ಪಿಗ್ಮೇಲಿಯನ್ ಪರಿಣಾಮ & ಗೋಲೇಮ್ ಪರಿಣಾಮ

ಅದೃಷ್ಟವು ಕೇವಲ ಧೈರ್ಯಶಾಲಿಗಳನ್ನು ಮಾತ್ರ ಅನುಗ್ರಹಿಸುವುದಿಲ್ಲ; ತಮ್ಮನ್ನು ತಾವು ಧೈರ್ಯಶಾಲಿಗಳು ಎಂದು ನಂಬುವವರನ್ನು ಅದು ಹೆಚ್ಚು ಅನುಗ್ರಹಿಸುತ್ತದೆ… ~ ಓಶೋ ರಜನೀಶ್ । ಕನ್ನಡಕ್ಕೆ : ಚಿದಂಬರ ನರೇಂದ್ರ

ಪಾರ್ಕಿನ್ಸನ್‌ನ ನಿಯಮದ ಪ್ರಕಾರ :
“ಒಂದು ಕೆಲಸವನ್ನು ಪೂರ್ಣಗೊಳಿಸಲು ನಾವು ಎಷ್ಟು ಸಮಯವನ್ನು ನಿಗದಿ ಮಾಡುತ್ತೇವೆಯೋ, ಆ ಕೆಲಸವು ಅಷ್ಟೇ ಸಮಯವನ್ನು ತೆಗೆದುಕೊಳ್ಳುತ್ತದೆ.”

ಆದ್ದರಿಂದ, ಒಂದು ಪ್ರಬಂಧವೋ ಅಥವಾ ಒಂದು ಯೋಜನೆಯೋ ಅದರ ಗಡುವಿನ ಆಧಾರದ ಮೇಲೆ ಅದು ಒಂದು ವಾರದಲ್ಲೂ ಮುಗಿಯಬಹುದು, ಅಥವಾ ಒಂದು ತಿಂಗಳನ್ನೂ ತೆಗೆದುಕೊಳ್ಳಬಹುದು. ನೀವು ಕೆಲಸಕ್ಕೆ ಎಷ್ಟು ಸಮಯವನ್ನು ಮೀಸಲಿಡುತ್ತೀರೋ, ಅದು ಅಷ್ಟೇ ಸಮಯವನ್ನು ಬಳಸಿಕೊಳ್ಳುತ್ತದೆ. ಮತ್ತು ಇದೇ ತತ್ವವು ಮನುಷ್ಯರ ಮೇಲೂ ಅನ್ವಯಿಸುತ್ತದೆ.

ಒಬ್ಬ ವ್ಯಕ್ತಿಯಿಂದ ನಾವು ಅತ್ಯುತ್ತಮ ಸಾಧನೆಯನ್ನು ನಿರೀಕ್ಷಿಸಿದರೆ, ಅವನು ಆ ನಿರೀಕ್ಷೆಗೆ ತಕ್ಕಂತೆ ಬೆಳೆಯಲು, ತನ್ನ ಸಾಮರ್ಥ್ಯವನ್ನು ಹೊರತರುವ ಪ್ರಯತ್ನ ಮಾಡುತ್ತಾನೆ. ಆದರೆ, ಅವನು ವಿಫಲನಾಗುತ್ತಾನೆ ಅಥವಾ ನಿರಾಶೆಗೊಳಿಸುತ್ತಾನೆ ಎಂದು ನಾವು ಭಾವಿಸಿದರೆ, ಅವನು ಸಹ ಆ ನಿರೀಕ್ಷೆಗೆ ತಕ್ಕಂತೆ ಕುಸಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನೇ ಮನೋವಿಜ್ಞಾನದಲ್ಲಿ “ಪಿಗ್ಮೇಲಿಯನ್ ಪರಿಣಾಮ” (Pygmalion Effect) ಎಂದು ಕರೆಯಲಾಗುತ್ತದೆ. ಇದಕ್ಕೆ ವಿರುದ್ಧವಾದ ಪರಿಣಾಮವನ್ನು “ಗೋಲೇಮ್ ಪರಿಣಾಮ” (Golem Effect) ಎನ್ನಲಾಗುತ್ತದೆ.

ಪ್ರಾಚೀನ ಗ್ರೀಕ್ ಪುರಾಣಗಳಲ್ಲಿ ಪಿಗ್ಮೇಲಿಯನ್ ಎಂಬ ಶಿಲ್ಪಿಯೊಬ್ಬನ ಕಥೆ ಬರುತ್ತದೆ. ಅವನು ಅತ್ಯಂತ ಸುಂದರವಾದ ಮತ್ತು ಪರಿಪೂರ್ಣವಾದ ಒಂದು ಪ್ರತಿಮೆಯನ್ನು ನಿರ್ಮಿಸುತ್ತಾನೆ. ಆ ಪ್ರತಿಮೆ ಎಷ್ಟು ಜೀವಂತವಾಗಿ, ಎಷ್ಟು ಮನಮೋಹಕವಾಗಿಯೂ ಇತ್ತು ಎಂದರೆ ಕೊನೆಗೆ ಅವನು ಅದರ ಪ್ರೀತಿಯಲ್ಲಿ ಬೀಳುತ್ತಾನೆ.

ಪ್ರೀತಿ ಮತ್ತು ಸೌಂದರ್ಯದ ದೇವತೆಯಾದ ಅಫ್ರೊಡೈಟಿಯ ಭಕ್ತನಾಗಿದ್ದ ಪಿಗ್ಮೇಲಿಯನ್ ‌ನ ಭಕ್ತಿಗೆ ಮೆಚ್ಚಿದ ಆಕೆ, ಆ ಪ್ರತಿಮೆಗೆ ಜೀವ ತುಂಬಿ ಅದನ್ನು ನಿಜವಾದ ಹೆಣ್ಣನ್ನಾಗಿ ಪರಿವರ್ತಿಸುತ್ತಾಳೆ. ನಂತರ ಪಿಗ್ಮೇಲಿಯನ್ ಅವಳನ್ನು ಮದುವೆಯಾಗುತ್ತಾನೆ. ಈ ಕಥೆಯು ಸ್ವಲ್ಪ ವಿಚಿತ್ರವಾದ ನೈತಿಕ ಸಂದೇಶವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಆದರೆ, 1960ರ ದಶಕದಲ್ಲಿ ಮನೋವಿಜ್ಞಾನಿಗಳಾದ ರಾಬರ್ಟ್ ರೋಸೆಂಥಾಲ್ ಮತ್ತು ಲೆನೋರ್ ಜೇಕಬ್ಸನ್ ಈ ಕಥೆಯಿಂದ ಪ್ರೇರಣೆ ಪಡೆದು “Pygmalion in the Classroom” (ತರಗತಿಯಲ್ಲಿ ಪಿಗ್ಮಾಲಿಯನ್) ಎಂಬ ಪುಸ್ತಕವನ್ನು ಬರೆದರು. ಅವರ ಸಂಶೋಧನೆಯು ಒಂದು ಮಹತ್ವದ ವಿಷಯವನ್ನು ಹೊರಹಾಕಿತು:

ಒಬ್ಬ ಶಿಕ್ಷಕನು ತನ್ನ ವಿದ್ಯಾರ್ಥಿಯ ಬಗ್ಗೆ ಹೊಂದಿರುವ ನಿರೀಕ್ಷೆಗಳು, ಆ ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಯ ಮೇಲೆ ಅಪಾರ ಪ್ರಭಾವ ಬೀರುತ್ತವೆ. ಶಿಕ್ಷಕರ ಉನ್ನತ ನಿರೀಕ್ಷೆಗಳು ವಿದ್ಯಾರ್ಥಿಯ ಸಾಧನೆಯನ್ನು ಮೇಲಕ್ಕೆತ್ತಬಹುದು; ಅದೇ ರೀತಿ ಕಳಪೆ ನಿರೀಕ್ಷೆಗಳು ವಿದ್ಯಾರ್ಥಿಯ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಶಿಕ್ಷಕನ ನಂಬಿಕೆ ಮತ್ತು ನಿರೀಕ್ಷೆಗಳು ವಿದ್ಯಾರ್ಥಿಯ ಸಾಮರ್ಥ್ಯವನ್ನು ಅರಳಿಸಬಹುದು ಅಥವಾ ಅದನ್ನು ಕುಗ್ಗಿಸಬಹುದು ಎನ್ನುವುದು ಅವರ ಸಂಶೋಧನೆಯಾಗಿತ್ತು.

ಖಂಡಿತವಾಗಿಯೂ, ಇದು ಕೇವಲ ತರಗತಿಯೊಳಗಿನ ವಿಷಯವಲ್ಲ; ಜೀವನದ ಎಲ್ಲ ಸಂಬಂಧಗಳಿಗೂ ಅನ್ವಯಿಸುವಂಥದು. ಏಕೆಂದರೆ, ಒಬ್ಬ ವ್ಯಕ್ತಿಯನ್ನು ಪ್ರಾಮಾಣಿಕ, ದಯಾಳು ಮತ್ತು ಉದಾರ ವ್ಯಕ್ತಿ ಎಂದು ನೋಡಿದಾಗ, ಆ ವ್ಯಕ್ತಿಯೂ ಸಹ ಪ್ರಾಮಾಣಿಕವಾಗಿ, ದಯೆಯಿಂದ ಮತ್ತು ಉದಾರವಾಗಿ ವರ್ತಿಸುವ ಸಾಧ್ಯತೆ ಹೆಚ್ಚು. ಹೆಚ್ಚಿನ ಜನರು, ಇತರರು ತಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು, ಕೆಲವೊಮ್ಮೆ ಅಸಾಧ್ಯವೆನಿಸುವಷ್ಟು ಶ್ರಮಿಸುತ್ತಾರೆ.

ಆದರೆ ಪಿಗ್ಮೇಲಿಯನ್ ಪರಿಣಾಮ ಕೇವಲ ಇತರರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವುದಕ್ಕೆ ಮಾತ್ರ ಸೀಮಿತವಲ್ಲ. ಅದು ನಮ್ಮ ಮನಸ್ಸಿನೊಳಗೆ ನಮ್ಮ ಬಗ್ಗೆ ನಾವು ಕಟ್ಟಿಕೊಂಡಿರುವ ಕಥೆಗಳಿಗೂ ಸಂಬಂಧಿಸಿದೆ.
ನೀವು ನಿಮ್ಮನ್ನು ಬುದ್ಧಿವಂತ, ತಾಳ್ಮೆಯುಳ್ಳ, ಅಥವಾ ಯಾವುದೇ ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿ ಎಂದು ನಂಬಿದರೆ, ಆ ಗುಣಗಳನ್ನು ನೀವು ನಿಮ್ಮ ಜೀವನದಲ್ಲಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು.

ಆದ್ದರಿಂದಲೇ, ಅದೃಷ್ಟವು ಕೇವಲ ಧೈರ್ಯಶಾಲಿಗಳನ್ನು ಮಾತ್ರ ಅನುಗ್ರಹಿಸುವುದಿಲ್ಲ; ತಮ್ಮನ್ನು ತಾವು ಧೈರ್ಯಶಾಲಿಗಳು ಎಂದು ನಂಬುವವರನ್ನು ಅದು ಹೆಚ್ಚು ಅನುಗ್ರಹಿಸುತ್ತದೆ.
ಬೇರೆ ಮಾತಿನಲ್ಲಿ ಹೇಳುವುದಾದರೆ, ನಾವು ನಮ್ಮನ್ನು ಹೇಗೆ ನೋಡುತ್ತೇವೆಯೋ, ಕ್ರಮೇಣ ನಾವು ಹಾಗೆಯೇ ರೂಪುಗೊಳ್ಳುತ್ತೇವೆ. ಆದ್ದರಿಂದ, ನಾವು ನಮ್ಮನ್ನು ಪ್ರತಿಭಾವಂತರು, ಸಮರ್ಥರು ಮತ್ತು ಉತ್ತಮರು ಎಂದು ನಿಜವಾಗಿ ನಂಬಿದರೆ, ಆ ನಂಬಿಕೆಯೇ ನಮ್ಮೊಳಗಿನ ಶ್ರೇಷ್ಠತೆಯನ್ನು ಹೊರತರುವ ಶಕ್ತಿಯಾಗಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.