ಎಲ್ಲ ಪ್ರಶ್ನೆಗಳಿಗೂ ನಿಶ್ಚಿತವಾದ ಉತ್ತರಗಳು ಇರುವುದಿಲ್ಲ

ಫ್ರೆಂಚ್ ತತ್ವಜ್ಞಾನಿ Simone de Beauvoir ಈ ಸ್ಥಿತಿಯನ್ನು ‘ಅಸ್ಪಷ್ಟತೆ’ (Ambiguity) ಎಂದು ಕರೆದರು. ಅವರ ದೃಷ್ಟಿಯಲ್ಲಿ ಇದು ನಕಾರಾತ್ಮಕವಾದ ವಿಷಯವಲ್ಲ; ಬದಲಾಗಿ, ಮಾನವ ಜೀವನದ ಸಹಜ ಸ್ವರೂಪವೇ ಆಗಿದೆ. ಆದರೆ, ಈ ಅಸ್ಪಷ್ಟತೆಯನ್ನು ಇನ್ನೂ ಹೆಚ್ಚು ಅಪಾಯಕಾರಿ ಮತ್ತು ಕತ್ತಲೆಯ ಮನೋಭಾವವಾದ ‘ನಿಹಿಲಿಸಂ’ (Nihilism) ಜೊತೆ ಗೊಂದಲಗೊಳಿಸಬಾರದು ಎಂದು ಅವರು ಎಚ್ಚರಿಸಿದರು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಜೀವನದಲ್ಲಿ ಒಪ್ಪಿಕೊಳ್ಳಲು ಅತ್ಯಂತ ಕಷ್ಟಕರವಾದ ಸಂಗತಿಗಳಲ್ಲಿ ಒಂದು ಎಂದರೆ, ಎಲ್ಲ ಪ್ರಶ್ನೆಗಳಿಗೂ ನಿಶ್ಚಿತವಾದ ಉತ್ತರಗಳು ಇರುವುದಿಲ್ಲ ಎನ್ನುವುದು. ನಾವು ಬೆಳೆಯುವ ಪ್ರಕ್ರಿಯೆಯಲ್ಲಿಯೂ ಅರ್ಥ ಮಾಡಿಕೊಳ್ಳಲು ಅತ್ಯಂತ ಕಷ್ಟಕರವಾದ ಸಂಗತಿಯೆಂದರೆ, ನಮ್ಮ ತಂದೆ-ತಾಯಿ, ನಮ್ಮ ಶಿಕ್ಷಕರು ಮತ್ತು ನಮ್ಮ ಸಮಾಜವೂ ಸಹ ಇತರರಂತೆ ಜೀವನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರೇ ಹೊರತು, ಎಲ್ಲ ಉತ್ತರಗಳನ್ನು ತಿಳಿದಿರುವವರಲ್ಲ ಎನ್ನುವುದು. ಈ ವಿಶ್ವದಲ್ಲಿ ಬದುಕಲು ಯಾವುದೋ ದೈವಿಕ instruction manual ಇಲ್ಲ. ನೀವು ಹುಟ್ಟಿದ ಕ್ಷಣದಲ್ಲೇ ನಿಮ್ಮ ಅಸ್ತಿತ್ವದ ಉದ್ದೇಶವನ್ನು ನಿಮ್ಮ ಮೇಲೆ ಯಾರೂ ಹಚ್ಚೆ ಹಾಕಿಲ್ಲ.

ಫ್ರೆಂಚ್ ತತ್ವಜ್ಞಾನಿ Simone de Beauvoir ಈ ಸ್ಥಿತಿಯನ್ನು ‘ಅಸ್ಪಷ್ಟತೆ’ (Ambiguity) ಎಂದು ಕರೆದರು. ಅವರ ದೃಷ್ಟಿಯಲ್ಲಿ ಇದು ನಕಾರಾತ್ಮಕವಾದ ವಿಷಯವಲ್ಲ; ಬದಲಾಗಿ, ಮಾನವ ಜೀವನದ ಸಹಜ ಸ್ವರೂಪವೇ ಆಗಿದೆ. ಆದರೆ, ಈ ಅಸ್ಪಷ್ಟತೆಯನ್ನು ಇನ್ನೂ ಹೆಚ್ಚು ಅಪಾಯಕಾರಿ ಮತ್ತು ಕತ್ತಲೆಯ ಮನೋಭಾವವಾದ ‘ನಿಹಿಲಿಸಂ’ (Nihilism) ಜೊತೆ ಗೊಂದಲಗೊಳಿಸಬಾರದು ಎಂದು ಅವರು ಎಚ್ಚರಿಸಿದರು.

ಸಿಮೋನ್ ಅವರ ಪ್ರಕಾರ, “ಯಾವುದಕ್ಕೂ ನಿಜವಾದ ಅರ್ಥವಿಲ್ಲ” ಎಂದು ಹೇಳುವ ವ್ಯಕ್ತಿಯನ್ನು ನೀವು ಗಮನಿಸಿದರೆ, ಅವನು ಅಪರೂಪಕ್ಕೆ ಮಾತ್ರ ಮನಃಶಾಂತಿ ಹೊಂದಿದವನಾಗಿರುತ್ತಾನೆ. ಹೆಚ್ಚಾಗಿ ಅವನು ಕೋಪ, ಕಹಿ ಮತ್ತು ಏಕಾಂಗಿತನದಿಂದ ಕೂಡಿದವನಾಗಿರುತ್ತಾನೆ. ಏಕೆಂದರೆ, ನಿಹಿಲಿಸಂ (Nihilism) ಎನ್ನುವುದು ಒಂದು ರೀತಿಯ ಹೃದಯಭಂಗ. ಅದು ಈಡೇರದ ನಿರೀಕ್ಷೆಗಳಿಂದ ಉಂಟಾಗುವ ಆಳವಾದ ನಿರಾಶೆ. ಇದು, ಸಾಂಟಾ ಕ್ಲಾಸ್ (Father Christmas) ಎಂಬಾತ ನಿಜವಾಗಿ ಇಲ್ಲ ಎನ್ನುವುದನ್ನು ಈಗಷ್ಟೇ ತಿಳಿದುಕೊಂಡ ಒಂದು ಮಗುವಿನಂತೆ. ಆ ಮಗು, “ಸಾಂಟಾ ಇಲ್ಲ ಎಂದಾದರೆ ಸಂತೋಷವೂ ಇಲ್ಲ, ಆಚರಣೆಯೂ ಇಲ್ಲ” ಎಂದು ತೀರ್ಮಾನಿಸುವಂತೆ.

ಆದರೆ, ಈಗಾಗಲೇ ನಿಗದಿಪಡಿಸಿದ ಅರ್ಥದ ಅನುಪಸ್ಥಿತಿ ಎಂದರೆ ಅರ್ಥವೇ ಇಲ್ಲ ಎನ್ನುವುದಲ್ಲ. ಯಾವುದೋ ವಿಷಯ ಅಸ್ಪಷ್ಟವಾಗಿರುವುದು ಅಥವಾ ಇನ್ನೂ ತಿಳಿದಿಲ್ಲದಿರುವುದು, ಅದಕ್ಕೆ ಯಾವುದೇ ಉತ್ತರವೇ ಇಲ್ಲ ಎನ್ನುವುದನ್ನ ಸೂಚಿಸುವುದಿಲ್ಲ. ವಾಸ್ತವವಾಗಿ, ಸತ್ಯವು ಇದಕ್ಕೆ ವಿರುದ್ಧವಾಗಿದೆ. ಯಾರಾದರೂ ನಿಮ್ಮ ಜೀವನವನ್ನು ಮೊದಲೇ ಸಂಪೂರ್ಣವಾಗಿ ಬರೆದು ಕೊಟ್ಟಿದ್ದರೆ, ನಿಮಗೆ ಯಾವುದೇ ಆಯ್ಕೆಗಳನ್ನು ಮಾಡುವ ಅವಕಾಶವೇ ಇರುತ್ತಿರಲಿಲ್ಲ. ಯಾರಾದರೂ “ಹೀಗೆ ಮಾತನಾಡು, ಹೀಗೆ ನಡೆ, ಇವುಗಳೇ ಎಲ್ಲ ಉತ್ತರಗಳು” ಎಂದು ಮೊದಲೇ ಹೇಳಿಬಿಟ್ಟಿದ್ದರೆ, ನೀವು ನಿಜವಾದ ಅರ್ಥದಲ್ಲಿ ಬದುಕಬೇಕಾದ ಜೀವನವೇ ಉಳಿಯುತ್ತಿರಲಿಲ್ಲ. ಜೀವನದ ಅರ್ಥವೆಂಬುದು ಎಲ್ಲೋ ಸಿದ್ಧವಾಗಿ ಬಿದ್ದಿರುವ ವಸ್ತುವಲ್ಲ; ಅದನ್ನು ನೀವು ಹುಡುಕಿ ಎತ್ತಿಕೊಳ್ಳುವುದೂ ಅಲ್ಲ. ಅದು ನೀವು ನಿಮ್ಮ ಆಯ್ಕೆಗಳು, ನಿಮ್ಮ ಕಾರ್ಯಗಳು ಮತ್ತು ನಿಮ್ಮ ಬದುಕಿನ ಮೂಲಕ ಪ್ರತಿದಿನವೂ ಸ್ವತಃ ನಿರ್ಮಿಸಿಕೊಳ್ಳುವ ಸಂಗತಿ. ಆ ಅರ್ಥವನ್ನು ರೂಪಿಸುವ ಜವಾಬ್ದಾರಿಯೂ ನಿಮ್ಮದೇ.

ಈ ವಿಶ್ವವು ನಮ್ಮ ಜೀವನಕ್ಕೆ ಸಿದ್ಧ ಉತ್ತರಗಳನ್ನು ನೀಡುವುದಿಲ್ಲ. ಆದರೆ ಅದೇ ಜೀವನದ ನಿಜವಾದ ಸೌಂದರ್ಯ ಮತ್ತು ಉದ್ದೇಶ. ಏಕೆಂದರೆ, ಜೀವನವು ಒಂದು ಖಾಲಿ ಹಾಳೆಯಂತಿದೆ; ಆ ಹಾಳೆಯ ಮೇಲೆ ಬರೆಯುವ ಲೇಖನಿ ನಮ್ಮ ಕೈಯಲ್ಲಿದೆ. ನಾವು ಬಯಸುವ ಕಥೆಯನ್ನು ನಾವೇ ಬರೆಯಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.