ʻಏನನ್ನೋ ಮಾಡುವುದುʼ ಅಲ್ಲ, ನಾವೇ ʻಏನೋ ಆಗಿರುವುದುʼ ಮುಖ್ಯ. ನಾವೇ ಶಾಂತಿ, ಭರವಸೆ, ಸ್ಥಿರತೆ ಆಗಿರುವುದು ಮುಖ್ಯ. ನಮ್ಮ ಎಲ್ಲ ಕ್ರಿಯೆಗಳೂ ಕೆಲಸಗಳೂ ಆ ಮೂಲದಿಂದ ಹೊಮ್ಮಬೇಕು, ಯಾಕೆಂದರೆ ಶಾಂತಿ, ಸ್ಥಿರತೆ, ಸ್ವಾತಂತ್ರ್ಯಗಳ ಕ್ರಿಯೆಯಲ್ಲಿ ವ್ಯಕ್ತವಾಗಲು ದಾರಿ ಹುಡುಕುತ್ತಾ ಇರುತ್ತವೆ. ನಮ್ಮ ವಾಸ್ತವತೆಗೆ ಇರುವ ಆಧ್ಯಾತ್ಮಿಕ ಆಯಾಮ ಅದು… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 4.1 : ಶಾಂತಿ । ಶಾಂತಿ
ತಿಳಿವಳಿಕೆ, ಕರುಣೆ, ಶಾಂತಿಗಳನ್ನು ಕುರಿತು ನಮಗೆ ದೊರೆಯುವ ಎಲ್ಲ ಅರಿವೂ ಉಪಯುಕ್ತ—ಒಂದಿಷ್ಟು ಅರಿವೂ ಚಿನ್ನದಷ್ಟು ಬೆಲೆಬಾಳುತ್ತದೆ. ನಮ್ಮೊಳಗಿನ ಈ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ನಾವು ದಿನವೂ ಬಹಳಷ್ಟು ಅಭ್ಯಾಸಗಳನ್ನು ಕೈಗೊಳ್ಳಬಹುದು. ನೀವು ಇಡುವ ಒಂದು ಹೆಜ್ಜೆಯಲ್ಲಿ ಖುಷಿಯನ್ನು ಅನುಭವಿಸಲು ಸಾಧ್ಯವಾದರೆ, ಆ ಒಂದು ಹೆಜ್ಜೆ ಸ್ಥಿರತೆ, ಸ್ವಾತಂತ್ರ್ಯಗಳನ್ನು ತಂದುಕೊಡಬಲ್ಲುದಾದರೆ ನೀವು ಲೋಕಕ್ಕೇ ಸೇವೆ ಸಲ್ಲಿಸುತ್ತೀರಿ. ನಿಮ್ಮೊಳಗಿನ ಆ ಶಾಂತಿ, ಸ್ಥಿರತೆಯಿಂದ ನೀವು ಲೋಕದ ಸೇವೆಯನ್ನು ಮಾಡಬಹುದು. ಸ್ಥಿರತೆ, ಶಾಂತಿ, ಸಮಾಧಾನಗಳು ನಿಮ್ಮೊಳಗಿರದಿದ್ದರೆ ನೀವು ಏನು ಮಾಡಿದರೂ ಅದರಿಂದ ಲೋಕಕ್ಕೆ ಉಪಯೋಗವಾಗದು.
ʻಏನನ್ನೋ ಮಾಡುವುದುʼ ಅಲ್ಲ, ನಾವೇ ʻಏನೋ ಆಗಿರುವುದುʼ ಮುಖ್ಯ. ನಾವೇ ಶಾಂತಿ, ಭರವಸೆ, ಸ್ಥಿರತೆ ಆಗಿರುವುದು ಮುಖ್ಯ. ನಮ್ಮ ಎಲ್ಲ ಕ್ರಿಯೆಗಳೂ ಕೆಲಸಗಳೂ ಆ ಮೂಲದಿಂದ ಹೊಮ್ಮಬೇಕು, ಯಾಕೆಂದರೆ ಶಾಂತಿ, ಸ್ಥಿರತೆ, ಸ್ವಾತಂತ್ರ್ಯಗಳ ಕ್ರಿಯೆಯಲ್ಲಿ ವ್ಯಕ್ತವಾಗಲು ದಾರಿ ಹುಡುಕುತ್ತಾ ಇರುತ್ತವೆ. ನಮ್ಮ ವಾಸ್ತವತೆಗೆ ಇರುವ ಆಧ್ಯಾತ್ಮಿಕ ಆಯಾಮ ಅದು.
ಶಾಂತಿಯನ್ನು ರೂಢಿಸಿಕೊಳ್ಳುವುದು, ಗಹನವಾಗಿ ನೋಡುವುದನ್ನು ಕಲಿಯುವುದು ಮೊದಲ ಹೆಜ್ಜೆ. ಅದು ಸಾಧ್ಯವಾಗಬೇಕಾದರೆ ತಳಮಳವು ತಗ್ಗಿ ಇಲ್ಲದಂತಾಗುವುದಕ್ಕೆ ನಾವು ಮೊದಲು ಅವಕಾಶ ಕಲ್ಪಿಸಬೇಕು. ಶಾಂತಿ ಇರದೆ, ಸಮಾಧಾನವಿರದೆ ನಮ್ಮ ಭಾವ, ಸಿಟ್ಟು, ಹತಾಶೆಗಳು ಖಂಡಿತ ನಮ್ಮಿಂದ ದೂರವಾಗುವುದಿಲ್ಲ. ವಾಸ್ತವವಾಗಿ ಇರುವ ಸತ್ಯವನ್ನು ಕಾಣಲು ಆಗುವುದಿಲ್ಲ.
ತಳಮಳವಿರದೆ ಶಾಂತವಾಗಿರುವುದು, ಮನಸಿನ ನೆಮ್ಮದಿ ಇರುವುದು ಇವು ಧ್ಯಾನಕ್ಕೆ ಅಗತ್ಯವಾದ ಸಿದ್ಧತೆಗಳು.
ಮುಂದಿನ ಹೆಜ್ಜೆ ಗಹನವಾಗಿ ಅರಿಯುವುದು. ಅರಿವಿನ ಮೂಲಕ ಕರುಣೆ ಮೂಡುತ್ತದೆ. ಅರಿವು, ಕರುಣೆಗಳ ಮೂಲಕ ನೀವು ಏನು ಮಾಡಬಹುದು, ಏನನ್ನು ಮಾಡಬಾರದು ಅನ್ನುವುದು ತಿಳಿಯುತ್ತದೆ. ಇದು ಧ್ಯಾನ.
ಎಲ್ಲರೂ—ರಾಜಕಾರಣಿಗಳು, ಸೈನಿಕರು, ವ್ಯಾಪಾರಿಗಳು ಎಲ್ಲರೂ ಧ್ಯಾನವನ್ನು ಅಭ್ಯಾಸ ಮಾಡಬೇಕು.
*
ಬಯಕೆ, ಕಾಮನೆ, ಸಿಟ್ಟುಗಳು ಇರದ ಶಾಂತಿ, ಸಹನೆ, ಸಮಾಧಾನವನ್ನು ಬದುಕಿನಲ್ಲಿ ತಂದುಕೊಳ್ಳುವುದೇ ನಿಜವಾದ ವ್ರತ, ನಿಜವಾದ ಆಚಾರ, ಅಮೂಲ್ಯ ಆಚರಣೆ ಅನ್ನುತ್ತದೆ ಅಕ್ಕಮ್ಮನವರ ಈ ವಚನ.
ಕಾಮಿಗೆ ವ್ರತವುಂಟೆ, ನಿಃಕಾಮಿಗಲ್ಲದೆ
ಕ್ರೋದ್ಥಿಗೆ ವ್ರತವುಂಟೆ, ಸಮಾಧಾನಿಗಲ್ಲದೆ
ಲೋಬ್ಥಿಗೆ ವ್ರತವುಂಟೆ, ಉದಾರಿಗಲ್ಲದೆ?
ಇಂತೀ ಕ್ಷಮೆ ದಮೆ ಶಾಂತಿ ಸಮಾಧಾನಸಂಪದ ಮುಂತಾಗಿ
… ತನುಮನಧನದಲ್ಲಿ ನಿರತನಾಗಿ
ತನ್ನ ತ್ರಾಣಕ್ಕೆ ಇದ್ದಂತೆ ಚಿತ್ತಶುದ್ಧಾತ್ಮನಾಗಿ ಇಪ್ಪ ಮಹಾಭಕ್ತನೆ
ಕೃತ್ಯವಿಲ್ಲದ ಶರಣ
ಆತನ ಪಾದ ಎನ್ನ ಹೃದಯದಲ್ಲಿ ಅಚ್ಚೊತ್ತಿದಂತಿಪ್ಪುದು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವ ಎತ್ತುಕಟ್ಟುವ ಗೊತ್ತಾಗಿಪ್ಪನು
ಮನುಷ್ಯರ ಮನಸು, ಸ್ವಭಾವಗಳೇ ಸೃಷ್ಟಿ, ಸ್ಥಿತಿ, ಲಯಗಳ ಮೂವರು ದೇವರನ್ನು ಸೃಷ್ಟಿಸಿದೆ ಎನ್ನುತ್ತದೆ ಚೆನ್ನಬಸವಣ್ಣನವರ ಈ ವಚನ:
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ.
ಆತನ ವಿದ್ಯಾ ಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ,
ಆತನ ಶಾಂತಿ ಸೈರಣೆಯಿಂದ ಹುಟ್ಟಿದಾತ ವಿಷ್ಣು,
ಆತನ ಕೋಪ ಕ್ರೋಧದಿಂದ ಹುಟ್ಟಿದಾತ ರುದ್ರ,
ಈ ಮೂವರ ಪೀಠವಂತಿರಲಿ,
ಆ ಶರಣನನರಿದು ಶರಣೆನುತ್ತಿದ್ದೆನು,
ಕೂಡಲಚೆನ್ನಸಂಗಮದೇವಾ.
ಒಬ್ಬ ವ್ಯಕ್ತಿ ಶಾಂತ, ಸಮಾಧಾನಿ, ವಿವೇಕಿ ಆಗಿದ್ದರೆ ಲೋಕದ ಒಟ್ಟಾರೆ ಬದುಕಿನ ಮೇಲೆ ಎಂಥ ಪರಿಣಾಮಾಗುತ್ತದೆ ಅನ್ನುವುದನ್ನು ನಮ್ಮ ಸುತ್ತಲ ಬದುಕಿನಲ್ಲೇ ಕಾಣಬಹುದು, ಅಲ್ಲವೇ?

