ಹಿಂಸೆ ಮತ್ತು ಯುದ್ಧಗಳು ಪ್ರತ್ಯೇಕವಾದ ಕ್ರಿಯೆಗಳೋ ಘಟನೆಗಳೋ ಆಗಿರುತ್ತವೆ, ಅವಕ್ಕೆ ಖಚಿತವಾದ ಆರಂಭ, ಮುಕ್ತಾಯಗಳು ಇರುತ್ತವೆ ಎಂದು ಅಂದುಕೊಳ್ಳುತ್ತೇವೆ. ಯುದ್ಧ ಸ್ವರೂಪವನ್ನೇ ಆಳವಾಗಿ ಅರಿಯಲು ಸಾಧ್ಯವಾದರೆ, ಯುದ್ಧ ನಡೆಯಲಿ ಅಥವಾ ನಡೆಯದಿರಲಿ, ಯುದ್ಧದ ಬೀಜಗಳು ಆಗಲೇ ಇದ್ದವು, ಇವೆ ಅನ್ನುವುದು ಹೊಳೆಯುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 4.2 : ಶಾಂತಿ । ಹಿಂಸೆಯ ಬೀಜಗಳು
ಹಿಂಸೆ ಎಲ್ಲೋ ದೂರದಲ್ಲಿಲ್ಲ, ಇಲ್ಲೇ ಸನಿಹದಲ್ಲೇ ಇದೆ. ದಿನ ದಿನದ ನಮ್ಮ ಆಲೋಚನೆ, ಮಾತು, ಕೆಲಸಗಳಲ್ಲಿ ಹಿಂಸೆಯ ಬೀಜಗಳನ್ನು ಗುರುತಿಸಬಹುದು. ನಮ್ಮ ಮನಸು, ಧೋರಣೆ, ನಮ್ಮ ಬಗ್ಗೆ ಮತ್ತು ಬೇರೆಯವರ ಬಗ್ಗೆ ಭಯ, ಕಳವಳ, ಗಳಲ್ಲೂ ಹಿಂಸೆಯ ಬೀಜಗಳಿವೆ. ನಮ್ಮ ಮನಸುಗಳಲ್ಲಿರುವ ಹಿಂಸೆಯೇ ಲೋಕದಲ್ಲೂ ಬಿಂಬಿತವಾಗುತ್ತದೆ.
ನಮ್ಮ ಆಲೋಚನೆಗಳಲ್ಲಿ, ನಮ್ಮ ಮನೆಗಳ ಒಳಗೆ ದಿನವೂ ನಡೆಯುವ ದೈನಿಕ ಯುದ್ಧಗಳಿಗೂ ಜನರ ನಡುವೆ, ದೇಶಗಳ ನಡುವೆ ಜಗತ್ತಿನಲ್ಲಿ ನಡೆಯುವ ಯುದ್ದಗಳಿಗೂ ಸಂಬಂಧವಿದೆ. ಸತ್ಯ ನಮಗೆ ಗೊತ್ತಿದೆ, ನಮ್ಮ ಆ ಒಪ್ಪದ ಬೇರೆಯವರೆಲ್ಲರೂ ತಪ್ಪುಮಾಡುತಿದ್ದಾರೆ ಎಂಬ ನಂಬಿಕೆಯೇ ಬಹಳಷ್ಟು ಹಾನಿಗೆ, ತೊಂದರೆಗೆ ಕಾರಣವಾಗಿದೆ.
ಅಖಂಡಸತ್ಯವೆಂದು ಯಾವುದನ್ನೇ ಆಗಲಿ ನಾವು ನಂಬಿದಾಗ ನಮ್ಮದೇ ದೃಷ್ಟಿ, ನೋಟ, ನಿಲುವುಗಳಿಗೆ ಸಿಕ್ಕಿಬಿದ್ದಿರುತ್ತೇವೆ. ಉದಾಹರಣೆಗೆ, ಸಂತೋಷಕ್ಕೆ ಬೌದ್ಧ ಚಿಂತನೆಯೇ ಮಾರ್ಗವೆಂದು ನಾವು ನಂಬಿದ್ದರೆ ಇತರ ಆಧ್ಯಾತ್ಮಿಕ ದಾರಿಗಳಲ್ಲಿ ಸಾಗುವವರನ್ನು ಕೀಳಾಗಿ ಕಾಣುವ, ದೂರವಿಡುವ ಹಿಂಸೆಯನ್ನೂ ಆಚರಿಸುತ್ತಾ ಇರುತ್ತೇವೆ. ನಮ್ಮದೇ ನೋಟ, ದರ್ಶನಗಳಿಗೆ ಬದ್ಧರಾದಾಗ ನಾವು ವಾಸ್ತವ ಏನಿದೆಯೋ ಅದನ್ನು ನೋಡುತ್ತಿರುವುದಿಲ್ಲ. ನಮ್ಮ ನಮ್ಮ ನೋಟಗಳಿಗೆ ಸಿಕ್ಕಿಬಿದ್ದಿರುವುದೇ ಗಹನವಾದ ಅರಿವನ್ನು ಪಡೆಯಲು ಅಡಚಣೆಯಾಗುತ್ತದೆ, ಅಪಾಯಕಾರಿಯೂ ಆಗುತ್ತದೆ.
ಹಿಂಸೆ ಮತ್ತು ಯುದ್ಧಗಳು ಪ್ರತ್ಯೇಕವಾದ ಕ್ರಿಯೆಗಳೋ ಘಟನೆಗಳೋ ಆಗಿರುತ್ತವೆ, ಅವಕ್ಕೆ ಖಚಿತವಾದ ಆರಂಭ, ಮುಕ್ತಾಯಗಳು ಇರುತ್ತವೆ ಎಂದು ಅಂದುಕೊಳ್ಳುತ್ತೇವೆ. ಯುದ್ಧ ಸ್ವರೂಪವನ್ನೇ ಆಳವಾಗಿ ಅರಿಯಲು ಸಾಧ್ಯವಾದರೆ, ಯುದ್ಧ ನಡೆಯಲಿ ಅಥವಾ ನಡೆಯದಿರಲಿ, ಯುದ್ಧದ ಬೀಜಗಳು ಆಗಲೇ ಇದ್ದವು, ಇವೆ ಅನ್ನುವುದು ಹೊಳೆಯುತ್ತದೆ. ಯುದ್ಧವಾಗಲು ಅಧಿಕೃತ ಘೋಷಣೆ ಆಗಲೇಬೇಕು ಎಂದೇನಿಲ್ಲ. ಯುದ್ಧ ಇದ್ದೇ ಇರುತ್ತದೆ. ವಿರೋಧೀ ಪಡೆಗಳು ಯುದ್ಧಭೂಮಿಯನ್ನು ತೊರೆದು ಮನೆಗೆ ಮರಳಿದ ಮೇಲೆ ಯುದ್ಧ ಮುಗಿಯುವುದಿಲ್ಲ, ಇದ್ದೇ ಇರುತ್ತದೆ. ಕಾದಾಟ ಮುಗಿದಿರಬಹುದು. ಆದರೆ ಯುದ್ಧಕ್ಕೆ ಕಾರಣವಾದ ದ್ವೇಷ ಮತ್ತು ಭಯ ಸೈನಿಕರ ಮನಸಿನಲ್ಲಿ, ನಾಗರಿಕರ ಮನಸಿನಲ್ಲಿ ಉಳಿದೇ ಇರುತ್ತದೆ. ಸುತ್ತಲೂ ಸರಿಯಾಗಿ ನೋಡಿದರೆ ಯುದ್ಧದ ಸಾವಿರ ಮುಖಗಳು ನಮ್ಮ ಸುತ್ತಲೂ ಇರುವುದು ಕಾಣುತ್ತದೆ. ಧಾರ್ಮಿಕ ಅಸಹನೆ, ಜನಾಂಗ ದ್ವೇಷ, ಮಕ್ಕಳ ಬಗ್ಗೆ ನಿರ್ಲಕ್ಷ್ಯ, ಜಾತಿ ದ್ವೇಷ, ಮೇಲು ಕೀಳುಗಳ ಭಾವನೆ, ಜಗತ್ತಿನ ಸಂಪನ್ಮೂಲಗಳ ಮಿತಿಮೀರಿದ ಬಳಕೆ ಇವೆಲ್ಲವೂ ಯುದ್ಧಮುಖಗಳೇ.
ಶಾಂತಿ, ಅರಿವು, ಪ್ರೀತಿಯ ಬೀಜಗಳೂ ಇವೆ, ನಾವು ಬೆಳೆಸಿದರೆ ಅವೂ ಬೆಳೆಯುತ್ತವೆ ಅನ್ನುವುದು ಕೂಡ ನಿಜ. ನಮ್ಮೊಳಗೇ ಬೇರೂರಿರುವ ಹಿಂಸೆಯನ್ನು ಕಂಡಾಗ, ನಮ್ಮ ದಿನ ನಿತ್ಯದ ಆಲೋಚನೆ, ಮಾತು, ಕ್ರಿಯೆಗಳಲ್ಲಿ ಹಿಂಸೆಯನ್ನು ಗುರುತಿಸಿದಾಗ ನಾವು ಎಚ್ಚರಗೊಂಡು ಹೊಸ ರೀತಿಯಲ್ಲಿ ಬದುಕಲು ಯತ್ನಿಸಬಹುದು. ಗಮನದ ಎಚ್ಚರದೊಂದಿಗೆ ಬದುಕುತ್ತೇವೆ, ಶಾಂತಿಯಿಂದ ಬದುಕುತ್ತೇವೆಂಬ ದೃಢ ನಿರ್ಧಾರ ಮಾಡಬಹುದು. ಹಿಂಸೆಯ ಬೇರುಗಳ ಮೇಲೆ ಅರಿವಿನ ಬೆಳಕು ಹಾಯಿಸಲು ಸಾಧ್ಯವಾದರೆ ಯುದ್ಧದ ಆರಂಭಕ್ಕೆ ಕಾರಣವಾಗುವ ಹಿಂಸೆಯನ್ನು ಅದರ ಮೂಲಸ್ಥಾನವಾದ ನಮ್ಮ ಮನಸಿನಿಂದಲೇ ಇಲ್ಲವಾಗಿಸಬಹುದು. ನಮ್ಮ ಮನಸಿನೊಳಗಿನ ಯುದ್ಧವನ್ನು ನಿಲ್ಲಿಸಿದರೆ ಹೊರಗೆ ಲೋಕದಲ್ಲಿ ನಡೆಯುವ ಯುದ್ಧಗಳನ್ನು ನಿಲ್ಲಿಸುವ ದಾರಿಯೂ ನಮಗೆ ಕಾಣುತ್ತದೆ.
*
ಅರಿವಿನ ಮಾರಿತಂದೆಯವರ ಈ ವಚನವು ಅಲಗಿನ ಮೊನೆಯನ್ನು ಮೊನಚು ಮಾಡುವವರು ನಾವೇ ಹೊರತು ಆಯುಧ ತನಗೆ ತಾನೇ ಮೊನಚಾಗದು; ನಾವು ಒಪ್ಪಿಕೊಂಡ ತತ್ವ,ಸಿದ್ಧಾಂತ.ಐಡಿಯಾಲಜಿ ಎಷ್ಟೇ ಉದಾತ್ತವಾದರೀ ವರ್ತನೆಯಲ್ಲಿ ಶುದ್ಧವಾಗಿರದಿದ್ದರೆ ಉಪಯೋಗವಿಲ್ಲ, ಮನಸು-ಮಾತು-ದೇಹಗಳಲ್ಲಿ ಶಾಂತಿ,ಸಮಾಧಾನ,ಅರಿವು ಇಲ್ಲದಿದ್ದರೆ ಉಪಯೋಗವಿಲ್ಲ ಅನ್ನುತ್ತಿದೆ.
ಮೊನೆ ತಪ್ಪಿದಲ್ಲಿ ಅಲಗಿನ ಘನವೇನ ಮಾಡುವುದು
ವರ್ತನ ಶುದ್ದವಿಲ್ಲದೆ ಲಾಂಛನದ ಉತ್ಕೃಷ್ಟವೇನ ಮಾಡುವುದು
ತ್ರಿಕರಣ ಶುದ್ಧವಿಲ್ಲದ ಮಾಟ ದ್ರವ್ಯದ ಕೇಡು, ಭಕ್ತಿಗೆ ಹಾನಿ.
ಇಂತೀ ಗುಣಾದಿಗುಣಂಗಳಲ್ಲಿ ಅರಿಯಬೇಕು,
ಸದಾಶಿವಮೂರ್ತಿಲಿಂಗವನರಿಯಬೇಕು.
ರಾಯಸದ ಮಂಚಣ್ಣನವರ ವಚನದಲ್ಲಿ ಇದೇ ಸಂಗತಿ ಪ್ರಸ್ತಾಪವಾಗಿದೆ. ಆಯುಧವನ್ನು ಮೊನಚು ಮಾಡದಿದ್ದರೆ ಆಯುಧ ಏನೂ ಮಾಡಲಾರದು, ಹಾವು ಬಾಯಿ ತೆಗೆಯುವ ಮೊದಲೇ ಅದನ್ನು ಹಿಡಿದರೆ ವಿಷ ಏನು ಮಾಡಲಾರದು, ಮನಸಿನಲ್ಲಿ ವಿಕಾರ ಮೂಡುವ ಮೊದಲೇ ತಡೆಯಲು ಸಾಧ್ಯವಾದರೆ ಕೆಡುಕು ಇರದು ಅನ್ನುತ್ತದೆ.
ಕೈದು ಮೊನೆ ಏರುವದಕ್ಕೆ ಮೊದಲೇ ಕಟ್ಟಬಲ್ಲಡೆ
ಕೈದೇನ ಮಾಡುವುದು
ಹಾವು ಬಾಯಿ ಬಿಡುವುದಕ್ಕೆ ಮೊದಲೇ ಹಿಡಿದ ಮತ್ತೆ
ವಿಷವೇನ ಮಾಡುವುದು
ಮನ ವಿಕಾರಿಸುವುದಕ್ಕೆ ಮೊದಲೇ ಮಹದಲ್ಲಿ ನಿಂದ ಮತ್ತೆ
ಇಂದ್ರಿಯಂಗಳೇನ ಮಾಡಲಾಪವು, ಜಾಂಬೇಶ್ವರಾ

