ಕಾಲ ಕಳೆದಂತೆ, ನಿನ್ನೆ ದುರದೃಷ್ಟವೆಂದು ಭಾವಿಸಿದ ಘಟನೆಯೇ ಇಂದು ಹೊಸ ಅವಕಾಶದ ಬಾಗಿಲಾಗಿರಬಹುದು; ಅದೃಷ್ಟವೆಂದುಕೊಂಡದ್ದೇ ಕೆಲವೊಮ್ಮೆ ಹೊಸ ಸವಾಲುಗಳಿಗೆ ಕಾರಣವಾಗಿರಬಹುದು… । ಡಾ. ಸಹನಾ ಪ್ರಿಯದರ್ಶಿನಿ
ಒಂದು ಹಳ್ಳಿಯಲ್ಲಿ ಒಬ್ಬ ವಯಸ್ಸಾದ ರೈತ ವಾಸಿಸುತ್ತಿದ್ದ. ಅವನ ಬಳಿ ಒಂದು ಸುಂದರವಾದ ಕುದುರೆ ಇತ್ತು. ಒಂದು ದಿನ ಆ ಕುದುರೆ ಕಾಡಿಗೆ ಓಡಿಹೋಯಿತು.
ನೆರೆಹೊರೆಯವರು ಬಂದು,
“ಅಯ್ಯೋ! ಎಂತಹ ದುರಾದೃಷ್ಟ!” ಎಂದು ಹೇಳಿದರು.
ರೈತ ಶಾಂತವಾಗಿ ಉತ್ತರಿಸಿದ,
“ದುರಾದೃಷ್ಟವೋ, ಅದೃಷ್ಟವೋ… ಯಾರಿಗೆ ಗೊತ್ತು?”
ಕೆಲವು ದಿನಗಳ ನಂತರ ಆ ಕುದುರೆ ಕಾಡಿನಿಂದ ಮರಳಿ ಬಂತು. ಅದರೊಂದಿಗೆ ಇನ್ನೂ ಮೂರು ಕಾಡು ಕುದುರೆಗಳೂ ಬಂದವು.
ನೆರೆಹೊರೆಯವರು ಸಂತೋಷದಿಂದ,
“ಎಂತಹ ಅದೃಷ್ಟ!” ಎಂದರು.
ರೈತ ಮತ್ತೆ ಅದೇ ಮಾತು ಹೇಳಿದ,
“ಅದೃಷ್ಟವೋ, ದುರಾದೃಷ್ಟ ವೋ… ಯಾರಿಗೆ ಗೊತ್ತು?”
ಮರುದಿನ ರೈತನ ಮಗ ಕಾಡು ಕುದುರೆಗಳನ್ನು ಪಳಗಿಸಲು ಪ್ರಯತ್ನಿಸಿದ. ಆದರೆ ಕುದುರೆಯಿಂದ ಕೆಳಗೆ ಬಿದ್ದು ಅವನ ಕಾಲು ಮುರಿಯಿತು.
ನೆರೆಹೊರೆಯವರು,
“ಅಯ್ಯೋ! ಇದು ತುಂಬಾ ದುರಾದೃಷ್ಟ!” ಎಂದರು.
ರೈತ ನಗುತ್ತಾ,
“ದುರಾದೃಷ್ಟವೋ, ಅದೃಷ್ಟವೋ… ಯಾರಿಗೆ ಗೊತ್ತು?” ಎಂದನು.
ಕೆಲವು ದಿನಗಳ ಬಳಿಕ ಯುದ್ಧ ಆರಂಭವಾಯಿತು. ಊರಿನ ಎಲ್ಲಾ ಯುವಕರನ್ನು ಸೈನ್ಯಕ್ಕೆ ಕರೆದುಕೊಂಡು ಹೋದರು. ಆದರೆ ರೈತನ ಮಗನ ಕಾಲು ಮುರಿದಿದ್ದ ಕಾರಣ ಅವನನ್ನು ಕರೆದುಕೊಂಡು ಹೋಗಲಿಲ್ಲ.
ಆಗ ನೆರೆಹೊರೆಯವರು ಮೌನವಾಗಿದ್ದರು. ರೈತನು ಹೇಳಿದ ಮಾತಿನ ಅರ್ಥ ಅವರಿಗೆ ಅರ್ಥವಾಗಿತ್ತು.
***
ನಮ್ಮ ದೈನಂದಿನ ಜೀವನದಲ್ಲಿ ಪ್ರತಿಯೊಂದು ಘಟನೆಯನ್ನೂ ತಕ್ಷಣವೇ ಒಳ್ಳೆಯದು ಅಥವಾ ಕೆಟ್ಟದ್ದು ಎಂದು ನಿರ್ಧರಿಸುವ ಅಭ್ಯಾಸ ನಮ್ಮಲ್ಲಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ನಿರಾಶೆಯಾಗುತ್ತೇವೆ, ಕೆಲಸದಲ್ಲಿ ಸಣ್ಣ ವಿಫಲತೆ ಎದುರಾದರೆ ಎಲ್ಲವೂ ಮುಗಿದುಹೋಯಿತು ಎಂದುಕೊಳ್ಳುತ್ತೇವೆ, ಅಥವಾ ಒಂದು ಯಶಸ್ಸು ಸಿಕ್ಕರೆ ಅತಿಯಾದ ಸಂತೋಷದಲ್ಲಿ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಆದರೆ ಕಾಲ ಕಳೆದಂತೆ, ನಿನ್ನೆ ದುರದೃಷ್ಟವೆಂದು ಭಾವಿಸಿದ ಘಟನೆಯೇ ಇಂದು ಹೊಸ ಅವಕಾಶದ ಬಾಗಿಲಾಗಿರಬಹುದು; ಅದೃಷ್ಟವೆಂದುಕೊಂಡದ್ದೇ ಕೆಲವೊಮ್ಮೆ ಹೊಸ ಸವಾಲುಗಳಿಗೆ ಕಾರಣವಾಗಿರಬಹುದು. ಇಂದು ಸೋಲು ಎಂದು ಕಾಣುವುದೇ ನಾಳೆ ದೊಡ್ಡ ಗೆಲುವಿನ ಕಾರಣವಾಗಬಹುದು; ಇಂದು ಲಾಭ ಎಂದು ಭಾಸವಾಗುವುದೇ ಮುಂದೆ ನಷ್ಟವಾಗಬಹುದು. ಜೀವನದ ಪ್ರತಿಯೊಂದು ಅನುಭವವೂ ನಮ್ಮನ್ನು ರೂಪಿಸುವ ಒಂದು ಪಾಠ. ಆದ್ದರಿಂದ ಪರಿಸ್ಥಿತಿಗಳನ್ನು ಆತುರದಿಂದ ತೀರ್ಮಾನಿಸುವ ಬದಲು, ತಾಳ್ಮೆಯಿಂದ ಸ್ವೀಕರಿಸಿ, ಪ್ರತಿಯೊಂದು ಅನುಭವದಿಂದ ಪಾಠ ಕಲಿಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ನಡೆಯುವ ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ ಎಂಬ ನಂಬಿಕೆ ಮತ್ತು ಸಮಚಿತ್ತದ ಮನಸ್ಥಿತಿಯೇ ನಮ್ಮನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಝೆನ್ ನಮಗೆ ಕಲಿಸುವುದು ಇದೇ ..…. ಸಂಭವಗಳಿಗೆ ತೀರ್ಪು ಕೊಡದೆ ಬಂದದ್ದನ್ನು,ಜಾಗೃತಿಯಿಂದ ಸ್ವೀಕರಿಸಿ ಬದುಕುವುದೇ ನಿಜವಾದ ಶಾಂತಿಯ ಮಾರ್ಗ.
“ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆ ಅಂತಿಮ ತೀರ್ಪಲ್ಲ; ಅದು ಮುಂದಿನ ಅಧ್ಯಾಯದ ಆರಂಭ ಮಾತ್ರ. ಆದ್ದರಿಂದ ತಾಳ್ಮೆಯಿಂದಿರಿ, ನಂಬಿಕೆಯಿಂದ ಮುಂದುವರಿಯಿರಿ.”
(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

