ಜಾತಿ ಎಂಬುದಿಲ್ಲ… । ಹಳೆಯ ಹಾದಿ, ಬಿಳಿಯ ಮೋಡ ಅಧ್ಯಾಯ #4.2

ಬುದ್ಧ ಕರುಣೆ ತುಂಬಿದ ನೋಟದಿಂದ ಅವರಿಬ್ಬರನ್ನು ನೋಡುತ್ತಾ ನುಡಿದ, “ಯಾರೂ ಜಾತಿಯ ಗುರುತು ಹೊತ್ತುಕೊಂಡು ಹುಟ್ಟೋದಿಲ್ಲ, ನಿಮಗೂ ಇದು ಗೊತ್ತು. ಎಲ್ಲರ ಕಣ್ಣೀರೂ ಉಪ್ಪೇ, ಎಲ್ಲರ ರಕ್ತವೂ ಕೆಂಪೇ. ಜನರ ಗುಂಪಿಗೆ ಜಾತಿಗಳ ಹೆಸರಿಟ್ಟು, ಪೂರ್ವಾಗ್ರಹ ಬಿತ್ತಿ ಒಡಕು ಮೂಡಿಸೋದು ತಪ್ಪು. ಧ್ಯಾನದಿಂದ ನಾನಿದನ್ನು ಕಂಡುಕೊಂಡಿದೀನಿ”  । ತಿ ನ್ಹಾತ್ ಹಾನ್, Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ

ಅಧ್ಯಾಯ 4.2: ಜಾತಿ ಎಂಬುದಿಲ್ಲ…

“ಮಕ್ಕಳೇ, ನಾನು ಮೌನವಾಗಿ ಊಟ ಮಾಡೋದು ಯಾಕೆ ಗೊತ್ತಾ?” ಸಿದ್ಧಾರ್ಥ ಮುಂದುವರಿಸಿದ. “ಅನ್ನದ ಪ್ರತಿಯೊಂದು ಅಗುಳೂ ಅಮೂಲ್ಯ, ಎಳ್ಳಿನ ಪ್ರತಿಯೊಂದು ಕಾಳೂ ಅಮೂಲ್ಯ. ಅವನ್ನು ಸಂಪೂರ್ಣವಾಗಿ ಸವಿಯಲೆಂದೇ ನಾನು ಮೌನವಾಗಿ ಉಣ್ಣೋದು. ಸುಜಾತಾ, ನೀನು ಯಾವತ್ತಾದ್ರೂ ಕಪ್ಪಕ್ಕಿ ಅನ್ನ ತಿಂದಿದೀಯಾ? ನಿನ್ನ ಊಟ ಆಗಿದ್ರೂ ಒಂದು ತುತ್ತು ತಿಂದು ನೋಡು, ಬಹಳ ರುಚಿಯಾಗಿದೆ. ಈಗ ಮೂವರೂ ಮಾತಾಡದೆ ಒಟ್ಟಿಗೆ ಊಟ ಮಾಡೋಣ. ಆಮೇಲೆ ನಾನೊಂದು ಕತೆ ಹೇಳ್ತೀನಿ”

ಸಿದ್ದಾರ್ಥ, ಸ್ವಸ್ತಿ ಮತ್ತು ಸುಜಾತಾ ತಮ್ಮ ಊಟವನ್ನು ಹಂಚಿಕೊಂಡರು.

ಸಿದ್ದಾರ್ಥ ಕಪ್ಪಕ್ಕಿ ಅನ್ನದ ಒಂದು ತುತ್ತನ್ನು ಸುಜಾತಾಳ ಅಂಗೈ ಮೇಲಿಟ್ಟ.  ಅವಳು ಅದನ್ನು ಗೌರವದಿಂದ ಸ್ವೀಕರಿಸಿದಳು. ಮೂವರೂ ಕಾಡಿನ ದಟ್ಟ ನೀರವದಲ್ಲಿ ಮೌನವಾಗಿ ಊಟ ಮುಗಿಸಿದರು.

ಆಮೇಲೆ ಸುಜಾತಾ ಖಾಲಿಯಾಗಿದ್ದ ಬಾಳೆಲೆಗಳನ್ನು ಒಟ್ಟುಗೂಡಿಸಿದಳು. ತನ್ನ ಪಕ್ಕದಲ್ಲಿದ್ದ ಮಡಕೆಯಿಂದ ತಾನು ತಂದಿದ್ದ ಒಂದೇ ಒಂದು ಲೋಟಕ್ಕೆ ನೀರು ಬಗ್ಗಿಸಿ ಅದನ್ನು ಸಿದ್ದಾರ್ಥನಿಗೆ ಕೊಡಲು ಮೇಲಕ್ಕೆತ್ತಿದಳು. ಅವನು ಅದನ್ನು ತನ್ನೆರಡೂ ಕೈಗಳಲ್ಲಿ ತೆಗೆದುಕೊಂಡು ಸ್ವಸ್ತಿಗೆ ನೀಡಿದ.

ಗಾಬರಿಗೊಂಡ ಸ್ವಸ್ತಿ, “ಅಯ್ಯೋ ಬೇಡ ಅಯ್ಯಾ… ಅಲ್ಲ… ಗುರುಗಳೇ… ಮೊದಲು ನೀವು ಕುಡಿಯಿರಿ” ಎಂದು ತಡವರಿಸಿದ. 

ಸಿದ್ದಾರ್ಥ ಮೆಲುದನಿಯಲ್ಲಿ, “ಕುಡಿಯಪ್ಪಾ. ನೀನೇ ಮೊದಲು ಕುಡಿಯಬೇಕು ಅನ್ನೋದು ನನ್ನಾಸೆ” ಅನ್ನುತ್ತಾ ಲೋಟವನ್ನು ಸ್ವಸ್ತಿಯತ್ತ ಮುಂಚಾಚಿದ.

ಸ್ವಸ್ತಿಗೆ ಗಲಿಬಿಲಿಯಾಯಿತು. ತನಗೆ ಅಭ್ಯಾಸವೇ ಇಲ್ಲದ ಈ ಗೌರವವನ್ನು ಹೇಗೆ ನಿರಾಕರಿಸಬೇಕೆಂದೇ ಅವನಿಗೆ ತಿಳಿಯಲಿಲ್ಲ. ತಲೆಬಾಗಿ ಕೈಮುಗಿದು ಲೋಟವನ್ನು ತೆಗೆದುಕೊಂಡ. ಒಂದೇ ಗುಟುಕಿನಲ್ಲಿ ಅದರಲ್ಲಿದ್ದ ನೀರನ್ನೆಲ್ಲಾ ಕುಡಿದು, ಆ ಲೋಟವನ್ನು ಸಿದ್ದಾರ್ಥನಿಗೆ ಮರಳಿಸಿದ. ಸಿದ್ದಾರ್ಥ ಮತ್ತೊಮ್ಮೆ ನೀರು ಸುರಿಯುವಂತೆ ಸುಜಾತಾಗೆ ಸೂಚಿಸಿದ. ಅವಳು ಹಾಗೇ ಮಾಡಿದಳು. ಅದು ತುಂಬಿದ ಮೇಲೆ ಅದನ್ನು ತನ್ನ ತುಟಿಗಳಿತ್ತ ಒಯ್ದು ಸಂಪೂರ್ಣ ಪ್ರೀತಿ ಮತ್ತು ಆನಂದದಿಂದ ಅದನ್ನು ಗುಟುಕು ಗುಟುಕಾಗಿ ಕುಡಿದ. ಇವೆಲ್ಲ ನಡೆಯುತ್ತಿದ್ದಾಗ ಸುಜಾತಾಳ ನೋಟ ಸಿದ್ದಾರ್ಥ ಮತ್ತು ಸ್ವಸ್ತಿಯಿಂದಾಚೆ ಸ್ವಲ್ಪವೂ ಕದಲಿರಲಿಲ್ಲ. ಸಿದ್ದಾರ್ಥ ನೀರು ಕುಡಿದು ಮುಗಿಸಿದ ನಂತರ ಮೂರನೇ ಬಾರಿ ನೀರು ಸುರಿಯುವಂತೆ ಸುಜಾತಾಳನ್ನು ಕೇಳಿಕೊಂಡ. ಆಮೇಲೆ ಲೋಟವನ್ನೆತ್ತಿ ಅವಳಿಗೆ ಕೊಟ್ಟು ಕುಡಿಯುವಂತೆ ಹೇಳಿದ. ಅವಳು ನೀರಿನ ಮಡಕೆಯನ್ನು ಕೆಳಗಿಟ್ಟು, ಕೈಮುಗಿದು, ಅದನ್ನು ಸ್ವೀಕರಿಸಿದಳು. ಆಮೇಲೆ ಅದನ್ನು ತನ್ನ ತುಟಿಗಳತ್ತ ಒಯ್ದು, ಸಿದ್ದಾರ್ಥ ಕುಡಿದಂತೆಯೇ ನಿಧಾನವಾಗಿ, ಗುಟುಕು ಗುಟುಕಾಗಿ ಕುಡಿದಳು.  

ಒಬ್ಬ ಅಸ್ಪೃಶ್ಯ ಕುಡಿದ ಅದೇ ಲೋಟದಿಂದ ತಾನು ಕುಡಿಯುತ್ತಿರುವುದು ಇದೇ ಮೊದಲು ಅನ್ನುವ ಅರಿವು ಅವಳಿಗಿತ್ತು. ಆದರೆ ಸಿದ್ದಾರ್ಥ ಅವಳ ಗುರುವಾಗಿದ್ದ. ತನ್ನ ಗುರುವೇ ಹಾಗೆ ಮಾಡಿದ ಮೇಲೆ ತಾನೇಕೆ ಅದನ್ನು ಮಾಡಬಾರದು? ಜೊತೆಗೆ ಸ್ವತಃ ತನಗೂ ಮೈಲಿಗೆಯ ಭಾವನೆ ಬರಲಿಲ್ಲ ಅನ್ನುವುದನ್ನು ಅವಳು ಕಂಡುಕೊಂಡಳು. ಅವಳು ಕೈಚಾಚಿ ಆ ಎಮ್ಮೆ ಕಾಯುವ ಹುಡುಗನ ಕೂದಲನ್ನು ಮುಟ್ಟಿದಳು. ಅದೂ ಎಷ್ಟು ಸಹಜವಾಗಿ ಅಂದರೆ,  ಸ್ವಸ್ತಿಗೆ ಅದು ಅರಿವಾಗಿ ಪಕ್ಕಕ್ಕೆ ಸರಿಯಲೂ ಸಮಯ ಸಿಗಲಿಲ್ಲ. ಸುಜಾತಾ ನೀರು ಕುಡಿದು, ಮುಗುಳ್ನಗುತ್ತಾ ಖಾಲಿ ಲೋಟವನ್ನು ನೆಲದ ಮೇಲಿಟ್ಟಳು.

ಬುದ್ಧ ಕರುಣೆ ತುಂಬಿದ ನೋಟದಿಂದ ಅವರಿಬ್ಬರನ್ನು ನೋಡುತ್ತಾ ನುಡಿದ, “ಯಾರೂ ಜಾತಿಯ ಗುರುತು ಹೊತ್ತುಕೊಂಡು ಹುಟ್ಟೋದಿಲ್ಲ, ನಿಮಗೂ ಇದು ಗೊತ್ತು. ಎಲ್ಲರ ಕಣ್ಣೀರೂ ಉಪ್ಪೇ, ಎಲ್ಲರ ರಕ್ತವೂ ಕೆಂಪೇ. ಜನರ ಗುಂಪಿಗೆ ಜಾತಿಗಳ ಹೆಸರಿಟ್ಟು, ಪೂರ್ವಾಗ್ರಹ ಬಿತ್ತಿ ಒಡಕು ಮೂಡಿಸೋದು ತಪ್ಪು. ಧ್ಯಾನದಿಂದ ನಾನಿದನ್ನು ಕಂಡುಕೊಂಡಿದೀನಿ.”

ಸುಜಾತಾ ಯೋಚನೆಯಲ್ಲಿ ಮುಳುಗಿದಂತೆ ಮಾತನಾಡಿದಳು, “ನಾವು ನಿಮ್ಮ ಶಿಷ್ಯರು. ನಿಮ್ಮ ಮಾತು ಕೇಳ್ತೀವಿ, ನಂಬ್ತೀವಿ. ಆದ್ರೆ ನಿಮ್ಮ ಹಾಗೆ ಇನ್ಯಾರೂ ಮಾತಾಡೋದಿಲ್ಲ. ಅವರೆಲ್ಲ ಶೂದ್ರರು ಸೃಷ್ಟಿಕರ್ತನ ಪಾದಗಳಿಂದ ಹುಟ್ಟಿದವರು, ಅಸ್ಪೃಶ್ಯರು ಅವರಿಗಿಂತ ಕೀಳು ಅಂತ ಹೇಳ್ತಾರೆ. ಶಾಸ್ತ್ರಗಳಲ್ಲೂ ಹಾಗೇ ಇವೆ. ಯಾರೂ ನಿಮ್ಮಂತೆ  ಯೋಚಿಸುವ ಧೈರ್ಯ ಮಾಡೋದಿಲ್ಲ”

“ಹೌದು, ನನಗೂ ಗೊತ್ತಿದೆ. ಆದ್ರೆ, ಯಾರು ನಂಬಿದ್ರೂ ಯಾರು ಬಿಟ್ಟರೂ ಸತ್ಯ, ಸತ್ಯವೇ ಆಗಿರುತ್ತೆ ಅಲ್ವಾ? ಸತ್ಯವಂತರಾಗಿ ಬಾಳೋಕೆ ಸಾಕಷ್ಟು ಧೈರ್ಯ ಬೇಕು. ನಾನು ಚಿಕ್ಕವನಿದ್ದಾಗ ಒಂದು ಘಟನೆಯಾಗಿತ್ತು. ಅದನ್ನು ಹೇಳ್ತೀನಿ ಕೇಳಿ.

ಸಿದ್ಧಾರ್ಥ ತನ್ನ ಬಾಲ್ಯದ ನೆನಪಿಗೆ ಜಾರಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.