ನೀವು ಹೆಜ್ಜೆ ಹಾಕುವಾಗ ನಿಮ್ಮ ತಾಯಿಯವರೂ ನಿಮ್ಮೊಡನೆ ಹೆಜ್ಜೆ ಹಾಕುತಿದ್ದಾರೆ ಎಂಬ ಚಿತ್ರ ಮೂಡಿಸಿಕೊಳ್ಳಿ. ಇದೇನೂ ಕಷ್ಟದ ಕೆಲಸವಲ್ಲ. ಹೆಜ್ಜೆ ಇಡುತಿರುವ ನಿಮ್ಮ ಪಾದಗಳು ನಿಮ್ಮ ತಾಯಿಯ ಪಾದಗಳ ಮುಂದುವರಿಕೆ ಅನ್ನುವುದು ನಿಮಗೆ ಗೊತ್ತು. ಗಹನವಾಗಿ ನೋಡುವುದು ಅಭ್ಯಾಸವಾದಂತೆ ನಮ್ಮ ದೇಹದ ಕಣಕಣದಲ್ಲೂ ಅಮ್ಮ ಇರುವುದು ಕಾಣುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 3.19: ಭಾವ-ಸಂಬಂಧ । ಹಿರೀಕರೊಡನೆ ನಡೆಯುವುದು
ನೀವು ವಾಕ್ ಮಾಡುವಾಗ ಯಾರಿಗಾಗಿ ವಾಕ್ ಮಾಡುತ್ತೀರಿ? ಎಲ್ಲಿಗಾದರೂ ಹೋಗಿ ತಲುಪಲು ನಡೆಯಬಹುದು. ಹಾಗೆಯೇ ಧ್ಯಾನದ ಅನುಷ್ಠಾನವಾಗಿಯೂ ವಾಕ್ ಮಾಡಬಹುದು. ಎಚ್ಚರದ ಗಮನದೊಂದಿಗೆ ವಾಕ್ ಮಾಡುವುದು ಗೊತ್ತಿರದ ನಿಮ್ಮ ತಂದೆ, ತಾಯಿ, ಅಜ್ಜ, ಅಜ್ಜಿಯರಿಗಾಗಿಯೂ ವಾಕ್ ಮಾಡಬಹುದು. ನಿಮ್ಮ ಹಿರೀಕರು ತಮ್ಮ ವರ್ತಮಾನ ಕಾಲದಲ್ಲಿ ಪೂರ್ಣವಾಗಿ ಬದುಕದೆ, ಶಾಂತಿ ಹೆಜ್ಜೆಗಳನ್ನು ಇಡಲಾಗದೆ ಆಯುಷ್ಯವನ್ನು ಮುಗಿಸಿರಬಹುದು. ಹಾಗೆ ಬದುಕಿದವರ ಬಗ್ಗೆ ಮರುಕ ಹುಟ್ಟುತ್ತದೆ. ನಾವೂ ಅವರ ಹಾಗೇ ಬದುಕಬೇಕು ಎಂದೇನಿಲ್ಲ.
ನಮ್ಮ ಎಲ್ಲ ಹಿರೀಕರು, ನಮ್ಮ ಮುಂದಿನ ಎಲ್ಲ ತಲೆಮಾರು ಈಗ ನಮ್ಮೊಳಗೇ ಇದ್ದಾರೆ. ಬಿಡುಗಡೆ ಅನ್ನುವುದು ಕೇವಲ ವೈಯಕ್ತಿಕ ಸಂಗತಿಯಲ್ಲ. ನಮ್ಮ ಹಿರೀಕರು ಸಂಕಟಪಡುತಿದ್ದರೆ ನಾವು ಸಂತೋಷವಾಗಿರಲಾರೆವು, ನಮ್ಮ ಸಂಕಟ, ನೋವುಗಳನ್ನು ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ದಾಟಿಸುತ್ತೇವೆ.
ನಮ್ಮ ಹಿರೀಕರನ್ನೂ ನಮ್ಮ ಮುಂದಿನ ಪೀಳಿಗೆಯನ್ನೂ ಬಿಡುಗಡೆಗೊಳಿಸಬೇಕಾದ್ದು ಈಗಲೇ. ಅದು ನಮ್ಮನ್ನು ನಾವು ಬಿಡುಗಡೆಗೊಳಿಸಿಕೊಳ್ಳುವ ಮೂಲಕ. ಸ್ವತಂತ್ರವಾಗಿ, ಸಂತೋಷವಾಗಿ, ಭೂಮಿಯ ಮೇಲೆ ಮನಸಿಟ್ಟು ಒಂದು ಹೆಜ್ಜೆ ಇಡಲು ಸಾಧ್ಯವಾದರೆ, ಹಾಗೇ ನೂರು ಹೆಜ್ಜೆ ನಡೆಯಬಹುದು. ಇದು ನಮಗಾಗಿ, ನಮ್ಮ ಹಿಂದಿನವರಿಗಾಗಿ ಮತ್ತೆ ನಾಳಿನ ಪೀಳಿಗೆಗಳಿಗಾಗಿ ಮಾಡುವ ಕೆಲಸ. ಹಿಂದಿನವರು, ಇಂದಿನವರು, ಮುಂದಿನವರುಎಲ್ಲರೂ ಒಟ್ಟಿಗೆ ಸಂತೋಷ, ಶಾಂತಿಗಳನ್ನು ಪಡೆಯಬಹುದು.
ನೀವು ಹೆಜ್ಜೆ ಹಾಕುವಾಗ ನಿಮ್ಮ ತಾಯಿಯವರೂ ನಿಮ್ಮೊಡನೆ ಹೆಜ್ಜೆ ಹಾಕುತಿದ್ದಾರೆ ಎಂಬ ಚಿತ್ರ ಮೂಡಿಸಿಕೊಳ್ಳಿ. ಇದೇನೂ ಕಷ್ಟದ ಕೆಲಸವಲ್ಲ. ಹೆಜ್ಜೆ ಇಡುತಿರುವ ನಿಮ್ಮ ಪಾದಗಳು ನಿಮ್ಮ ತಾಯಿಯ ಪಾದಗಳ ಮುಂದುವರಿಕೆ ಅನ್ನುವುದು ನಿಮಗೆ ಗೊತ್ತು. ಗಹನವಾಗಿ ನೋಡುವುದು ಅಭ್ಯಾಸವಾದಂತೆ ನಮ್ಮ ದೇಹದ ಕಣಕಣದಲ್ಲೂ ಅಮ್ಮ ಇರುವುದು ಕಾಣುತ್ತದೆ. ನಮ್ಮ ದೇಹ ಅಮ್ಮನ ದೇಹದ ಮುಂದುವರಿಕೆ. ನೀವು ಹೆಜ್ಜೆ ಇಡುವಾಗ, “ಅಮ್ಮಾ, ನೀನೂ ನನ್ನ ಜೊತೆಯಲ್ಲಿ ನಡೆಯುತ್ತಿದ್ದೀಯ,” ಎಂದು ಹೇಳಿಕೊಳ್ಳಿ. ನಿಮ್ಮ ತಾಯಿಯವರ ಬದುಕಿನ ಕಾಲದಲ್ಲಿ ಹೀಗೆ ಇಲ್ಲಿ ಈಗ ನಡೆಯುವ ಅವಕಾಶ ಇರಲಿಲ್ಲ, ಭೂಮಿ ಸ್ಪರ್ಶದ ಸಂತೋಷ ಅನುಭವಿಸುವ ಅವಕಾಶ ಇರಲಿಲ್ಲವೆಂದು ಅರಿವಾಗುತ್ತದೆ. ನಿಮ್ಮೊಳಗೆ ಮರುಕ, ಪ್ರೀತಿ ಹುಟ್ಟುತ್ತವೆ. ಕಲ್ಪನೆಯಾಗಿ ಅಲ್ಲ, ನಿಮ್ಮ ತಾಯಿ ನಿಜವಾಗಿ ನಿಮ್ಮೊಡನೆ ನಡೆಯುತ್ತಿದಾರೆ ಅನ್ನುವುದು ಕಾಣತ್ತದೆ.
ನಿಮ್ಮ ಜೊತೆಯಲ್ಲಿ ನಡೆಯಲು ನಿಮ್ಮ ತಂದೆಯವರನ್ನೂ ಕರೆಯಬಹುದು. ಈಗ, ಇಲ್ಲಿ ನಿಮ್ಮೊಡನೆ ನಡೆಯಲು ನಿಮಗೆ ಇಷ್ಟವಾದವರನ್ನೆಲ್ಲ ಕರೆಯಬಹುದು. ಅವರೆಲ್ಲ ದೈಹಿಕವಾಗಿ ನಿಮ್ಮೊಡನೆ ಇರದಿದ್ದರೂ ನಿಮ್ಮೊಡನೆ ಅವರು ಹೆಜ್ಜೆ ಹಾಕಬಹುದು. ನಮ್ಮ ಹಿರೀಕರ ಮುಂದುವರಿಕೆ ನಾವು. ನಮ್ಮ ದೇಹದ ಕಣಕಣದಲ್ಲೂ ಹಿರೀಕರೆಲ್ಲ ಇದ್ದಾರೆ. ಶಾಂತಿ ತುಂಬಿ ನಾವು ಇಡುವ ಪ್ರತಿ ಹೆಜ್ಜೆಯಲ್ಲೂ ನಮ್ಮ ಹಿರೀಕರೆಲ್ಲರ ಹೆಜ್ಜೆ ಇರುತ್ತದೆ. ನಿಮ್ಮ ಒಂದು ಪಾದದ ಹಾಗೆಯೇ ಹತ್ತಾರು ಲಕ್ಷ ಪಾದಗಳು ಅದೇ ಹೆಜ್ಜೆಯನ್ನು ಇಡುತ್ತಿವೆ. ವೀಡಿಯೋ ತಂತ್ರಜ್ಞಾನ ಬಳಸಿ ಲಕ್ಷಾಂತರ ಪಾದಗಳು ಒಂದೇ ರೀತಿಯಲ್ಲಿ ಹೆಜ್ಜೆ ಹಾಕುವುದನ್ನು ತೋರಬಹುದು. ಅದೇ ದೃಶ್ಯವನ್ನು ನಿಮ್ಮ ಮನಸೂ ಕಾಣಬಹುದು. ನಿಮ್ಮೊಡನೆ ನಿಮ್ಮ ಹೆಜ್ಜೆಯಲ್ಲಿ ಲಕ್ಷಾಂತರ ಹಿರೀಕರೂ ಹೆಜ್ಜೆ ಹಾಕುತಿರುವುದು ನಿಮ್ಮ ಅನುಭವಕ್ಕೆ ಬರಬಹುದು. ಇಂಥದೊಂದು ದರ್ಶನ ದೊರೆತರೆ ನಾನು ಪ್ರತ್ಯೇಕ ವ್ಯಕ್ತಿ, ನಾನು ಒಬ್ಬಂಟಿ, ಏಕಾಂಗಿ ಅನ್ನುವ ಐಡಿಯಾ ಛಿದ್ರವಾಗುತ್ತದೆ. ನಿಮ್ಮೊಡನೆ ನಿಮ್ಮ ಹಿರೀಕರೂ ನಡೆಯುತ್ತಲೇ ಇರುತ್ತಾರೆ
ನಿಮ್ಮ ತಾಯಿಯ ಪಾದಗಳೊಡನೆ ನಡೆಯುವುದು ನಿಮಗೆ ಸಾಧ್ಯ. ಪಾಪ, ನಿಮ್ಮ ತಾಯಿಯವರಿಗೆ ಹೀಗೆ ನಡೆಯುವ ಅವಕಾಶ ಸಿಕ್ಕಿರಲಿಲ್ಲ. “ಅಮ್ಮಾ, ನನ್ನ ಜೊತೆ ನಡೆಯುತ್ತೀಯಾ?” ಅಂತ ನೀವು ಕೇಳಬಹುದು. ಅಮ್ಮನೊಡನೆ ನಡೆಯುತ್ತ ನಿಮ್ಮ ಹೃದಯದಲ್ಲಿ ಪ್ರೀತಿ ತುಂಬುತ್ತದೆ. ನಿಮಗೆ, ನಿಮ್ಮ ತಾಯಿಯವರಿಗೆ ಒಮ್ಮೆಗೇ ಬಿಡುಗಡೆ ದೊರೆಯುತ್ತದೆ. ಯಾಕೆಂದರೆ ನಿಮ್ಮ ತಾಯಿ ನಿಮ್ಮೊಳಗೇ ಇದ್ದಾರೆ. ನಿಮ್ಮ ತಂದೆಯೂ ಇಡಿಯಾಗಿ ನಿಮ್ಮೊಳಗೇ ಇದ್ದಾರೆ. “ಅಪ್ಪಾ, ನನ್ನ ಜೊತೆ ಬರುತ್ತೀಯಾ?” ಎಂದು ಕೇಳಬಹುದು. ತಟ್ಟನೆ ನಿಮ್ಮ ತಂದೆಯವರ ಜೊತೆಯಲ್ಲಿ ನಡೆಯುತ್ತಿರುತ್ತೀರಿ. ಇದು ಆನಂದ, ಇದು ದೊಡ್ಡ ಗಳಿಕೆ. ಇದು ಕಷ್ಟವಲ್ಲ. ಇದು ಸಾಧ್ಯವಾಗಲು ನೀವು ಹೋರಾಡುವ, ಹೆಣಗಾಡುವ ಅಗತ್ಯವಿಲ್ಲ. ಎಚ್ಚರದ ಗಮನವಿದ್ದರೆ ಸಾಕು, ಎಲ್ಲವೂ ಸರಿಯಾಗಿರುತ್ತದೆ.
ನಿಮ್ಮ ತಾಯಿಯೊಡನೆ ಸುಮ್ಮನೆ ಕೂರಬಹುದು. ಏನೂ ಮಾಡದೆ ಸುಮ್ಮನೆ ಕೂರುವ ಅವಕಾಶ ಅಮ್ಮಂದಿರಿಗೆ ಸಿಗುವುದೇ ಬಹಳ ಬಹಳ ಅಪರೂಪ. ಅಮ್ಮನೊಡನೆ ಸುಮ್ಮನೆ ಕೂರುವುದು ಮುಖ್ಯವಾದ ಕೆಲಸ. ನೀವು ಸುಮ್ಮನೆ ಕುಳಿತು, ಎಚ್ಚರದ ಗಮನದೊಂದಿಗೆ ಉಸಿರಾಡಿ. ನಿಮ್ಮ ತಾಯಿ ನಿಮ್ಮೊಡನೆ ಇದ್ದರೆ ಒಟ್ಟಿಗೆ ಕುಳಿತು ಹೀಗೆ ಮಾಡಿ. ನಿಮ್ಮ ತಾಯಿ ಇರದಿದ್ದರೆ, ಕಾಲವಾಗಿದ್ದರೆ, ಅವರನ್ನು ಮನಸಿಟ್ಟು ಕರೆದು ಹೀಗೆ ಮಾಡಿ. ಅಮ್ಮ ಎಲ್ಲೇ ಇರಲಿ ಸದಾ ನಿಮ್ಮೊಡನೆ ಇದ್ದೇ ಇರುತ್ತಾರೆ.
ನಿಮ್ಮ ಪ್ರಿಯ ವ್ಯಕ್ತಿಗಳೊಡನೆ ನಡೆಯುವುದು ಸಾಧ್ಯವಾದಮೇಲೆ ನಿಮ್ಮ ಬದುಕನ್ನು ಹದಗೆಡಿಸಿದವರೊಡನೆ ಹೆಜ್ಜೆ ಹಾಕಿ. ನಿಮ್ಮ ಮೇಲೆ ದಾಳಿ ಮಾಡಿದವರು, ನಿಮ್ಮ ಮನೆ, ನಿಮ್ಮ ದೇಶ, ನಿಮ್ಮವರನ್ನು ನಾಶಮಾಡಿದವರೊಡನೆ ಹೆಜ್ಜೆ ಹಾಕಿ. ಅಂಥವರೆಲ್ಲ ಸಂತೋಷವಿರದ ಚೇತನಗಳು. ಪ್ರೀತಿ ವಂಚಿತರು, ಬೇರೆಯವರನ್ನು ಪ್ರೀತಿಸಲು ಆಗದಿದ್ದವರು. ಅವರು ನಿಮ್ಮ ಬದುಕನ್ನು ಹಾಳುಗೆಡವಿದ್ದಾರೆ, ನಿಮ್ಮ ಜನಕ್ಕೆ ತೊಂದರೆ ಕೊಟ್ಟಿದ್ದಾರೆ. ಅಂಥವರೊಡನೆ, ಅಂಥವರಿಗಾಗಿ ನಡೆಯುವುದೂ ನಿಮಗೆ ಸಾಧ್ಯವಾಗುವ ಕಾಲ ಬರುತ್ತದೆ. ಹಾಗೆ ಅನ್ಯರೊಡನೆ ನಡೆಯುತ್ತಾ ನೀವು ಬುದ್ಧರಾಗುತ್ತೀರಿ, ಒಲವು, ಅರಿವು, ಮರುಕ ತುಂಬಿದ ಬೋಧಿಸತ್ವರಾಗುತ್ತೀರಿ.
*
೨. ಸಿದ್ಧರಾಮರ ಈ ವಚನವು ಹಿಂದಿನವರು ಬದುಕಿದ ರೀತಿಯಲ್ಲಿ ಬದುಕಲಾರೆ ಎಂದು ಸಂಕಟಪಡುವ ಸ್ಥಿತಿಯನ್ನು ಹೇಳುವಂತಿದೆ:
ಸಂತವಿಸು ಸಂತವಿಸಲಾರೆ ನನ್ನ ಮನವ
ಮುನ್ನಿನವರು ಮಾಡಿ ಕೂಡಿದ ಪರಿಯ ನೆನೆದು ನಾನು
ಬೇಯದ ಬೇಗೆಯಲಿ ಬೆಂದೆನಯ್ಯಾ
ಇಂತಲ್ಲದೆ, ಮರ ಕಿಚ್ಚು ಹತ್ತಿದಂತಾದೆ
ಕಪಿಲಸಿದ್ಧಮಲ್ಲಿಕಾರ್ಜುನ.
೨ ಬದುಕು ದೀರ್ಘವೋ ಸಂಕ್ಷಿಪ್ತವೋ ಅನ್ನುವುದು ಮುಖ್ಯವಲ್ಲ, ಸಮತಾಗುಣದೊಡನೆ ಬದುಕುವುದು ಮುಖ್ಯ ಎಂಬ ಸಿದ್ಧರಾಮ ವಚನ ನೋಡಿ
ಇಂದಿಗೆ ನಿಮಿಷಕ್ಕೆ ಬರ್ದುಂಕದೆ ಹೋಗೆಯ
ಅನಂತಕಾಲ ಬರ್ದುಂಕುಗೆಯ
ಬರ್ದುಂಕಿದಡೆ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ
ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು
ಪೊದ್ದಿಪ್ಪುದು ಹೇಳಾ
ಕಪಿಲಸಿದ್ಧಮಲ್ಲಿಕಾರ್ಜುನ.

