ಖಾಲಿ ದೋಣಿ : ಜೆನ್ ಕ್ಷಣ #11

ಪ್ರತಿಯೊಂದು ವರ್ತನೆಯ ಹಿಂದೆಯೂ ನಮ್ಮನ್ನು ನೋಯಿಸುವ ಉದ್ದೇಶವೇ ಇರಬೇಕೆಂದಿಲ್ಲ. ಕೆಲವೊಮ್ಮೆ ಜನರು ತಮ್ಮದೇ ನೋವು, ಭಯ, ಒತ್ತಡ, ಅಸಹಾಯಕತೆ ಮತ್ತು ಸಮಸ್ಯೆಗಳ ಪ್ರವಾಹದಲ್ಲಿ ತೇಲುತ್ತಿರುತ್ತಾರೆ. ಅವರೊಳಗಿನ ಸಂಘರ್ಷವೇ ನಮ್ಮ ದೋಣಿಗೆ ಬಂದು  ಢಿಕ್ಕಿ  ಹೊಡೆದಿರಬಹುದು… । ಡಾ. ಸಹನಾ ಪ್ರಿಯದರ್ಶಿನಿ

ಒಮ್ಮೆ ಒಬ್ಬ ಝೆನ್ ಗುರು ತನ್ನ ಶಿಷ್ಯರಿಗೆ ಮನಸ್ಸಿನ ಶಾಂತಿಯ ಕುರಿತು ಹೇಳುತ್ತಾ ಒಂದು ಪುಟ್ಟ ಕಥೆಯನ್ನು ಹೇಳಿದರು.

ಒಬ್ಬ ವ್ಯಕ್ತಿ ಮುಂಜಾನೆಯ ಪ್ರಶಾಂತ ಹೊತ್ತಿನಲ್ಲಿ ನದಿಯಲ್ಲಿ ದೋಣಿ ನಡೆಸಿಕೊಂಡು ಹೋಗುತ್ತಿದ್ದ. ಸುತ್ತಲೂ ನಿಶ್ಶಬ್ದ. ತಿಳಿಯಾದ ನೀರು, ತಣ್ಣನೆಯ ಗಾಳಿ, ನಿಧಾನವಾಗಿ ಸಾಗುತ್ತಿದ್ದ ದೋಣಿ, ಮನಸ್ಸಿಗೂ ಒಂದು ಅಪೂರ್ವ ನೆಮ್ಮದಿ.

ಅಷ್ಟರಲ್ಲಿ ಎಲ್ಲಿಂದಲೋ ತೇಲಿಬಂದ ಮತ್ತೊಂದು ದೋಣಿ ಅವನ ದೋಣಿಗೆ ಬಲವಾಗಿ  ಢಿಕ್ಕಿ  ಹೊಡೆಯಿತು.

ಕ್ಷಣಮಾತ್ರದಲ್ಲಿ ಅವನ ನೆಮ್ಮದಿ ಮಾಯವಾಯಿತು. ಕೋಪ ನೆತ್ತಿಗೇರಿತು.

“ಯಾರು ಅದು? ಕಣ್ಣು ಕಾಣುವುದಿಲ್ಲವೇ? ದೋಣಿಯನ್ನು ಸರಿಯಾಗಿ ನಡೆಸಲೂ ಬರುವುದಿಲ್ಲವೇ?” ಎಂದು ಸಿಟ್ಟಿನಿಂದ ಕೂಗಿದ.

ಆದರೆ ಎದುರಿನ ದೋಣಿಯಿಂದ ಯಾವುದೇ ಉತ್ತರ ಬರಲಿಲ್ಲ.

ಅವನು ಮತ್ತಷ್ಟು ಕೋಪದಿಂದ ಆ ದೋಣಿಯತ್ತ ನೋಡಿದ.

ಅಚ್ಚರಿ!

ಅದು ಖಾಲಿ ದೋಣಿಯಾಗಿತ್ತು.

ಅದರಲ್ಲಿ ಯಾರೂ ಇರಲಿಲ್ಲ. ದಡದಲ್ಲಿ ಕಟ್ಟಿದ್ದ ಹಗ್ಗದಿಂದ ಬಿಡಿಸಿಕೊಂಡು, ನದಿಯ ಹರಿವಿಗೆ ಸಿಕ್ಕಿ ತೇಲುತ್ತಾ ಬಂದು ಅವನ ದೋಣಿಗೆ  ಢಿಕ್ಕಿ  ಹೊಡೆದಿತ್ತು.

ಅದನ್ನು ಕಂಡ ಕ್ಷಣದಲ್ಲೇ ಅವನ ಕೋಪ ಕರಗಿಹೋಯಿತು.

ಸ್ವಲ್ಪ ಹೊತ್ತಿನ ಹಿಂದೆ ಅದೇ  ಢಿಕ್ಕಿ  ಅವನಲ್ಲಿ ಆಕ್ರೋಶವನ್ನು ಹುಟ್ಟಿಸಿತ್ತು. ಈಗಲೂ  ಢಿಕ್ಕಿ  ಅದೇ, ದೋಣಿಯೂ ಅದೇ, ಆದ ನೋವೂ ಅದೇ. ಬದಲಾಗಿದ್ದು ಒಂದೇ ಒಂದು ಸಂಗತಿ- ಅದರಲ್ಲಿ ಯಾರೂ ಇಲ್ಲ ಎಂಬ ಅರಿವು.

ಕಥೆಯನ್ನು ಮುಗಿಸಿದ ಝೆನ್ ಗುರು ಶಿಷ್ಯರನ್ನು ನೋಡಿ ಹೇಳಿದರು:

“ನಮ್ಮ ಬದುಕಿನಲ್ಲೂ ಇಂತಹ ಎಷ್ಟೋ ‘ಖಾಲಿ ದೋಣಿಗಳು’ ಬಂದು  ಢಿಕ್ಕಿ  ಹೊಡೆಯುತ್ತವೆ. ಯಾರೋ ನಮ್ಮನ್ನು ಕಡೆಗಣಿಸುತ್ತಾರೆ, ಯಾರೋ ಕಟುವಾಗಿ ಮಾತನಾಡುತ್ತಾರೆ, ಮತ್ತಾರೋ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ತಕ್ಷಣವೇ ನಾವು ಅವರ ವರ್ತನೆಯನ್ನು ನಮ್ಮೊಂದಿಗೆ ಜೋಡಿಸಿಕೊಂಡು ಕೋಪಗೊಳ್ಳುತ್ತೇವೆ.

ಆದರೆ ಪ್ರತಿಯೊಂದು ವರ್ತನೆಯ ಹಿಂದೆಯೂ ನಮ್ಮನ್ನು ನೋಯಿಸುವ ಉದ್ದೇಶವೇ ಇರಬೇಕೆಂದಿಲ್ಲ. ಕೆಲವೊಮ್ಮೆ ಜನರು ತಮ್ಮದೇ ನೋವು, ಭಯ, ಒತ್ತಡ, ಅಸಹಾಯಕತೆ ಮತ್ತು ಸಮಸ್ಯೆಗಳ ಪ್ರವಾಹದಲ್ಲಿ ತೇಲುತ್ತಿರುತ್ತಾರೆ. ಅವರೊಳಗಿನ ಸಂಘರ್ಷವೇ ನಮ್ಮ ದೋಣಿಗೆ ಬಂದು  ಢಿಕ್ಕಿ  ಹೊಡೆದಿರಬಹುದು.

ಆದರೆ ನಾವು?

ಆ ಖಾಲಿ ದೋಣಿಯೊಳಗೆ ಒಬ್ಬ ವ್ಯಕ್ತಿಯನ್ನು ಕೂರಿಸುತ್ತೇವೆ. ಅವನಿಗೆ ಉದ್ದೇಶಗಳನ್ನು ಕಲ್ಪಿಸುತ್ತೇವೆ. ಅವನ ಮೇಲೆ ಕೋಪಗೊಳ್ಳುತ್ತೇವೆ. ಮತ್ತೆ ಮತ್ತೆ ಅದೇ ಘಟನೆಯನ್ನು ನೆನಪಿಸಿಕೊಂಡು ನಮ್ಮ ಮನಸ್ಸಿನ ಶಾಂತಿಯನ್ನು ನಾವೇ ಕಳೆದುಕೊಳ್ಳುತ್ತೇವೆ.”

ಜೀವನದಲ್ಲಿ ಪ್ರತಿಯೊಂದು  ಢಿಕ್ಕಿ ಗೂ ಪ್ರತಿಕ್ರಿಯಿಸಬೇಕಾಗಿಲ್ಲ.

ಕೆಲವನ್ನು ಅರ್ಥಮಾಡಿಕೊಳ್ಳಬಹುದು.
ಕೆಲವನ್ನು ಕ್ಷಮಿಸಬಹುದು.
ಇನ್ನು ಕೆಲವನ್ನು ನದಿಯ ಹರಿವಿನೊಂದಿಗೆ ಹಾಗೆಯೇ ತೇಲಿ ಹೋಗಲು ಬಿಡಬಹುದು.

ಏಕೆಂದರೆ ನಮ್ಮ ಮನಸ್ಸಿನ ಶಾಂತಿ, ಮತ್ತೊಬ್ಬರ ವರ್ತನೆಗಿಂತ ಹೆಚ್ಚು ಅಮೂಲ್ಯವಾದುದು.

ನಮಗೆ ನೋವುಂಟುಮಾಡುವ ಪ್ರತಿಯೊಂದು ಮಾತನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಕಿಲ್ಲ. ಪ್ರತಿಯೊಂದು ಮೌನವನ್ನೂ ನಿರ್ಲಕ್ಷ್ಯವೆಂದು ಭಾವಿಸಬೇಕಿಲ್ಲ. ಪ್ರತಿಯೊಂದು ತಪ್ಪಿನ ಹಿಂದೆಯೂ ದುರುದ್ದೇಶವನ್ನು ಹುಡುಕಬೇಕಿಲ್ಲ.

ಕೆಲವೊಮ್ಮೆ ಅದು ಕೇವಲ…ಒಂದು ಖಾಲಿ ದೋಣಿ.

ಅದನ್ನು ಹಿಡಿದುಕೊಂಡು ಕೋಪದಲ್ಲಿ ನಿಲ್ಲುವುದಕ್ಕಿಂತ, ಅದು ತೇಲಿ ಹೋಗಲು ಬಿಡುವುದೇ ನೆಮ್ಮದಿಯ ಬದುಕಿನ ಕಲೆ.


(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.