ನಡವಳಿಕೆ ವಿವರಿಸುವ ನಾಲ್ಕು ಬಣ್ಣಗಳು

ಮಾನವ ನಡವಳಿಕೆಯನ್ನು ವಿವರಿಸಲು ಎರಿಕ್ಸನ್ ನಾಲ್ಕು ಬಣ್ಣಗಳ ಮಾದರಿಯನ್ನು ಬಳಸುತ್ತಾರೆ. ಈ ಮಾದರಿಯ ಮೂಲವನ್ನು ಅವರು ಪ್ರಾಚೀನ ಗ್ರೀಕ್ ವೈದ್ಯ ಹಿಪ್ಪೊಕ್ರೇಟಿಸ್ ಅವರ ಚಿಂತನೆಗಳೊಂದಿಗೆ ಸಮೀಕರಿಸುತ್ತಾರೆ… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ನಿಮಗೆ ಯಾವತ್ತಾದರೂ, “ನನ್ನ ಸುತ್ತಮುತ್ತ ಎಲ್ಲ ಇಡಿಯಟ್ ಗಳೇ  ಇದ್ದಾರೆ “ ಎಂದು ಅನಿಸಿದೆಯೇ? ಉಳಿದವರೆಲ್ಲರೂ ತಪ್ಪಾಗಿ ಯೋಚಿಸುತ್ತಿದ್ದಾರೆ, ನಾನು ಮಾತ್ರ ಸರಿಯಾಗಿ ಅರ್ಥಮಾಡಿಕೊಂಡಿದ್ದೇನೆ ಎನ್ನುವ ಭಾವನೆ ಬಂದಿದೆಯೇ? ಆದರೆ, ಥಾಮಸ್ ಎರಿಕ್ಸನ್ ತಮ್ಮ Surrounded by Idiots (ಮೂರ್ಖರಿಂದ ಸುತ್ತುವರಿದವರು) ಪುಸ್ತಕದಲ್ಲಿ, ಸಮಸ್ಯೆ ಇತರರು ಮೂರ್ಖರು ಎನ್ನುವುದಲ್ಲ, ಬದಲಾಗಿ, ನಾವೆಲ್ಲರೂ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳದೆ, ಪರಸ್ಪರ ಹೊಂದಿಕೆಯಾಗದ ರೀತಿಯಲ್ಲಿ ಮಾತನಾಡುತ್ತಿದ್ದೇವೆ ಎನ್ನುವುದು ಎಂದು  ವಾದಿಸುತ್ತಾರೆ. ಮಾನವ ನಡವಳಿಕೆಯನ್ನು ವಿವರಿಸಲು ಎರಿಕ್ಸನ್ ನಾಲ್ಕು ಬಣ್ಣಗಳ ಮಾದರಿಯನ್ನು ಬಳಸುತ್ತಾರೆ. ಈ ಮಾದರಿಯ ಮೂಲವನ್ನು ಅವರು ಪ್ರಾಚೀನ ಗ್ರೀಕ್ ವೈದ್ಯ ಹಿಪ್ಪೊಕ್ರೇಟಿಸ್ ಅವರ ಚಿಂತನೆಗಳೊಂದಿಗೆ ಸಮೀಕರಿಸುತ್ತಾರೆ.

ಎರಿಕ್ಸನ್ ಅವರ ಪ್ರಕಾರ, ಜೀವನದ ಬಗ್ಗೆ ಎಲ್ಲ ಜನರಲ್ಲಿಯೂ ಕಂಡುಬರುವ ನಾಲ್ಕು ವಿಭಿನ್ನ ಸ್ವಭಾವಗಳು ಅಥವಾ ಮನೋಭಾವಗಳಿವೆ.

ಮೊದಲನೆಯವರು, ಕೆಂಪು ಬಣ್ಣದವರು (Reds) ಅಥವಾ ಕೋಲೆರಿಕ್ (Choleric) ಸ್ವಭಾವದವರು. ಇವರು ಧೈರ್ಯಶಾಲಿಗಳು, ಮಹತ್ವಾಕಾಂಕ್ಷಿಗಳು ಮತ್ತು ಕೆಲವೊಮ್ಮೆ ಆಕ್ರಮಣಕಾರಿ ಸ್ವಭಾವದವರಾಗಿರುತ್ತಾರೆ. ಇವರಿಗೆ ಹರಟೆಗಿಂತ ಫಲಿತಾಂಶವೇ ಮುಖ್ಯ.

ನಂತರ ಹಳದಿ ಬಣ್ಣದವರು (Yellows) ಅಥವಾ ಸ್ಯಾಂಗ್ವಿನ್ (Sanguine) ಸ್ವಭಾವದವರು. ಇವರು ಆಶಾವಾದಿಗಳು ಮತ್ತು ಎಲ್ಲರೊಂದಿಗೆ ಬೆರೆಯುವ ಸ್ವಭಾವದವರು. ತಮ್ಮ ಉತ್ಸಾಹ ಮತ್ತು ಚೈತನ್ಯದಿಂದ ವಾತಾವರಣಕ್ಕೆ ಜೀವ ತುಂಬುತ್ತಾರೆ; ಆದರೆ ಅನೇಕ ಬಾರಿ ಸಣ್ಣಪುಟ್ಟ ವಿವರಗಳನ್ನು ಗಮನಿಸುವುದನ್ನು ಮರೆತುಬಿಡುತ್ತಾರೆ.

ಹಸಿರು ಬಣ್ಣದವರು (Greens) ಅಥವಾ ಫ್ಲೆಗ್ಮ್ಯಾಟಿಕ್ (Phlegmatic) ಸ್ವಭಾವದವರು ವಿಶ್ವಾಸಾರ್ಹರು, ಶಾಂತ ಸ್ವಭಾವದವರು ಮತ್ತು ಇತರರಿಗೆ ಬೆಂಬಲ ನೀಡುವವರು. ಇವರು ಸಂಘರ್ಷವನ್ನು ಇಷ್ಟಪಡುವುದಿಲ್ಲ; ಆದರೆ ಬದಲಾವಣೆಯನ್ನು ಒಪ್ಪಿಕೊಳ್ಳಲು ಕೆಲವೊಮ್ಮೆ ಹಿಂಜರಿಯಬಹುದು.

ಕೊನೆಯದಾಗಿ, ನೀಲಿ ಬಣ್ಣದವರು (Blues) ಅಥವಾ ಮೆಲಂಕಾಲಿಕ್ (Melancholic) ಸ್ವಭಾವದವರು. ಇವರು ವಿಶ್ಲೇಷಣಾತ್ಮಕವಾಗಿ ಯೋಚಿಸುವವರು ಮತ್ತು ನಿಖರತೆಗೆ ಹೆಚ್ಚಿನ ಮಹತ್ವ ನೀಡುವವರು. ಇವರಿಗೆ ವಾಸ್ತವಾಂಶಗಳು, ಅಂಕಿ ಅಂಶಗಳು ಮತ್ತು ‘why?’ ಎನ್ನುವುದಕ್ಕೆ ಸ್ಪಷ್ಟವಾದ ಕಾರಣಗಳು ಬೇಕಾಗುತ್ತವೆ.

ಖಂಡಿತವಾಗಿಯೂ, ಮಾನವ ಸ್ವಭಾವದ ಸಂಕೀರ್ಣತೆ ಮತ್ತು ವೈವಿಧ್ಯತೆಯನ್ನು ಕೇವಲ ನಾಲ್ಕು ಸರಳ ವ್ಯಕ್ತಿತ್ವ ಮಾದರಿಗಳೊಳಗೆ ಹಿಡಿದಿಡಲು ಸಾಧ್ಯವಿಲ್ಲ ಎಂಬುದು ಎರಿಕ್ಸನ್ ಅವರಿಗೆ ಚೆನ್ನಾಗಿಯೇ ತಿಳಿದಿದೆ. ಆದರೆ ಇಲ್ಲಿ ಮುಖ್ಯವಾದ ಅಂಶವೇನೆಂದರೆ, ನಾವು ಯಾರನ್ನಾದರೂ “ಮೂರ್ಖ” ಅಥವಾ “ಬುದ್ಧಿಹೀನ” ಎಂದು ಭಾವಿಸುವಾಗ, ಬಹುತೇಕ ಸಂದರ್ಭಗಳಲ್ಲಿ ನಿಜವಾದ ಸಮಸ್ಯೆ ಅವರ ಮೂರ್ಖತನವಲ್ಲ, ಬದಲಾಗಿ, ನಾವು ಪರಸ್ಪರ ತಪ್ಪಾಗಿ ಅರ್ಥಮಾಡಿಕೊಳ್ಳುತ್ತಿರುವುದು.

ಎರಿಕ್ಸನ್ ಅವರ ಪ್ರಕಾರ, ಪ್ರತಿಯೊಂದು ಸಂಭಾಷಣೆಯ ಉದ್ದೇಶವೂ ಪರಸ್ಪರ ಅರ್ಥಮಾಡಿಕೊಳ್ಳುವಿಕೆಯನ್ನು ಹೆಚ್ಚಿಸುವುದಾಗಿರಬೇಕು. ಏಕೆಂದರೆ, ಕೊನೆಗೂ ನೀವು ಒಂದು ಕೋಣೆಯೊಳಗೆ ಕಾಲಿಟ್ಟಾಗ, ಬೇರೊಬ್ಬರ ದೃಷ್ಟಿಯಲ್ಲಿ ನೀವು ಕೂಡ ಒಬ್ಬ “ಈಡಿಯಟ್”ಆಗಿರಬಹುದು. ಆದ್ದರಿಂದ, ನಾವು ನಮ್ಮದೇ ರೀತಿಯಲ್ಲಿ ಮಾತನಾಡುವುದಷ್ಟೇ ಅಲ್ಲ, ಇತರರು ಅರ್ಥಮಾಡಿಕೊಳ್ಳುವ “ಭಾಷೆಯಲ್ಲಿ” ಮಾತನಾಡುವುದನ್ನೂ ಕಲಿಯಬೇಕು. ಇಲ್ಲಿ “ಇತರರ ಭಾಷೆ” ಎಂದರೆ ಅವರ ವ್ಯಕ್ತಿತ್ವ, ಯೋಚಿಸುವ ರೀತಿ ಮತ್ತು ಸಂವಹನ ಶೈಲಿಗೆ ತಕ್ಕಂತೆ ಮಾತನಾಡುವುದು ಎಂಬ ಅರ್ಥ.

*********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.