ್ಲರು. ಬುದ್ಧರ ಶಿಷ್ಯರಲ್ಲೇ ಅತ್ಯಂತ ಜ್ಞಾನಿ ಅವರು. ಯಾರಿಗಾದರೂ ಬುದ್ಧರ ಯಾವುದಾದರೂ ಉಪದೇಶ ಮರೆತುಹೋದ್ರೆ ಮೊದಲು ಕೇಳೋದು ಆನಂದರನ್ನೇ. ಕೆಲವು ಸಲ ಸಂಘದಲ್ಲಿ ಅಧ್ಯಯನ ಸಭೆ ನಡೆಯುತ್ತೆ. ಆಗ ಆನಂದರು ಬುದ್ಧರ ಮುಖ್ಯ ಬೋಧನೆಗಳನ್ನು ವಿವರಿಸ್ತಾರೆ”
“ಹಾಗಾದ್ರೆ ನಾವು ಅದೃಷ್ಟವಂತರೇ ಸರಿ. ನಾಳೆವರೆಗೂ ಕಾದು ಅವರ ಬಳಿ ನಮ್ಮ ಅನುಮಾನಗಳನ್ನು ಕೇಳೋಣ. ಅದಕ್ಕಿಂತ ಮುಂಚೆ, ನೀನೊಂದು ಮಾತು ಹೇಳು. ನಡೆದಾಡ್ತಾ ಧ್ಯಾನ ಮಾಡ್ತೀವಲ್ಲ, ಆಗ ನೀನು ನಿನ್ನ ಮನಸ್ಸನ್ನು ಹೇಗೆ ಶಾಂತವಾಗಿರಿಸಿಕೊಳ್ತೀಯ?”
“ನಡೆದಾಡ್ತಾ ಧ್ಯಾನ ಮಾಡುವಾಗ ನಿನ್ನ ಮನಸ್ಸಿನಲ್ಲಿ ಬೇರೆ ವಿಚಾರಗಳು ಬಂದವು ಅನ್ನು. ಬಹುಶಃ ನಿನ್ನ ಕುಟುಂಬದವರ ನೆನಪಾಗಿರ್ಬೇಕು?”
ಸ್ವಸ್ತಿ ತನ್ನ ಸ್ನೇಹಿತನ ಕೈ ಹಿಡಿದುಕೊಂಡು, “ನಿನಗೆ ಹೇಗೆ ಗೊತ್ತಾಯ್ತು? ನನಗೆ ಹೆಜ್ಜೆ ಹೆಜ್ಜೆಗೂ ಅವರ ನೆನಪಾಗ್ತಲೇ ಇತ್ತು. ಎಷ್ಟು ಪ್ರಯತ್ನಪಟ್ರೂ ಅದರಿಂದ ಬಿಡಿಸಿಕೊಳ್ಳೋಕೆ ಆಗ್ಲಿಲ್ಲ. ನನಗಂತೂ ನನ್ನ ಬಗ್ಗೆ ಬೇಸರವಾಗ್ತಿದೆ. ನಾನೆಲ್ಲೋ ಧಮ್ಮದ ದಾರಿಯಲ್ಲಿ ನಡೆಯೋ ಅರ್ಹತೆ ನನಗಿಲ್ಲ ಅನಿಸುತ್ತೆ. ಬುದ್ಧರ ಮುಂದಿರಲಿ, ನಿನ್ನ ಮುಂದೆ ನಿಲ್ಲೋಕೂ ನನಗೆ ನಾಚಿಕೆಯಾಗ್ತಿದೆ”
ರಾಹುಲ ಮುಗುಳ್ನಕ್ಕ. “ನಾಚಿಕೆ ಯಾಕೆ? ನನಗೂ ಮೊದಮೊದಲು ಹೀಗೇ ಆಗ್ತಿತ್ತು. ಅಮ್ಮನ ನೆನಪು, ಅಜ್ಜ ಅಜ್ಜಿಯ ನೆನಪು, ಅತ್ತೆಯ ನೆನಪೆಲ್ಲ ನುಗ್ಗಿ ನುಗ್ಗಿ ಬರ್ತಿದ್ವು. ಅವರೂ ನನ್ನನ್ನು ತುಂಬಾ ನೆನಪಿಸಿಕೊಳ್ತಾರೆಂದು ನನಗೆ ಗೊತ್ತಿತ್ತು. ಎಷ್ಟೋ ಸಲ ರಾತ್ರಿ ನಾನೊಬ್ಬನೇ ಮುಖ ಮುಚ್ಚಿಕೊಂಡು ಅಳುತ್ತ ಕುಳಿತುಬಿಡ್ತಿದ್ದೆ. ಕ್ರಮೇಣ ಎಲ್ಲವೂ ಸರಿಯಾಯ್ತು” ಅನ್ನುತ್ತಾ ಸ್ವಸ್ತಿಯನ್ನು ಮೇಲಕ್ಕೆಬ್ಬಿಸಲು ಕೈ ಮುಂಚಾಚಿದ. ಸ್ನೇಹದಿಂದ ಅವನನ್ನು ಅಪ್ಪಿಕೊಂಡ.
“ನಿನ್ನ ತಮ್ಮ ತಂಗಿಯರು ತುಂಬಾ ಮುದ್ದಾಗಿದಾರೆ, ಅವರ ನೆನಪಾಗೋದು ಸಹಜ. ಸ್ವಲ್ಪ ದಿನವಷ್ಟೆ, ನೀನು ನಿನ್ನ ಹೊಸ ಜೀವನಕ್ಕೆ ಒಗ್ಗಿಕೊಳ್ತಾ ಹೋಗ್ತೀಯ. ನಾವು ಮಾಡಬೇಕಿರೋ ಕೆಲಸ ತುಂಬಾ ಇದೆ. ಅಭ್ಯಾಸ ಮಾಡಬೇಕಿದೆ, ಅಧ್ಯಯನ ಮಾಡಬೇಕಿದೆ. ನಾನೂ ನನ್ನ ಮನೆಯವರ ಬಗ್ಗೆ ಯಾವತ್ತಾದ್ರೂ ಹೇಳ್ತೀನಿ. ಸರಿನಾ?”
ಸ್ವಸ್ತಿ ತನ್ನೆರಡೂ ಕೈಗಳಿಂದ ರಾಹುಲನ ಕೈ ಹಿಡಿದುಕೊಂಡು ತಲೆಯಾಡಿಸಿದ. ನಂತರ ಅವರಿಬ್ಬರೂ ತಮ್ಮ ತಮ್ಮ ದಾರಿಯಲ್ಲಿ ಹೊರಳಿಕೊಂಡರು. ರಾಹುಲ ತನ್ನ ಚೀವರವನ್ನು ತೊಳೆಯಲು ಹೋದರೆ, ಸ್ವಸ್ತಿ ನೆಲದ ಮೇಲೆ ಬಿದ್ದಿದ್ದ ಬಿದಿರಿನ ಎಲೆಗಳನ್ನು ಗುಡಿಸಲು ಪೊರಕೆಯನ್ನು ಹುಡುಕುತ್ತಾ ಹೋದ.

