~ ಓಶೋ ರಜನೀಶ್ । ಕನ್ನಡಕ್ಕೆ : ಚಿದಂಬರ ನರೇಂದ್ರ
ಒಬ್ಬ ವ್ಯಕ್ತಿ ರಾತ್ರಿ ಸಮಯದಲ್ಲಿ ಬೆಟ್ಟದ ಕಲ್ಲಿನ ದಾರಿಯಲ್ಲಿ ನಡೆಯುತ್ತಿದ್ದ. ಆಕಸ್ಮಿಕವಾಗಿ ಅವನ ಕಾಲು ಜಾರಿ ಬಿಟ್ಟ. ದಾರಿಯ ಅಂಚಿನಲ್ಲೇ ಸಾವಿರಾರು ಅಡಿ ಆಳದ ಕಂದರವಿದೆ ಎಂದು ಅವನಿಗೆ ತಿಳಿದಿದ್ದರಿಂದ, ತಾನು ಅದರೊಳಗೆ ಬೀಳುತ್ತಿದ್ದೇನೆಂದು ಭಯಪಟ್ಟ. ತಕ್ಷಣವೇ ಅಂಚಿನ ಮೇಲಿಂದ ಹೊರಚಾಚಿಕೊಂಡಿದ್ದ ಒಂದು ಮರದ ಕೊಂಬೆಯನ್ನು ಬಿಗಿಯಾಗಿ ಹಿಡಿದುಕೊಂಡ.
ರಾತ್ರಿಯ ಗಾಢ ಕತ್ತಲಿನಲ್ಲಿ ಅವನಿಗೆ ಕೆಳಗೆ ಕಾಣಿಸಿದ್ದು ಅಂತ್ಯವಿಲ್ಲದ ಕತ್ತಲೆಯ ಕಂದರ ಮಾತ್ರ. ಅವನು ಜೋರಾಗಿ ಸಹಾಯಕ್ಕಾಗಿ ಕೂಗಿದ. ಆದರೆ ಅವನ ಕೂಗು ಪ್ರತಿಧ್ವನಿಯಾಗಿ ಮರಳಿ ಬಂದಿತು. ಅವನ ಕೂಗನ್ನು ಕೇಳುವವರು ಅಲ್ಲಿ ಯಾರೂ ಇರಲಿಲ್ಲ.
ಆ ಮನುಷ್ಯನ ಸ್ಥಿತಿಯನ್ನು ನೀವು ಊಹಿಸಬಹುದು. ಅವನಿಗೆ ಅದು ಯಾತನೆಯ ರಾತ್ರಿಯಾಗಿತ್ತು. ಪ್ರತಿಕ್ಷಣವೂ ಕೆಳಗೆ ಸಾವು ಕಾದಿದೆ ಎಂಬ ಭಯ. ಕೈಗಳು ತಣ್ಣಗಾಗುತ್ತಿದ್ದವು. ಹಿಡಿತ ಸಡಿಲವಾಗುತ್ತಿತ್ತು. ಆದರೂ ಅವನು ಕೊಂಬೆಯನ್ನು ಬಿಟ್ಟುಕೊಡಲಿಲ್ಲ.
ಕೊನೆಗೆ ಬೆಳಿಗ್ಗೆ ಸೂರ್ಯೋದಯವಾಯಿತು. ಅವನು ಧೈರ್ಯ ಮಾಡಿ ಕೆಳಗೆ ನೋಡಿದ…
ಆಗ ಅವನು ಜೋರಾಗಿ ನಗತೊಡಗಿದ!
ಅಲ್ಲಿ ಯಾವ ಆಳವಾದ ಕಂದರವೂ ಇರಲಿಲ್ಲ. ಅವನ ಪಾದಗಳ ಕೆಳಗೆ ಕೇವಲ ಆರು ಇಂಚುಗಳಷ್ಟು ದೂರದಲ್ಲಿ ಒಂದು ಗಟ್ಟಿಯಾದ ಬಂಡೆಯ ಅಂಚು ಇತ್ತು. ಅವನು ಇಡೀ ರಾತ್ರಿ ಅದರ ಮೇಲೆ ಆರಾಮವಾಗಿ ನಿಂತಿರಬಹುದಿತ್ತು, ಮಲಗಿ ಸುಖವಾಗಿ ನಿದ್ರಿಸಬಹುದಿತ್ತು. ಆ ಜಾಗ ಸಾಕಷ್ಟು ವಿಶಾಲವಾಗಿತ್ತು. ಆದರೆ ತನ್ನ ಕಲ್ಪನೆಯ ಭಯವನ್ನು ನಿಜವೆಂದು ನಂಬಿದ್ದರಿಂದ, ಇಡೀ ರಾತ್ರಿ ಅವನಿಗೆ ಭಯಾನಕ ಕನಸಿನಂತೆಯೇ ಕಳೆಯಿತು.
ನನ್ನ ಸ್ವಂತ ಅನುಭವದಿಂದ ನಾನು ನಿಮಗೆ ಹೇಳಬಲ್ಲೆ:
ಭಯವು ಆರು ಇಂಚುಗಳಿಗಿಂತ ಆಳವಾಗಿರುವುದಿಲ್ಲ.
ಈಗ ನಿರ್ಧಾರ ನಿಮ್ಮದು.
ನೀವು ಇನ್ನೂ ಆ ಕೊಂಬೆಯನ್ನು ಬಿಗಿಯಾಗಿ ಹಿಡಿದುಕೊಂಡು, ನಿಮ್ಮ ಬದುಕನ್ನೇ ಒಂದು ದುಃಸ್ವಪ್ನವನ್ನಾಗಿ ಮಾಡಿಕೊಂಡು ಬದುಕಬೇಕೆ?
ಅಥವಾ ಆ ಕೊಂಬೆಯನ್ನು ಬಿಟ್ಟು, ನಿಮ್ಮ ಸ್ವಂತ ಕಾಲುಗಳ ಮೇಲೆ ದೃಢವಾಗಿ ನಿಲ್ಲಬೇಕೆ?
ಭಯಪಡುವಂಥದು ಯಾವುದೂ ಇಲ್ಲ.

