ಖಾಸಗಿತನವಿಲ್ಲದ ನರಕ

ಮೌನವೇ ಇಲ್ಲದಿದ್ದಾಗ, ಖಾಸಗಿತನವೇ ಇಲ್ಲದಿದ್ದಾಗ, ಮತ್ತು ಒಬ್ಬಂಟಿಯಾಗಿರಲು ಯಾವುದೇ ಅವಕಾಶವೇ ಇಲ್ಲದಿದ್ದಾಗ, ಮನುಷ್ಯರು ನಿರಂತರ ಜಾಗರೂಕತೆಯ, ಎಂದಿಗೂ ಮುಗಿಯದ ಮಾನಸಿಕ ಒತ್ತಡದ ಸ್ಥಿತಿಯಲ್ಲಿ ನಿಧಾನವಾಗಿ ಹುಚ್ಚರಾಗುತ್ತಾರೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಇಲ್ಲೊಂದು ಚಿಂತನಾ ಪ್ರಯೋಗ (Thought Experiment) ನಿಮಗಾಗಿ. ನಾನು ನಿಮಗೆ ಐದು ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಊಹಿಸಿ. ಆದರೆ ಅದಕ್ಕೆ ಒಂದು ಷರತ್ತು ಇದೆ. ನೀವು ನನ್ನ ವಿಶೇಷ ಮನೆಯಲ್ಲಿ ಒಂದು ವರ್ಷ ವಾಸ ಮಾಡಬೇಕು. ಆ ಮನೆಯಲ್ಲಿ ನಿಮಗೆ ಬೇಕಾದ ಎಲ್ಲವೂ ಇರುತ್ತದೆ. ರುಚಿಕರವಾದ ಆಹಾರ, ಪಾನೀಯಗಳು, ಆರಾಮದಾಯಕ ಸೌಲಭ್ಯಗಳು ಮತ್ತು ಮನರಂಜನೆಯ ಎಲ್ಲ ವ್ಯವಸ್ಥೆಗಳು. ನೀವು ಪುಸ್ತಕಗಳನ್ನು ಓದಬಹುದು, ಟಿವಿ ನೋಡಬಹುದು, ಕಂಪ್ಯೂಟರ್ ಆಟಗಳನ್ನು ಆಡಬಹುದು.

ಆದರೆ ಇಲ್ಲಿ ಒಂದು ಸಣ್ಣ ಕ್ಯಾಚ್ ಇದೆ. ನೀವು ಅಲ್ಲಿ ನಿಮಗೆ ಪರಿಚಯವಿಲ್ಲದ ಇಬ್ಬರು ಅಪರಿಚಿತರ ಜೊತೆ ವಾಸಿಸಬೇಕು. ಮತ್ತು ಪ್ರತಿಕ್ಷಣವೂ, ಹಗಲು-ರಾತ್ರಿ ಎನ್ನದೆ, ಆ ಇಬ್ಬರಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ನಿಮ್ಮನ್ನು ವಾಚ್ ಮಾಡುತ್ತಲೇ ಇರುತ್ತಾರೆ. ನೀವು ಊಟ ಮಾಡುವಾಗ ಅವರು ನಿಮ್ಮನ್ನು ನೋಡುತ್ತಾರೆ. ನೀವು ಮಾತನಾಡುವಾಗ ನೋಡುತ್ತಾರೆ. ನೀವು ಪುಸ್ತಕ ಓದುವಾಗ ನೋಡುತ್ತಾರೆ. ನೀವು ರೀಲ್ ನೋಡಿ ನಗುವಾಗ ನೋಡುತ್ತಾರೆ. ನೀವು ಸ್ನಾನಕ್ಕೆ ಬಟ್ಟೆ ಬಿಚ್ಚಿಕೊಳ್ಳುವಾಗಲೂ ನೋಡುತ್ತಾರೆ. ನಿಮ್ಮ ಜೀವನದ ಪ್ರತಿಯೊಂದು ನಿಮಿಷವೂ ಯಾರೋ ಒಬ್ಬರ ಕಣ್ಗಾವಲಿನಲ್ಲೇ ಇರುತ್ತದೆ.

1944ರಲ್ಲಿ ರಚಿತವಾದ ತನ್ನ No Exit ಎಂಬ ನಾಟಕದಲ್ಲಿ, ಜಾನ್-ಪಾಲ್ ಸಾರ್ತ್ರ್ ಇಂತಹ ಪರಿಸ್ಥಿತಿಯನ್ನು ಒಂದು ರೀತಿಯ ನರಕವೆಂದು ಚಿತ್ರಿಸುತ್ತಾನೆ. ಮೌನವೇ ಇಲ್ಲದಿದ್ದಾಗ, ಖಾಸಗಿತನವೇ ಇಲ್ಲದಿದ್ದಾಗ, ಮತ್ತು ಒಬ್ಬಂಟಿಯಾಗಿರಲು ಯಾವುದೇ ಅವಕಾಶವೇ ಇಲ್ಲದಿದ್ದಾಗ, ಮನುಷ್ಯರು ನಿರಂತರ ಜಾಗರೂಕತೆಯ, ಎಂದಿಗೂ ಮುಗಿಯದ ಮಾನಸಿಕ ಒತ್ತಡದ ಸ್ಥಿತಿಯಲ್ಲಿ ನಿಧಾನವಾಗಿ ಹುಚ್ಚರಾಗುತ್ತಾರೆ.

ಸಾರ್ತ್ರ್ ನ ಪ್ರಕಾರ, ನಾವು ಇತರರೊಂದಿಗೆ ಇರುವಾಗ ಹೇಗಿರುತ್ತೇವೋ ಮತ್ತು ಸಂಪೂರ್ಣ ಒಬ್ಬಂಟಿಯಾಗಿರುವಾಗ ಹೇಗಿರುತ್ತೇವೋ, ಈ ಎರಡರ ನಡುವೆ ಮೂಲಭೂತವಾದ ವ್ಯತ್ಯಾಸವಿದೆ. ನೀವು ಊಹಿಸಬಹುದಾದ ಅತೀ ಬಹಿರ್ಮುಖಿ, ಜನರೊಂದಿಗೆ ಸದಾ ಬೆರೆತು ಬದುಕುವ ವ್ಯಕ್ತಿಗೂ ಸಹ ಕೆಲವೊಮ್ಮೆ ಎಲ್ಲರಿಂದ ದೂರ ಸರಿಯುವ ಅಗತ್ಯವಿರುತ್ತದೆ. ಯಾರೂ ತನ್ನನ್ನು ಗಮನಿಸದ, ತಾನೊಬ್ಬನೇ ಇರುವಂತಹ ಒಂದು ಸಮಯ ಅಥವಾ ಸ್ಥಳ ಅವನಿಗೆ ಬೇಕಾಗುತ್ತದೆ. ಆಗ ಅವನು ಕನ್ನಡಿಯ ಮುಂದೆ ನಿಂತು ವಿವಿಧ ಭಂಗಿಗಳನ್ನು ಮಾಡುತ್ತಾನೆ. ಹೊಟ್ಟೆಯನ್ನು ಸಡಿಲವಾಗಿ ಬಿಟ್ಟು ನಿಂತುಕೊಳ್ಳುತ್ತಾನೆ. ಒಬ್ಬಂಟಿಯಾಗಿದ್ದಾಗ ನೀವು ಮಾಡುವ ಎಲ್ಲ ಸಣ್ಣ ಪುಟ್ಟ ಕೆಲಸಗಳನ್ನೂ ಅವನು ಮಾಡುತ್ತಾನೆ.

ಗೌಪ್ಯತೆ (Privacy) ಮತ್ತು ಡಿಜಿಟಲ್ ಅನಾಮಧೇಯತೆ (Digital Anonymity) ದಿನೇದಿನೇ ಅಪರೂಪವಾಗುತ್ತಿರುವ, ಅಥವಾ ಸಮಾಜವೇ ಅದನ್ನು ಅಸಹಜವೆಂದು ಪರಿಗಣಿಸುತ್ತಿರುವ ಈ ಜಗತ್ತಿನಲ್ಲಿ, ಸಾರ್ತ್ರ್ ನ No Exit ನಾಟಕವು ನಿಧಾನವಾಗಿ ವಾಸ್ತವವಾಗುತ್ತಿದೆ. ನಿಮ್ಮನ್ನು ಯಾರೂ ಟೀಕಿಸದಿರಬಹುದು, ನಿಮಗೆ ಏನು ಮಾಡಬೇಕು ಎಂದು ಆದೇಶಿಸದಿರಬಹುದು. ಆದರೆ ಎಲ್ಲೋ, ಯಾರೋ ಒಬ್ಬರು ನಿಮ್ಮನ್ನು ಗಮನಿಸುತ್ತಲೇ ಇರುತ್ತಾರೆ.

ಹಾಗಾದರೆ, ನೀವು ಈ ‘ಬಿಗ್ ಬಾಸ್’ ಮನೆಯಂತಹ ಜೀವನವನ್ನು ಆಯ್ಕೆ ಮಾಡುತ್ತೀರಾ? ಸದಾ ಯಾರಾದರೂ ನಿಮ್ಮನ್ನು ಗಮನಿಸುತ್ತಿರುವ, ಯಾವಾಗಲೂ ನೀವು “ON” ಆಗಿರಬೇಕಾದ ಜೀವನ ನಿಮಗೆ ಒಪ್ಪಿಗೆಯೇ? ಅಥವಾ, ಸಾರ್ತ್ರ್ ಹೇಳಿದಂತೆ, “ನರಕವೆಂದರೆ ಅದು ಇತರ ಮನುಷ್ಯರು” ಎನ್ನುವುದು ನಿಜವೇ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.