ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
1838ರಲ್ಲಿ, ತತ್ವಜ್ಞಾನಿ ರಾಲ್ಫ್ ವಾಲ್ಡೋ ಎಮರ್ಸನ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಒಂದು ಭಾಷಣ ಎಷ್ಟೊಂದು ವಿವಾದಾತ್ಮಕವಾಗಿತ್ತೆಂದರೆ, ಅದರ ಪರಿಣಾಮವಾಗಿ ಅವರನ್ನು ಅಲ್ಲಿಂದ ಬಹುತೇಕ ಬಹಿಷ್ಕರಿಸಲಾಯಿತು. ಜನರು ಆ ಭಾಷಣವನ್ನು ಆಘಾತಕಾರಿ ಎಂದು ಕರೆದರು. ಕೆಲವರು ಅವರನ್ನು ಧರ್ಮದ್ರೋಹಿ (ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ಮಾತನಾಡುವವನು) ಎಂದೂ ಆರೋಪಿಸಿದರು.
ಎಮರ್ಸನ್ ಅವರ ವಾದ ಏನಾಗಿತ್ತೆಂದರೆ, ಸಾಂಪ್ರದಾಯಿಕ ಕ್ರೈಸ್ತ ಧರ್ಮವು, ಧರ್ಮದ ನಿಜವಾದ ಅರ್ಥವನ್ನು ತಪ್ಪಾಗಿ ಅರ್ಥಮಾಡಿಕೊಂಡಿದೆ. ಅವರ ಅಭಿಪ್ರಾಯದಲ್ಲಿ, ಕ್ರೈಸ್ತರು ಯೇಸುವಿನ ವ್ಯಕ್ತಿತ್ವ ಮತ್ತು ಅವರು ಮಾಡಿದ ಪವಾಡಗಳ ಮೇಲೆಯೇ ಅತಿಯಾದ ಗಮನ ಕೇಂದ್ರೀಕರಿಸಿದ್ದಾರೆ. ದೇವರನ್ನು ಅರ್ಥಮಾಡಿಕೊಳ್ಳುವ ಏಕೈಕ ಮಾರ್ಗವೆಂದರೆ ಕ್ರೈಸ್ತ ನಂಬಿಕೆ ಮತ್ತು ಕ್ರೈಸ್ತ ಆರಾಧನೆ ಎಂದು ಜನ ಭಾವಿಸಿದ್ದಾರೆ. ಆದರೆ, ಎಮರ್ಸನ್ ಇದಕ್ಕೆ ಬದಲಾಗಿ “ಟ್ರಾನ್ಸೆಂಡೆಂಟಲಿಸಂ” (Transcendentalism) ಎನ್ನುವ ಫಿಲಾಸೊಫಿಯನ್ನು ಪ್ರಸ್ತಾಪಿಸಿದರು. ಈ ಫಿಲಾಸೊಫಿಯು ಮುಖ್ಯವಾಗಿ ಎರಡು ಮೂಲಭೂತ ನಂಬಿಕೆಗಳ ಮೇಲೆ ಆಧರಿತವಾಗಿದೆ.
ಮೊದಲನೆಯ ನಂಬಿಕೆ ಏನೆಂದರೆ, ನಮ್ಮೆಲ್ಲರೊಳಗೂ ಒಂದು ದೈವಿಕ ಕಿಡಿ ಅಡಗಿದೆ. ಮತ್ತು ಪ್ರತಿಯೊಬ್ಬರಲ್ಲೂ ಆತ್ಮದ ಅಂಶವಿದೆ. ನಾವು ನಮ್ಮ ಅಂತರಂಗದ ಧ್ವನಿಯನ್ನು ಗಮನವಿಟ್ಟು ಆಲಿಸಿದರೆ, ದೇವರನ್ನು, ಅಥವಾ ಈ ವಿಶ್ವವನ್ನು ವ್ಯಾಪಿಸಿರುವ ಸಾರ್ವತ್ರಿಕ ಚೈತನ್ಯವನ್ನು, ನೇರವಾಗಿ ಅನುಭವಿಸಬಹುದು.
ಅದಕ್ಕಾಗಿ ನಿಮಗೆ ಪಾದ್ರಿಯ ಅಗತ್ಯವಿಲ್ಲ; ಬೈಬಲ್‌ನ ಅಗತ್ಯವೂ ಇಲ್ಲ; ಚರ್ಚ್‌ಗೆ ಹೋಗುವುದೂ ಅನಿವಾರ್ಯವಲ್ಲ. ದೇವರ ಅನುಭವವನ್ನು ಪ್ರತಿಯೊಬ್ಬರೂ ತಮ್ಮೊಳಗೇ ಕಂಡುಕೊಳ್ಳಬಹುದು.
ಎರಡನೆಯದಾಗಿ, ಟ್ರಾನ್ಸೆಂಡೆಂಟಲಿಸಂ ಹೇಳುವುದೇನೆಂದರೆ, ನಮ್ಮೊಳಗಿನ ಈ ದೈವಿಕ ಜ್ಯೋತಿಯನ್ನು ಅನುಭವಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದು, ನಾವು ಪ್ರಕೃತಿಯೊಂದಿಗೆ ಬೆರೆಯುವುದು. ನಾವು ಪರ್ವತಗಳ ನಡುವೆ, ಕಾಡಿನ ನಿಶ್ಶಬ್ದತೆಯಲ್ಲಿ ಅಥವಾ ಅಲೆಗಳು ಅಪ್ಪಳಿಸುವ ಸಮುದ್ರ ತೀರದಲ್ಲಿ ಹೆಜ್ಜೆ ಇಟ್ಟಾಗ, ನಮ್ಮ ಮತ್ತು ದೈವತ್ವದ ನಡುವಿನ ಅಂತರವು ತೆಳುವಾಗುತ್ತದೆ. ಆಗ ದೇವರ ಉಪಸ್ಥಿತಿಯನ್ನು ನಾವು ಇನ್ನಷ್ಟು ಸ್ಪಷ್ಟವಾಗಿ ಅನುಭವಿಸಬಹುದು. ಬೆಳಗಿನ ತಂಗಾಳಿಯಲ್ಲಿ, ಮರಗಳ ಎಲೆಗಳು ಸದ್ದುಮಾಡುವ ಸಂದೀತಗಲ್ಲಿ, ಅಥವಾ ಹಕ್ಕಿಯ ಮಧುರವಾದ ಕೂಗಿನಲ್ಲಿ ಸಾಧ್ಯವಾಗುವ ದೇವರ ಅನುಭವವು, ವೇದಿಕೆಯ ಮೇಲಿಂದ ಬೋಧಕನು ಮಾಡುವ ಏಕತಾನದ ಉಪದೇಶಕ್ಕಿಂತ ಹೆಚ್ಚು ಸರಳ ಮತ್ತು ಮಹತ್ವದ್ದು. ಆದ್ದರಿಂದ, ನೀವು ನಿಜವಾಗಿಯೂ ದೈವತ್ವವನ್ನು ಅನುಭವಿಸಲು ಬಯಸಿದರೆ, ನಿಮಗೆ ಸುವಾರ್ತೆಗಳ (Gospels) ಅವಲಂಬನೆಯ ಅಗತ್ಯವಿಲ್ಲ. ನೀವು ಮಾಡಬೇಕಾದದ್ದು ಒಂದೇ, ಪ್ರಕೃತಿಯ ಮಡಿಲಿಗೆ ಹೊರಟು ಹೋಗುವುದು.

