ಯಾವಾಗ ನೈತಿಕತೆ ಕೇವಲ ಧಾರ್ಮಿಕ ಆದೇಶವಾಗಿಬಿಡುತ್ತದೆಯೋ ಆಗ, ಅದು ವಿಚಾರವಾಗಿ ಉಳಿದುಕೊಳ್ಳುವುದಿಲ್ಲ. ಆಗ ಅದು ಕೇವಲ ಆಜ್ಞಾಪಾಲನೆ ಆಗಿ ಬಿಡುತ್ತದೆ… । ಸಂಗ್ರಹ- ಅನುವಾದ : ಚಿದಂಬರ ನರೇಂದ್ರ
ಬಹಳಷ್ಟು ಧಾರ್ಮಿಕ ಜನರ ಅಭಿಪ್ರಾಯ ಏನೆಂದರೆ, ಒಂದು ಕೆಲಸ ತಪ್ಪು ಯಾಕೆಂದರೆ, ಹಾಗೆಂದು ದೇವರು ಹೇಳುತ್ತಾನೆ ಆದ್ದರಿಂದ. ಆದರೆ ಪ್ಲೇಟೋ ತನ್ನ Euthyphro (an early Socratic dialogue exploring the nature of piety, holiness) ಸಂವಾದದಲ್ಲಿ ಸಾಕ್ರೆಟಿಸ್ ನಿಂದ ಎಂಥ ಪ್ರಶ್ನೆ ಕೇಳಿಸುತ್ತಾನೆಂದರೆ, ಆ ಪ್ರಶ್ನೆಯ ಬಗ್ಗೆ ಮನುಷ್ಯ ಯೋಚಿಸಲೇ ಬೇಕಾಗುತ್ತದೆ. ಆ ಪ್ರಶ್ನೆ ಏನಾಗಿತ್ತು ಎಂದರೆ, ಯಾವುದೋ ಒಂದು ಕೆಲಸ ಒಳ್ಳೆಯದು ಏಕೆಂದರೆ, ಹಾಗೆಂದು ದೇವರು ಹೇಳುತ್ತಾನೆ ಎಂದೆ? ಅಥವಾ ದೇವರು ಒಂದು ಕೆಲಸವನ್ನು ಒಳ್ಳೆಯದು ಎಂದು ಯಾಕೆ ಹೇಳುತ್ತಾನೆ ಎಂದರೆ, ಆ ಕೆಲಸ ಮೊದಲಿನಿಂದಲೂ ಒಳ್ಳೆಯದಾಗಿತ್ತು ಎಂದಾ? ಇದನ್ನ Euthyphro dilemma ಎನ್ನಲಾಗುತ್ತದೆ.
ಮೊದಲ ಆಯ್ಕೆಯ ಬಗ್ಗೆ ಯೋಚನೆ ಮಾಡೋಣ. ಒಂದು ಸಂಗತಿ, ಅದನ್ನು ದೇವರು ಹೇಳಿದ ಕಾರಣಕ್ಕೆ ಒಳ್ಳೆಯದು ಎಂದು ನೈತಿಕತೆ ಹೇಳುತ್ತದೆಯಾದರೆ, ನಾಳೆ ದೇವರ ಯಾರನ್ನಾದರೂ ಕೊಲ್ಲುವುದು ತಪ್ಪಲ್ಲ ಎಂದು ಹೇಳಿದರೆ, ಆಗ ಅದು ಸರಿಯಾಗುತ್ತದೆಯಾ? ಯಾಕೆಂದರೆ ಈ ಆದೇಶ ನೇರವಾಗಿ ದೇವರಿಂದ ಬಂದಿರುವಂಥದು. ಆದ್ದರಿಂದ ಇಂಥಲ್ಲಿ ನೈತಿಕತೆ arbitrary ಆಗಿಬಿಡುತ್ತದೆ. ಒಂದು ಉದಾಹರಣೆ, 25 ಡಿಸೆಂಬರ, 1927 ರಂದು ಭಾರತದಲ್ಲಿ, ಬಾಹಾಸಾಹೇಬ್ ಅಂಬೇಡ್ಕರ ಅವರು ತಮ್ಮ ಸಾವಿರಾರು ಜನ ಸಹಯೋಗಿಗಳ ಎದುರು ನಿಂತು, ಮನುಸ್ಮೃತಿ ಗೆ ಬೆಂಕಿ ಹಚ್ಚಿದ್ದರು. ಏಕೆಂದರೆ ಸಾವಿರಾರು ವರ್ಷಗಳಿಂದ ಜಾತಿಯ ಭೇದಭಾವ, ಅಸ್ಪೃಶ್ಯತೆ ತಪ್ಪಲ್ಲ ಎಂದು ಜನರನ್ನು ನಂಬಿಸಲಾಗಿತ್ತು. ಇದು ಯಾಕೆ ತಪ್ಪಲ್ಲ ಎಂದು ಹೇಳಲಾಗಿತ್ತು ಎಂದರೆ, ಹಾಗೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆಯೆಂದು. ಆದರೆ ಯಾರೂ ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದ ಮಾತ್ರಕ್ಕೆ ಅದು ಯಾಕೆ ಸರಿ ಎನ್ನುವ ಪ್ರಶ್ನೆಯನ್ನೇ ಕೇಳಿರಲಿಲ್ಲ. ಜನ ಇದನ್ನ ಸುಮ್ಮನೇ ಒಪ್ಪಿಕೊಂಡುಬಿಟ್ಟಿದ್ದರು ದೇವರು ಹೇಳಿದ್ದಾನೆಂದು. ನೀವು ಕಾನೂನು, ಪರಂಪರೆಯ ಜೊತೆ ಹೋರಾಡಬಹುದೇ ವಿನಃ ದೇವರ ಜೊತೆ ಹೋರಾಡುವುದು ಹೇಗೆ?
ಯಾವಾಗ ನೈತಿಕತೆ ಕೇವಲ ಧಾರ್ಮಿಕ ಆದೇಶವಾಗಿಬಿಡುತ್ತದೆಯೋ ಆಗ, ಅದು ವಿಚಾರವಾಗಿ ಉಳಿದುಕೊಳ್ಳುವುದಿಲ್ಲ. ಆಗ ಅದು ಕೇವಲ ಆಜ್ಞಾಪಾಲನೆ ಆಗಿ ಬಿಡುತ್ತದೆ. ಬಹಳಷ್ಟು ಜನ ಹೇಳಬಹುದು ದೇವರು ಜನರನ್ನು ಕೊಲ್ಲುವುದು ಸರಿ ಎಂದು ಯಾವತ್ತೂ ಹೇಳುವುದಿಲ್ಲ, ದೇವರು ಯಾವುದೇ ತಪ್ಪು ಕೆಲಸವನ್ನು ಮಾಡಲು ಹೇಳುವುದೇ ಇಲ್ಲ. ದ್ವಂದ್ವ ಇರುವುದು ಇಲ್ಲಿಯೇ. ದೇವರು ಒಂದು ಸಂಗತಿಯನ್ನು ಒಳ್ಳೆಯದು ಎಂದು ಯಾಕೆ ಹೇಳುತ್ತಾನೆಯೆಂದರೆ, ಅದು ಮೊದಲಿನಿಂದಲೂ ಒಳ್ಳೆಯದಾಗಿತ್ತು ಆದ್ದರಿಂದ. ಇದರ ಅರ್ಥ ಏನೆಂದರೆ, ಒಳ್ಳೆಯತನ ಮೊದಲಿನಿಂದಲೇ ಅಸ್ತಿತ್ವದಲ್ಲಿ ಇದೆ. ಒಳ್ಳೆಯತನ ಸ್ವತಂತ್ರವಾಗಿದೆ. ಮತ್ತು ದೇವರು ಒಳ್ಳೆಯತನದ ಮೇಲಲ್ಲ, ಕೆಳಗೆ ಇದ್ದಾನೆ. ಅವನು ಕೇವಲ ಒಳ್ಳೆಯತನದ ಮೆಸೆಂಜರ್ ಮಾತ್ರ, ಒಳ್ಳೆಯತನದ ಮೂಲ (source) ಅಲ್ಲ.
ಹಾಗಾದರೆ ಈ ಸಮಸ್ಯೆಯ ಪರಿಹಾರ ಏನು? ಬಹಳಷ್ಟು ಜನ ಫಿಲಾಸೊಫರ್ ಗಳು ಮೂರನೇ ದಾರಿಯೊಂದನ್ನು ಸೂಚಿಸುತ್ತಾರೆ. ಒಳ್ಳೆಯತನ ದೇವರ ಮೇಲೆ ಅಥವಾ ಕೆಳಗೆ ಇರುವ ಯಾವುದೇ ನಿಯಮವೇನಲ್ಲ. ಒಳ್ಳೆಯತನ ಸ್ವತಃ ದೇವರದೇ ಆದ ಸ್ವಭಾವವಾಗಿದೆ. ಆದರೆ ಒಮ್ಮೆ ಯೋಚಿಸಿ, ಈ ಮೂರನೇ ದಾರಿಯೂ ಒಳ್ಳೆಯತನಕ್ಕೂ ಒಂದು ಪರಿಭಾಷೆ ಇದೆ ಎಂದು ಒಪ್ಪಿಕೊಂಡಂತೆ ಅಲ್ಲವೆ, ಮತ್ತು ಈ ಪರಿಭಾಷೆಯನ್ನು ಯಾರು ವಿವರಿಸುತ್ತಾರೆ ಎನ್ನುವುದು ಯಾವ ವ್ಯತ್ಯಾಸವನ್ನು ಮಾಡುತ್ತದೆ? ಸಾಕ್ರೆಟಿಸ್ ನ ವಾದ ಇದೇ ಆಗಿತ್ತು. ದೇವರು ಇದ್ದಾನೋ ಇಲ್ಲವೋ ಎನ್ನುವುದು ಪ್ರಶ್ನೆಯಾಗಿರಲೇ ಇಲ್ಲ. ಪ್ರಶ್ನೆ ಏನಾಗಿತ್ತು ಎಂದರೆ, ಒಳ್ಳೆಯತನ ಯಾರ ಮರ್ಜಿಯನ್ನಾದರೂ ಅವಲಂಬಿಸಿದೆಯಾ ಅಥವಾ ಸ್ವತಂತ್ರವಾಗಿ ತನ್ನ ಕಾಲ ಮೇಲೆ ತಾನು ನಿಂತುಕೊಂಡಿದೆಯಾ ಎನ್ನುವುದು.

