ನೀಷೆ ಒಮ್ಮೆ ಹೇಳಿದಂತೆ, ನಿಜವಾದ ಶಕ್ತಿಯನ್ನು ನೀವು ಯಾವುದನ್ನಾದರೂ ಎಷ್ಟು ಸಂಪೂರ್ಣವಾಗಿ ನಾಶಮಾಡಬಲ್ಲಿರಿ, ಯಾರನ್ನು ನೋಯಿಸಬಲ್ಲಿರಿ, ಅವಮಾನಿಸಬಲ್ಲಿರಿ ಅಥವಾ ಕೆಳಕ್ಕೆ ಎಳೆಯಬಲ್ಲಿರಿ ಎಂಬುದರಿಂದ ಅಳೆಯಲಾಗುವುದಿಲ್ಲ. ನಿಮ್ಮ ಪ್ರಯತ್ನವನ್ನೇ ಅಪಹಾಸ್ಯ ಮಾಡುವ ಟೀಕಾಕಾರರು ಮತ್ತು ಸಿನಿಕರನ್ನು ಕಡೆಗಣಿಸಿ ಮುಂದೆ ನಡೆಯುವುದು, ಅಥವಾ ಅವರ ಮಾತುಗಳನ್ನು ನೋಡಿ ನಕ್ಕುಬಿಡುವುದು, ಅದೇ ನಿಜವಾದ ಶಕ್ತಿ । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ನೀವು ಪ್ರಯತ್ನಿಸಿದ್ದಕ್ಕಾಗಿ ಕೆಲವರು ನಿಮ್ಮನ್ನು ಅಪಹಾಸ್ಯ ಮಾಡಬಹುದು. “ನೀನು ಅದನ್ನು ಮಾಡಬಾರದಿತ್ತು” ಅಥವಾ “ನಾನು ಮೊದಲೇ ಹೇಳಿದ್ದೆ ಅಲ್ಲವೇ?” ಎಂದೆಲ್ಲ ಅವರ ವರಾತ. ತಾವು ಏನನ್ನೂ ಪ್ರಯತ್ನಿಸದೆ ಕಟ್ಟಿಕೊಂಡಿರುವ ತಮ್ಮ ಆರಾಮದಾಯಕವಾದ ಶೂನ್ಯತೆಯ ಮನೆಯಲ್ಲಿ (house of nothing) ಕುಳಿತು, ಅವರು ನಿಮ್ಮ ಪ್ರಯತ್ನದ ಅವಶೇಷಗಳನ್ನು ನೋಡಿ ನಗುತ್ತಾರೆ.
ಆದರೆ ತತ್ತ್ವಶಾಸ್ತ್ರವು ಬಹುಕಾಲದಿಂದ ಹೇಳುತ್ತಾ ಬಂದಿರುವಂತೆ, ನಿಜವಾದ ದುಃಖಿಗಳು ಇಂಥವರೇ. ಏಕೆಂದರೆ ಇವರು ಎಂದಿಗೂ ನಿಜವಾಗಿ ಬದುಕುವುದೇ ಇಲ್ಲ.
ನೀಷೆ ಒಮ್ಮೆ ಹೇಳಿದಂತೆ, ನಿಜವಾದ ಶಕ್ತಿಯನ್ನು ನೀವು ಯಾವುದನ್ನಾದರೂ ಎಷ್ಟು ಸಂಪೂರ್ಣವಾಗಿ ನಾಶಮಾಡಬಲ್ಲಿರಿ, ಯಾರನ್ನು ನೋಯಿಸಬಲ್ಲಿರಿ, ಅವಮಾನಿಸಬಲ್ಲಿರಿ ಅಥವಾ ಕೆಳಕ್ಕೆ ಎಳೆಯಬಲ್ಲಿರಿ ಎಂಬುದರಿಂದ ಅಳೆಯಲಾಗುವುದಿಲ್ಲ. ನಿಮ್ಮ ಪ್ರಯತ್ನವನ್ನೇ ಅಪಹಾಸ್ಯ ಮಾಡುವ ಟೀಕಾಕಾರರು ಮತ್ತು ಸಿನಿಕರನ್ನು ಕಡೆಗಣಿಸಿ ಮುಂದೆ ನಡೆಯುವುದು, ಅಥವಾ ಅವರ ಮಾತುಗಳನ್ನು ನೋಡಿ ನಕ್ಕುಬಿಡುವುದು, ಅದೇ ನಿಜವಾದ ಶಕ್ತಿ.
ಗಿಲ್ಗಮೇಶ್ ಮಹಾಕಾವ್ಯದಷ್ಟು ಪ್ರಾಚೀನ ಕಾಲದಿಂದಲೂ, ಕಟ್ಟುವುದಕ್ಕಿಂತ ಕೆಡವುವುದು ಸುಲಭ ಎಂದು ಹೇಳಲಾಗುತ್ತಿದೆ. ಒಂದು ಗೋಡೆಯನ್ನು ನಿರ್ದಯವಾಗಿ ಕೆಡವಲು ಕೇವಲ ಒಂದು ಕ್ಷಣ ಸಾಕು; ಆದರೆ ಅದನ್ನು ಕಟ್ಟಲು ವಾರಗಳು, ತಿಂಗಳುಗಳು ಬೇಕಾಗುತ್ತವೆ. ಜೀವನದಲ್ಲಿಯೂ ಇದೇ ಸತ್ಯ.
ಹೌದು, ನಾವು ಕೆಲವೊಮ್ಮೆ ತಪ್ಪಾದ ಸಂಗಾತಿಯನ್ನು ಆಯ್ಕೆ ಮಾಡಬಹುದು. ಹೌದು, ನಾವು ತಪ್ಪಾದ ಉದ್ಯೋಗದಲ್ಲಿರಬಹುದು. ಮತ್ತು ಹೌದು, ಆಗಾಗ ನಾವು ತಪ್ಪಾದ ದಾರಿಯಲ್ಲಿಯೂ ಸಾಗಬಹುದು.
ಆದರೆ ಮನುಷ್ಯನಾಗಿರುವುದೆಂದರೆ ಏನನ್ನಾದರೂ ಮಾಡುವುದು, ಕ್ರಿಯಾಶೀಲನಾಗಿರುವುದು. ಶ್ರೇಷ್ಠನಾಗಿರುವುದೆಂದರೆ ಪ್ರಯತ್ನಿಸುವುದು.
ಬದುಕಿನ ಅಂಚಿನಲ್ಲಿ ಸುಮ್ಮನೆ ಕುಳಿತು, ಇತರರು ಬದುಕುವುದನ್ನು ಕೇವಲ ನೋಡುತ್ತಾ ಇರುವವರು ಎಂದಿಗೂ ನಿಜವಾದ ಅರ್ಥದಲ್ಲಿ ಪೂರ್ಣವಾಗಿ ಬದುಕಿದ ಮನುಷ್ಯರಾಗಲಾರರು.

