ಸಿದ್ದಾರ್ಥ ದರ್ಬೆ ಹುಲ್ಲಿನ ಹೊರೆಯತ್ತ ಬೆಟ್ಟು ಮಾಡಿದ. “ನಿನ್ನ ಎಮ್ಮೆಗಳಿಗೋಸ್ಕರ ಕೊಯ್ದಿಟ್ಟಿದೀಯಲ್ಲ, ಸುಗಂಧ ಬೀರ್ತಾ ಇರೋ ಆ ಎಳೆ ಹುಲ್ಲು? ಅದರ ಹೊರೆಯಲ್ಲಿ ಒಂದು ಕಟ್ಟು ನನಗೆ ಕೊಟ್ಟರೆ ಮರದ ಕೆಳಗೆ ಕುಳಿತುಕೊಳ್ಳೊಕೆ ಚಾಪೆ ಮಾಡಿಕೊಳ್ತೀನಿ. ಅದು ನನಗೆ ತುಂಬಾ ಹಿತ ನೀಡುತ್ತೆ”
ಸ್ವಸ್ತಿಯ ಕಣ್ಣು ಮಿನುಗಿತು. ಕೂಡಲೇ ಹುಲ್ಲಿನ ರಾಶಿಯ ಬಳಿಗೋಡಿ, ತನ್ನ ತೋಳು ಮೀರುವಷ್ಟು ದೊಡ್ಡ ಹುಲ್ಲಿನ ಕಟ್ಟು ತಯಾರಿಸಿಕೊಂಡು ಹೊತ್ತು ತಂದ… । ತಿ ನ್ಹಾತ್ ಹಾನ್, Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
ಒಂದು ಕಟ್ಟು ದರ್ಭೆ ಹುಲ್ಲನ್ನು ತಂದು, ಚಾಪೆಯಂತೆ ಹರಡಿ ಬುದ್ಧನನ್ನು ಕುಳ್ಳಿರಿಸಿದ ಸ್ವಸ್ತಿ, ವಿನಯದಿಂದ ಉತ್ತರಿಸಿದ. “ಹೌದು ಅಯ್ಯಾ, ನಾನು ಎಮ್ಮೆ ಮೇಯಿಸ್ತೀನಿ. ಅವುಗಳಿಗಾಗೇ ಆ ಹುಲ್ಲು ಕೊಯ್ದಿಟ್ಟಿರೋದು. ನನ್ನ ಹೆಸರು ಸ್ವಸ್ತಿ. ಹೊಳೆಯ ಆಚೆ ದಡದಲ್ಲಿರೋ ಉರುವೇಲ ಅಂತ ಅಂತ ಒಂದು ಹಳ್ಳಿ ಇದೆ. ನಮ್ಮನೆ ಇರೋದು ಅಲ್ಲೇ. ನಿಮ್ಮ ಹೆಸರೇನು? ನಿಮ್ಮೂರು ಯಾವ್ದು? ಇಲ್ಲಿಗ್ಯಾಕೆ ಬಂದಿದೀರಿ?”
ಆ ವ್ಯಕ್ತಿ ಪ್ರತಿ ಪದದಲ್ಲೂ ಪ್ರೀತಿ ತುಳುಕಿಸುತ್ತ ಉತ್ತರಿಸಿದ, “ನನ್ನ ಹೆಸರು ಸಿದ್ದಾರ್ಥ, ನನ್ನ ಮನೆ ತುಂಬಾ ದೂರದಲ್ಲಿದೆ. ನಾನಿಲ್ಲಿ, ಕಾಡಲ್ಲೇ ಇರೋಕೆ ಬಂದಿದೀನಿ”
“ಹಾಗಾದ್ರೆ, ನೀವು ಮುನಿಗಳಾ?”
ಸಿದ್ದಾರ್ಥ ತಲೆಯಾಡಿಸಿದ. ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತ ಧ್ಯಾನ ಮಾಡುವವರನ್ನು ಮುನಿಗಳೆಂದು ಕರೆಯುವುದು ಸ್ವಸ್ತಿಗೆ ತಿಳಿದಿತ್ತು.
ಅವರಿಬ್ಬರು ಭೇಟಿಯಾಗಿ ಬಹಳ ಹೊತ್ತೇನೂ ಆಗಿರಲಿಲ್ಲ. ಮಾತು ಕೂಡ ಬಹಳವೇನೂ ಆಡಿರಲಿಲ್ಲ. ಅಷ್ಟರಲ್ಲೇ ಸ್ವಸ್ತಿಗೆ ಸಿದ್ಧಾರ್ಥನೊಡನೆ ಒಂದು ಬಗೆಯ ಆಪ್ತಭಾವ ಉಂಟಾಯಿತು. ಉರುವೇಲದಲ್ಲಿ ಅವನಿಗೆ ಸ್ನೇಹಿತರೇ ಇರಲಿಲ್ಲ, ಯಾರೂ ಅವನೊಡನೆ ಇಷ್ಟು ಪ್ರೀತಿಯಿಂದ ಮಾತಾಡಿರಲೂ ಇಲ್ಲ. ಅವನೊಳಗೆ ಆನಂದದ ಹೆದ್ದೆರೆಯೊಂದು ಉಕ್ಕೇರಿತು. ಅದನ್ನು ಹೇಗಾದರೂ ತೋಡಿಕೊಳ್ಳಬೇಕೆಂಬ ಬಯಕೆಯಾಯಿತು. ಸಿದ್ದಾರ್ಥನಿಗೆ ಕಾಣಿಕೆ ಕೊಡೋಣವೆಂದರೆ ಅವನ ಬಳಿ ಬಿಡಿಗಾಸೂ ಇರಲಿಲ್ಲ. ಕೊನೆಗೆ ಚಿಕ್ಕದೊಂದು ಕಬ್ಬಿನ ತುಂಡು… ಹೋಗಲಿ, ಸಣ್ಣ ಕಲ್ಲುಸಕ್ಕರೆ ತುಣುಕೂ ಇರಲಿಲ್ಲ. ಹೀಗಿರುವಾಗ ಅವನು ಏನು ತಾನೇ ನೀಡಲು ಸಾಧ್ಯವಿತ್ತು?
ಸ್ವಸ್ತಿ ಧೈರ್ಯ ತಂದುಕೊಂಡು ಹೇಳಿದ, “ಅಯ್ಯಾ, ನಿಮಗೆ ಕಾಣಿಕೆ ಕೊಡೋಕೆ ನನ್ನ ಬಳಿ ಏನೂ ಇಲ್ಲ. ಏನು ಮಾಡ್ಲಿ?”
ಸಿದ್ದಾರ್ಥ ಸ್ವಸ್ತಿಯತ್ತ ನೋಡಿ ಮುಗುಳ್ನಕ್ಕ. “ಯಾಕಿಲ್ಲ? ನನಗೆ ತುಂಬಾ ಇಷ್ಟವಾಗೋ ಒಂದು ವಸ್ತು ನಿನ್ನ ಬಳಿ ಇದೆ”
“ನಿಮಗೆ ಇಷವಾಗೋ ವಸ್ತುನಾ? ಏನದು?”
ಸಿದ್ದಾರ್ಥ ದರ್ಬೆ ಹುಲ್ಲಿನ ಹೊರೆಯತ್ತ ಬೆಟ್ಟು ಮಾಡಿದ. “ನಿನ್ನ ಎಮ್ಮೆಗಳಿಗೋಸ್ಕರ ಕೊಯ್ದಿಟ್ಟಿದೀಯಲ್ಲ, ಸುಗಂಧ ಬೀರ್ತಾ ಇರೋ ಆ ಎಳೆ ಹುಲ್ಲು? ಅದರ ಹೊರೆಯಲ್ಲಿ ಒಂದು ಕಟ್ಟು ನನಗೆ ಕೊಟ್ಟರೆ ಮರದ ಕೆಳಗೆ ಕುಳಿತುಕೊಳ್ಳೊಕೆ ಚಾಪೆ ಮಾಡಿಕೊಳ್ತೀನಿ. ಅದು ನನಗೆ ತುಂಬಾ ಹಿತ ನೀಡುತ್ತೆ”
ಸ್ವಸ್ತಿಯ ಕಣ್ಣು ಮಿನುಗಿತು. ಕೂಡಲೇ ಹುಲ್ಲಿನ ರಾಶಿಯ ಬಳಿಗೋಡಿ, ತನ್ನ ತೋಳು ಮೀರುವಷ್ಟು ದೊಡ್ಡ ಹುಲ್ಲಿನ ಕಟ್ಟು ತಯಾರಿಸಿಕೊಂಡು ಹೊತ್ತು ತಂದ.
“ಈಗ ಸ್ವಲ್ಪ ಹೊತ್ತಿಗೆ ಮುಂದೆ ಹೊಳೆ ದಂಡೆಯಲ್ಲಿ ಕೊಯ್ದಿದ್ದು. ಇದನ್ನು ತಗೊಳ್ಳಿ. ಮೇವಿಗೆ ಮತ್ತಷ್ಟು ಕೊಯ್ದರಾಯ್ತು” ಅಂದ.
ಸಿದ್ದಾರ್ಥ ತನ್ನ ಕೈಗಳನ್ನು ಕಮಲದ ಮೊಗ್ಗಿನಂತೆ ಜೋಡಿಸಿ ಆ ಕಾಣಿಕೆಯನ್ನು ಸ್ವೀಕರಿಸಿದ.
“ನಿನ್ನ ಹೃದಯದಲ್ಲಿ ಕರುಣೆಯ ಸಾಗರವೇ ಇದೆ ಹುಡುಗ, ನಿನಗೆ ನನ್ನ ಧನ್ಯವಾದ. ಹೊತ್ತು ಮೀರುವ ಮೊದಲು ಮೇವಿನ ಹುಲ್ಲು ಕೊಯ್ದುಕೊಂಡು ಬಿಡು. ಅಕಸ್ಮಾತ್ ನಿನಗೆ ಬಿಡುವಾದರೆ ನಾಳೆಯೂ ನಾವು ಸಿಗೋಣ”
ಪುಟ್ಟ ಸ್ವಸ್ತಿ ವಿದಾಯ ಹೇಳಲು ತಲೆಬಾಗಿದ. ಸಿದ್ದಾರ್ಥ ಕಾಡಿನೊಳಗೆ ಮರೆಯಾಗುವುದನ್ನೇ ನೋಡುತ್ತಾ ನಿಂತ. ಆಮೇಲೆ ತನ್ನ ಕುಡುಗೋಲನ್ನು ಎತ್ತಿಕೊಂಡು, ಆರ್ದ್ರ ಹೃದಯದೊಡನೆ ಹೊಳೆ ದಂಡೆಯತ್ತ ಹೊರಟ.
ಅದು ಶರತ್ಕಾಲದ ಆರಂಭ. ದರ್ಭೆ ಹುಲ್ಲು ಇನ್ನೂ ಮೆದುವಾಗಿತ್ತು. ಇತ್ತೀಚೆಗಷ್ಟೆ ತನ್ನ ಕುಡುಗೋಲನ್ನು ಹರಿತ ಮಾಡಿಸಿಕೊಂಡಿದ್ದ ಸ್ವಸ್ತಿ, ಮೇವಿಗೆ ಸಾಕಾಗುವಷ್ಟು ಹುಲ್ಲನ್ನು ಬಹಳ ಬೇಗ ಕೊಯ್ದು ಹಾಕಿದ. ಹಿಂಡಿನಲ್ಲಿದ್ದ ಎಮ್ಮೆ ಕರು ಹೊಳೆ ದಂಡೆಯಲ್ಲಿದ್ದ ಎಳೆ ಹುಲ್ಲನ್ನು ಬಿಟ್ಟು ಬರಲು ತಯಾರಿರಲಿಲ್ಲ. ಅದನ್ನು ಪುಸಲಾಯಿಸಿ ಅಲ್ಲಿಂದ ಹೊರಡಿಸಬೇಕಾಯ್ತು.
ಸ್ವಸ್ತಿ ತನ್ನ ಎಮ್ಮೆಗಳನ್ನು ಎಚ್ಚರದಿಂದ ಹೊಳೆ ದಾಟಿಸಿ ರಾಮ್ ಬೋಲನ ಮನೆಯತ್ತ ಹೆಜ್ಜೆ ಹಾಕಿದ. ಅವನಿಗೆ ತನ್ನ ಭುಜದ ಮೇಲಿದ್ದ ಹುಲ್ಲಿನ ಹೊರೆ ಭಾರವೆನಿಸಲಿಲ್ಲ.

