ಸ್ವಸ್ತಿಯ ಬುತ್ತಿ ಸ್ವೀಕರಿಸಿದ ಬುದ್ಧ । ಹಳೆಯ ಹಾದಿ, ಬಿಳಿಯ ಮೋಡ ಅಧ್ಯಾಯ #4.1

ತನ್ನ ಹೊಸ ಗೆಳೆಯ ಅದೇ ಅರಳಿಮರದ ಕೆಳಗೆ ಕುಳಿತಿರುವುದನ್ನು ಸ್ವಸ್ತಿ ದೂರದಿಂದಲೇ ಕಂಡ. ಆದರೆ ಅಲ್ಲಿ ಅವನೊಬ್ಬನೇ ಇರಲಿಲ್ಲ. ಅವನ ಮುಂದೆ ಹೆಚ್ಚೂಕಡಿಮೆ ಸ್ವಸ್ತಿಯ ವಯಸ್ಸಿನವಳೇ ಆದ, ಸುಂದರವಾದ, ಬಿಳಿ ಸೀರೆಯನ್ನುಟ್ಟ ಹುಡುಗಿಯೊಬ್ಬಳು ಕುಳಿತಿದ್ದಳು. ಸಿದ್ದಾರ್ಥನ ಮುಂದೆ ಊಟವನ್ನು ಇರಿಸಲಾಗಿತ್ತು. ಸ್ವಸ್ತಿ ಇದ್ದಕ್ಕಿದ್ದಂತೆ ನಿಂತುಬಿಟ್ಟ. ತಲೆ ಎತ್ತಿ ನೋಡಿದ ಸಿದ್ದಾರ್ಥ, ಕೈಸನ್ನೆ ಮಾಡಿ ಹತ್ತಿರಬರುವಂತೆ ಅವನ ಹೆಸರಿಟ್ಟು ಕರೆದ… । ತಿ ನ್ಹಾತ್ ಹಾನ್, Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ

ಅಧ್ಯಾಯ ನಾಲ್ಕು: ಗಾಯಗೊಂಡ ಹಂಸ

ಬುದ್ಧನ ಭೇಟಿಯ ಮರುದಿನ ಮುಂಜಾನೆ ಸ್ವಸ್ತಿ ತನ್ನ ಎಮ್ಮೆಗಳನ್ನು ಮೇಯಿಸಲು ಕರೆದೊಯ್ದ. ಮಧ್ಯಾಹ್ನದ ಹೊತ್ತಿಗೆ ಅವನು ಎರಡು ಬುಟ್ಟಿ ತುಂಬುವಷ್ಟು ಹುಲ್ಲನ್ನು ಕೊಯ್ದು ಹಾಕಿದ್ದ. ಕಾಡಿನ ಅಂಚಿಗೆ ಹೊಂದಿಕೊಂಡಿದ್ದ ಹೊಳೆ ದಂಡೆಯಲ್ಲಿ ಎಮ್ಮೆಗಳನ್ನು ಮೇಯಿಸುವುದು ಸ್ವಸ್ತಿಗೆ ಇಷ್ಟವಾದ ಕೆಲಸವಾಗಿತ್ತು. ಅಲ್ಲಿ ಎಮ್ಮೆಗಳು ಬೇರೆಯವರ ಗದ್ದೆಗೆ ನುಗ್ಗುವ ಭಯವಿಲ್ಲದೆ ತಂಗಾಳಿಗೆ ಮೈಯೊಡ್ಡಿ ಮಲಗಬಹುದಿತ್ತು. ಅವನು ಯಾವಾಗಲೂ ಒಂದು ಕುಡುಗೋಲನ್ನು ಇಟ್ಟುಕೊಂಡಿರುತ್ತಿದ್ದ. ಅದು ಅವನ ಜೀವನೋಪಾಯದ ಸಾಧನವಾಗಿತ್ತು.

ಮಧ್ಯಾಹ್ನದ ಊಟಕ್ಕೆಂದು ಬಾಲಾ ಬಾಳೆಲೆಯೊಂದರಲ್ಲಿ ಹಿಡಿಯಷ್ಟು ಅನ್ನವನ್ನು ಕಟ್ಟಿಕೊಟ್ಟಿದ್ದಳು. ಸ್ವಸ್ತಿ ಅದನ್ನು ಬಿಚ್ಚಿದ. ಇನ್ನೇನು ಉಣ್ಣಬೇಕು ಅನ್ನುವಷ್ಟರಲ್ಲಿ ಅವನಿಗೆ ಸಿದ್ಧಾರ್ಥನ ನೆನಪಾಯಿತು.

“ಇದನ್ನು ಸಿದ್ಧಾರ್ಥರಿಗೆ ಕೊಟ್ರೆ ಹೇಗೆ. ಅವರೇನೂ ಇದನ್ನ ಕೀಳಾಗಿ ನೋಡೋದಿಲ್ಲ”

ಬಾಳೆಲೆ ಬುತ್ತಿಯನ್ನು ಮರಳಿ ಬಿಗಿದು, ತಾನು ಹಿಂದಿನ ದಿನ ಸಿದ್ಧಾರ್ಥನನ್ನು ಭೇಟಿಯಾಗಿದ್ದ ಜಾಗದತ್ತ ಹೆಜ್ಜೆ ಹಾಕಿದ. ಎಮ್ಮೆಗಳು ಅಲ್ಲೇ ಕಾಡಿನ ಅಂಚಿನಲ್ಲಿ ನಿರಾಳವಾಗಿ ಮೇಯುತ್ತಿದ್ದವು.

ತನ್ನ ಹೊಸ ಗೆಳೆಯ ಅದೇ ಅರಳಿಮರದ ಕೆಳಗೆ ಕುಳಿತಿರುವುದನ್ನು ಸ್ವಸ್ತಿ ದೂರದಿಂದಲೇ ಕಂಡ. ಆದರೆ ಅಲ್ಲಿ ಅವನೊಬ್ಬನೇ ಇರಲಿಲ್ಲ. ಅವನ ಮುಂದೆ ಹೆಚ್ಚೂಕಡಿಮೆ ಸ್ವಸ್ತಿಯ ವಯಸ್ಸಿನವಳೇ ಆದ, ಸುಂದರವಾದ, ಬಿಳಿ ಸೀರೆಯನ್ನುಟ್ಟ ಹುಡುಗಿಯೊಬ್ಬಳು ಕುಳಿತಿದ್ದಳು. ಸಿದ್ದಾರ್ಥನ ಮುಂದೆ ಊಟವನ್ನು ಇರಿಸಲಾಗಿತ್ತು. ಸ್ವಸ್ತಿ ಇದ್ದಕ್ಕಿದ್ದಂತೆ ನಿಂತುಬಿಟ್ಟ. ತಲೆ ಎತ್ತಿ ನೋಡಿದ ಸಿದ್ದಾರ್ಥ, ಕೈಸನ್ನೆ ಮಾಡಿ ಹತ್ತಿರಬರುವಂತೆ ಅವನ ಹೆಸರಿಟ್ಟು ಕರೆದ.

ಬಿಳಿ ಸೀರೆಯುಟ್ಟಿದ್ದ ಹುಡುಗಿ ತಲೆಯೆತ್ತಿ ನೋಡಿದಳು. ಸ್ವಸ್ತಿ ಅವಳನ್ನು ಹಳ್ಳಿಯ ದಾರಿಯಲ್ಲಿ ಬಹಳ ಸಲ ಕಂಡಿದ್ದ. ಅವನು ಹತ್ತಿರ ಬರುತ್ತಿದ್ದಂತೆ, ಅವಳು ಎಡಕ್ಕೆ ಸರಿದು ಅವನಿಗೆ ಜಾಗ ಮಾಡಿಕೊಟ್ಟಳು. ಸಿದ್ದಾರ್ಥ ಅವನಿಗೆ ಕುಳಿತುಕೊಳ್ಳುವಂತೆ ಸೂಚಿಸಿದ. ಸಿದ್ದಾರ್ಥನ ಮುಂದಿದ್ದ ಬಾಳೆಲೆಯಲ್ಲಿ ಒಂದು ಹಿಡಿಯಷ್ಟು ಅನ್ನ, ಎಳ್ಳು ಮತ್ತು ಚಿಟಿಕೆಯಷ್ಟು ಉಪ್ಪನ್ನು ಬಡಿಸಲಾಗಿತ್ತು. ಸಿದ್ದಾರ್ಥ ಆ ಅನ್ನವನ್ನು ಎರಡು ಭಾಗವಾಗಿ ವಿಂಗಡಿಸಿದ.

“ಮಗು, ನೀನಿನ್ನೂ ಊಟ ಮಾಡಿಲ್ಲ ಅಲ್ವಾ?”

“ಇಲ್ಲ ಅಯ್ಯಾ, ಮಾಡಿಲ್ಲ.”

“ಸರಿ ಹಾಗಾದ್ರೆ, ಒಟ್ಟಿಗೆ ಮಾಡೋಣ”

ಸಿದ್ದಾರ್ಥ ತನ್ನ ಮುಂದಿದ್ದ ಎಲೆಯಿಂದ ಅರ್ಧದಷ್ಟು ಅನ್ನವನ್ನು ಸ್ವಸ್ತಿಯ ಮುಂದೆ ಹಿಡಿದ. ಸ್ವಸ್ತಿ ಕೃತಜ್ಞತೆಯಿಂದ ಕೈಮುಗಿದು, ಆ ಅನ್ನವನ್ನು ತೆಗೆದುಕೊಳ್ಳಲು ತೆಗೆದುಕೊಳ್ಳಲು ನಿರಾಕರಿಸಿದ; ತಾನು ತಂದಿದ್ದ ತನ್ನ ಬಡ ಬುತ್ತಿಯನ್ನು ಹೊರತೆಗೆದು, “ನಾನೂ ಸ್ವಲ್ಪ ಅನ್ನ ತಂದಿದೀನಿ” ಅಂದ.

ಅವನು ತನ್ನ ಬಾಳೆಲೆಯನ್ನು ಬಿಚ್ಚಿದ. ಅದು ಸಿದ್ದಾರ್ಥನ ಎಲೆಯಲ್ಲಿದ್ದ ಬಿಳಿಯಕ್ಕಿಯ ಮೆದುವಾದ ಅನ್ನದಂತಿರದೆ, ದಪ್ಪನೆಯ ಕಪ್ಪಕ್ಕಿಯಿಂದ ಮಾಡಿದ್ದಾಗಿತ್ತು. ಸಾಲದ್ದಕ್ಕೆ ಅವನ ಬಳಿ ಎಳ್ಳು ಉಪ್ಪುಗಳೂ ಇರಲಿಲ್ಲ. ಸಿದ್ದಾರ್ಥ ಆ ಇಬ್ಬರೂ ಮಕ್ಕಳನ್ನು ನೋಡಿ ಮುಗುಳ್ನಕ್ಕು, “ಈ ಎರಡೂ ಅನ್ನವನ್ನು ಒಟ್ಟಿಗೆ ಸೇರಿಸಿ ಹಂಚಿಕೊಂಡು ತಿನ್ನೋಣ” ಅಂದ. ಅರ್ಧದಷ್ಟು ಬಿಳಿ ಅನ್ನವನ್ನು ತೆಗೆದುಕೊಂಡು, ಅದನ್ನು ಎಳ್ಳು-ಉಪ್ಪಿನಲ್ಲಿ ಅದ್ದಿ ಸ್ವಸ್ತಿಗೆ ಕೊಟ್ಟ. ಆಮೇಲೆ ಸ್ವಸ್ತಿ ತಂದಿದ್ದ ಅನ್ನದ ಮುದ್ದೆಯನ್ನು ಅರ್ಧ ಮುರಿದುಕೊಂಡು, ಅದನ್ನು ಅತ್ಯಂತ ಆನಂದದಿಂದ ತಿನ್ನಲಾರಂಭಿಸಿದ. ಸ್ವಸ್ತಿಗೆ ಸ್ವಲ್ಪ ಮುಜುಗರವಾಯಿತು. ಆದರೆ ಸಿದ್ದಾರ್ಥನ ಸಹಜತೆಯನ್ನು ಕಂಡು ನಿರಾಳವಾಗಿ ತಾನೂ ತಿನ್ನಲಾರಂಭಿಸಿದ.

“ನಿಮ್ಮ ಅನ್ನ ಘಮಘಮಾ ಅನ್ತಿದೆ ಅಯ್ಯಾ.”

“ಅದು ಸುಜಾತಾ ತಂದದ್ದು,” ಸಿದ್ದಾರ್ಥ ಉತ್ತರಿಸಿದ.

“ಓಹೋ, ಇವಳ ಹೆಸರು ಸುಜಾತಾ” ಸ್ವಸ್ತಿ ಅಂದುಕೊಂಡ.

ಅವಳು ಸ್ವಸ್ತಿಗಿಂತ ಒಂದೆರಡು ವರ್ಷ ದೊಡ್ಡವಳಂತೆ ಕಾಣುತ್ತಿದ್ದಳು. ಅವಳ ದೊಡ್ಡ ಕಪ್ಪು ಕಣ್ಣುಗಳು  ಹೊಳೆಯುತ್ತಿದ್ದವು. ಸ್ವಸ್ತಿ ಉಣ್ಣುವುದನ್ನು ನಿಲ್ಲಿಸಿ, “ನಿನ್ನನ್ನ ಹಳ್ಳಿಯ ದಾರಿಯಲ್ಲಿ ಬಹಳ ಸಲ ನೋಡಿದೀನಿ. ಆದ್ರೆ ನಿನ್ನ ಹೆಸರು ಸುಜಾತಾ ಅಂತ ಗೊತ್ತಿರಲಿಲ್ಲ” ಅಂದ.

“ಹೌದು, ನಾನು ಉರುವೇಲದ ಮುಖಂಡನ ಮಗಳು. ನೀನು ಸ್ವಸ್ತಿ ಅಲ್ವಾ? ಈಗತಾನೇ ಸಿದ್ದಾರ್ಥ ಗುರುಗಳು ನಿನ್ನ ಬಗ್ಗೆ ಹೇಳ್ತಿದ್ರು” ಅಂದವಳು ಸ್ವಲ್ಪ ತಡೆದು, “ಸ್ವಸ್ತಿ, ಸನ್ಯಾಸಿಗಳನ್ನ ಅಯ್ಯಾ ಅನ್ನೋದಕ್ಕಿಂತ ಗುರುಗಳೇ ಅಂತ ಕರೆಯೋದು ಹೆಚ್ಚು ಸೂಕ್ತ” ಅಂದಳು.

ಸ್ವಸ್ತಿ ತಲೆಯಾಡಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.