ಗಮನ ತುಂಬಿದ ಮಾತುಕತೆ : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.12

ಇನ್ನೊಬ್ಬರ ಮಾತನ್ನು ಗಮನವಿರಿಸಿ ಕೇಳಿಸಿಕೊಳ್ಳುವ, ನಾವು ಪರಸ್ಪರ ಮತ್ತೆ ಪ್ರೀತಿ ತುಂಬಿದ ಮಾತುಕತೆಯಾಡುವ ಸಾಮರ್ಥ್ಯ ಗಳಿಸುವುದು ಹೇಗೆ? ಮೊದಲಿಗೆ ನಮ್ಮ ನೋವು, ನಮ್ಮ ಸಿಟ್ಟನ್ನು ನಾವು ಸಂತೈಸಿಕೊಳ್ಳಬೇಕು. ಗಮನದ ಎಚ್ಚರದೊಂದಿಗೆ ಮಾಡುವ ಉಸಿರಾಟ, ನಡಿಗೆಗಳಿಂದ ನಮ್ಮೊಳಗಿನ ಗಮನಕ್ಕೆ ಶಕ್ತಿ ತುಂಬುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.12: ಭಾವ-ಸಂಬಂಧ  ಗಮನ ತುಂಬಿದ ಮಾತುಕತೆ

ವ್ಯಕ್ತಿ, ಕುಟುಂಬ, ದೇಶಗಳ ನಡುವೆ ಮಾತುಕತೆ ನಡೆಯುವುದೇ ತುಂಬ ಕಷ್ಟ ಅನ್ನುವ ಪರಿಸ್ಥಿತಿ, ಸಂವಹನವೇ ಕಷ್ಟ ಅನ್ನುವ ಸ್ಥಿತಿ ಇಂದು ಬಂದಿದೆ. ಆದರೂ ಹಿಂಸೆ ಇರದ ಹಾಗೆ, ಪರಸ್ಪರ ಅರಿವು, ಕಳಕಳಿ ಹುಟ್ಟುವ ಹಾಗೆ ನಾವು ಮತ್ತೆ ಮಾತಾಡಲು ಸಾಧ್ಯವಿದೆ. ಹಾಗೆ ಮಾತಾಡಲು ಸಾಧ್ಯವಾಗಬೇಕಾದರೆ ಇನ್ನೊಬ್ಬರ ಮಾತನ್ನು ಕಳಕಳಿಯಿಂದ ಆಲಿಸುವುದು, ನಾವು ಆಡುವ ಮಾತಿನಲ್ಲಿ ಕಳಕಳಿ ಇರುವುದು ಅಗತ್ಯ. ಗಮನತುಂಬಿದ ಮಾತು ಕತೆ ಅಂದರೆ ನಾವು ಏನು ಹೇಳುತಿದ್ದೇವೆ ಅನ್ನುವ ಅರಿವು ಇರಬೇಕು, ಮಾತಿನಲ್ಲಿ ಪ್ರೀತಿ ಇರಬೇಕು. ಇನ್ನೊಬ್ಬರು ಏನು ಹೇಳುತಿದ್ದಾರೆ, ಏನು ಹೇಳುತ್ತಿಲ್ಲ ಎಂದು ಗಮನವಿಟ್ಟು ಕೇಳಿಸಿಕೊಳ್ಳಬೇಕು. ಹೀಗೆ ಮಾತು ಆಡುವ, ಕೇಳುವ ವಿಧಾನವನ್ನು ಯಾವುದೇ ಸಂದರ್ಭ, ಸಮಯ, ಸ್ಥಳದಲ್ಲಿ ನಾವು ಅಳವಡಿಸಿಕೊಳ್ಳಬಹದು.

ನಮ್ಮ ದೇಹ ಆರೋಗ್ಯವಾಗಿರಬೇಕಾದರೆ ನಮ್ಮ ಹೃದಯವು ರಕ್ತದ ಚಲನೆ ಸತತವಾಗಿ ಇರುವಂತೆ ಕೆಲಸ ಮಾಡುತ್ತಲೇ ಇರಬೇಕು. ಸಂಬಂಧಗಳ ಆರೋಗ್ಯ ಚೆನ್ನಾಗಿರಬೇಕು ಅಂದರೆ ಗಮನವಿರಿಸಿದ ಮಾತುಕತೆ ಸತತವಾಗಿ ನಡೆಯಲೇಬೇಕು. ಆದರೂ ಬಹಳಷ್ಟು ಜನರ ಮನಸಿನೊಳಗೆ ಸಿಟ್ಟು, ಹತಾಶೆಗಳ ರಾಶಿ ಇರುವುದರಿಂದ ಹೀಗೆ ಗಮನವಿರಿಸಿ ಮಾತುಕತೆ ನಡೆಸುವುದು ಅವರಿಗೆ ಕಷ್ಟವಾಗುತ್ತದೆ.

ಇನ್ನೊಬ್ಬರ ಬಗ್ಗೆ ತುಂಬ ಒಳ್ಳೆಯ ಭಾವನೆ ಇರಿಸಿಕೊಂಡು ಅವರ ಮಾತನ್ನು ಕೇಳಬೇಕು ಅಂದುಕೊಂಡೇ ಹೋಗಿದ್ದರೂ ನಾವು ಶಾಂತವಾಗಿ, ಪ್ರೀತಿಯಿಂದ ಮಾತಾಡದಿದ್ದರೆ ನಮ್ಮೆದುರಿಗಿರುವ ಆ ಇನ್ನೊಬ್ಬ ವ್ಯಕ್ತಿ ನಮ್ಮ ಮಾತನ್ನು ಕೇಳುವುದಿಲ್ಲ, ಅರ್ಥಮಾಡಿಕೊಳ್ಳುವದಿಲ್ಲ.

ನಾವು ಶಾಂತವಾಗಿ, ಪ್ರೀತಿಯಿಂದ ಮಾತಾಡಲು ಬಯಸಿದರೂ ಮಾತು ಶುರು ಮಾಡುತಿದ್ದ ಹಾಗೆ ನೋವು, ಹತಾಶೆ, ಭಯಗಳು ವ್ಯಕ್ತವಾಗಬಹುದು. ನಮ್ಮಲ್ಲಿ ಎಂಥ ಒಳ್ಳೆಯ ಉದ್ದೇಶವಿದ್ದರೂ ನಾವು ಬೈಯಲು, ದೂರು ಹೇಳಲು, ದುಡುಕಿ ತೀರ್ಮಾನ ಕೊಡಲು ಮುಂದಾಗಬಹುದು. ಈ ಬಗೆಯ ಭಾವಗಳಿಂದ ಮೈದುಂಬಿಕೊಂಡ ನಮ್ಮ ಮಾತು ಕೇಳುವ ವ್ಯಕ್ತಿಗಳ ಮನಸಿನಲ್ಲಿ ಪ್ರತಿಧ್ವನಿಸಿ ಅವರಳೊಗೆ ನಮ್ಮ ವಿರುದ್ಧವಾದ ಭಾವ ಮೂಡುತ್ತದೆ. ಮಾತುಕತೆಯ ಸೇತುವೆ ಮುರಿದು ಬೀಳುತ್ತದೆ. ಹಾಗಾದಾಗ ಸಂವಹನಕಲೆಯನ್ನು, ಮಾತಾಡುವ ರೀತಿಯನ್ನು ನಾವು ಮತ್ತೆ ಕಲಿಯಬೇಕು.

ಇನ್ನೊಬ್ಬರ ಮಾತನ್ನು ಗಮನವಿರಿಸಿ ಕೇಳಿಸಿಕೊಳ್ಳುವ, ನಾವು ಪರಸ್ಪರ ಮತ್ತೆ ಪ್ರೀತಿ ತುಂಬಿದ ಮಾತುಕತೆಯಾಡುವ ಸಾಮರ್ಥ್ಯ ಗಳಿಸುವುದು ಹೇಗೆ? ಮೊದಲಿಗೆ ನಮ್ಮ ನೋವು, ನಮ್ಮ ಸಿಟ್ಟನ್ನು ನಾವು ಸಂತೈಸಿಕೊಳ್ಳಬೇಕು. ಗಮನದ ಎಚ್ಚರದೊಂದಿಗೆ ಮಾಡುವ ಉಸಿರಾಟ, ನಡಿಗೆಗಳಿಂದ ನಮ್ಮೊಳಗಿನ ಗಮನಕ್ಕೆ ಶಕ್ತಿ ತುಂಬುತ್ತದೆ. ನಮ್ಮ ನೋವನ್ನು ಮೀರುವುದಕ್ಕೆ, ಪ್ರೀತಿ ತುಂಬಿದ ಮಾತು ಆಡುವುದಕ್ಕೆ ಹಲವು ವಾರ, ತಿಂಗಳುಗಳ ಅಭ್ಯಾಸವೇ ಬೇಕಾಗಬಹುದು. ನಮ್ಮ ಗಮನ ಸಮರ್ಥವಾಗಿರುವಾಗ ಸನ್ನಿವೇಶವನ್ನು ಆಳವಾಗಿ ಗಮನಿಸುವುದು, ಅರಿಯುವುದು, ಮರುಕ ತೋರುವುದು ಸುಲಭವಾಗುತ್ತದೆ. ಗಮನದ ಶಕ್ತಿಯಿಂದ ನೋವನ್ನು ಮೀರಿ ಪ್ರೀತಿ ತುಂಬಿದ ಮಾತು ಆಡುವುದು ಸಾಧ್ಯವಾಗುತ್ತದೆ.

ನಮ್ಮೊಳಗಿನ ನೋವು, ಸಿಟ್ಟುಗಳನ್ನು ಸಂತೈಸಿ, ಬದಲಿಸಲು ಆಗದಿದ್ದರೆ ಇನ್ನೊಬ್ಬರ ನೋವು, ಸಂಕಟವನ್ನು ಗಹನವಾಗಿ ಕೇಳುವುದು ಕೂಡ ಕಷ್ಟವಾಗುತ್ತದೆ. ಅದರಲ್ಲೂ ಇನ್ನೊಬ್ಬ ವ್ಯಕ್ತಿಯ ಮಾತಿನಲ್ಲಿ ನೆಗೆಟಿವ್‌ ತೀರ್ಮಾನ, ತಪ್ಪು ತಿಳಿವಳಿಕೆ, ನಿಂದನೆಗಳು ತುಂಬಿರುವಾಗ ಕೇಳಿಸಿಕೊಳ್ಳುವುದು ಬಹಳವೇ ಕಷ್ಟವಾಗುತ್ತದೆ. ನಾವೇನು ಮಾಡಬೇಕು, ಸಹನೆಯಿಂದ ಕೇಳಿಸಿಕೊಳ್ಳಬೇಕು ಅನ್ನುವುದು ನಮ್ಮ ಮನಸಿಗೆ ಗೊತ್ತಿದ್ದರೂ ಕೆಲವೇ ನಿಮಿಷಗಳಲ್ಲಿ ಇನ್ನೊಂದು ಮಾತೂ ಕೇಳಲಾರೆವು ಅನಿಸುವ ಸ್ಥಿತಿ ಎದುರಾಗುತ್ತದೆ. ಮುಳುಗಿ ಹೋಗುತಿದ್ದೇವೆ, ಪ್ರಚೋದನೆಯನ್ನು ಇನ್ನು ತಾಳಲಾರೆವು, ತಪ್ಪು ಮಾತುಗಳನ್ನ ಸಹಿಸಲಾರೆವು ಅನಿಸುತ್ತದೆ. ಸಮಾಧಾನದಿಂದ ಆಲಿಸಬೇಕು ಎಂದು ಗೊತ್ತಿದ್ದರೂ ನಮ್ಮ ತೀರ್ಮಾನ ಆವಿಯಾಗುತ್ತದೆ. ಯಾಕೆಂದರೆ ನಮ್ಮೊಳಗೇ ಕುದಿಯಲು ಶುರುವಾಗಿರುವ ನೋವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಆದರೂ ನಾವು ಸಹಿಸಿಕೊಂಡು ಒಂದೇ ಒಂದು ಗಂಟೆಯ ಕಾಲ ಇನ್ನೊಬ್ಬ ವ್ಯಕ್ತಿಯ ಮಾತನ್ನು ಕೇಳಿಸಿಕೊಂಡರೆ ಆ ವ್ಯಕ್ತಿಗೆ ಬಹಳ ದೊಡ್ಡ ಸಮಾಧಾನ ದೊರೆಯುತ್ತದೆ. ತೆರೆದ ಮನಸಿನಿಂದ ಕೇಳಿಸಿಕೊಳ್ಳುವುದರಿಂದ ನಮ್ಮೊಳಗಿನ ಕರುಣೆ ಜೀವಂತವಾಗಿರುತ್ತದೆ. ಇನ್ನೊಬ್ಬ ವ್ಯಕ್ತಿ ತನ್ನ ಭಾವಗಳನ್ನು ವ್ಯಕ್ತಪಡಿಸಲು ಅವಕಾಶ ದೊರೆಯುತ್ತದೆ.

ಹೀಗೆ ಆಲಿಸುವುದಕ್ಕೆ ತರಬೇತಿ ಬೇಕು, ಅಭ್ಯಾಸವೂ ಬೇಕು. ಎಚ್ಚರದ ಗಮನದೊಂದಿಗೆ ಉಸಿರಾಡುವುದು, ನಡೆಯುವುದು ನಮ್ಮೊಳಗಿನ ಸಿಟ್ಟಿನ, ಕಿರಿಕಿರಿಯ ಬೀಜಗಳು ಬೆಳೆದು ಹೆಮ್ಮರವಾಗದಂತೆ ತಡೆಯಬಲ್ಲವು, ನಾವು ಮನಸನ್ನು ತೆರೆದು ಇನ್ನೊಬ್ಬ ವ್ಯಕ್ತಿಯ ಮಾತನ್ನು ಕರುಣೆಯಿಂದ ಆಲಿಸಲು ಸಾಧ್ಯವಾಗಬಹುದು. 

*

ಲೋಕದ ನಿಜವನ್ನು ತಿಳಿದು ನಮ್ಮ ನಮ್ಮ ಮನಸುಗಳನ್ನು ಸಮಾಧಾನದಲ್ಲಿ ಇರಿಸಿಕೊಳ್ಳುವುದು ಎಷ್ಟು ಮುಖ್ಯವೆಂದು ಅಕ್ಕ ಮಹಾದೇವಿಯ ಈ ವಚನ ಹೇಳುವಂತೆ ತೋರುತ್ತದೆ. ಸಮಾಧಾನವಿರದೆ ಎಚ್ಚರದ ಗಮನವೂ ಇರದು.

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ


ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ


ಸಂತೆಯೊಳಗೊಂದು ಮನೆಯ ಮಾಡಿ,
ಶಬ್ದಕ್ಕೆ ನಾಚಿದಡೆಂತಯ್ಯಾ
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ


ಲೋಕದೊಳಗೆ ಹುಟ್ಟಿದ ಬಳಿಕ

ಸ್ತುತಿನಿಂದೆಗಳು ಬಂದಡೆ

ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.