ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಟೋಲ್ಕೀನ್ ಪ್ರಕಾರ : ಒಳ್ಳೆಯ ಕಾಲ್ಪನಿಕ ಕಥೆ ಅಥವಾ ಪುರಾಣದ ನಿಜವಾದ ರಹಸ್ಯ, ಅದರ ವಿಚಿತ್ರ ಪಾತ್ರಗಳಲ್ಲಿ ಅಥವಾ ಅದ್ಭುತ ಮಾಂತ್ರಿಕ ಸಾಹಸಗಳಲ್ಲಿ ಇರುವುದಿಲ್ಲ. ಅದು ಅವರು “ಯೂಕಟಾಸ್ಟ್ರೋಫಿ” (Eucatastrophe) ಎಂದು ಕರೆದ ಪರಿಕಲ್ಪನೆಯಲ್ಲಿ ಅಡಗಿದೆ. ಮತ್ತು ನಾವೆಲ್ಲರೂ ಅದನ್ನು ಇನ್ನಷ್ಟು ಹೆಚ್ಚು, ಮತ್ತು ಇನ್ನಷ್ಟು ಆಗಾಗ ಕೇಳಬೇಕಾಗಿದೆ.
ಯೂಕಟಾಸ್ಟ್ರೋಫಿ ಎಂದರೆ, ನಿಯತಿಯು ಹಠಾತ್ತನೆ ಮತ್ತು ಸಂಪೂರ್ಣವಾಗಿ ಒಳಿತಿನ ಕಡೆಗೆ ತಿರುಗುವ ಕ್ಷಣ. ಅದು ಸುಖಾಂತ್ಯದ ಕ್ಷಣ.
ದಿ ಲಾರ್ಡ್ ಆಫ್ ದ ರಿಂಗ್ಸ್ ಕಥೆ, ಹಾಬಿಟ್‌ಗಳು ಸತ್ತುಹೋಗಿ, ಸೌರಾನ್ ತನ್ನ ಆರ್ಕ್‌ಗಳ ಕೈಗಾರಿಕಾ ಸಾಮ್ರಾಜ್ಯದ ಮೇಲೆ ದುಷ್ಟ ನಗುವನ್ನು ನಗುತ್ತಾ ಆಳುವ ದೃಶ್ಯದೊಂದಿಗೆ ಮುಗಿಯುವುದಿಲ್ಲ. ಅದು ಕತ್ತಲೆಯ ಮೇಲೆ ಬೆಳಕು ಜಯ ಸಾಧಿಸುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ಸರಳ ಜನರ ಕರುಣೆ, ದಯೆ, ಪ್ರೀತಿ ಮತ್ತು ಒಡನಾಟವು ಕೊನೆಗೆ ದುಷ್ಟತನವನ್ನು ಸೋಲಿಸುವುದರೊಂದಿಗೆ ಅಂತ್ಯಗೊಳ್ಳುತ್ತದೆ.
ಟೋಲ್ಕೀನ್ ಅವರ ದೃಷ್ಟಿಯಲ್ಲಿ, ನಾವು ಹೇಳಿಕೊಳ್ಳುವ ಕಥೆಗಳು ನಮ್ಮನ್ನು ಮಹಾನತೆಯತ್ತ ಪ್ರೇರೇಪಿಸಬೇಕು. ಅವು ನಮ್ಮೊಳಗೆ ಹೋರಾಟದ ಕಿಡಿಯನ್ನು ಹೊತ್ತಿಸಬೇಕು, ಮತ್ತು ಬಯಕೆಗಳನ್ನು ತುಂಬಬೇಕು.
ಇದು ವಾಸ್ತವದಿಂದ ಓಡಿಹೋಗುವುದು (Escapism) ಅಥವಾ ಕೇವಲ ಮನಸ್ಸಿನ ಆಸೆಗಳನ್ನು ನೆರವೇರಿಸಿಕೊಳ್ಳುವ ಕಲ್ಪನೆ (Wish Fulfilment) ಅಲ್ಲ.
ಟೋಲ್ಕೀನ್ ಅವರಿಗೆ ಈ ಜಗತ್ತು, ಸ್ನೇಹಪರ ಮಾಂತ್ರಿಕರಿಂದ ತುಂಬಿಲ್ಲ ಎನ್ನುವುದು ಚೆನ್ನಾಗಿ ತಿಳಿದಿತ್ತು. ಈ ಜಗತ್ತು ಕಷ್ಟಗಳಿಂದ, ದುಃಖಗಳಿಂದ ಮತ್ತು ಅನೇಕ ಭಯಾನಕ ಕನಸುಗಳಿಂದ ತುಂಬಿದೆ. ಆದರೆ ಯೂಕಟಾಸ್ಟ್ರೋಫಿ (Eucatastrophe) ಎಂದರೆ, ಎಲ್ಲವೂ ಕಳೆದುಹೋಯಿತು ಎಂದು ತೋರುವ ಕ್ಷಣದಲ್ಲಿ ಅಚಾನಕ್ ಆಗಿ ಉದಯಿಸುವ ವಿಮೋಚನೆಯ ಆನಂದ. ಅದು ನಿರಾಶೆಯ ಕತ್ತಲೆಯ ಮಧ್ಯೆ ಆಸೆಯ ಬೆಳಕು ಮೂಡುವ ಕ್ಷಣ; ಸಂಕಟದ ಅಂತ್ಯದಲ್ಲಿ ಮುಕ್ತಿಯ ಸಂತೋಷವನ್ನು ಅನುಭವಿಸುವ ಕ್ಷಣ.
ಅದು ಹೀಗೆ ಹೇಳುತ್ತದೆ: ಎಲ್ಲಾ ಸಾಕ್ಷ್ಯಾಧಾರಗಳು ಸೋಲಿನತ್ತ ಬೆರಳು ತೋರಿಸುತ್ತಿದ್ದರೂ, ಅಂತಿಮ ಸೋಲು ಎನ್ನುವುದೇ ಇರುವುದಿಲ್ಲ. ಒಳ್ಳೆಯ ಕಥೆ ಈ ಜಗತ್ತಿನ ಭೀಕರತೆಗಳಿಂದ ಮುಖ ತಿರುಗಿಸಿಕೊಳ್ಳುವುದಿಲ್ಲ. ನೀವು ಡಿಸ್ನಿ , ಸಾಫ್ಟಾಗಿ ಮಾರ್ಪಡಿಸಿ, ಮಕ್ಕಳಿಗೆ ಅನುಕೂಲವಾಗುವಂತೆ ರೂಪಿಸಿರುವ ಆವೃತ್ತಿಗಳನ್ನು ಬಿಟ್ಟು, ಮೂಲ ಗ್ರಿಮ್‌ರ ಕಾಲ್ಪನಿಕ ಕಥೆಗಳನ್ನು (Grimm’s Fairy Tales) ಓದಿದರೆ, ಅವುಗಳಲ್ಲಿ ಶಿಶುಹತ್ಯೆ, ನರಭಕ್ಷಕತ್ವ ಮತ್ತು ಭಯಾನಕ ಘಟನೆಗಳು ತುಂಬಿರುವುದನ್ನು ಕಾಣುತ್ತೀರಿ. ಆದರೆ ಟೋಲ್ಕೀನ್ ಅವರ ಪ್ರಕಾರ, ಒಳ್ಳೆಯ ಕಾಲ್ಪನಿಕ ಕಥೆಯ ಕಲೆ ಎನ್ನುವುದು, ಆ ಎಲ್ಲ ಕತ್ತಲೆ ಮತ್ತು ಭೀಕರತೆಯನ್ನು ನಿರಾಕರಿಸುವುದಲ್ಲ; ಅವುಗಳ ಅಸ್ತಿತ್ವವನ್ನು ಒಪ್ಪಿಕೊಂಡರೂ, ಕೊನೆಯಲ್ಲಿ ಆಸೆ, ವಿಮೋಚನೆ ಮತ್ತು ಒಳಿತಿನ ವಿಜಯದ ಸಾಧ್ಯತೆಯನ್ನು ನಮ್ಮ ಮುಂದೆ ತೆರೆದಿಡುವುದಾಗಿದೆ.
ಟೋಲ್ಕೀನ್ ಅವರ ಪ್ರಕಾರ, ಒಳ್ಳೆಯ ಕಾಲ್ಪನಿಕ ಕಥೆಯ ಸಾರವೇನೆಂದರೆ: ಜಗತ್ತು ಎಷ್ಟೇ ಭೀಕರವಾಗಿರಲಿ, ಯೂಕಟಾಸ್ಟ್ರೋಫಿ (Eucatastrophe) ಸಂಭವಿಸುವ ಕ್ಷಣದಲ್ಲಿ, ಅದನ್ನು ಕೇಳುವ ಮನುಷ್ಯನಿಗಾಗಲಿ ಅಥವಾ ಮಗುವಿಗಾಗಲಿ, ಒಂದು ಕ್ಷಣ ಉಸಿರು ನಿಂತಂತಾಗುತ್ತದೆ; ಹೃದಯದ ಬಡಿತ ತಪ್ಪಿ, ನಂತರ ಆಸೆ ಮತ್ತು ಆನಂದದಿಂದ ಉಕ್ಕಿ ಹರಿಯುತ್ತದೆ. ನಾವು ಹೇಳಿಕೊಳ್ಳುವ ಕಥೆಗಳು, ನಾವು ಓದುವ ಪುರಾಣಗಳು ಮತ್ತು ದಂತಕಥೆಗಳು, ನಮ್ಮೊಳಗೆ ಆಸೆಯನ್ನು ಹುಟ್ಟಿಸಬಲ್ಲವು, ಹುಟ್ಟಿಸಲೇಬೇಕು. ಅವು ನಿರಾಶೆಯನ್ನಲ್ಲ, ಧೈರ್ಯ ಮತ್ತು ವಿಶ್ವಾಸವನ್ನು ಬೆಳೆಸುವಂತಿರಬೇಕು.
*******************************

