ಬುದ್ಧನೊಡನೆ ಮೊದಲ ಭೇಟಿ । ಹಳೆಯ ಹಾದಿ, ಬಿಳಿಯ ಮೋಡ ಅಧ್ಯಾಯ #3.1

ಒಂದು ಮಧ್ಯಾಹ್ನ, ಎಮ್ಮೆಗಳ ಮೈತೊಳೆದು ಒಂದಷ್ಟು ಹುಲ್ಲನ್ನು ಕೊಯ್ದಿಟ್ಟ ಮೇಲೆ ಸ್ವಸ್ತಿಗೆ ಸ್ವಲ್ಪ ಹೊತ್ತು ಒಬ್ಬನೇ ಇರಬೇಕು ಅನಿಸಿತು.  ಎಮ್ಮೆಗಳನ್ನು ಕಾಡಿನ ಅಂಚಿನಲ್ಲಿ ಮೇಯಲು ಬಿಟ್ಟು, ಒರಗಲು ನೆರಳೂಡುವ ಮರದ ಬೊಡ್ಡೆ ಹುಡುಕುತ್ತ ಹೊರಟ, ಇದ್ದಕ್ಕಿದ್ದಂತೆ ಒಂದೆಡೆ ನಿಂತ. ಅವನು ನಿಂತಲ್ಲಿಂದ ಇಪ್ಪತ್ತು ಅಡಿಗಳಷ್ಟು ದೂರದಲ್ಲಿ ಅರಳಿ  ಮರದ ಮರದ ಕೆಳಗೆ ತರುಣನೊಬ್ಬ ಮೌನವಾಗಿ ಕುಳಿತಿದ್ದುದು ಕಂಡಿತು. ಸ್ವಸ್ತಿ ಅಚ್ಚರಿಯಿಂದ ಕಣ್ಣರಳಿಸಿ ನೋಡಿದ. ಯಾರೂ ಅಷ್ಟು ಸುಂದರವಾದ ಭಂಗಿಯಲ್ಲಿ ಕುಳಿತಿದ್ದನ್ನು ಅವನು ಆವರೆಗೆ ಕಂಡಿರಲಿಲ್ಲ… । ತಿ ನ್ಹಾತ್ ಹಾನ್Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ

ಬುದ್ಧನೊಡನೆ ಮೊದಲ ಭೇಟಿ । ಒಂದು ಕಟ್ಟು ದರ್ಭೆ ಹುಲ್ಲು  #3.1

ಬಿದಿರು ಮೆಳೆಯ ಕೆಳಗೆ ಕುಳಿತಿದ್ದ ಸ್ವಸ್ತಿ ನಿದ್ರೆಗೆ ಜಾರುವ ಮುನ್ನ ತಾನು ಮೊದಲ ಸಲ ಬುದ್ಧನನ್ನು ಭೇಟಿಯಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡ. ಆಗ ಅವನಿಗಿನ್ನೂ ಹನ್ನೊಂದು ವರ್ಷ ವಯಸ್ಸು. ಆಗಿನ್ನೂ ತನ್ನ ತಾಯಿಯನ್ನು ಕಳೆದುಕೊಂಡಿದ್ದ ಅವನ ಹೆಗಲ ಮೇಲೆ ಮೂವರು ಒಡಹುಟ್ಟಿದವರ ಜವಾಬ್ದಾರಿ ಬಿದ್ದಿತ್ತು. ಅವನ ಕೊನೆಯ ತಂಗಿ ಇನ್ನೂ ಹಾಲು ಕುಡಿಯುವ ಕೈಗೂಸು. ಅವರನ್ನೆಲ್ಲ ನೋಡಿಕೊಳ್ಳಲೆಂದೇ ಸ್ವಸ್ತಿ ರಾಮ್ ಬೋಲನ ಬಳಿ ಎಮ್ಮೆ ಕಾಯುವ ಕೆಲಸಕ್ಕೆ ಸೇರಿಕೊಂಡಿದ್ದ. ಅವನ ಬಳಿ ನಾಲ್ಕು ದೊಡ್ಡ ಎಮ್ಮೆಗಳು ಮತ್ತು ಒಂದು ಕರು ಇದ್ದವು. ಎಮ್ಮೆ ಕಾಯುತ್ತ ದುಡಿಮೆಗಿಳಿದ ಸ್ವಸ್ತಿ, ತನ್ನ ತಂಗಿಗೆ ಹಾಲು ತಂದುಕೊಡುವಷ್ಟು ಸಂಪಾದನೆ ಮಾಡತೊಡಗಿದ. ಅವನು ಎಮ್ಮೆಗಳನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ. ತಾನು ಈ ಕೆಲಸವನ್ನು ಉಳಿಸಿಕೊಳ್ಳದಿದ್ದರೆ ತನ್ನ ಒಡಹುಟ್ಟಿದವರು ಹಸಿವಿನಿಂದ ಸಾಯುತ್ತಾರೆ ಅನ್ನೋದು ಅವನಿಗೆ ತಿಳಿದಿತ್ತು. ತಂದೆಯ ಮರಣದ ನಂತರ ಅವರ ಗುಡಿಸಲಿನ ಚಾವಣಿ ಹೊಸ ಹುಲ್ಲು ಕಂಡಿದ್ದೇ ಇಲ್ಲ. ಮಳೆ ಬಂದಾಗೆಲ್ಲಾ ತೂತುಗಳಿಂದ ಸುರಿಯುವ ನೀರು ನೆಲದ ಮೇಲೆ ಬೀಳದಂತೆ ಮಡಿಕೆಗಳನ್ನು ಇಡಬೇಕಿತ್ತು. ರೂಪಕನಿಗೆ ಅದೇ ಒಂದು ಕೆಲಸವಾಗಿಬಿಟ್ಟಿತ್ತು. ತಂಗಿ ಬಾಲಾಗೆ ಇನ್ನೂ ಆರು ವರ್ಷ. ಆಗಲೇ ಅವಳು ಅಡುಗೆ ಮಾಡುವುದನ್ನು, ತನ್ನ ಪುಟ್ಟ ತಂಗಿಯನ್ನು ನೋಡಿಕೊಳ್ಳುವುದನ್ನು, ಕಾಡಿಗೆ ಹೋಗಿ ಕಟ್ಟಿಗೆ ಆಯ್ದು ತರುವುದನ್ನೆಲ್ಲ ಕಲಿತಿದ್ದಳು. ಅಷ್ಟು ಚಿಕ್ಕ ಹುಡುಗಿ ತನ್ನ ಒಡಹುಟ್ಟಿದವರಿಗಾಗಿ ಹಿಟ್ಟು ನಾದಿ ರೊಟ್ಟಿ ಲಟ್ಟಿಸುತ್ತಿದ್ದಳು. ಅವರು ಬಾಕಿ ಅಡುಗೆಗೆ ಬೇಕಾದ ಪದಾರ್ಥಗಳನ್ನು ಕೊಳ್ಳುತ್ತಿದ್ದುದು ಅಪರೂಪವಾಗಿತ್ತು.

ಸ್ವಸ್ತಿ ಎಮ್ಮೆಗಳನ್ನು ರಾಮ್ ಬೋಲನ ಮನೆಯ ಕೊಟ್ಟಿಗೆಯಲ್ಲಿ ಕಟ್ಟುವಾಗೆಲ್ಲ ಅಡುಗೆಮನೆಯಿಂದ ಬರುತ್ತಿದ್ದ ಮಸಾಲೆಯ ಘಮ ಅವನ ಬಾಯಲ್ಲಿ ನೀರೂರಿಸುತ್ತಿತ್ತು. ತಂದೆ ತೀರಿಕೊಂಡ ಮೇಲೆ ಮಾಂಸದ ಸಾರಿನಲ್ಲಿ ರೊಟ್ಟಿ ಅದ್ದಿಕೊಂಡು ತಿನ್ನುವುದು ಅವರಿಗೆ ಕೈಗೆಟುಕದ ಭೋಗವಾಗಿತ್ತು. ಅವರೆಲ್ಲ ಚಿಂದಿ ಬಟ್ಟೆಯನ್ನೆ ತೊಡುತ್ತಿದ್ದುದು. ಸ್ವಸ್ತಿಯ ಬಳಿಯಂತೂ ಕೇವಲ ಒಂದೇ ಒಂದು ಧೋತರವಿತ್ತು, ಅದೂ ಜಾಳುಜಾಳಾಗಿತ್ತು. ಚಳಿಯಾದಾಗ ಅವನು ಹಳೆಯದೊಂದು ಕಂದು ಬಟ್ಟೆಯನ್ನು ತನ್ನ ಭುಜದ ಸುತ್ತ ಸುತ್ತಿಕೊಳ್ಳುತ್ತಿದ್ದ. ಅದರ ಬಣ್ಣ ಮಾಸಿದ್ದರೂ ಸ್ವಸ್ತಿಯ ಪಾಲಿಗೆ ಬಹಳ ಅಮೂಲ್ಯವಾಗಿತ್ತು.

ಸ್ವಸ್ತಿ ಎಮ್ಮೆಗಳನ್ನು ಮೇಯಿಸಲು ಒಳ್ಳೆಯ ಜಾಗ ಹುಡುಕಬೇಕಾಗಿತ್ತು. ಅವುಗಳ ಹೊಟ್ಟೆ ತುಂಬಿಸದೆ ಕೊಟ್ಟಿಗೆಗೆ ಮರಳಿಸಿದರೆ ಅವನು ರಾಮ್ ಬೋಲನ ಕೈಲಿ ಹೊಡೆತ ತಿನ್ನಬೇಕಾಗುತ್ತಿತ್ತು. ಸಂಜೆ ಹಿಂದಿರುಗುವಾಗ ಎಮ್ಮೆಗಳಿಗೆ ರಾತ್ರಿಯಿಡೀ ತಿನ್ನಲು ಸಾಕಾಗುವಷ್ಟು ಹುಲ್ಲಿನ ಹೊರೆಯನ್ನೂ ಹೊತ್ತು ತರುತ್ತಿದ್ದ ಸ್ವಸ್ತಿ. ರಾಮ್ ಬೋಲ ಅವನಿಗೆ ಮೂರು ತಿಂಗಳಿಗೊಮ್ಮೆ ಅಕ್ಕಿಯನ್ನೂ, ಹಿಟ್ಟು ಮತ್ತು ಉಪ್ಪನ್ನೂ ಕೂಲಿಯಾಗಿ ಕೊಡುತ್ತಿದ್ದ. ಸ್ವಸ್ತಿ ಆಗೀಗ ಹೊಳೆಯಲ್ಲಿ ಮೀನು ಹಿಡಿದು ತಂದು ಭೀಮಾಳ ಕೈಲಿಡುತ್ತಿದ್ದ, ಅವಳು ಅದನ್ನು ಸುಟ್ಟು ಅಡುಗೆ ಮಾಡುತ್ತಿದ್ದಳು.

ಒಂದು ಮಧ್ಯಾಹ್ನ, ಎಮ್ಮೆಗಳ ಮೈತೊಳೆದು ಒಂದಷ್ಟು ಹುಲ್ಲನ್ನು ಕೊಯ್ದಿಟ್ಟ ಮೇಲೆ ಸ್ವಸ್ತಿಗೆ ಸ್ವಲ್ಪ ಹೊತ್ತು ಒಬ್ಬನೇ ಇರಬೇಕು ಅನಿಸಿತು.  ಎಮ್ಮೆಗಳನ್ನು ಕಾಡಿನ ಅಂಚಿನಲ್ಲಿ ಮೇಯಲು ಬಿಟ್ಟು, ಒರಗಲು ನೆರಳೂಡುವ ಮರದ ಬೊಡ್ಡೆ ಹುಡುಕುತ್ತ ಹೊರಟ, ಇದ್ದಕ್ಕಿದ್ದಂತೆ ಒಂದೆಡೆ ನಿಂತ. ಅವನು ನಿಂತಲ್ಲಿಂದ ಇಪ್ಪತ್ತು ಅಡಿಗಳಷ್ಟು ದೂರದಲ್ಲಿ ಅರಳಿ  ಮರದ ಮರದ ಕೆಳಗೆ ತರುಣನೊಬ್ಬ ಮೌನವಾಗಿ ಕುಳಿತಿದ್ದುದು ಕಂಡಿತು. ಸ್ವಸ್ತಿ ಅಚ್ಚರಿಯಿಂದ ಕಣ್ಣರಳಿಸಿ ನೋಡಿದ. ಯಾರೂ ಅಷ್ಟು ಸುಂದರವಾದ ಭಂಗಿಯಲ್ಲಿ ಕುಳಿತಿದ್ದನ್ನು ಅವನು ಆವರೆಗೆ ಕಂಡಿರಲಿಲ್ಲ. ಆ ತರುಣನ ಬೆನ್ನು ನೇರವಾಗಿತ್ತು, ಅವನ ಪಾದಗಳು ಅವನ ತೊಡೆಯ ಮೇಲೆ ಹಗುರವಾಗಿ ವಿರಮಿಸಿದ್ದವು. ಅವನು ಸ್ಥಿರವಾಗಿ ಕುಳಿತಿದ್ದ. ಕಣ್ ರೆಪ್ಪೆಗಳು ಅರ್ಧ ಮುಚ್ಚಿದಂತಿದ್ದವು. ಅವನು ಕೈಗಳನ್ನು ಮಡಚಿ ಮಂಡಿಗೆ ತಾಕುವಂತೆ ತೊಡೆಯುದ್ದಕ್ಕೂ ಇರಿಸಿಕೊಂಡಿದ್ದ, ಒಂದು ಭುಜ ಮುಚ್ಚುವಂತೆ ಮಾಸಿದ ಹಳದಿ ಬಣ್ಣದ ಚೀವರ ತೊಟ್ಟುಕೊಂಡಿದ್ದ. ಅವನ ದೇಹದಿಂದ ಶಾಂತಿಯ ಕಾಂತಿ ಹೊಮ್ಮುತ್ತಿತ್ತು, ಗಂಭೀರವಾದ ಪ್ರಭಾವಳಿ ಸೃಷ್ಟಿಯಾಗಿತ್ತು.

ಅವನನ್ನು ಕಂಡೊಡನೆಯೇ ಸ್ವಸ್ತಿಯ ಮೈಯಲ್ಲಿ ಹೊಸ ಚೈತನ್ಯ ಹರಿದಂತೆ ಅದ್ಭುತ ಅನುಭವವಾಯಿತು. ಸಹಾನುಭೂತಿಯಿಂದ ಅವನ ಹೃದಯ ಕಂಪಿಸಿತು. ತಾನು ಇದೇ ಮೊದಲ ಸಲ ನೋಡುತ್ತಿರುವ ವ್ಯಕ್ತಿಯ ಬಗ್ಗೆ ಇಂಥಾ ಭಾವನೆ ಮೂಡಲು ಹೇಗೆ ಸಾಧ್ಯವೆಂದು ಸ್ವಸ್ತಿಗೆ ತಳಮಳವಾಯಿತು. ಆದರೂ ಅಲ್ಲಿಂದ ಕದಲದೆ, ಅವನ ಮೇಲೆ ದಿಟ್ಟಿ ನೆಟ್ಟು ಅಲ್ಲಿಯೇ ನಿಂತುಕೊಂಡ.

ಆ ತರುಣ ಕಣ್ಣು ತೆರೆದು, ಪದ್ಮಾಸನ ಹಾಕಿದ್ದ ತನ್ನ ಕಾಲುಗಳನ್ನು ಬಿಡಿಸಿಕೊಳ್ಳುತ್ತಾ, ಜೋಮು ಹಿಡಿದಿದ್ದ ಮೊಣಕಾಲು ಮತ್ತು ಪಾದಗಳನ್ನು ಮೆಲ್ಲನೆ ಉಜ್ಜಿಕೊಳ್ಳತೊಡಗಿದ. ಆಮೇಲೆ ಮೆಲ್ಲನೆ ಎದ್ದು ನಿಂತು ನಡೆಯಲಾರಂಭಿಸಿದ. ಸ್ವಸ್ತಿ ಅವನು ಸಾಗುತ್ತಿದ್ದ ದಿಕ್ಕಿಗೆ ವಿರುದ್ಧವಾಗಿ ನಿಂತಿದ್ದರಿಂದ ಅವನ ಕಣ್ಣಿಗೆ ಬೀಳಲಿಲ್ಲ. ಕಾಡು ನೆಲದ ಮೇಲೆ ಆ ತರುಣ ನಿಧಾನವಾಗಿ, ಧೇನಿಸುವಂತೆ ಹೆಜ್ಜೆ ಹಾಕತೊಡಗಿದ. ಹಾಗೆ ಏಳೆಂಟು ಹೆಜ್ಜೆ ನಡೆದು ಹಿಂತಿರುಗಿ ನೋಡಿದಾಗಲೇ ಅವನಿಗೆ ಸ್ವಸ್ತಿ ಕಂಡಿದ್ದು.  

ಆ ತರುಣ ತನ್ನನ್ನೇ ದಿಟ್ಟಿಸುತ್ತಿದ್ದ ಹುಡುಗನನ್ನು ನೋಡಿ ಮುಗುಳ್ನಕ್ಕ. ಆವರೆಗೆ ಯಾರೂ ಸ್ವಸ್ತಿಯನ್ನು ಅಷ್ಟು ಆಪ್ತವಾಗಿ ಕಂಡು ನಗು ಬೀರಿರಲಿಲ್ಲ. ಅಗೋಚರ ಶಕ್ತಿಯ ಸೆಳೆತಕ್ಕೆ ಒಳಗಾದಂತೆ ಸ್ವಸ್ತಿ ತರುಣನತ್ತ ಓಡಿದ. ಇನ್ನೇನು ಅವನನ್ನು ಸಮೀಪಿಸಬೇಕು, ಮೇಲ್ಜಾತಿಯವರ ಬಳಿ ಸುಳಿಯುವ ಹಕ್ಕು ತನಗಿಲ್ಲವೆಂಬುದು ನೆನಪಾಗಿ ಗಕ್ಕನೆ ನಿಂತುಬಿಟ್ಟ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.