ನಿಜವಾದ ನಾನುತನ ಉಳ್ಳವರು ಎಂದೂ ಹೊರಗಿನ ಯಜಮಾನರನ್ನು ಹುಡುಕಿಕೊಳ್ಳುವುದಿಲ್ಲ; ಬದಲಾಗಿ. ನಮ್ಮ ಮಾತು, ನಮ್ಮ ಆಲೋಚನೆ, ನಮ್ಮ ಕ್ರಿಯೆ, ನಮ್ಮ ಎಲ್ಲ ಕೆಲಸಗಳಿಗೆ ನಾವೇ ಹೊಣೆಗಾರರು ಎಂದು ಒಪ್ಪಿಕೊಳ್ಳುತ್ತಾರೆ. ನಮ್ಮ ನಿಜತನವನ್ನು ಕಂಡುಕೊಳ್ಳಲು ಗಮನದ ಎಚ್ಚರ ನಮಗೆ ಸಹಾಯ ಮಾಡುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 3.14: ಭಾವ-ಸಂಬಂಧ । ʻನಾನುʼ ಎಂಬ ನಿಜ
ಮನೆಯಲ್ಲಿ ಶಾಂತಿ ಇರಲೆಂದು ನಾವು ಎಷ್ಟೋ ಸಲ ರಾಜಿ ಮಾಡಿಕೊಂಡು ಬದುಕುತ್ತೇವೆ. ಮನೆಯಲ್ಲಿ ಒಂದು ಗಳಿಗೆ ಶಾಂತಿ ಇದ್ದರೆ ಇಡೀ ದಿನ ಹೇಗೋ ನಿಭಾಯಿಸಬಹುದು ಅಂದುಕೊಳ್ಳುತ್ತೇವೆ. ಹೀಗೆಯೇ ದಿನ ದಿನವೂ ಬದುಕುತ್ತಾ ನಾವು ಮಹಾನ್ ಆಗುವ ಬದಲು ಬಿರುಕು ಬಿಟ್ಟ ಪಾತ್ರೆ, ಒಳಗಿರುವ ಸೂಪ್ ಸೋರಿ ಹೋಗುವ ಪಾತ್ರೆ ಥರ ಆಗಿಬಿಡುತ್ತೇವೆ. ನಾವು ಧರ್ಮದ ಉಪಕರಣ ಆಗಬೇಕು ಅಂತಿದ್ದರೆ- ಟ್ರಿಕ್ಕು ಮಾಡಿ ಮರುಳುಗೊಳಿಸುವವರಿಗೆ ನಾವು ವಶವಾಗಬಾರದು ಅನ್ನುವ ದೃಢ ನಿರ್ಧಾರ ಇರಬೇಕು.
ನಾವು ಇರುವ ಸನ್ನಿವೇಶದ ಒಡೆಯರು ನಾವೇ ಆಗಿರಬೇಕು ಎಂದು ಗುರು ಲಿನ್ಜಿ ಹೇಳಿದ್ದಾರೆ. ಇದರ ಅರ್ಥ ನಾವು ಪ್ರಮುಖರಾಗಲು ಹೋರಾಡಬೇಕು, ಇತರರನ್ನು ತುಳಿಯಬೇಕು ಅಂತಲ್ಲ. ನಮ್ಮ ಒಡೆಯರು ನಾವೇ ಆಗಿರಬೇಕು ಅನ್ನುವುದು ಗುರು ಲಿನ್ಜಿಯ ಮಾತಿನ ಅರ್ಥ. ಬಲು ಬೇಗ ಸಿಟ್ಟು ಮಾಡಿಕೊಳ್ಳುವ ಫ್ರೆಂಡ್ ಒಬ್ಬರಿದ್ದರೆ ಏನು ಮಾಡುತ್ತೇವೆ? ಯಾಕೋ ಅವರ ಮನಸು ಸರಿಯಾಗಿಲ್ಲ ಅಂದುಕೊಂಡು ಅವರ ಕೋಪ ತಡೆದುಕೊಳ್ಳುವಂತೆ ಉಪಾಯ ಮಾಡುತ್ತೇವೆ; ಅಥವಾ ಅವರು ದನಿ ಏರಿಸಿದರೆಂದು ನಾವೂ ನಮ್ಮ ದನಿ ಏರಿಸುತ್ತೇವೆ; ಅಥವಾ ಅಂಥ ಸನ್ನಿವೇಶದಲ್ಲಿ ನಮ್ಮ ಮೇಲಿನ ಒಡೆತನ ನಾವೇ ಉಳಿಸಿಕೊಂಡು ಅವರ ಕಷ್ಟಗಳ ಬಗ್ಗೆ ನಿಜವಾಗಿ ಮರುಕಪಡುತ್ತೇವೆ.
ಕೆಲವೊಮ್ಮೆ ನಮ್ಮೆದುರಿಗೆ ಇರುವ ಫ್ರೆಂಡಿನ ಬದಲಾಗಿ ಗತ ಕಾಲದ ಯಾರೋ ವ್ಯಕ್ತಿಗಳು ನಮ್ಮ ಸನ್ನಿವೇಶವನ್ನು ಆಳಲು ಅವಕಾಶಮಾಡಿಕೊಡುತ್ತೇವೆ. ನಾವು ಮಕ್ಕಳಾಗಿದ್ದಾಗ ನಮ್ಮ ಅಪ್ಪ, ಅಮ್ಮ ಅಥವಾ ಮತ್ತೆ ಯಾರೋ ಹೀಗೆ ಮಾಡಿದರು ಅದಕ್ಕೇ ನಾವು ಹೀಗೆ ಅನ್ನುತ್ತಾ ಸಮರ್ಥಿಸಿಕೊಳ್ಳುತ್ತೇವೆ, ಈಗಿರುವ ನಮ್ಮ ಸನ್ನಿವೇಶವನ್ನು ಇಲ್ಲದ ಕಾಲದ ಹಳಬರಿಗೆ ವಹಿಸಿಕೊಡುತ್ತೇವೆ.
ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ನಾವೇ ಜವಾಬ್ದಾರರು, ನಾವಿರುವ ಸನ್ನಿವೇಶಕ್ಕೆ ನಾವೇ ಒಡೆಯರು; ನಾವು ಬೇರೆಯವರ, ಗತಕಾಲದಲ್ಲಿ ಆಗಿಹೋದವರ ಯಜಮಾನಿಕೆಗೆ ಒಳಪಟ್ಟವರಲ್ಲ.
ನಿಜವಾದ ನಾನುತನ ಉಳ್ಳವರು ಎಂದೂ ಹೊರಗಿನ ಯಜಮಾನರನ್ನು ಹುಡುಕಿಕೊಳ್ಳುವುದಿಲ್ಲ; ಬದಲಾಗಿ. ನಮ್ಮ ಮಾತು, ನಮ್ಮ ಆಲೋಚನೆ, ನಮ್ಮ ಕ್ರಿಯೆ, ನಮ್ಮ ಎಲ್ಲ ಕೆಲಸಗಳಿಗೆ ನಾವೇ ಹೊಣೆಗಾರರು ಎಂದು ಒಪ್ಪಿಕೊಳ್ಳುತ್ತಾರೆ. ನಮ್ಮ ನಿಜತನವನ್ನು ಕಂಡುಕೊಳ್ಳಲು ಗಮನದ ಎಚ್ಚರ ನಮಗೆ ಸಹಾಯ ಮಾಡುತ್ತದೆ.
ಗಮನದ ಎಚ್ಚರದಿಂದ ನಮಗೆ ತಿಳಿಯುತ್ತದೆ—”ನಾನು ಹೀಗೆ ಯೋಚನೆ ಮಾಡುತಿದ್ದೇನೆ, ಈ ನನ್ನ ಯೋಚನೆಗಳಿಗೆ ನಾನೇ ಜವಾಬ್ದಾರ.” “ನಾನು ಹೀಗೆ ಮಾಡುತಿದ್ದೇನೆ, ಇದರಿಂದ ಮುಂದೆ ಆಗುವುದಕ್ಕೆಲ್ಲ ನಾನೇ ಜವಾಬ್ದಾರ.”
ನಮ್ಮ ಒಂದೊಂದೂ ಮಾತು, ಒಂದೊಂದೂ ಯೋಚನೆ, ಒಂದೊಂದೂ ಕೆಲಸದ ಮೇಲೆ ನಮ್ಮ ಸಹಿ ಇರುತ್ತದೆ ಅನ್ನುವುದು ನಮಗೆ ತಿಳಿಯಬೇಕು. ಈ ʻಹೊಣೆಗಾರಿಕೆʼಯನ್ನೇ ನನ್ನತನದ ಅರಿವು ಎನ್ನುತ್ತೇವೆ. ಅದು ಇರುವಾಗ ನಾವೆಲ್ಲಿ ನಿಂತರೂ, ಕುಳಿತರೂ ನಾವು ನಿಜವಾಗಿ ಇರುತ್ತೇವೆ. ನಮ್ಮ ಒಡೆಯರು ನಾವೇ. ನಾವು ಏನಾಗಿರುತ್ತೇವೋ ಅದೇ ನಿಜವಾದ ನಾವು.
ಈ ಏಳು ಶಬ್ದಗಳನ್ನು ಬದುಕಿದರೆ ಸಾಕು, ಗುರು ಲಿನ್ಜಿ ಹೇಳಿದ ಹಾಗೆ ನಾವು ಬದುಕುತ್ತೇವೆ: “ನಾವು ಏನೇ ಆಗಿದ್ದರೂ ಅದೇ ನಮ್ಮ ನಿಜ ವ್ಯಕ್ತಿತ್ವ.ʼ
*
೧ ಈ ಬಸವವಚನ ನಾನು ಎಂಬ ನಿಜಗುಣದ ವರ್ಣನೆಯಂತೆ ಇದೆ ಅನಿಸಿತು
ಮಾಡಿ ಮಾಡಿ ಕೆಟ್ಟರೋ ನಿಜವಿಲ್ಲದೆ
ನೀಡಿ ನೀಡಿ ಕೆಟ್ಟರೋ ನಿಜವಿಲ್ಲದೆ
ಮಾಡುವ ನೀಡುವ ನಿಜಗುಣ ಉಳ್ಳವರ ಕೂಡಿಕೊಂಡಿರ್ಪ ಕೂಡಲಸಂಗಮದೇವ.
೨ ಗಮನದ ಎಚ್ಚರವಿಲ್ಲದೆ, ಅರಿವಿಲ್ಲದೆ ಏನೋ ಆಗಿಬಿಟ್ಟೆವು ಎಂದು ಭ್ರಮಿಸುವವರನ್ನು ಅಲ್ಲಮ ವಚನ ವಿವರಿಸುತ್ತದೆ
ಆಚಾರವರಿಯದೆ, ವಿಭವವಳಿಯದೆ
ಕೋಪವಡಗದೆ ತಾಪ ಮುರಿಯದೆ
ಬರಿದೆ ಭಕ್ತರಾದೆವೆಂದು ಬೆಬ್ಬನೆ ಬೆರೆಯುವ ಕೇಡಿಂಗೆ
ನಾನು ಮರುಗುವೆ ಕಾಣಾ ಗುಹೇಶ್ವರಾ
೩ ಸಂಸಾರ, ಅಜ್ಞಾನ, ಆಸೆ, ಕೋಪ, ದುಃಖ ಎಲ್ಲವೂ ನಾನೇ ಮಾಡಿಕೊಂಡದ್ದು ಅನ್ನುವಂತಿದೆ ಮಹದೇವಿಯಕ್ಕನವರ ವಚನ:
ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು
ಸಂಸಾರ ಹುಟ್ಟಿದಲ್ಲಿ ಅಜ್ಞಾನ ಹುಟ್ಟಿತ್ತು
ಅಜ್ಞಾನ ಹುಟ್ಟಿದಲ್ಲಿ ಆಶೆ ಹುಟ್ಟಿತ್ತು
ಆಶೆ ಹುಟ್ಟಿದಲ್ಲಿ ಕೋಪ ಹುಟ್ಟಿತ್ತು
ಆ ಕೋಪಾಗ್ನಿಯ ತಾಮಸಧೂಮ್ರ ಮುಸುಕಿದಲ್ಲಿ
ನಾ ನಿಮ್ಮ ಮರೆದು ಭವದುಃಖಕ್ಕೀಡಾದೆ
ನೀ ಕರುಣದಿಂದೆತ್ತಿ ಎನ್ನ ಮರಹ ವಿಂಗಡಿಸಿ ನಿಮ್ಮ ಪಾದವನರುಹಿಸಯ್ಯಾ
ಚೆನ್ನಮಲ್ಲಿಕಾರ್ಜುನಾ

