ತಪ್ಪುಗಳಾಗುವುದು ಮೈಮರೆವಿನಿಂದ, ಮನಮರೆವಿನಿಂದ, ಎಚ್ಚರ ತಪ್ಪುವುದರಿಂದ. ಎಲ್ಲವೂ ಹುಟ್ಟುವುದು ಮನಸಿನಿಂದಲೇ. ಹಾಗಾಗಿ ಈ ಎಲ್ಲವನ್ನೂ ಮನಸಿನೊಳಗೇ ಬದಲಿಸಬಹುದು. ಇದು ಬುದ್ಧನ ಬೋಧನೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 3.18: ಭಾವ-ಸಂಬಂಧ । ನಿನ್ನೆಯನ್ನು ವಾಸಿಮಾಡುವುದು
ನಾವು ಇದ್ದೇವೆ ಅಂದರೆ ನಮ್ಮ ಹಿರೀಕರೆಲ್ಲರೂ ಈಗಲೂ ಇದ್ದಾರೆ ಅಂತಲೇ ಅರ್ಥ. ಅವರೆಲ್ಲ ನಮ್ಮೊಳಗೆ ಇನ್ನೂ ಬದುಕಿದ್ದಾರೆ. ನಮ್ಮಲ್ಲಿ ಮೂಡುವ ಒಂದೊಂದು ನಗೆಯಲ್ಲೂ ನಮ್ಮ ಹಿರೀಕರ ಎಲ್ಲ ತಲೆಮಾರುಗಳು, ನಮ್ಮ ಮಕ್ಕಳು ಮತ್ತು ಅವರೊಳಗಿರುವ ಮುಂದಿನ ಪೀಳಿಗೆ ಎಲ್ಲವೂ ನಗುತ್ತವೆ, ನಲಿಯುತ್ತವೆ. ನಾವು ಮಾಡುವ ಯಾವುದೇ ಅನುಷ್ಠಾನ ನಮಗಾಗಿ ಮಾತ್ರವಲ್ಲ, ನಮ್ಮ ಎಲ್ಲ ಹಿರೀಕರು, ಮುಂದಿನ ನಮ್ಮ ಎಲ್ಲ ಸಂತಾನಕ್ಕಾಗಿ. ಬದುಕಿನ ಹೊಳೆ ಹರಿಯವುದು ಹೀಗೆ.
ನೀವು ಏನಾದರೂ ತಪ್ಪು ಮಾಡಿ, ಅದರಿಂದ ನಿಮ್ಮ ಪ್ರೀತಿಪಾತ್ರರು ನೋವುಪಟ್ಟು ನರಳಿರಬಹದು, ಹಾಗೇ ಅವರೀಗ ಜೀವಂತ ಇಲ್ಲವಾಗಿರಬಹುದು. ಹತಾಶರಾಗಬೇಡಿ. ನಿಮ್ಮೊಳಗಿನ ಗಾಯವನ್ನು ವಾಸಿ ಮಾಡಿಕೊಳ್ಳಬಹುದು. ಬದುಕಿಲ್ಲ ಎಂದು ನೀವಂದುಕೊಂಡಿರುವ ವ್ಯಕ್ತಿ ಈಗಲೂ ನಿಮ್ಮೊಳಗೆ ಬದುಕಿಯೇ ಇದ್ದಾರೆ. ಅವರ ಮುಖದಲ್ಲೂ ನೀವು ನಗೆಯನ್ನು ಅರಳಿಸಬಹುದು.
ನಿಮ್ಮ ಅಜ್ಜಿ ಬದುಕಿದ್ದಾಗ ನೀವು ಮೈಮರೆತು ಆಡಿದ ಯಾವುದೋ ಮಾತಿನಿಂದ ಅವರಿಗೆ ನೋವಾಗಿರಬಹುದು. ಆ ಬಗ್ಗೆ ನಿಮ್ಮಲ್ಲಿ ಪಶ್ಚಾತ್ತಾಪವಿರಬಹುದು. ಸುಮ್ಮನೆ ಕುಳಿತು, ಎಚ್ಚರದ ಗಮನದೊಂದಿಗೆ ಉಸಿರಾಡುತ್ತಾ ನಿಮ್ಮ ಅಜ್ಜಿಯವರನ್ನು ಕಣ್ಣೆದುರು ತಂದುಕೊಳ್ಳಿ. ಅವರು ನಿಮ್ಮ ಪಕ್ಕದಲ್ಲೇ ಇರುತ್ತಾರೆ. “ಅಜ್ಜೀ, ಸಾರಿ. ಮತ್ತೆ ಯಾವತ್ತೂ ಹಾಗೆಲ್ಲ ನಿಮ್ಮ ಜೊತೆ ಮಾತಾಡಲ್ಲ, ನೀವು ಮಾತ್ರವಲ್ಲ ಯಾರ ಜೊತೆಗೂ ಹಾಗೆಲ್ಲ ಮಾತಾಡಲ್ಲ,” ಎಂದು ಹೇಳಿ. ನಿಮ್ಮಲ್ಲಿ ನಿಜಾಯತಿ ಇದ್ದರೆ, ಗಮನ ನಿಶ್ಚಲವಾಗಿದ್ದರೆ, ಪೂರ್ತಿಯಾಗಿ ಗಮನದ ಎಚ್ಚರವಿದ್ದರೆ ಅಜ್ಜಿ ಮೆಲುನಗುವುದು ನಿಮಗೆ ಕಾಣುತ್ತದೆ. ನಿಮ್ಮೊಳಗಿನ ಗಾಯ ವಾಸಿಯಾಗುತ್ತದೆ.
ತಪ್ಪುಗಳಾಗುವುದು ಮೈಮರೆವಿನಿಂದ, ಮನಮರೆವಿನಿಂದ, ಎಚ್ಚರ ತಪ್ಪುವುದರಿಂದ. ಎಲ್ಲವೂ ಹುಟ್ಟುವುದು ಮನಸಿನಿಂದಲೇ. ಹಾಗಾಗಿ ಈ ಎಲ್ಲವನ್ನೂ ಮನಸಿನೊಳಗೇ ಬದಲಿಸಬಹುದು. ಇದು ಬುದ್ಧನ ಬೋಧನೆ.
ನಿನ್ನೆ ಮುಗಿದಿದೆ, ನಾಳೆ ಇನ್ನೂ ಬಂದಿಲ್ಲ ಎಂದು ನಾವು ಅಂದುಕೊಂಡರೂ ಗಮನಿಸಿ ನೋಡಿದರೆ ನಿಜವು ಬೇರೆಯೇ ಅನ್ನುವುದು ತಿಳಿಯುತ್ತದೆ. ನಿನ್ನೆ ಎಂಬುದು ಇಂದಿನ ದಿರಿಸು ತೊಟ್ಟು ಬಂದಿದೆ. ಯಾಕೆಂದರೆ ಇಂದು ಅನ್ನುವುದು ರೂಪುಗೊಂಡಿರುವುದು ನಿನ್ನೆಯಿಂದಲೇ. ಇಂದಿನ ಈ ಕ್ಷಣದಲ್ಲಿ ನಾವು ದೃಢವಾಗಿದ್ದರೆ, ಈ ಕ್ಷಣವನ್ನು ಸ್ಪರ್ಶಿಸಲು ಸಾಧ್ಯವಾದರೆ, ನಾವು ನಿನ್ನೆಗಳನ್ನೂ ಮುಟ್ಟಬಹುದು, ಅದನ್ನು ವಾಸಿ ಮಾಡಬಹುದು.
ಇದು ಬೆರಗು ಹುಟ್ಟಿಸುವ ಬೋಧನೆ, ಬೆರಗುಗೊಳಿಸುವ ಅನುಷ್ಠಾನ. ನಮ್ಮೊಳಗಿನ ಗಾಯಗಳನ್ನು ಜೀವನ ಪೂರ್ತಿ ನಮ್ಮೊಳಗೇ ಹೊತ್ತು ಬದುಕಬೇಕಾಗಿಲ್ಲ. ಎಷ್ಟೋ ಸಲ ನಾವೆಲ್ಲರೂ ಎಚ್ಚರ ತಪ್ಪುತ್ತೇವೆ. ಹಿಂದೆ ಎಷ್ಟೋ ತಪ್ಪುಗಳನ್ನು ಮಾಡಿದ್ದೇವೆ. ಹಾಗೆಂದು ನಾವು ತಪ್ಪಿತಸ್ಥ ಭಾವವನ್ನು ಸದಾ ಹೊತ್ತುಕೊಂಡೇ ಬದುಕಬೇಕು ಎಂದಲ್ಲ. ಅದನ್ನು ಬದಲಿಸಹುದು.
ʻಇಂದುʼ ನಮ್ಮ ಗಹನವಾದ ಸ್ಪರ್ಶಕ್ಕೆ ದೊರೆತರೆ ʻನಿನ್ನೆʼ ಕೂಡ ನಮ್ಮ ಸ್ಪರ್ಶಕ್ಕೆ ಒದಗುತ್ತದೆ. ಇಂದಿನ ಬಗ್ಗೆ ಎಚ್ಚರವಾಗಿದ್ದರೆ ನಿನ್ನೆಗಳ ಉಪಚಾರವನ್ನೂ ಮಾಡಬಹುದು. ಹೊಸತಾಗಿ ಬದುಕಿಗೆ ತೊಡಗುವುದು ಮನಸಿಗೆ ಅಭ್ಯಾಸವಾಗಬೇಕು. ಹಿಂದೆ ಮಾಡಿದ ತಪ್ಪುಗಳು ನಿಮಗೆ ಅರಿವಾದರೆ, ಮತ್ತೆ ಹಾಗೆ ಮಾಡುವುದಿಲ್ಲವೆಂಬ ದೃಢ ನಿಮ್ಮಲ್ಲಿದ್ದರೆ ಗಾಯವಾಸಿಯಾಗುವುದು. ಇದು ಬೆರಗು ಹುಟ್ಟಿಸುವ ಅನುಷ್ಠಾನ.
*
ಅಲ್ಲಮಪ್ರಭುಗಳ ಈ ವಚನವು ಕಾಲದ ನಿರಂತರತೆಯನ್ನು ಅರಿಯಲಾರದ “ಹಿರಿಯರು” ಗುಹೇಶ್ವರನ ಸತ್ಯ ಅರಿಯಲಾರದೆ ಹೋದರು, ಈ ಕ್ಷಣವೇ ಅನಂತ ಎನ್ನುತ್ತಿದೆ.
ಹಿಂದಣ ಅನಂತವನೂ
ಮುಂದಣ ಅನಂತವನೂ
ಒಂದು ದಿನ ಒಳಕೊಂಡಿತ್ತು ನೋಡಾ
ಒಂದು ದಿನವನೊಳಕೊಂಡು ಮಾತಾಡುವ
ಮಹಂತನ ಕಂಡು ಬಲ್ಲವರಾರಯ್ಯ
ಆದ್ಯರು ವೇದ್ಯರು ಅನಂತ ಹಿರಿಯರು
ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರಾ

