ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಒಂದು ದಿನ ಸೂಫಿಯ ವೇಷಧಾರಿಯೊಬ್ಬನು ದಾರಿಯಲ್ಲಿ ನಡೆದು ಹೋಗುತ್ತಿದ್ದ. ಆಗ ರಸ್ತೆಯಲ್ಲಿ ಒಂದು ನಾಯಿ ಕಾಣಿಸಿತು. ಅವನು ತನ್ನ ಕೈಯಲ್ಲಿದ್ದ ಕೋಲಿನಿಂದ ಅದನ್ನು ಬಲವಾಗಿ ಹೊಡೆದ.
ನೋವಿನಿಂದ ಕಿರುಚಿದ ನಾಯಿ ಓಡುತ್ತಾ ಮಹಾನ್ ಸೂಫಿ ಸಂತ ಅಬೂ ಸಯೀದ್ ಅವರ ಬಳಿಗೆ ಬಂತು. ಅವರ ಪಾದಗಳಿಗೆ ಬಿದ್ದು, ಗಾಯಗೊಂಡ ತನ್ನ ಮುಂಗಾಲನ್ನು ತೋರಿಸುತ್ತಾ, ತನ್ನ ಮೇಲೆ ಕ್ರೂರವಾಗಿ ವರ್ತಿಸಿದ ಆ ಸೂಫಿಯ ವಿರುದ್ಧ ನ್ಯಾಯವನ್ನು ಬೇಡಿತು.
ಜ್ಞಾನಿ ಅಬೂ ಸಯೀದ್ ಇಬ್ಬರನ್ನೂ ತಮ್ಮ ಮುಂದೆ ಕರೆಯಿಸಿಕೊಂಡರು.
ಸೂಫಿಯನ್ನು ಉದ್ದೇಶಿಸಿ ಅವರು ಹೇಳಿದರು:
“ ಅವಿವೇಕಿ, ಮಾತಾಡಲಾರದ ಈ ಜೀವಿಯೊಂದಿಗೆ ಹೀಗೆ ವರ್ತಿಸಲು ನಿನಗೆ ಹೇಗೆ ಮನಸ್ಸಾಯಿತು? ನೀನು ಅದಕ್ಕೆ ಏನು ಮಾಡಿದ್ದೀಯೆಂದು ನೋಡು!”
ಅದಕ್ಕೆ ಸೂಫಿ ಉತ್ತರಿಸಿದ:
“ಇದರಲ್ಲಿ ನನ್ನ ತಪ್ಪೇನೂ ಇಲ್ಲ; ತಪ್ಪಿದ್ದರೆ ಅದು ಈ ನಾಯಿಯದು. ನಾನು ಅದನ್ನು ಸುಮ್ಮನೆ, ಮನಸ್ಸಿಗೆ ಬಂದಂತೆ ಹೊಡೆದಿಲ್ಲ. ಅದು ನನ್ನ ಉಡುಪನ್ನು ಹೊಲಸು ಮಾಡಿತು. ಅದಕ್ಕಾಗಿಯೇ ಹೊಡೆದೆ.”
ಆದರೆ ನಾಯಿ ತನ್ನ ದೂರನ್ನು ಬಿಡಲಿಲ್ಲ.
ಆಗ ಮಾಸ್ಟರ್, ನಾಯಿಯ ಕಡೆ ತಿರುಗಿ ಹೇಳಿದರು:
“ಅಂತಿಮ ನ್ಯಾಯದ ದಿನದ ಪರಿಹಾರಕ್ಕಾಗಿ ಕಾಯುವುದಕ್ಕಿಂತ, ಈಗಲೇ ನಿನಗೆ ನಿನ್ನ ನೋವಿಗೆ ತಕ್ಕ ಪರಿಹಾರವನ್ನು ನೀಡಲು ನಾನು ಸಿದ್ಧನಿದ್ದೇನೆ.”
ಅದಕ್ಕೆ ನಾಯಿ ಉತ್ತರಿಸಿತು:
“ ಮಾಸ್ಟರ್ ! ನಾನು ಈ ಮನುಷ್ಯನನ್ನು ಸೂಫಿಯ ವೇಷದಲ್ಲಿ ಕಂಡಾಗ, ಇವನು ನನಗೆ ಯಾವ ಹಾನಿಯನ್ನೂ ಮಾಡುವುದಿಲ್ಲವೆಂದು ನಂಬಿದೆ. ಅವನು ಸಾಮಾನ್ಯ ಉಡುಪಿನಲ್ಲಿದ್ದವನಾಗಿದ್ದರೆ, ಸಹಜವಾಗಿಯೇ ನಾನು ಅವನಿಂದ ದೂರ ಇರುತ್ತಿದ್ದೆ.”
“ನನ್ನ ನಿಜವಾದ ತಪ್ಪೆಂದರೆ, ಸತ್ಯದ ಮಾರ್ಗದಲ್ಲಿ ನಡೆಯುವವನ ಬಾಹ್ಯ ವೇಷವೇ ಸುರಕ್ಷತೆಯ ಭರವಸೆ ಎಂದು ಭಾವಿಸಿದ್ದು.”
“ನೀವು ಅವನಿಗೆ ಶಿಕ್ಷೆ ವಿಧಿಸಬೇಕೆಂದರೆ, ಅವನಿಂದ ಈ ಪವಿತ್ರ ವೇಷವನ್ನೇ ಕಸಿದುಕೊಳ್ಳಿ. ಧರ್ಮನಿಷ್ಠರ ವೇಷವನ್ನು ಧರಿಸುವ ಅರ್ಹತೆಯಿಂದ ಅವನನ್ನು ದೂರವಾಗಿಸಿ. ಏಕೆಂದರೆ ಆ ವೇಷಕ್ಕೆ ಅವನು ಯೋಗ್ಯನಲ್ಲ.”
ನಿಜವಾದ ಆಧ್ಯಾತ್ಮಿಕತೆ ಉಡುಪಿನಲ್ಲಿ ಇರುವುದಿಲ್ಲ; ಅದು ನಡೆ-ನುಡಿಯಲ್ಲಿ ವ್ಯಕ್ತವಾಗುತ್ತದೆ. ಬಾಹ್ಯ ವೇಷಕ್ಕಿಂತ ಆಂತರಿಕ ಗುಣವೇ ಮನುಷ್ಯನ ನಿಜವಾದ ಪರಿಚಯ.

